ಭೂ ಕಬಳಿಕೆದಾರರಿಂದ 7 ಸುತ್ತಿನ ಬೆಟ್ಟ ನಾಮಾವಶೇಷ
-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ನ. 14
ಪರಭಾರೆಯಾದ ಆಸ್ತಿ ವಶಪಡಿಸಿಕೊಳ್ಳಬಹುದು. ಸರ್ಕಾರಕ್ಕೇ ಪಂಗನಾಮ ಹಾಕಿದ ಅಧಿಕಾರಿಗಳನ್ನು ಶಿಕ್ಷಿಸಲೂ ಬಹುದು. ಆದರೆ, ಕರಗಿಸಿರುವ ಏಳು ಸುತ್ತಿನ ಬೆಟ್ಟವನ್ನು ಮತ್ತೆ ಎತ್ತಿ ನಿಲ್ಲಿಸಲು ಸಾಧ್ಯವೇ?
ಈ ಏಳು ಸುತ್ತಿನ ಬೆಟ್ಟ ಇರುವುದು ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಸೇರಿದ ಅಬ್ಬನಕುಪ್ಪೆ ಸರ್ವೆ ನಂಬರಿನಲ್ಲಿ.
ಕಂದಾಯ ನಕ್ಷೆಯಲ್ಲಿ ಅದು ಸರ್ಕಾರಿ ಗೋಮಾಳ, ಖರಾಬ್ ಎಂದೇ ನಮೂದಾಗಿದೆ. ಭೂ ಕಬಳಿಕೆದಾರರಿಂದ ಆ ಬೆಟ್ಟವೀಗ ನಾಮಾವಶೇಷವಾಗಿದೆ.
ಬೆಂಗಳೂರಿಗೆ ಪರ್ಯಾಯವಾಗಿ ಬೆಳವಣಿಗೆ ಹೊಂದುತ್ತಿರುವ ರಾಮನಗರ ಜಿಲ್ಲೆಯು ಒಂದೆಡೆ ನಗರೀಕರಣ, ಮತ್ತೊಂದೆಡೆ ಕೈಗಾರೀಕರಣದಿಂದ ನಲುಗಿ ಹೋಗಿದೆ. ಇವೆರಡರ ಹಾವಳಿಗೆ ಸರ್ಕಾರಿ ಜಮೀನು ಅದೆಷ್ಟೋ ಕಬಳಿಕೆಯಾಗಿದ್ದು, ಪ್ರಾಕೃತಿಕ ಸಂಪತ್ತು ಲೂಟಿಯಾಗಿದೆ.
ನಿಯಮಾವಳಿಗಳನ್ನು ಗಾಳಿಗೆ ತೂರಿದ ಅಧಿಕಾರಿಗಳೇ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಪ್ರತಿಷ್ಠಿತ ಕೈಗಾರಿಕೆ ಮತ್ತು ಕಂಪೆನಿಗಳೇ ಭೂಮಿಯನ್ನು ನುಂಗುವ ಕೃತ್ಯದಲ್ಲಿ ತೊಡಗಿವೆ. ಕೆದಕುತ್ತಾ ಹೋದರೆ ಭೂಗರ್ಭದಲ್ಲಿ ಹುದುಗಿ ಹೋದ ಇನ್ನೂ ಅದೆಷ್ಟೋ ಭೂ ಅಕ್ರಮಗಳು ಬಯಲಾಗಲಿವೆ.
ನುಂಗಿ ನೀರು ಕುಡಿದರು: ಬೆಂಗಳೂರಿಗೆ ಅನತಿ ದೂರದಲ್ಲಿರುವ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದ್ದು, ಕೋಟಿಗಟ್ಟಲೆ ಹಣ ಹೂಡಿದರೂ ಭೂಮಿ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು, ಸಹಜವಾಗಿಯೇ ಅಕ್ರಮಗಳಿಗೆ ಎಡೆಮಾಡಿಕೊಟ್ಟಿದೆ. ದಂಧೆಕೋರರಿಗೆ ವರದಾನವಾಗಿದೆ.
ಬಿಡದಿ ಭಾಗದಲ್ಲಿ ಭೂ ಸ್ವಾಧೀನಪಡಿಸಿಕೊಂಡು, ಕೈಗಾರಿಕೆ ಮತ್ತಿತರೆ ಉದ್ದೇಶಗಳಿಗೆ ಹಂಚಿಕೆ ಮಾಡುವ ಕೆಲಸವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ನಿರ್ವಹಿಸಿಕೊಂಡು ಬಂದಿದೆ. ಮಂಡಳಿ ಅಧಿಕಾರಿಗಳು ಇಲ್ಲಿ ನುಂಗಿ ನೀರು ಕುಡಿದಿದ್ದಕ್ಕೆ ಲೆಕ್ಕವೇ ಇಲ್ಲ.
1990ರಿಂದಲೂ ಇಲ್ಲಿ ಅಕ್ರಮಗಳ ಸರಮಾಲೆಯೇ ಹೆಣೆದುಕೊಂಡಿದ್ದು, ಈ ಕುರಿತು ಅದೆಷ್ಟೋ ತನಿಖೆಗಳು ನಡೆದಿವೆಯಾದರೂ ಭ್ರಷ್ಟ ಅಧಿಕಾರಿಗಳಿಗೆ ಇನ್ನೂ ಶಿಕ್ಷೆ ಆಗಿಯೇ ಇಲ್ಲವೆನ್ನುವುದು ವಿಪರ್ಯಾಸದ ಸಂಗತಿ.
ಕರಗಿ ಹೋದ ಬೆಟ್ಟ: ಇದೀಗ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಪ್ರತಿ ಎಕರೆಗೆ ಸರಾಸರಿ ರು.3 ಕೋಟಿಯಷ್ಟು ಬೆಲೆ ಇದೆ. ಇಂತಹ ಕಡೆ ಇರುವ 10 ಎಕರೆ ಗೋಮಾಳ, ಖರಾಬ್ ಮತ್ತು ಅದರಲ್ಲಿದ್ದ ಬೆಟ್ಟವನ್ನು ಸೇರಿಸಿ ಕೆಐಎಡಿಬಿ ಅಧಿಕಾರಿಗಳು ಕಡಿಮೆ ಬೆಲೆಗೆ ಕಾರ್ಖಾನೆಗಳಿಗೆ ಮಾರಾಟ ಮಾಡಿದ್ದಾರೆ. ಈ ಪೈಕಿ ಅಬ್ಬನಕುಪ್ಪೆಯ ಸರ್ವೆ ನಂ.135ರಲ್ಲಿರುವ ಏಳು ಸುತ್ತಿನ ಬೆಟ್ಟದ ಪ್ರದೇಶವೂ ಒಂದು. ಅದನ್ನು ಕಬಳಿಸಿರುವ ಕಾರ್ಖಾನೆಗಳು ಬಹುತೇಕ ಬೆಟ್ಟವನ್ನು ಕರಗಿಸಿದ್ದು, ಸಮತಟ್ಟು ಮಾಡಿದ್ದಾರೆ. ಅಲ್ಲೀಗ ರಸ್ತೆ, ಕಟ್ಟಡ ನಿರ್ಮಾಣ ಸಹಿತ ಇತರೆ ಉದ್ದೇಶಕ್ಕೆ ಬಳಸಲು ಸಿದ್ಧತೆ ನಡೆಯುತ್ತಿದೆ.
ಗೋಮಾಳ, ಖರಾಬ್ ಜಮೀನನ್ನು ಸರ್ಕಾರಿ ಇಲ್ಲವೇ ಸಾರ್ವಜನಿಕ ಉದ್ದೇಶಕ್ಕಷ್ಟೇ ಜಿಲ್ಲಾಧಿಕಾರಿ ಅನುಮತಿಯೊಂದಿಗೆ ಬಳಕೆಗೆ ಅವಕಾಶವಿದೆ. ಆದರೆ, ಕೆಐಎಡಿಬಿ ಅಧಿಕಾರಿಗಳು ಪೂರ್ತಿ 10 ಎಕರೆಗೆ ಕಿಮ್ಮತ್ತು ನಿರ್ಧರಿಸಿ, ಹಣ ಪಾವತಿಸಿಕೊಂಡು ಪರಭಾರೆ ಮಾಡಿಕೊಟ್ಟಾಗಿದೆ. ಈ ವಿರುದ್ಧ ಜಿಲ್ಲಾಡಳಿತ ತಡವಾಗಿಯಾದರೂ ಎಚ್ಚೆತ್ತುಕೊಂಡಿದೆ. ಜಿಲ್ಲಾಡಳಿತ ಪರವಾಗಿ ರಾಮನಗರ ತಹಸೀಲ್ದಾರ್ ಬಿಡದಿ ಪೊಲೀಸ್ ಠಾಣೆಯಲ್ಲಿ ಕೆಐಎಡಿಬಿ ಅಧಿಕಾರಿಗಳು ಮತ್ತು ಕಾರ್ಖಾನೆಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ರು.7.80 ಕೋಟಿ ಪಾವತಿ: ಸದರಿ 10 ಎಕರೆ ಜಮೀನಿಗೆ ಹಾಲಿ ಮಾರುಕಟ್ಟೆಯಲ್ಲಿ ಕಮ್ಮಿಯೆಂದರೂ ರು.30 ಕೋಟಿಯಷ್ಟು ಮೌಲ್ಯವಿದೆ. ಆದರೆ, ಕೆಐಎಡಿಬಿ ಅಧಿಕಾರಿಗಳು ಮೂರು ಹಂತದಲ್ಲಿ ರು. 7.80 ಕೋಟಿಯನ್ನು ಸಂದಾಯ ಮಾಡಿಕೊಂಡು, ರಶೀದಿಯೊಂದಿಗೆ ಖಾಸಗಿಯವರಿಗೆ ಜಮೀನು ಹಸ್ತಾಂತರ ಪತ್ರವನ್ನೂ ನೀಡಿದ್ದಾರೆ. ಸರ್ಕಾರಿ ಜಮೀನನ್ನು ಹೀಗೆ ನಿಯಮಗಳನ್ನು ಗಾಳಿಗೆ ತೂರಿ ಬೇಕೆಂದವರಿಗೆಲ್ಲಾ ಮಂಜೂರು ಮಾಡಲು ಕೆಐಎಡಿಬಿ ಅಧಿಕಾರಿಗಳಿಗೆ ಪರಮಾಧಿಕಾರ ಇಲ್ಲ. ಇಷ್ಟಕ್ಕೂ ಅಲ್ಲಿರುವ ಪ್ರಾಕೃತಿಕ ಸಂಪತ್ತಿನ ನಾಶಕ್ಕೂ ಅಧಿಕಾರಿಗಳು ಕಾರಣವಾಗಿದ್ದಾರೆ. ಇದರ ಸಮಗ್ರ ತನಿಖೆ, ಕ್ರಮಕ್ಕೆ ರಾಜಕಾರಣಿಗಳೇ ಅಡ್ಡಗಾಲಾಗಿದ್ದಾರೆ.
ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಬಹುತೇಕ ಕಾರ್ಖಾನೆಗಳಿಗೆ ರಾಜಕಾರಣಿಗಳ ಬೆಂಬಲವಿದೆ. ಕೆಲ ಕಾರ್ಖಾನೆಗಳಲ್ಲಿ ರಾಜಕಾರಣಿಗಳ ಇಲ್ಲವೇ ಅವರ ಸಂಬಂಧಿಕರ ಪಾಲೂ ಉಂಟು. ಇಂತಹ ಕಡೆ ಭೂ ಅಕ್ರಮಕ್ಕೆ ಕೈ ಹಾಕಿದ್ದೇ ಹಿಂದಿನ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ತಲೆದಂಡಕ್ಕೆ ಕಾರಣವಾಗಿದ್ದು ಗುಟ್ಟಿನ ಸಂಗತಿಯಲ್ಲ.
ಸರ್ಕಾರಿ ಜಾಗ ಗೊತ್ತುಪಡಿಸಿ: ಬಿಡದಿ ಕೈಗಾರಿಕಾ ಪ್ರದೇಶ ಮಾತ್ರವಲ್ಲದೆ ರಾಮನಗರ ಜಿಲ್ಲೆಯಾದ್ಯಂತ ಆಯಕಟ್ಟಿನ ಪ್ರದೇಶದಲ್ಲಿರುವ ಸರ್ಕಾರಿ ಗೋಮಾಳ, ಖರಾಬ್ ಸಹಿತ ಆಸ್ತಿಪಾಸ್ತಿಯನ್ನು ಗುರುತಿಸಿ ಸ್ವಾಧೀನಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಬೇಕಿದೆ. ಇಲ್ಲವಾದರೆ ಅಳಿದುಳಿದ ಜಾಗವೂ ಕಬಳಿಕೆ ಆಗಲಿದೆ.
ಅದೆಷ್ಟೋ ಸರ್ಕಾರಿ ಜಮೀನಿನ ಮಾಲೀಕತ್ವವನ್ನು ಕೆಲ ಭ್ರಷ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಈಗಾಗಲೇ ಖಾಸಗಿಯವರ ಹೆಸರಿಗೆ ಕಾಣಿಸಿದ್ದಾರೆ. ಇಂತಹ ಪ್ರಕರಣಗಳ ಬಗ್ಗೆಯೂ ಗಮನ ಹರಿಸಬೇಕಿದೆ. ಭೂ ಕಬಳಿಕೆ ವಿರುದ್ಧ ನೂತನ ಜಿಲ್ಲಾಧಿಕಾರಿ ಸಮರ ಸಾರುವರೇ ಕಾದು ನೋಡಬೇಕು.
ಅಧಿವೇಶನದಲ್ಲಿ ಚರ್ಚೆ
ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರಿ ಭೂಮಿ ಕಬಳಿಕೆ ಮತ್ತು ಅಬ್ಬನಕುಪ್ಪೆಯ ಏಳು ಸುತ್ತಿನ ಬೆಟ್ಟ ಸಹಿತ ಪ್ರಾಕೃತಿಕ ಸಂಪತ್ತಿನ ನಾಶ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲಾಗುವುದು.
-ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

