ಬೆಂಗಳೂರು ಗ್ರಾಮಾಂತರ

ರೇವಣ ಸಿದ್ದೇಶ್ವರ ಬೆಟ್ಟ ಪ್ರವಾಸಿ ತಾಣವಾಗಲು ಅಣಿ

Published On :

ಕ.ಪ್ರ.ವಾರ್ತೆ ರಾಮನಗರ ಮೇ 22
ಪ್ರಸಿದ್ಧ ಯಾತ್ರಾ ಸ್ಥಳವಾದ ರಾಮನಗರದ ಶ್ರೀ ರೇವಣ ಸಿದ್ದೇಶ್ವರ ಬೆಟ್ಟವಿನ್ನು ಧಾರ್ಮಿಕ ಕ್ಷೇತ್ರದ ಜತೆಗೆ ಪ್ರವಾಸಿ ತಾಣವಾಗಿ ರೂಪುಗೊಳ್ಳಲು ಅಣಿಯಾಗುತ್ತಿದೆ. ಶ್ರೀಕ್ಷೇತ್ರದಲ್ಲಿ ತ್ರಿವಿಧ ದಾಸೋಹ ಪ್ರಾರಂಭಕ್ಕೆ ಚಾಲನೆ ನೀಡಲು ಶ್ರೀ ರೇವಣ ಸಿದ್ದೇಶ್ವರಸ್ವಾಮಿ ಟ್ರಸ್ಟ್ ನಿರ್ಧರಿಸಿದೆ.  
ಅಪಾರ ಭಕ್ತ ಸಮೂಹವನ್ನು ಹೊಂದಿರುವ ಶ್ರೀಕ್ಷೇತ್ರದಲ್ಲಿ ಪ್ರಸ್ತುತ ನಡೆಯುತ್ತಿರುವ ಸೇವೆ ಹಾಗೂ ಹಮ್ಮಿಕೊಂಡಿರುವ ದೂರದೃಷ್ಟಿಯ ಯೋಜನೆಗಳ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ವ್ಯವಸ್ಥಾಪಕ ಧರ್ಮದರ್ಶಿ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಎಲ್. ರೇವಣಸಿದ್ದಯ್ಯ ವಿವರಿಸಿದರು.
ನೂರಾರು ವರ್ಷಗಳ ಇತಿಹಾಸವಿರುವ ಶ್ರೀಕ್ಷೇತ್ರದ ಅಭಿವೃದ್ಧಿಗಾಗಿ ಟ್ರಸ್ಟ್ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈಗಾಗಲೇ ಪ್ರತಿ ದಿನ ರಾತ್ರಿ ಅನ್ನ ದಾಸೋಹ, ದೇವರಿಗೆ ಹೋಳಿಗೆ ತುಪ್ಪದ ಆರಾಧನೆ, ಸಣ್ಣ ಮಕ್ಕಳಿಗೆ ಉಚಿತವಾಗಿ ಹಾಲು ವಿತರಣೆ ನಡೆಸಲಾಗುತ್ತಿದೆ ಎಂದರು.
ಭೀಮೇಶ್ವರಿವರೆಗೆ ರಸ್ತೆ ನಿರ್ಮಾಣ, ವಾಹನ ನಿಲುಗಡೆ, ದೇವಾಲಯ ಸಮುಚ್ಚಯ ಮತ್ತು ದಾಸೋಹ ಭವನಕ್ಕೆ ಯುಪಿಎಸ್, ಜನರೇಟರ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಪವಿತ್ರ ದೊಣೆ (ಸೊಣೆ)ಗಳ ಸಂಸ್ಕರಣೆ, ಸಸ್ಯ ಸಮೃದ್ಧಿ ಮತ್ತು ಪರಿಸರ ಸಂರಕ್ಷಣಾ ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಭಕ್ತರ ಸಹಕಾರ: ಶ್ರೀ ರೇವಣಸಿದ್ದೇಶ್ವರ ಟ್ರಸ್ಟ್ ಹತ್ತು ವರ್ಷದ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿದೆ. ಭಕ್ತ ಸಮೂಹದ ಸಹಕಾರದೊಂದಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷ ರಥೋತ್ಸವ ನಡೆಸುತ್ತಿದ್ದು, ಪಾಲ್ಗೊಳ್ಳುವ 1 ಲಕ್ಷಕ್ಕೂ ಅಧಿಕ ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಬೆಟ್ಟ ಹತ್ತುವಾಗ ತ್ರಾಸ ಆಗದಿರಲೆಂದು ಮೆಟ್ಟಿಲುಗಳನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಮೆಟ್ಟಿಲುಗಳು ಹಾದು ಹೋಗುವ ಮಾರ್ಗದಲ್ಲಿ ಮೇಲ್ಚಾವಣಿ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಮೆಟ್ಟಿಲೇರಿ ಸಾಗುವ ಭಕ್ತರಿಗೆ ನೆರಳು ಬೀಳುವಂತೆ ಮಾಡಲಾಗಿದೆ ಎಂದು ರೇವಣಸಿದ್ದಯ್ಯ ತಿಳಿಸಿದರು.
ಕೇಬಲ್ ಕಾರ್ ಚಿಂತನೆ: ಶ್ರೀಕ್ಷೇತ್ರದಲ್ಲಿ ವಯೋವೃದ್ಧರು, ಅನಾರೋಗ್ಯಪೀಡಿತ ಭಕ್ತರು ಬೆಟ್ಟದ ಮೇಲಿರುವ ದೇವರ ದರ್ಶನಕ್ಕೆ ತೆರಳಲು ಅನುಕೂಲವಾಗುವಂತೆ ಕೇಬಲ್ ಕಾರ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಟ್ರಸ್ಟ್ ಚಿಂತನೆ ನಡೆಸಿದೆ ಎಂದು ಅವರು ಹೇಳಿದರು.
ಕೇಬಲ್ ಕಾರ್ ಇಲ್ಲವೇ ಲಿಫ್ಟ್ ವ್ಯವಸ್ಥೆ ಕಲ್ಪಿಸುವುದರಿಂದ ಶ್ರೀಕ್ಷೇತ್ರದ ಪಾವಿತ್ರ್ಯತೆ ಹಾಳಾಗಬಹುದು ಎನ್ನುವ ಅಭಿಪ್ರಾಯವೂ ಇದೆ. ಇದೆಲ್ಲದರ ಬಗ್ಗೆ ಪರಾಮರ್ಶಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ದೇಗುಲ ಜೀರ್ಣೋದ್ಧಾರ: ಮುಜರಾಯಿ ಇಲಾಖೆಯಿಂದ ಮಂಜೂರಾಗಿರುವ ರು.2 ಕೋಟಿ ವೆಚ್ಚದಲ್ಲಿ ಬೆಟ್ಟದ ಮೇಲಿರುವ ಶ್ರೀ ರೇವಣ ಸಿದ್ದೇಶ್ವರ ದೇಗುಲದ ಜೀರ್ಣೋದ್ಧಾರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ರೇವಣಸಿದ್ದಯ್ಯ ತಿಳಿಸಿದರು.

25ಕ್ಕೆ ರಥೋತ್ಸವ
ಶ್ರೀಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಮೇ 25 ರಂದು ನಡೆಯಲಿದೆ. ಅದೇ ದಿನ ಬೆಳಗ್ಗೆ  ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಪ್ರಸಾದ ವಿನಿಯೋಗವಿರುತ್ತದೆ. ರಥೋತ್ಸವ ಪ್ರಯುಕ್ತ 23 ರಿಂದ 27ರವರೆಗೆ ವಿದೃತ್ ದೀಪಾಲಂಕಾರ ಇರುತ್ತದೆ ಎಂದರು. ಗೋಷ್ಠಿಯಲ್ಲಿ ಎಚ್.ಎಂ.ರೇವಣಸಿದ್ದಯ್ಯ, ಕೆ.ಎನ್.ರೇಣುಕಾನಂದ, ಪಿ.ಶಿವಾನಂದ, ಮಲ್ಲಿಕಾರ್ಜುನಯ್ಯ, ನಾಗರಾಜು ಹಾಜರಿದ್ದರು.

ಲೋಕಸಭೆಗೆ ಸ್ಪರ್ಧೆ ಇಂಗಿತ
ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಶ್ರಮಿಸಿದ್ದೇನೆ. ನನ್ನ ಯೋಗ್ಯತೆ, ಅರ್ಹತೆಗೆ ಅನುಗುಣವಾಗಿ ಯಾವುದೇ ಜವಬ್ದಾರಿ ವಹಿಸಿದರೂ ನಿಭಾಯಿಸಲು ಸಿದ್ಧನಿದ್ದೇನೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಎಲ್.ರೇವಣಸಿದ್ದಯ್ಯ ಹೇಳಿದರು.
ರಾಮನಗರದ ಶ್ರೀ ರೇವಣಸಿದ್ದೇಶ್ವರ ಶ್ರೀಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯುವ ಕುರಿತು ಮನಸ್ಸಿದೆ ಎಂದು ಇಂಗಿತ ವ್ಯಕ್ತಪಡಿಸಿದರು.

ಭವ್ಯ ಕಟ್ಟಡ ಕಾಮಗಾರಿ
ಶ್ರೀಕ್ಷೇತ್ರಕ್ಕೆ ರಾಜ್ಯ, ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ಸಹಸ್ರಾರು ಭಕ್ತರಿದ್ದಾರೆ. ಮುನ್ನೂರು ಮಂದಿ ತಂಗಬಹುದಾದಷ್ಟು ಸುಸಜ್ಜಿತ ವಸತಿ ಸೌಲಭ್ಯ, ಅನ್ನ ದಾಸೋಹಕ್ಕಾಗಿ ಭೋಜನ ಶಾಲೆ ಮತ್ತು ಇತರೆ ಉದ್ದೇಶಕ್ಕಾಗಿ ಬೃಹತ್ ಕಟ್ಟಡವನ್ನು ರು.10.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ರೇವಣಸಿದ್ದಯ್ಯ ತಿಳಿಸಿದರು.  ಕಟ್ಟಡ ನಿರ್ಮಾಣವನ್ನು ಎರಡು ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಒಂದು ಹಂತ ಪೂರ್ಣಗೊಂಡ ಬಳಿಕ ಮತ್ತೊಂದು ಹಂತದ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು. 4 ಅಂತಸ್ತಿನ ಸದರಿ ಕಟ್ಟಡವು ಒಟ್ಟಾರೆ 150 ಚದರ ಇರುತ್ತದೆ. ಇದರಲ್ಲಿ ಶೈತ್ಯಾಗಾರ ಸಹಿತ ಉಗ್ರಾಣ, ಸಭಾಂಗಣ, ವಿಶ್ರಾಂತಿಧಾಮ, ಪೂಜಾ ಮತ್ತು ಧ್ಯಾನ ಮಂದಿರ, ವಾಹನ ನಿಲ್ದಾಣ ವ್ಯವಸ್ಥೆಯೂ ಇರುತ್ತದೆ ನಿವೃತ್ತ ಐಪಿಎಸ್ ಅಧಿಕಾರಿ ಎಲ್. ರೇವಣಸಿದ್ದಯ್ಯ  ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.