ಬೆಂಗಳೂರು ಗ್ರಾಮಾಂತರ

ಪುಣ್ಯ ಕ್ಷೇತ್ರಗಳೀಗ ಪೂಜಾರಿಗಳ ಕಾದಾಟದ ರಣಾಂಗಣ

Published On :

-ವಿಶೇಷ ವರದಿ
ರಾಮನಗರ: ಪುಣ್ಯ ಕ್ಷೇತ್ರಗಳು ಈಗ ಪೂಜಾರಿಗಳ ಕಾದಾಟದ ರಣಾಂಗಣ ಆಗುತ್ತಿವೆ. ಇದೀಗ ರಾಮನಗರ ಜಿಲ್ಲೆಯ ಮಾಗಡಿಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ತಿರುಮಲೆ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಮಂತ್ರ ಹೇಳುವ ಅರ್ಚಕರು ಅವಾಚ್ಯ ಶಬ್ದಗಳೊಂದಿಗೆ ಕಿತ್ತಾಡಿರುವುದಕ್ಕೆ ಭಕ್ತ ಸಮೂಹ ಸಾಕ್ಷಿಯಾಗಿದೆ.
ದೇವಾಲಯದ ಪ್ರಾಂಗಣದಲ್ಲೇ ಅರ್ಚಕರು ಪರಸ್ಪರ ನಿಂದಿಸಿಕೊಂಡು, ಹೊಯ್ ಕೈ ನಡೆಸಿದ್ದರ ಪರಿಣಾಮ ಸುಮಾರು ಒಂದು ತಾಸು ದೇವರು ಪೂಜೆ ಪುನಸ್ಕಾರವಿಲ್ಲದೆ ಅನಾಥನಾದ. ದರ್ಶನಕ್ಕೆ ಬಂದ ಭಕ್ತ ಸಮೂಹ ಅರ್ಚಕರ ಅರುಚಾಟ, ಕಿರುಚಾಟ, ಕಚ್ಚಾಟದಿಂದ ರೋಸಿ ಹೋದರು.
ಮಾಂಡವ್ಯ ಮಹರ್ಷಿ ತಪ್ಪಸ್ಸು ಮಾಡಿ ಪ್ರತಿಷ್ಠಾಪಿಸಿದ ಶ್ರೀ ತಿರುಮಲೆ ರಂಗನಾಥನಿಗೆ ಚೋಳ ರಾಜರಿಂದ ದೇಗುಲ ನಿರ್ಮಾಣವಾಗಿತ್ತು. ನಾಡ ಪ್ರಭು ಕೆಂಪೇಗೌಡರು ಭಕ್ತಿಭಾವದಿಂದ ಈ ದೇವರನ್ನು  ಪೂಜಿಸಿದ್ದರು. ಇಷ್ಟೆಲ್ಲ ಐತಿಹ್ಯ ಹೊಂದಿದ ದೇಗಲವೀಗ ಅರ್ಚಕರ ಕಚ್ಚಾಟದಿಂದ ಕಳಂಕಕ್ಕೀಡಾಗಿದೆ.
ಸಂಕಷ್ಟ ನಿವಾರಣೆ ನಂಬಿಕೆ: ಪಶ್ಚಿಮ ವೆಂಕಟಾಚಲಪತಿ ಎಂದೇ ಖ್ಯಾತಿ ಹೊಂದಿದ ಈ ದೈವಕ್ಕೆ ಮೊರೆ ಹೋದವರ ಸಂಕಷ್ಟ ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಈ ರಂಗನಾಥನ ದರ್ಶನ ಪಡೆದರೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಷ್ಟೇ ಪವಿತ್ರವೆನ್ನುವ ಪ್ರತೀತಿಯೂ ಇದೆ. ಇದು ರಾಮನಗರ ಜಿಲ್ಲೆಯಲ್ಲೇ ಅತಿ ಹೆಚ್ಚು ಕಾಣಿಕೆ ಸಂದಾಯವಾಗುವ ಶ್ರೀಮಂತ ದೇಗುಲ.
ಅಸಹ್ಯ ಮೂಡಿಸಿದೆ: ಈ ಆದಾಯವೇ ಇಲ್ಲಿರುವ ಅರ್ಚಕರ ಜಂಗೀಕುಸ್ತಿಗೆ ಕಾರಣವೆನ್ನಲಾಗಿದೆ. ಮಂಗಳಾರತಿ ತಟ್ಟೆ ಸಹಿತ ಪೂಜಾ ಕೈಂಕರ್ಯದಿಂದ ಬರುತ್ತಿದ್ದ ಆದಾಯದ ವಿಚಾರದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಅರ್ಚಕರ ಕಚ್ಚಾಟ ಶುಕ್ರವಾರವಷ್ಟೇ ಬೀದಿಗೆ ಬಂದಿದೆ. ಈ ಘಟನೆ ಭಕ್ತರಷ್ಟೇ ಅಲ್ಲದೆ ಅಧಿಕಾರಿ ವರ್ಗಕ್ಕೂ ಅಸಹ್ಯ ಮೂಡಿಸಿದೆ.
ವಿವಾದದ ಹಿನ್ನೆಲೆ: ಮುಜರಾಯಿ ಇಲಾಖೆ ವ್ಯಾಪ್ತಿಯ ಈ ದೇಗುಲದಲ್ಲಿ ಸರ್ಕಾರದಿಂದ ನೇಮಕಗೊಂಡ ಅರ್ಚಕರೇ ಬೇರೆಯಾಗಿದ್ದು, ವಂಶಪಾರಂಪರ್ಯವಾಗಿ ಪೂಜೆ ನಡೆಸಿಕೊಂಡು ಬಂದವರದೇ ಮತ್ತೊಂದು ವರ್ಗವಿದೆ. ಇವರ ನಡುವಿನ ಸಾಮರಸ್ಯದ ಕೊರತೆಯೇ ಜಗಳಕ್ಕೆ ಮೂಲವಾಗಿದೆ.
ಗರ್ಭಗುಡಿ ಪೂಜೆ ನೆರವೇರಿಸುವ ಅರ್ಚಕರ ಆದಾಯ ಐಟಿಬಿಟಿ ಕಂಪೆನಿ ಉದ್ಯೋಗಿಗಳ ವೇತನವನ್ನೇ ಮೀರಿಸಿದೆ. ಹೀಗಾಗಿಯೇ ಗರ್ಭಗುಡಿ ಪೂಜೆ ಬಿಟ್ಟು ಹೊರ ಬರಲು ಅರ್ಚಕರಿಗೆ ಸುತಾರಾಂ ಇಷ್ಟವಿಲ್ಲ. ಇಲ್ಲಿ ಪೂಜೆ ಕೆಲಸಕ್ಕೆ ನಾ ಕೊಡೆ, ನೀ ಬಿಡೆ ಎನ್ನುವಂತೆ ಹಗ್ಗ ಜಗ್ಗಾಟವಿದೆ.
ಇದು ಒಂದರ್ಥದಲ್ಲಿ ದಾಯಾದಿ ಕಲಹವೂ ಹೌದು. ಕೆಲವೇ ಅರ್ಚಕರು ನಡೆಸುತ್ತಿರುವ ಕಾರುಬಾರನ್ನು ಇತರರು ಸಹಿಸುತ್ತಿಲ್ಲ. ಅರ್ಚಕರಿಗೆ ದೇವರಿಗೆ ಅರ್ಪಿಸುವ ಪೂಜೆಗಿಂತಲೂ ಭಕ್ತರ ಕಿಸೆಯಿಂದ ಬರುವ ಕಾಣಿಕೆ ಮೇಲೆಯೇ ಕಣ್ಣು. ಅದಕ್ಕೆ ಇಷ್ಟೆಲ್ಲ ರಂಪ, ರದ್ಧಾಂತ.
ದಾನಿಗೂ ಇಲ್ಲ ಕಿಮ್ಮತ್ತು: ಈ ದೇವರ ಭಕ್ತರಾದ ಬೆಂಗಳೂರಿನ ಹೊಯ್ಸಳ ಕನ್ಸ್‌ಸ್ಟ್ರಕ್ಷನ್ ಸಂಸ್ಥೆಯ ಸತೀಶ್ ಎಂಬುವರು ಗರ್ಭಗುಡಿಯ ದೇವರಿಗೆ ರು.1 ಕೋಟಿಯ ವಜ್ರಖಚಿತ ಚಿನ್ನದ ಕಿರೀಟ ಸಮರ್ಪಿಸಿದ್ದು, ಉತ್ಸವ ಮೂರ್ತಿಗೂ ರು.60 ಲಕ್ಷದ ಕಿರೀಟ ನೀಡಿದ್ದಾರೆ.  ದೇಗುಲದಲ್ಲಿ ನಿಂತು ಹೋಗಿದ್ದ ಅನೇಕ ಉತ್ಸವಗಳನ್ನು ಪುನಾರಂಭಿಸಲು ಶ್ರಮಿಸಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಿದ್ದಾರೆ. ಇದೀಗ ಅವರು ದೇಗುಲದಲ್ಲಿ 11 ಆಳ್ವಾರ್ ಕ್ಕಂಚಿನ ಪ್ರತಿಮೆಗಳನ್ನು ಸ್ಥಾಪಿಸಲು ಕುಂಭಕೋಣಂನಿಂದ ತರಿಸಿದ್ದರು.
ಶುಕ್ರವಾರ ಆಳ್ವಾರ್ ಪ್ರತಿಮೆಗಳ ಪ್ರತಿಷ್ಠಾಪನೆ ನೆರವೇರಿಸಲು ಅನುಮತಿ ಪಡೆದಿದ್ದರು. ಮುನ್ನಾ ದಿನ ಅವರು ಬಂದಾಗ ದುರುದ್ದೇಶದಿಂದ ದೇಗುಲಕ್ಕೆ ಬೀಗ ಹಾಕಲಾಗಿತ್ತು. ಮಾರನೆ ದಿನ ಬಿಗು ಪೂಜೆಗೂ ಅವಕಾಶ ಮಾಡಿಕೊಟ್ಟಿರಲಿಲ್ಲ ಎಂದು ಸತೀಶ್ ಗಲಾಟೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶಿವಕುಮಾರ್ ಅವರಿಗೆ ದೂರಿದರು.
ಇದೇ ವೇಳೆ ವಿಶೇಷ ಪೂಜೆ, ಅರ್ಚನೆ ಸಹಿತ ನಾನಾ ಪೂಜೆಗಳಿಗೆ ನಿಗದಿಗಿಂತ ದುಪ್ಪಟ್ಟು ಹಣ ವಸೂಲು ಮಾಡಲಾಗುತ್ತಿದೆ. ಇಲ್ಲಿ ಅರ್ಚಕರ ಕಚ್ಚಾಟ ಮಿತಿ ಮೀರಿದೆ. ಇದಕ್ಕೆಲ್ಲಾ ಕಡಿವಾಣ ಹಾಕಿ ಎಂದು ಭಕ್ತರು  ತಹಸೀಲ್ದಾರ್ ಅವರನ್ನು ಒತ್ತಾಯಿಸಿದರು.  ಈ ದೇಗುಲದಲ್ಲಿ ವಿಧಿ, ವಿಧಾನಗಳಿಗೂ ತೀಲಾಂಜಲಿ ಹೇಳಲಾಗಿದೆ. ಧರ್ಮದರ್ಶಿ ಟ್ರಸ್ಟ್ ರಚನೆಯಲ್ಲೂ ರಾಜಕೀಯ ಮೇಲಾಟ ನಡೆದಿದೆ. ಈ ಎಲ್ಲ ಅಕ್ರಮ, ಅನಾಚಾರಗಳನ್ನು ತಪ್ಪಿಸಿ ದೇಗುಲದ ಪಾವಿತ್ರ್ಯತೆಯನ್ನು ಕಾಪಾಡಬೇಕು ಎನ್ನುವ ಆಗ್ರಹವೂ ವ್ಯಕ್ತವಾಗಿದೆ.  

ಅಭಿವೃದ್ಧಿಗೆ ಅಸಹಕಾರ
ಶ್ರೀ ತಿರುಮಲೆ ರಂಗನಾಥ ದೇಗುಲದ ಅಭಿವೃದ್ಧಿ ವಿಷಯದಲ್ಲಿ ಅರ್ಚಕರಿಂದಲೇ ಅಸಹಕಾರ ಧೋರಣೆ ಎದುರಾಗಿದೆ. ಈ ವಿಷಯದಲ್ಲಿ ಮುಜರಾಯಿ ಇಲಾಖೆ ಮತ್ತು ತಾಲೂಕು ಆಡಳಿತ ಮಧ್ಯೆ ಪ್ರವೇಶಿಸಿ ಅಶಿಸ್ತು, ಅಕ್ರಮಗಳನ್ನು ತಡೆಗಟ್ಟಬೇಕು.
-ಸತೀಶ್, ದೇಗುಲದ ಸೇವಾಕರ್ತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.