ಹೆದರಿಸಿ ವಸೂಲು ಮಾಡಿದ ಹಣದಿಂದ ಕನಕೋತ್ಸವ
ಕ.ಪ್ರ.ವಾರ್ತೆ ರಾಮನಗರ ನ.16
ಅಧಿಕಾರಿಗಳನ್ನು ಹೆದರಿಸಿ ವಸೂಲು ಮಾಡಿದ ಹಣದಿಂದ ಕನಕಪುರದಲ್ಲಿ ಕನಕೋತ್ಸವ ಮತ್ತು ಕೃಷಿ ಮೇಳ ನಡೆಸಲಾಗಿದೆ. ಈ ಮೇಳ ಕಾಂಗ್ರೆಸ್ ಮೇಳವೇ ಹೊರತು ಕೃಷಿ ಮೇಳವಲ್ಲ ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಟೀಕಿಸಿದರು.
ವೈಯಕ್ತಿಕ ಲಾಭಕ್ಕಷ್ಟೇ ಸೀಮಿತ. ಅದರಿಂದ ರೈತರಿಗೇನೂ ಲಾಭವಿಲ್ಲ ಎಂದು ಅವರು ರಾಮನಗರ ತಾಲೂಕಿನ ಅಬ್ಬನಕುಪ್ಪೆಯಲ್ಲಿ ಶನಿವಾರ ಗ್ರಾಮ ಸಂದರ್ಶನ ವೇಳೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಜಿಲ್ಲಾ ಮಟ್ಟದ ಕೃಷಿ ಮೇಳವನ್ನು ಜಿಲ್ಲಾ ಕೇಂದ್ರದಲ್ಲಿ ನಡೆಸಿದ್ದರೆ ಉಪಯುಕ್ತವಾಗುತ್ತಿತ್ತು. ಕನಕಪುರದ ಮೂಲೆಯಲ್ಲಿ ನಡೆಸಿ, ತಾವಿಬ್ಬರೂ ಕನಕಪುರಕ್ಕಷ್ಟೇ ಸೀಮಿತವೆನ್ನುವುದನ್ನು ಶಿವಕುಮಾರ್ ಮತ್ತು ಸುರೇಶ್ ಸಹೋದರರು ಸಾಬೀತು ಮಾಡಿಕೊಂಡಿದ್ದಾರೆ ಎಂದು ಅವರು ಛೇಡಿಸಿದರು.
ಮೇಳಕ್ಕೆ ಹಣ ವಸೂಲಿ: ಉತ್ಸವಕ್ಕಾಗಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳಿಂದಲೂ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳನ್ನು ಹೆದರಿಸಿ ವಸೂಲು ಮಾಡಿದ ಹಣದಲ್ಲಿ ಸುರೇಶ್ ಮತ್ತು ಶಿವಕುಮಾರ್ ಮೆರೆಯುತ್ತಿದ್ದಾರೆ. ಅವರ ಸರ್ವಾಧಿಕಾರಿ ಧೋರಣೆ ಸರಿಯಿಲ್ಲ ಎಂದು ಬಾಲಕೃಷ್ಣ ಹೇಳಿದರು.
ಕೃಷಿ ಮೇಳದಿಂದ ರೈತರಿಗೇನೂ ಉಪಯೋಗವಿಲ್ಲ. ರೈತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಯಾವುದೇ ಗೋಷ್ಠಿ ಆಯೋಜಿಸಿಲ್ಲ. 8 ಸಾವಿರ ಮಂದಿಗೆ ಸನ್ಮಾನದಲ್ಲೂ ಪಕ್ಷಪಾತ ನಡೆದಿದೆ. ಈ ಸನ್ಮಾನವು ಮುಂಬರುವ ಲೋಕಸಭೆ ಚುನಾವಣೆಗೆ ಓಟ್ ಬ್ಯಾಂಕ್ ರಾಜಕಾರಣವಾಗಿದೆ ಎಂದು ಆರೋಪಿಸಿದರು.
ಅಧಿಕಾರ ಶಾಶ್ವತವಲ್ಲ: ಸನ್ಮಾನಕ್ಕೆ ಯಾವುದೇ ಮಾನದಂಡ ಅನುಸರಿಸಲಾಗಿಲ್ಲ. 4 ತಾಲೂಕುಗಳಿಂದ ಸನ್ಮಾನಿತರ ಆಯ್ಕೆಯನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೇ ನಿರ್ಧರಿಸಿದ್ದಾರೆ. ಕೃಷಿ ಮೇಳದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಡಿ ದರ್ಜೆಯವರಂತೆ ಕಾಣಲಾಗಿದೆ. ಅವರ ಪಾತ್ರ ಮಳಿಗೆ ತೆರೆದು, ಮುಚ್ಚುವುದಕ್ಕೆ ಮಾತ್ರವೇ ಸೀಮಿತ ಎಂದು ತಿಳಿಸಿದರು.
ಬದಲಾಗಿದ್ದಾರೆ ಸಿಎಂ ಸಿದ್ದು: ಮುಖ್ಯಮಂತ್ರಿ ಆದ ನಂತರ ಸಿದ್ದರಾಮಯ್ಯ ಸಾಕಷ್ಟು ಬದಲಾಗಿದ್ದಾರೆ. ಅವರ ಧೋರಣೆ, ವರ್ತನೆಯೂ ಬದಲಾಗಿದೆ. ಸರ್ಕಾರಿ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ಸ್ವಪಕ್ಷೀಯರನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಶಿಷ್ಟಾಚಾರ ಪಾಲನೆ ವಿಷಯದಲ್ಲಿ ಪ್ರತಿಪಕ್ಷದಲ್ಲಿದ್ದಾಗ ಬೊಬ್ಬೆ ಹೊಡೆಯುತ್ತಿದ್ದ ಅವರೇ ಶಿಷ್ಟಾಚಾರ ಉಲ್ಲಂಘನೆಗೆ ಪ್ರೇರಣೆಯಾಗಿದ್ದಾರೆ ಎಂದು ಅವರು ಆರೋಪಿಸಿದರು.
ಬೆಂಗಳೂರಿನಲ್ಲಿ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡುವಾಗ ಸಹಕಾರಿ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು ಎಂದ ಸಿದ್ದರಾಮಯ್ಯ ಅವರು ಆ ಕಾರ್ಯಕ್ರಮವನ್ನು ಜನಪ್ರತಿನಿಧಿಯೇ ಅಲ್ಲದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಂದ ಉದ್ಘಾಟನೆ ಮಾಡಿಸಿದ್ದು ಶಿಷ್ಟಾಚಾರ ಉಲ್ಲಂಘನೆ ಎಂದು ಅವರು ಹೇಳಿದರು.
ದೂರುಗಳ ಸುರಿಮಳೆ
ಇಟ್ಟಮಡು ಗ್ರಾ.ಪಂ. ವ್ಯಾಪ್ತಿಯ ಅಬ್ಬನಕುಪ್ಪೆ, ಅಬ್ಬನಕುಪ್ಪೆ ಕಾಲೋನಿ, ವೃಷಭಾವತಿಪುರ, ತಿಮ್ಮೇಗೌಡನದೊಡ್ಡಿ, ಆಶ್ರಮದೊಡ್ಡಿ, ರಾಮನಹಳ್ಳಿ, ಹೊಸಕೆರೆದೊಡ್ಡಿ, ತೊರೆದೊಡ್ಡಿ, ಇಟ್ಟಮಡು, ಬಸವೇಶ್ವರನಗರ, ಅಂಗರಹಳ್ಳಿ, ಹೆಗ್ಗಡಗೆರೆ, ಹೆಗ್ಗಡಗೆರೆ ಕಾಲೋನಿಯಲ್ಲಿ ಶಾಸಕ ಬಾಲಕೃಷ್ಣ ಗ್ರಾಮ ಸಂದರ್ಶನ ನಡೆಸಿದರು. ಈ ವೇಳೆ ಶಾಸಕರಿಗೆ ದೂರುಗಳ ಸುರಿಮಳೆಯಾಯಿತು. ಮನವಿ ಸ್ವೀಕರಿಸಿದ ಶಾಸಕ ಬಾಲಕೃಷ್ಣ ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಇದ್ದ ಅಧಿಕಾರಿಗಳ ಗಮನಕ್ಕೆ ತಂದು, ತಕ್ಷಣ ಬಗೆ ಹರಿಸುವಂತೆ ಸೂಚಿಸಿದರು. ಇನ್ನುಳಿದ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವ ಭರವಸೆ ನೀಡಿದರು. ಗ್ರಾಮ ಸಂದರ್ಶನ ವೇಳೆ ಜಿ.ಪಂ. ಸದಸ್ಯ ಎಚ್.ಎಲ್.ಚಂದ್ರ, ತಾ.ಪಂ. ಇಒ ವೆಂಕಟೇಶ್, ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ, ಸದಸ್ಯರಾದ ಬೆಟ್ಟಸ್ವಾಮಿ, ಧನಂಜಯ, ಪಿಡಿಒ ರಾಮಕೃಷ್ಣಪ್ಪ, ಜಿ.ರಾಮಯ್ಯ, ಹೊನ್ನ ಗಿರಿಗೌಡ ಮತ್ತಿತರರಿದ್ದರು.
ಪೊರಕೆಯಲ್ಲಿ ಹೊಡಿಸಬೇಕಾಗುತ್ತದೆ
ರಾಮನಗರ ಜಿಲ್ಲೆಯ 4 ತಾಲೂಕುಗಳ ಪೈಕಿ ಕನಕಪುರದಲ್ಲಷ್ಟೇ ಬಿಪಿಎಲ್ ಕಾರ್ಡ್ ವಿತರಣೆಗೆ ಗ್ರಾಮ ಲೆಕ್ಕಿಗರ, ಗ್ರಾ.ಪಂ. ಪಿಡಿಒ ಮತ್ತು ಕಾರ್ಯದರ್ಶಿಗಳು ಸಹಕರಿಸುತ್ತಿದ್ದಾರೆ. ಆದರೆ, ಉಳಿದ 3 ತಾಲೂಕುಗಳಲ್ಲಿ ಬಿಪಿಎಲ್ ಕಾರ್ಡ್ ಹಂಚಿಕೆ ವಿಷಯವಾಗಿ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು. ಕನಕಪುರ ತಾಲೂಕಿನಲ್ಲಿ ಫಲಾನುಭವಿಯ ಅರ್ಜಿಗೆ ಗ್ರಾಮ ಲೆಕ್ಕಿಗ, ಪಿಡಿಒ ಇಲ್ಲವೇ ಕಾರ್ಯದರ್ಶಿ ಸಹಿ ಹಾಕಿದರೆ ಸಾಕು ಕಾರ್ಡ್ ವಿತರಿಸಲಾಗುತ್ತಿದೆ. ಆದರೆ, ರಾಮನಗರ ಮತ್ತು ಇತರೆ ತಾಲೂಕುಗಳಲ್ಲಿ ಬೇರೆಯದೇ ವ್ಯವಸ್ಥೆ ಇರುವುದರ ಹಿಂದಿನ ಷಡ್ಯಂತ್ರವಾದರೂ ಏನು ಎಂದು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಒಂದೇ ಜಿಲ್ಲೆಯಲ್ಲಿ ಎರಡು ರೀತಿಯ ಮಾನದಂಡ ಅನುಸರಣೆ ಸಲ್ಲದು. ಅಧಿಕಾರಿಗಳು ತಕ್ಷಣವೇ ಎಚ್ಚೆತ್ತು, ಒಂದು ವಾರದೊಳಗೆ ಎಲ್ಲ ಫಲಾನುಭವಿಗಳಿಗೆ ಕಾರ್ಡ್ ವಿತರಿಸಬೇಕು. ಇಲ್ಲವಾದಲ್ಲಿ ಜನರಿಂದಲೇ ಪೊರಕೆಯಲ್ಲಿ ಹೊಡೆಸುವ ಚಳವಳಿ ರೂಪಿಸಬೇಕಾಗುತ್ತದೆ ಎಂದು ಬಾಲಕೃಷ್ಣ ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

