ಬೆಂಗಳೂರು ಗ್ರಾಮಾಂತರ

ಹಾಡಹಗಲೇ ಒಂಟಿ ಮಹಿಳೆ ಇದ್ದ ಮನೆ ದರೋಡೆ

Published On :

ಕ.ಪ್ರ. ವಾರ್ತೆ, ದೊಡ್ಡಬಳ್ಳಾಪುರ, ಮೇ 21
ಹಾಡಹಗಲಲ್ಲೇ ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿರುವ ಮೂವರು ದುಷ್ಕರ್ಮಿಗಳ ತಂಡ ಮಹಿಳೆಯನ್ನು ಬೆದರಿಸಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ಜನನಿಬಿಡ ಪ್ರದೇಶವಾಗಿರುವ ಕೊಂಗಾಡಿಯಪ್ಪ ಮುಖ್ಯರಸ್ತೆ ಕ್ರಾಸ್‌ನಲ್ಲಿ ಮಂಗಳವಾರ ಮಧ್ಯಾಹ್ನ 12ಗಂಟೆ ವೇಳೆಯಲ್ಲಿ ನಡೆದಿದೆ.
ಹಳೇ ವಿಜಯಾಬ್ಯಾಂಕ್ ಹಿಂಭಾಗದಲ್ಲಿರುವ ಎಂಜಿನಿಯರ್ ಶ್ರೀನಿವಾಸ್ ಎಂಬುವವರ ಮನೆಯಲ್ಲಿ ಬಾಡಿಗೆಗೆ ವಾಸವಿರುವ ಮಂಜುನಾಥ್ ಎಂಬುವವರ ಮನೆ ದರೋಡೆ ನಡೆದಿದ್ದು, ಘಟನೆ ವೇಳೆ ಮಂಜುನಾಥ್ ಪತ್ನಿ ಲಕ್ಷ್ಮೀದೇವಮ್ಮ ಮಾತ್ರ ಮನೆಯಲ್ಲಿದ್ದರು. ಗಂಡ ಮತ್ತು ಮಕ್ಕಳು ಇಲ್ಲದಿರುವ ವೇಳೆಯನ್ನೇ ಹೊಂಚು ಹಾಕಿದ್ದ ದರೋಡೆಕೋರರು ಮಾರಕಾಸ್ತ್ರಗಳಿಂದ ಆಕೆಯನ್ನು ಬೆದರಿಸಿದ್ದಾರೆ. ಹಣ-ಒಡವೆ ಎಲ್ಲವನ್ನೂ ತಂದು ಕೊಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಆಕೆಯನ್ನು ಕೊಠಡಿಯಲ್ಲಿ ಕೂಡಿಹಾಕಿ ಬೀರು ಬೀಗದ ಕೈ ಕಸಿದುಕೊಂಡು ಇದ್ದ ನಗನಾಣ್ಯ, ಚಿನ್ನಾಭರಣಗಳನ್ನು ದೋಚಿದ್ದಾರೆ. ಸುಮಾರು 250 ಗ್ರಾಂ ಚಿನ್ನಾಭರಣಗಳು ಕಳುವಾಗಿವೆ ಎನ್ನಲಾಗಿದೆ.
ಮೂವರು ದುಷ್ಕರ್ಮಿಗಳಿದ್ದ ತಂಡ ಈ ಕೃತ್ಯ ಎಸಗಿದೆ. ಅವರ ಬಳಿ ಮಾರಕಾಸ್ತ್ರಗಳಿದ್ದವು. ಪರಿಚಿತ ಮುಖಗಳಾಗಿರಲಿಲ್ಲ ಎಂದು ಲಕ್ಷ್ಮಿದೇವಮ್ಮ ಹೇಳಿದ್ದಾರೆ.
ಸಿನೀಮಿಯ ರೀತಿಯಲ್ಲಿ: ನೆಲಮಹಡಿಯಲ್ಲೂ ವಾಸದ ಮನೆ ಇದೆ. ಅದನ್ನೂ ಮೀರಿ ಮಹಡಿಯ ಮೇಲಿರುವ ಮನೆಗೆ ನುಗ್ಗಿ ಈ ಕೃತ್ಯ ಎಸಗಿರುವುದು ಸಿನೀಮಿಯ ರೀತಿಯಲ್ಲಿ ನಡೆದ ಕೃತ್ಯವಾಗಿದೆ. ಮನೆಯವರ ಸಂಪೂರ್ಣ ಚಲನ-ವಲನಗಳನ್ನು ಅರಿತವರೇ ಈ ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಅತ್ಯಂತ ಜನನಿಬಿಡ ಪ್ರದೇಶದಲ್ಲಿ ನಡೆದಿರುವ ಈ ಕೃತ್ಯದಿಂದ ದೊಡ್ಡಬಳ್ಳಾಪುರದ ಜನ ಆಂತಕಗೊಂಡಿದ್ದಾರೆ. ಈ ಬಗೆಯ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ ಅವುಗಳನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಜನ ಆರೋಪಿಸಿದ್ದಾರೆ.
ಆತಂಕದಲ್ಲಿ ಜನತೆ: ಘಟನೆ ಇಡೀ ನಗರವನ್ನು ಬೆಚ್ಚಿ ಬೀಳಿಸಿದೆ. ಹೆಚ್ಚಾಗಿ ಒಂಟಿ ಮಹಿಳೆಯರೇ ಇರುವ ಮನೆಗಳಲ್ಲಿ ಆತಂಕ ಹೆಚ್ಚಿದೆ. ಕಳೆದ ಕೆಲ ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣಗಳು, ದರೋಡೆ ಪ್ರಕರಣಗಳನ್ನು ಭೇದಿಸುವಲ್ಲಿ ಇಲ್ಲಿನ ಪೊಲೀಸರು ವಹಿಸಿದ ನಿರ್ಲಕ್ಷ್ಯ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಈವರೆಗೆ ಯಾವ ಆರೋಪಿಯನ್ನು ಬಂಧಿಸಿದರೋ ಯಾರು ಸಿಕ್ಕಿದ್ದಾರೋ-ಸಿಕ್ಕಿಲ್ಲವೋ ಯಾವುದರ ಬಗ್ಗೆಯೂ ಪೊಲೀಸ್ ಇಲಾಖೆ ಸಾರ್ವಜನಿಕವಾಗಿ ಏನೂ ಹೇಳಿಲ್ಲ. ಘಟನೆಗಳು ನಡೆದಾಗ ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡು ಮರೆಯಾಗುವ ಭದ್ರತಾ ವ್ಯವಸ್ಥೆ ಮತ್ತಷ್ಟು ಚುರುಕಾಗಬೇಕು. ಸಾರ್ವಜನಿಕರು ಆತಂಕವಿಲ್ಲದೆ ವಾಸಮಾಡುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳೂ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.