ಎಂದು ಕಾಣುವುದು ಗ್ರೀನ್‌ಸಿಗ್ನಲ್...!
ರಾಮನಗರದ ಐಜೂರು ವೃತ್ತದಲ್ಲಿ ಸಂಚಾರ ದಟ್ಟಣೆ ತಡೆಗಟ್ಟಲು ಹರಸಾಹಸ
-ಮತ್ತೀಕೆರೆ ಜಯರಾಮ್
ರಾಮನಗರ: ನಗರದ ಐಜೂರು ವೃತ್ತದಲ್ಲಿ ಅಳವಡಿಸಿರುವ ಸಂಚಾರಿ ಸಿಗ್ನಲ್ ದೀಪಗಳು ಹದಗೆಟ್ಟು ಇನ್ನೇನು ಎರಡು ವಾರ ಸಮೀಪಿಸುತ್ತಿದೆ. ಈ ಪರಿಣಾಮ ವಾಹನಗಳ ಅಡ್ಡಾದಿಡ್ಡಿ ಸಂಚಾರ ನಿಯಂತ್ರಿಸಲಾಗದೆ ವೃತ್ತದಲ್ಲಿ ಕರ್ತವ್ಯಕ್ಕೆ ನಿಯೋಜಿತರಾದ ಸಂಚಾರಿ ಪೊಲೀಸರು ಹೈರಾಣಾಗಿದ್ದಾರೆ.
ಬೆಂಗಳೂರು-ಮೈಸೂರು ರಸ್ತೆಗೆ ಈ ವೃತ್ತದಲ್ಲಿ ಮಾಗಡಿ ರಸ್ತೆ, ರಾಮನಗರ ಸಿಟಿಯಿಂದ ಹಳೆಯ ಬಸ್‌ನಿಲ್ದಾಣ ರಸ್ತೆ ಕೂಡಿಕೊಳ್ಳುತ್ತದೆ. ವೃತ್ತದ ಪಕ್ಕದಲ್ಲೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವೂ ಇದೆ. ಹೀಗಾಗಿ ಐದು ಕಡೆಯಿಂದ ವಾಹನಗಳು ವೃತ್ತದ ಮಾರ್ಗವಾಗಿ ಸಾಗುತ್ತಿವೆ.
ಇನ್ನಿಲ್ಲದ ತಾಪತ್ರಯ: ಎರಡು ಮುಖವಾಗಿ ಸಂಚರಿಸುವ ವಾಹನಗಳ ದಟ್ಟಣೆ ತಡೆಯುವುದೇ ಇನ್ನಿಲ್ಲದ ತ್ರಾಸದ ಕೆಲಸ. ಅಂಥದ್ದರಲ್ಲಿ ಐದು ಕಡೆಯಿಂದ ಸಾಗುವ ವಾಹನಗಳನ್ನು ಸಂಚಾರಿ ಸಿಗ್ನಲ್‌ದೀಪದ ನೆರವಿಲ್ಲದೆ ನಿಯಂತ್ರಿಸುವುದು ಸುಲಭವೇನಲ್ಲ. ಇಷ್ಟಾಗಿಯೂ ಸಿಗ್ನಲ್‌ದೀಪಗಳ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸದ ಸಂಗತಿ.
ಕಾದಿದೆ ಅಪಾಯ: ವಾರಾಂತ್ಯ ಮತ್ತು ರಜೆ ದಿನಗಳಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅಡ್ಡಲಾಗಿ ರಸ್ತೆ ದಾಟುವುದು ತುಂಬಾ ಕಷ್ಟ. ಇಂತಹ ಸನ್ನಿವೇಶವನ್ನು ಸಿಗ್ನಲ್‌ದೀಪಗಳು ಇಲ್ಲದಿದ್ದಾಗ ನಿಯಂತ್ರಿಸುವುದು ಇನ್ನೂ ತ್ರಾಸದ ಕೆಲಸ.
ಅಪಘಾತದ ಸಂಭವ: ಹೇಳಿ ಕೇಳಿ ಈ ವೃತ್ತದಲ್ಲಿ ಒಬ್ಬಿಬ್ಬರು ಸಂಚಾರಿ ಪೇದೆಗಳನ್ನಷ್ಟೇ ನಿಯೋಜಿಸಲಾಗಿರುತ್ತದೆ. ಕರ್ತವ್ಯ ನಿರತ ಪೇದೆಯು ಒಂದು ಮಾರ್ಗದ ಕಡೆ ಕೈ ತೋರಿ ನಿಂತರೆ ಮತ್ತೊಂದು ಮಾರ್ಗದ ವಾಹನಗಳು ಅಡ್ಡಾದಿಡ್ಡಿ ನುಗ್ಗುತ್ತವೆ. ಇಂತಹ ವೇಳೆ ಅಪಘಾತದ ಸಂಭವ ಹೆಚ್ಚಿರುತ್ತದೆ.
ಈಗಾಗಲೇ ಸಣ್ಣಪುಟ್ಟ ಅಪಘಾತಗಳು ಸಂಭವಿಸಿದ್ದು, ದೂರು ದಾಖಲಾಗದೆ ಅಲ್ಲಲ್ಲೇ ರಾಜಿ-ಸಂಧಾನ ಮೂಲಕ ಪ್ರಕರಣಗಳು ಇತ್ಯರ್ಥವಾಗಿವೆ. ಅದೃಷ್ಟವಶಾತ್ ಇಲ್ಲಿವರೆಗೆ ಪ್ರಾಣಾಪಾಯ ಸಂಭವಿಸಿಲ್ಲ. ಹಾಗಾಗುವುದಕ್ಕೆ ಮುನ್ನವೇ ಪೊಲೀಸ್ ಇಲಾಖೆ, ನಗರಸಭೆ ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ.
ಸರ್ವಿಸ್ ರಸ್ತೆ ಸಂಚಾರ: ಬೆಂಗಳೂರು-ಮೈಸೂರು ಹೆದ್ದಾರಿಯ ಇಕ್ಕೆಲಗಳಲ್ಲಿರುವ ಸರ್ವಿಸ್ ರಸ್ತೆಗಳಲ್ಲೂ ವಾಹನಗಳ ಸಂಚಾರ ಇರುತ್ತದೆ. ಆ ವಾಹನಗಳ ಚಾಲಕರು ಸಂಚಾರಿ ಪೇದೆಗಳು ಕೈಯಿಂದ ನೀಡುವ ಸಿಗ್ನಲ್ ಅರ್ಥವಾಗದೆ, ವಾಹನಗಳನ್ನು ಮುನ್ನುಗ್ಗಿಸುತ್ತಿರುವುದೂ ಅಪಾಯಕಾರಿ ಯಾಗಿದೆ.
ಪರ್ಯಾಯ ಕ್ರಮ ಅಗತ್ಯ: ಬೆಂಗಳೂರು ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಐಜೂರು ವೃತ್ತದ ಸಿಗ್ನಲ್ ಬಳಿಯೇ ನಿಲುಗಡೆ ಮಾಡುತ್ತಿವೆ. ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಆಟೋದವರು ಸುತ್ತುವರೆಯುತ್ತಾರೆ. ಇದರಿಂದಲೂ ಅಪಾಯ ಸಂಭವಿಸಲಿದ್ದು, ಪರ್ಯಾಯ ಕ್ರಮ ಅಗತ್ಯವಾಗಿದೆ.
ಕಳೆದ ನಾಲ್ಕಾರು ವರ್ಷದಿಂದ ಐಜೂರು ವೃತ್ತದಲ್ಲಿ ವಾಹನ ಸಂಚಾರ ಮಾತ್ರವಲ್ಲದೆ, ಪಾದಚಾರಿಗಳ ಸಂಚಾರವೂ ನರಕ ಸದೃಶವಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಕಾಮಗಾರಿ ಪ್ರಾರಂಭಗೊಂಡ ಬಳಿಕವಂತೂ ಹೆಚ್ಚಿನ ಸಂಕಷ್ಟ ಅನುಭವಿಸುವ ಸ್ಥಿತಿ ಎದುರಾಗಿದೆ.
ಶಾಶ್ವತ ಯೋಜನೆ ಬೇಕು: ನೆರೆಯ ಮಂಡ್ಯ ಜಿಲ್ಲೆ ಮಾದರಿಯಲ್ಲಿ ಬೆಂಗಳೂರು ಮತ್ತು ಮೈಸೂರು ಕಡೆ ತೆರಳುವ ವಾಹನಗಳ ನಿಲುಗಡೆಗೆ ಪ್ರತ್ಯೇಕ ನಿಲ್ದಾಣ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ. ಇದರಿಂದ ಐಜೂರು ವೃತ್ತದಲ್ಲಿ ಅರ್ಧದಷ್ಟು ಸಮಸ್ಯೆ ನಿವಾರಿಸಲು ಸಾಧ್ಯವಿದೆ.
ಮಾಗಡಿ ರಸ್ತೆ ಹಾಗೂ ಹಳೆಯ ಬಸ್‌ನಿಲ್ದಾಣ ಕಡೆಗೆ ಸಾಗುವ ಪಾದಚಾರಿಗಳ ಸಂಚಾರಕ್ಕೆ ಮೇಲು ಸೇತುವೆ ಇಲ್ಲವೇ ಕೆಳ ಹಂತದ ಸೇತುವೆ ನಿರ್ಮಿಸಿದರಷ್ಟೇ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬಹುದು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
ಯೋಜನೆ ನನೆಗುದಿಗೆ: ರಾಮನಗರದ ಲೋಕೋಪಯೋಗಿ ಇಲಾಖೆ ವೃತ್ತ, ಕನಕಪುರ ವೃತ್ತ, ಚನ್ನಪಟ್ಟಣದ ಹಳೆಯ ಬಸ್‌ನಿಲ್ದಾಣ ವೃತ್ತ, ಸಾತನೂರು ವತ್ತ, ಶೇರ್‌ವ ಹೋಟೆಲ್ ವೃತ್ತ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಸಂಚಾರಿ ಸಿಗ್ನಲ್ ದೀಪ ಅಳವಡಿಸುವ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಗೆ ಸರ್ಕಾರ ಶೀಘ್ರ ಅನುಮತಿ ನೀಡಬೇಕಿದೆ.
ಈ ಯೋಜನೆಗೆ ತಗಲುವ ವೆಚ್ಚ ಭರಿಸಲು ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳು, ರಾ-ಚ ನಗರಾಭಿವೃದ್ಧಿ ಪ್ರಾಧಿಕಾರವು ಭರಿಸಲು ಮುಂದಾಗಬೇಕಿದೆ. ಯಾವ್ಯಾವುದೋ ಕಾಟಾಚಾರದ ಕೆಲಸಗಳಿಗೆ ಲಕ್ಷಗಟ್ಟಲೆ ಹಣ ಚೆಲ್ಲುವ ಬದಲು ಇಂತಹ ಕೆಲಸಕ್ಕೆ ಅನುದಾನ ನೀಡಬೇಕೆನ್ನುವುದು ಸಾರ್ವಜನಿಕರ ಸಲಹೆಯಾಗಿದೆ.
ದುರಸ್ತಿಗೆ ಶೀಘ್ರ ಕ್ರಮ
ರಾಮನಗರದ ಐಜೂರು ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ದೀಪ ಹದಗೆಟ್ಟು, ಸಂಚಾರ ನಿಯಂತ್ರಣಕ್ಕೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ಸಂಬಂಧಿಸಿದವರಿಗೆ ಶೀಘ್ರ ದುರಸ್ತಿಪಡಿಸಲು ಸೂಚಿಸಲಾಗಿದೆ.
-ಅನುಪಮ್ ಅಗರ್‌ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

