ಬೆಂಗಳೂರು ಗ್ರಾಮಾಂತರ

ನಂಗಾನಾಚ್: ಸಿಪಿಐ ಸಿದ್ದಲಿಂಗಪ್ಪ ಸಸ್ಪೆಂಡ್

Published On :

ಬೆಂಗಳೂರು/ದೊಡ್ಡಬಳ್ಳಾಪುರ:
ಧಾರ್ಮಿಕ ಸ್ಥಳ ಘಾಟಿ ಸುಬ್ರಮಣ್ಯ ಸಮೀಪದ ಎಸ್.ಆರ್.ವ್ಯಾಲಿ ರೆಸಾರ್ಟ್ನಲ್ಲಿ ನಡೆದ ಆಶ್ಲೀಲ ನೃತ್ಯ ಘಟನೆ ಸಂಬಂಧ ದೊಡ್ಡಬಳ್ಳಾಪುರದ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ಸಿದ್ದಲಿಂಗಪ್ಪ ಎಂಬುವವರನ್ನು ಅಮಾನತು ಮಾಡಲಾಗಿದೆ.
ಘಟನೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ಡಿ.ಪ್ರಕಾಶ್, 'ಘಟನೆಯ ಬಗ್ಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳದೆ ಕರ್ತವ್ಯ ನಿರ್ಲಕ್ಷ್ಯ ತೋರಿರುವ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಸಿದ್ದಲಿಂಗಪ್ಪ ಅವರನ್ನು ಅಮಾನತು ಮಾಡಲಾಗಿದೆ' ಎಂದು ಹೇಳಿದರು.
'ಎಸ್.ಆರ್.ವ್ಯಾಲಿ ರೆಸಾರ್ಟ್ ಮಾಲೀಕ ಸಂಪಂಗಿರಾಮಯ್ಯ ಹಾಗೂ ಅವರ ಪುತ್ರ ಚಂದ್ರು ಅವರು ರೆಸಾರ್ಟ್ನಲ್ಲಿ ಆಶ್ಲೀಲ ನೃತ್ಯಕ್ಕೆ ಅವಕಾಶ ನೀಡಬಾರದಿತ್ತು. ಅವಕಾಶ ನೀಡಿರುವುದಲ್ಲದೇ ಘಟನೆ ನಡೆದ ದಿನ ಅಥವಾ ಮರುದಿನವೂ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿಲ್ಲ. ಬದಲಿಗೆ ಒಂದು ವರ್ಷದ ಬಳಿಕ ದೂರು ನೀಡಿದ್ದಾರೆ.
ಹೀಗಾಗಿ ಕಾನೂನು ಬಾಹಿರ ಚಟುವಟಿಕೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿಸಂಪಂಗಿ ಹಾಗೂ ಪುತ್ರ ಚಂದ್ರು ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ' ಎಂದು ಪ್ರಕಾಶ ಮಾಹಿತಿ ನೀಡಿದರು.
ವರ್ಷದ ಬಳಿಕ ದೂರು: 2009ರ ಅಕ್ಟೋಬರ್ 9 ರಂದು ಜೆ.ವಿ.ಆರ್ ಅಗ್ರಿ ಕೆಮಿಕಲ್ಸ್ನವರು ನೂರು ಮಂದಿಗೆ ಔತಣಕೂಟ ನೀಡಲು ರೆಸಾರ್ಟ್ ಅನ್ನು ಬಾಡಿಗೆಗೆ ಪಡೆದಿದ್ದರು. ಅಂದು ಹಗಲು ರಾತ್ರಿ ಏಳೆಂಟು ಮಹಿಳೆಯರು ಹಾಗೂ 60 ರಿಂದ 70 ಜನ ಪುರುಷರು ಅಶ್ಲೀಲ ನೃತ್ಯದಲ್ಲಿ ಭಾಗಿಯಾಗಿದ್ದರು.
ರೆಸಾರ್ಟ್ ಮಾಲೀಕ ಘಟನೆ ನಡೆದು ಒಂದು ವರ್ಷದ ಬಳಿಕ ಅಂದರೆ 2010ರಲ್ಲಿ ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ನೀಡಿದ್ದ. ಆದರೆ ಅಂದಿನ ಸಿಪಿಐ ಸಿದ್ದಲಿಂಗಪ್ಪ ಈ ಬಗ್ಗೆ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವ ಬದಲು ನಿರ್ಲಕ್ಷ್ಯಿಸಿದ್ದರು. ಗಂಭೀರ ಪ್ರಕರಣವಾಗಿದ್ದರೂ ಕೇವಲ ಸ್ವೀಕೃತಿ ಪತ್ರ ನೀಡಿ ಕೈ ತೊಳೆದುಕೊಂಡಿದ್ದರು.
ಅಷ್ಟೇ ಅಲ್ಲದೇ ಅಂದು ನೀಡಿದ ದೂರಿನ ಯಾವುದೇ ಪ್ರತಿಯೂ ದೊಡ್ಡಬಳ್ಳಾಪುರ ಠಾಣೆಯಲ್ಲಿ ಪತ್ತೆಯಾಗಿಲ್ಲ.
ಹೀಗಾಗಿ ಘಟನೆ ನಡೆದು ಒಂದು ವರ್ಷದ ಬಳಿಕ ದೂರು ನೀಡಲು ಕಾರಣ ಏನು ಎನ್ನುವುದರ ಬಗ್ಗೆಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತ್ರತ್ವದಲ್ಲಿ ತನಿಖೆ ನಡೆಯುತ್ತಿದೆ.
ಬ್ಲಾಕ್ಮೇಲ್: ರೆಸಾರ್ಟ್ನಲ್ಲಿ ನಡೆದ ಆಶ್ಲೀಲ ನೃತ್ಯವನ್ನು ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ವ್ಯಕ್ತಿ ಮಾಲೀಕ ಸಂಪಂಗಿರಾಮಯ್ಯ ಅವರಿಗೆ ತೋರಿಸಿ ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ನೀಡದಿದ್ದರೆ ವಿಡಿಯೋವನ್ನು ಪೊಲೀಸರಿಗೆ ತೋರಿಸಿ ಬಂದ್ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ದೂರು ನೀಡಿದೆ. ಈ ಬಗ್ಗೆ ತನಗೆ ಮಾಹಿತಿ ಇರಲಿಲ್ಲ ಎಂದು ಪೊಲೀಸರ ಬಳಿ ಮಾಲೀಕ ಸಂಪಂಗಿರಾಮಯ್ಯ ಹೇಳಿಕೆ ನೀಡಿದ್ದಾನೆ.
ರೆಸಾರ್ಟ್ ಬಾಗಿಲು ಬಂದ್: ಘಟನೆಯ ಬಳಿಕ ದೊಡ್ಡಬಳ್ಳಾಪುರ ಪೊಲೀಸರು ರೆಸಾರ್ಟ್ ಅನ್ನು ಮುಚ್ಚಿಸಿದ್ದಾರೆ. ಅಲ್ಲದೇ ರೆಸಾರ್ಟ್ನಲ್ಲಿ ಅನೈತಿಕ, ಕಾನೂನುಬಾಹಿರ ಚಟುವಟಿಕೆಗಳು ನಡೆದಿರುವ ಹಿನ್ನೆಲೆಯಲ್ಲಿ ಅದರ ಲೈಸನ್ಸ್ ರದ್ದು ಮಾಡುವಂತೆ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಯುವುದಾಗಿ ಎಸ್ಪಿ ಪ್ರಕಾಶ ತಿಳಿಸಿದ್ದಾರೆ.
ತನಿಖೆಗೆ ತಂಡ: ಘಟನೆಯ ಬಗ್ಗೆ ತನಿಖೆಗೆ ತಂಡ ರಚಿಸಲಾಗಿದ್ದು ಎಸ್.ಆರ್.ವ್ಯಾಲಿ ರೆಸಾರ್ಟ್ನ ಅಂದಿನ ಮ್ಯಾನೇಜರ್ ಗೋವರ್ಧನ್ ಬಂಧನಕ್ಕೆ ಜಾಲ ಬೀಸಲಾಗಿದೆ. ಅಲ್ಲದೇ ಆಶ್ಲೀಲ ನೃತ್ಯದಲ್ಲಿ ತೊಡಗಿದ್ದ ಯುವತಿಯರ ಬಂಧನಕ್ಕೆ  ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಪ್ರಕಾಶ ಮಾಹಿತಿ ನೀಡಿದರು.
ಆಶ್ಲೀಲ ನೃತ್ಯ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇಲೆ ಗೋರ್ವಧನ್ ವಿರುದ್ಧ ಈಗಾಗಲೇ ಯಲಹಂಕ ಹಾಗೂ ದೇವನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಘಟನೆಯಲ್ಲಿ ಗೋವರ್ಧನ್ ಪಾತ್ರ ಪ್ರಮುಖವಾಗಿದ್ದು ಆತನ ಬಂಧನಕ್ಕೆ ಜಾಲ ಬೀಸಲಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.