ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರದಲ್ಲಿ ಕರಗ ಮಹೋತ್ಸವ

Published On :

ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಮೇ 26
ಇಲ್ಲಿನ ವಹ್ನಿಗರಪೇಟೆಯಲ್ಲಿರುವ ಶ್ರೀಸಪ್ತಮಾತೃಕೆ ಮಾರಿಯಮ್ಮ ದೇವಿ ದೇವಾಲಯದಲ್ಲಿ ವೈಭವದ ಹೂವಿನ ಕರಗ ಮಹೋತ್ಸವ ಶನಿವಾರ ರಾತ್ರಿ ಸಂಭ್ರಮದಿಂದ ನಡೆಯಿತು.
ರಾತ್ರಿ 10.30ಕ್ಕೆ ದೇವಾಲಯದಿಂದ ಹೊರ ಬಂದ ಕರಗ ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆಗೆ ದೇವಾಲಯಕ್ಕೆ ಹಿಂತಿರುಗಿತು. ಸುಮಾರು 4 ಶತಮಾನಗಳ ಸುದೀರ್ಘ ಇತಿಹಾಸ ಹೊಂದಿರುವ ದೊಡ್ಡಬಳ್ಳಾಪುರ ಕರಗ ಪ್ರತಿವರ್ಷ ಬುದ್ಧಪೂರ್ಣಿಮೆಯ ರಾತ್ರಿ ನಡೆಯುತ್ತದೆ. ಒಂದು ವರ್ಷ ಸಪ್ತಮಾತೃಕೆ ಮಾರಿಯಮ್ಮ ದೇವಿ ಕರಗ ನಡೆದರೆ, ಮತ್ತೊಂದು ವರ್ಷ ಧರ್ಮರಾಯಸ್ವಾಮಿ-ದ್ರೌಪದಾದೇವಿ ಕರಗ ನಡೆಯುವುದು ಇಲ್ಲಿನ ವಿಶೇಷ.
ಕರಗ ಹೊತ್ತಿದ್ದ ಪೂಜಾರಿ ಬೇತಮಂಗಲದ ಬಿ.ವೈ. ನಾರಾಯಣಸ್ವಾಮಿ, ಗಗನಾರ್ಯ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಗಳ ನಂತರ ಮಲ್ಲಿಗೆ ಹೂವು ಮತ್ತು ಸರ್ವಾಭರಣಗಳಿಂದ ಅಲಂಕೃತವಾದ ಕರಗವನ್ನು ಹೊತ್ತು ಆಕರ್ಷಕ ನೃತ್ಯದೊಂದಿಗೆ ಸಂಚರಿಸಿದರು. ಕರಗದ ಹಿಂದೆ-ಮುಂದೆ ಗಣಾಚಾರಿಗಳು, ವೀರಕುಮಾರರು, ಪೂಜಾರಿಗಳು ಗೋವಿಂದ ಗೋವಿಂದ ಎನ್ನುತ್ತಾ ಶ್ರೀಮಾತೆಯ ಉತ್ಸವದಲ್ಲಿ ಪಾಲ್ಗೊಂಡರು. ದೇವಾಲಯದ ಮುಂದೆ ವೀರಕುಮಾರರಿಂದ ಅಲಗುಸೇವೆ, ಕತ್ತಿಸೇವೆ ನಡೆದದ್ದು ರೋಮಾಂಚನಕಾರಿಯಾಗಿತ್ತು. ಮಾರಿಯಮ್ಮ ದೇವಾಲಯದಿಂದ ನೇರವಾಗಿ ಏಳುಸುತ್ತಿನ ಕೋಟೆ, ಟ್ಯಾಂಕ್‌ರಸ್ತೆ ಮುಖಾಂತರ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ಕರಗ, ಸಿದ್ಧಲಿಂಗಯ್ಯ ವೃತ್ತದಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಆಕರ್ಷಕ ನೃತ್ಯ ಪ್ರದರ್ಶನ ನೀಡಿ ನೆರೆದಿದ್ದ ಸಾವಿರಾರು ಜನರ ಭಕ್ತಿಪರವಶತೆಗೆ ಕಾರಣವಾಯಿತು. ಹಲವಾರು ದೇವತೆಗಳ ಉತ್ಸವಗಳೂ ಕೂಡ ಈ ಸ್ಥಳಕ್ಕೆ ಬಂದು ಸೇರಿದ್ದು, ಕರಗನೃತ್ಯ ವಿಶೇಷ ರಂಗು ಪಡೆದಿತ್ತು. ನಂತರ ರಂಗಪ್ಪ ವೃತ್ತದಲ್ಲಿ ಆಕರ್ಷಕ ಕರಗ ನೃತ್ಯ ನಡೆಯಿತು. ದೊಡ್ಡಬಳ್ಳಾಪುರ ನಗರದ ಬೀದಿಗಳಲ್ಲಿ ರಾಜಗಾಂಭೀರ್ಯದಿಂದ ಸಾಗಿಬಂದ ಕರಗ ಭಾನುವಾರ ಮಧ್ಯಾಹ್ನದವರೆಗೂ ವಿವಿಧ ಪ್ರದೇಶಗಳಲ್ಲಿ ಸಂಚರಿಸಿದ್ದು ವಿಶೇಷವಾಗಿತ್ತು.
ಜನಸಾಗರ: ಈ ಬಾರಿಯ ಕರಗ ಮಹೋತ್ಸವಕ್ಕೆ ಅಪಾರ ಜನಸ್ತೋಮ ಸಾಕ್ಷಿಯಾಗಿತ್ತು. ಕೆಲ ಪ್ರಮುಖ ವೃತ್ತಗಳಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ರಸ್ತೆ ರಸ್ತೆಗಳಲ್ಲೂ ತಂಡೋಪತಂಡವಾಗಿ ಜನ ನೆರೆದಿದ್ದರು. ರಾತ್ರಿಯಿಡೀ ಇಡೀ ಊರಿನಲ್ಲಿ ಸಂಭ್ರಮದ ವಾತಾವರಣ ಮನೆಮಾಡಿತ್ತು. ಈ ಬಾರಿ ವಿಶೇಷವಾಗಿ ತಮಿಳುನಾಡಿನ ಕಲಾವಿದರು ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರದಲ್ಲಿ ರೂಪಿಸಲಾಗಿದ್ದ ಬೃಹತ್ ಗಾತ್ರದ ದೇವಾನುದೇವತೆಗಳ ಆಕರ್ಷಕ ಕಟೌಟ್‌ಗಳು ಭಕ್ತಜನರ ಗಮನ ಸೆಳೆದವು.
ದೇವತಾ ಉತ್ಸವಗಳು: ಕರಗದ ಅಂಗವಾಗಿ ದೊಡ್ಡಬಳ್ಳಾಪುರ ನಗರದೇವತೆ ರಾಮಲಿಂಗಚಂದ್ರ ಚೌಡೇಶ್ವರಿ, ಶ್ರೀನೆಲದಾಂಜನೇಯಸ್ವಾಮಿ, ಅಭಯಚೌಡೇಶ್ವರಿದೇವಿ, ಜನಾರ್ದನಸ್ವಾಮಿ, ಕಾಳಿಕಾ ಕಮಟೇಶ್ವರಸ್ವಾಮಿ, ಸಪ್ತಮಾತೃಕೆ ಮಾರಿಯಮ್ಮ, ಪಿಳ್ಳೇಕಮ್ಮ, ಶ್ರೀಧರ್ಮರಾಯಸ್ವಾಮಿ, ಸ್ವಯಂಭುವೇಶ್ವರಸ್ವಾಮಿ, ಮಹಾಲಕ್ಷ್ಮಿದೇವಿ ಸೇರಿದಂತೆ ಅನೇಕ ದೇವತೆಗಳ ಹೂವಿನ ಪಲ್ಲಕ್ಕಿ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವಗಳು ರಾತ್ರಿಯಿಡೀ ನಡೆದವು.
ವಿವಿಧ ಕಾರ್ಯಕ್ರಮ: ಕರಗದ ಅಂಗವಾಗಿ ತೂಬಗೆರೆ ಪೇಟೆ ವೃತ್ತದಲ್ಲಿ ನಾಟಕ ಪ್ರದರ್ಶನ, ಬೆಸ್ತರಪೇಟೆಯ ವೃತ್ತದಲ್ಲಿ ಗೊರವನಹಳ್ಳಿ ಮಹಾಲಕ್ಷ್ಮಿ ವಿಶೇಷ ಪೂಜಾ ಕಾರ್ಯಕ್ರಮ, ಮಾರುಕಟ್ಟೆ ಪ್ರದೇಶದಲ್ಲಿ ಪಾಂಡುರಂಗಸ್ವಾಮಿ ಪೂಜಾ ಕಾರ್ಯಕ್ರಮ ಸೇರಿದಂತೆ ವಿವಿಧೆಡೆ ಅರವಂಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಟಾಗಿದ್ದವು.

ಯಕ್ಷಗಾನ
ದೊಡ್ಡಬಳ್ಳಾಪುರ: ಇಲ್ಲಿನ ಸಪ್ತಮಾತೃಕೆ ಮಾರಿಯಮ್ಮ ದೇವಿ ಕರಗ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ
ತೂಬಗೆರೆಪೇಟೆಯ ವಿಘ್ನೇಶ್ವರ ಬಾಲಕ ಭಕ್ತ ಮಂಡಲಿಯ ನೇತೃತ್ವದಲ್ಲಿ ದ್ರೌಪತಿ ವಸ್ತ್ರಾಪಹರಣ ಅಥವಾ ದುಶ್ಯಾಸನ ವಧೆ ಯಕ್ಷಗಾನ ನಾಟಕ ನಡೆಯಿತು. ತೂಬಗೆರೆ ಪೇಟೆ ವೃತ್ತದಲ್ಲಿ ಸಿದ್ಧಪಡಿಸಲಾಗಿದ್ದ ಆಕರ್ಷಕ ರಂಗ ಮಂಟಪದಲ್ಲಿ ಸ್ಥಳೀಯ ಕಲಾವಿದರು ಯಶಸ್ವಿಯಾಗಿ ನಾಟಕ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾದರು. ಪ್ರಮುಖ ಪಾತ್ರಗಳಲ್ಲಿ ಎ.ಎಚ್.ಸುಬ್ರಹ್ಮಣಿ, ಎ.ಎಸ್.ಶ್ಯಾಂಸುಂದರ್, ಎಂ.ಮುನಿರಾಜು, ರಾಮಚಂದ್ರಪ್ಪ, ಗಂಗಾಧರರಾಯರು, ಗಿರೀಶ್, ಪಿ.ಅರಸಪ್ಪ, ಡಿ.ಸಿ.ಜಗದೀಶ, ಎಂ.ಎಲ್.ಶ್ರೀನಿವಾಸ್, ವಿಶ್ವನಾಥ ಮತ್ತಿತರರು ಅಭಿನಯಿಸಿದ್ದರು. ಮುಮ್ಮೇಳ ಮತ್ತು ಹಿಮ್ಮೇಳದ ಭಾಗವತರಾಗಿ ಡಿ.ಎನ್.ಗಂಗಾಧರಪ್ಪ, ಕೆ.ಎಸ್.ಗುರುಪ್ರಸಾದ್, ಎನ್. ಕೃಷ್ಣಮೂರ್ತಿ, ಕೆ.ಲಕ್ಷ್ಮೀಕಾಂತ, ಎ. ನಟರಾಜ್ ಕುಮಾರ್, ನಟರಾಜ್, ಎಂ.ಪಿ.ನಾಗರಾಜ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.