ಪಂಚ ದಿನಗಳ ಕನಕೋತ್ಸವಕ್ಕೆ ಇಂದು ಚಾಲನೆ
ರಾಮನಗರ: ಕನಕಪುರದಲ್ಲಿ ಸಹೋದರರಾದ ಸಂಸದ ಡಿ.ಕೆ.ಸುರೇಶ್, ಶಾಸಕ ಡಿ.ಕೆ.ಶಿವಕುಮಾರ್ ಸಾರಥ್ಯದಲ್ಲಿ 5 ದಿನಗಳ ಕನಕೋತ್ಸವ ಮತ್ತು ರೈತ ಕಲ್ಯಾಣ ಕೃಷಿ ಉತ್ಸವಕ್ಕೆ ಬುಧವಾರ ಚಾಲನೆ ದೊರೆಯಲಿದೆ.
ಈ ಬಾರಿ ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುತ್ತಿರುವ ಕೃಷಿ ಉತ್ಸವದಲ್ಲಿ ವಿಜ್ಞಾನ ಮೇಳ, ವಸ್ತು ಪ್ರದರ್ಶನ, ಜಾನಪದ ಸಾಂಸ್ಕೃತಿಕ ಸೌರಭ, ಪ್ರತಿಭಾ ಪುರಸ್ಕಾರ, ಸೇವಾ ಪುರಸ್ಕಾರ, ನಗೆಹಬ್ಬ, ರಸಮಂಜರಿ ಕಾರ್ಯಕ್ರಮ ಜರುಗಲಿವೆ.
ಪಟ್ಟಣದ ಸರ್ಕಾರಿ ಕ್ರೀಡಾಂಗಣ ಮತ್ತು ರೂರಲ್ ಎಜುಕೇಷನ್ ಸೊಸೈಟಿ ವಿಶಾಲ ಮೈದಾನದಲ್ಲಿ ಒಂದು ಲಕ್ಷದಷ್ಟು ಪ್ರೇಕ್ಷಕರು ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಬೃಹತ್ ಪೆಂಡಾಲು ನಿರ್ಮಾಣ ಮಾಡಲಾಗಿದೆ.
ಡಿಕೆಶಿ ಟ್ರಸ್ಟ್ ಸಹಯೋಗ: ಈ ಮೇಳವನ್ನು ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಜಿಲ್ಲಾಡಳಿತ, ಜಿಪಂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಂದ ಆಯೋಜಿಸಲಾಗಿದೆ. ಇಡೀ ಕಾರ್ಯಕ್ರಮದ ರೂಪುರೇಷೆ, ಸಂಪೂರ್ಣ ಸಾರಥ್ಯ ಸುರೇಶ್ ಮತ್ತು ಶಿವಕುಮಾರ್ ಅವರದ್ದಾಗಿದೆ.
ಗಮನ ಸೆಳೆವ ಕಾರ್ಯಕ್ರಮ: ರೇಷ್ಮೆ, ಹೈನುಗಾರಿಕೆ ಮತ್ತು ತೋಟಗಾರಿಕೆ ಇಲಾಖೆಗಳಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗುವಂತಹ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಲಿದೆ. ರೈತರು ತಾವು ಬೆಳೆದಿರುವ ವಿವಿಧ ಬೆಳೆಗಳ ತಳಿಗಳ ಪ್ರದರ್ಶನ, ಶ್ವಾನಗಳ ಪ್ರದರ್ಶನ ಕೂಡ ಇಲ್ಲಿದೆ.
ಜೋಡಿ ಎತ್ತುಗಳು, ಉತ್ತಮ ಬೀಜದ ಹೋರಿ, ಹೋತ, ಟಗರು ಮತ್ತು ಹುಂಜಗಳ ಪ್ರದರ್ಶನಗಳನ್ನು ಆಯೋಜಿಸಿದ್ದು, ಬಹುಮಾನ ನೀಡಲಾಗುವುದು. ಕನಕಪುರ ಮಾತ್ರವಲ್ಲದೆ ರಾಮನಗರ, ಚನ್ನಪಟ್ಟಣ ಮತ್ತು ಮಾಗಡಿ ತಾಲೂಕುಗಳ ಕಲಾವಿದರು, ರೈತರಿಗೂ ಇಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗಿದೆ.
ಮನರಂಜನಾ ಕಾರ್ಯಕ್ರಮ: ಕನಕೋತ್ಸವ ಜರುಗುವ ಮೈದಾನದಲ್ಲಿ ಮಕ್ಕಳಿಗಾಗಿ ಕಾರಂಜಿ, ಬೋಟಿಂಗ್, ಆಟದ ಸಲಕರಣೆಗಳು ಮೈದಾನದ ಸುತ್ತ ತಲೆ ಎತ್ತಿವೆ. ಮಕ್ಕಳಿಗಾಗಿ ಮನ ಸೆಳೆಯುವಂತಹ ಚಿಣ್ಣರ ಲೋಕ ನಿರ್ಮಿಸಲಾಗಿದೆ.
ಎರಡು ಪ್ರತ್ಯೇಕ ಆಹ್ವಾನ ಪತ್ರಿಕೆ
ಕನಕೋತ್ಸವ ಮತ್ತು ಕೃಷಿ ಉತ್ಸವ ಸಂಬಂಧ ಎರಡು ಪ್ರತ್ಯೇಕ ಆಹ್ವಾನ ಪತ್ರಿಕೆಗಳು ಮುದ್ರಣವಾಗಿವೆ. ಈ ಪೈಕಿ ಜಿಲ್ಲಾಡಳಿತದ ಆಹ್ವಾನ ಪತ್ರಿಕೆಗಳು ಕೇವಲ ಶಿಷ್ಟಾಚಾರ ಪಾಲನೆಗಷ್ಟೆ ಮೀಸಲಾಗಿದ್ದು, ಅದರಲ್ಲಿ ಹೆಸರಿರುವ ಗಣ್ಯರು ಮತ್ತು ಸೀಮಿತ ವಲಯಕ್ಕಷ್ಟೆ ತಲುಪಿವೆ. ಉತ್ಸವದ ಸಹಯೋಗ ವಹಿಸಿರುವ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ನೇತೃತ್ವದ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮುದ್ರಿತವಾಗಿರುವ ಆಹ್ವಾನ ಪತ್ರಿಕೆಗಳು ಎಲ್ಲೆಡೆ ಹರಿದಾಡುತ್ತಿವೆ.ಕಾರ್ಯಕ್ರಮಕ್ಕೆ ಅಳವಡಿಸಿರುವ ಪ್ರಚಾರ ಸಾಮಗ್ರಿಗಳು ಸಂಪೂರ್ಣ ಕಾಂಗ್ರೆಸ್ ಮಯವಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

