ಕೆಲಸದಿಂದ ತೆಗೆದು ಹಾಕಲು ಹುನ್ನಾರ ಆರೋಪ
ಕ.ಪ್ರ.ವಾರ್ತೆ ರಾಮನಗರ ನ.17
ಕಾರ್ಖಾನೆಯಲ್ಲಿರುವ ಯಂತ್ರೋಪಕರಣಗಳನ್ನು ಸ್ಥಳಾಂತರಿಸಿ, ನೌಕರರನ್ನು ಕೆಲಸದಿಂದ ತೆಗೆದು ಹಾಕಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಬಿಡದಿಯ ಟಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಕಾರ್ಖಾನೆ ಮುಂದೆ ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದಾರೆ.
ಯಂತ್ರಗಳನ್ನು ಬೇರೆಡೆಗೆ ಸಾಗಾಣೆ ಮಾಡುತ್ತಿದ್ದ ಸುಳಿವರಿತ ಕಾರ್ಮಿಕರು ಭಾನುವಾರ ಕಾರ್ಖಾನೆಯ ಎಲ್ಲಾ ದ್ವಾರಗಳಲ್ಲಿ ಕಾಯ್ದು ಕುಳಿತಿದ್ದರು. ಈ ವೇಳೆ ಒಂದು ದ್ವಾರದಲ್ಲಿ ಯಂತ್ರಗಳನ್ನು ತುಂಬಿದ್ದ ಒಂದು ಲಾರಿ ಹೊರ ಬಂದಿದೆ. ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಲಾರಿಯನ್ನು ತಡೆದು ಪ್ರತಿಭಟನೆಗಿಳಿದರು. ಕಂಪೆನಿಯ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
43ಮಂದಿ ಕೆಲಸ ಹೋಯ್ತು: ಕಳೆದ ಎರಡು ತಿಂಗಳಲ್ಲಿ ಬಿಡದಿಯ ಕಾರ್ಖಾನೆಯಲ್ಲಿರುವ ಎ.ಟಿ.ಇಂಡಿಯಾ ಕಾರ್ಖಾನೆಗೆ ಬೃಹದಾಕಾರದ 55 ಯಂತ್ರಗಳನ್ನು ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಟಯೋಟಾ ಕಂಪೆನಿಯ 43 ಮಂದಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ ಎಂದು ಕಿಡಿ ಕಾರಿದರು.
ಇದೀಗ ಮತ್ತೆ 13 ಯಂತ್ರಗಳನ್ನು ಸ್ಥಳಾಂತರಿಸಲು ಹುನ್ನಾರ ನಡೆಸಲಾಗಿದ್ದು, ಇದರಿಂದಾಗಿ ಮತ್ತಷ್ಟು ಮಂದಿ ಕಾರ್ಮಿಕರು ಉದ್ಯೋಗವಿಲ್ಲದಂತಾಗಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಯಂತ್ರಗಳನ್ನು ಹೊರಹೋಗಲು ಬಿಡುವುದಿಲ್ಲ ಎಂದು ಪ್ರತಿಭಟನಾನಿರತ ಕಾರ್ಮಿಕರು ಪಟ್ಟುಹಿಡಿದರು.
ದಿಕ್ಕುತಪ್ಪಿಸುವ ತಂತ್ರ: 3 ದಿನದ ಹಿಂದೆ ಸಂಘದ ಪದಾಧಿಕಾರಿಗಳು ನೀಡಿರುವ ನೋಟಿಸ್‌ಗೆ ಆಡಳಿತ ಮಂಡಳಿ ಮೌಖಿಕವಾಗಿ ಉತ್ತರ ನೀಡಿದೆ. ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕುವುದಿಲ್ಲವೆಂದು ಹೇಳುತ್ತಿರುವ ಅಧಿಕಾರಿಗಳು ಕಾರ್ಮಿಕ ಆಯುಕ್ತರೊಂದಿಗೆ ಲಿಖಿತ ಒಪ್ಪಂದ ಮಾಡಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಕಾರ್ಖಾನೆಯಲ್ಲೇ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಕೊಳ್ಳೋಣವೆಂದು ಹೇಳುತ್ತಿದ್ದಾರೆ. ಇದು ಕಾರ್ಮಿಕರನ್ನು ದಿಕ್ಕು ತಪ್ಪಿಸುವ ತಂತ್ರವಾಗಿದೆ ಎಂದು ದೂರಿದರು.
ಕಾರ್ಮಿಕರ ಉದ್ಯೋಗ ಭದ್ರತೆ ಸಂಬಂಧ ಕಾರ್ಖಾನೆ ಆಡಳಿತ ಮಂಡಳಿಯು ಕಾರ್ಮಿಕ ಆಯುಕ್ತರ ಸಮಕ್ಷಮ ಲಿಖಿತ ಒಪ್ಪಂದ ಮಾಡಿಕೊಳ್ಳದ ಹೊರತು ಕಾರ್ಖಾನೆಯಿಂದ ಯಂತ್ರಗಳನ್ನು ಸಾಗಿಸಲು ಬಿಡುವುದಿಲ್ಲ. ಕಾರ್ಖಾನೆ ಆವರಣದಲ್ಲಿ ಯಾವುದೇ ಅಹಿತಕರೆ ಘಟನೆ ನಡೆದರೆ ಆಡಳಿತ ಮಂಡಳಿಯೇ ನೇರ ಹೊಣೆಯಾಗಲಿದೆ. ಆದ್ದರಿಂದ ರಕ್ಷಣೆ ಕೋರಿ ಬಿಡದಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಗಿದೆ ಎಂದರು.
ಉಪಕರಣಗಳನ್ನು ತುಂಬಿದ್ದ ಲಾರಿಯನ್ನು ಕಾರ್ಮಿಕರು ತಡೆದಿದ್ದರಿಂದಾಗಿ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿಡದಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆ ಅಧ್ಯಕ್ಷ ಸುರೇಶ್ ಬಾಬು, ಉಪಾಧ್ಯಕ್ಷ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಧನಂಜಯ, ಜಂಟಿ ಕಾರ್ಯದರ್ಶಿಗಳಾದ ಪ್ರಕಾಶ್, ಶಿವಕುಮಾರ್, ಖಜಾಂಚಿ ಪ್ರಸನ್ನಕುಮಾರ್ ಸೇರಿದಂತೆ ಸುಮಾರು 240 ಮಂದಿ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

