ಅರ್ಚಕರ ಕಚ್ಚಾಟ; ಶೋಕಾಸ್ ನೋಟಿಸ್ ಜಾರಿ
ಕ.ಪ್ರ. ವಾರ್ತೆ ರಾಮನಗರ ನ.18
ಭಕ್ತರ ಸಮಕ್ಷಮ ಮಾಗಡಿಯ ತಿರುಮಲೆ ರಂಗನಾಥಸ್ವಾಮಿ ದೇವಳದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಕಚ್ಚಾಡಿದ್ದ ಅರ್ಚಕರ ವಿರುದ್ಧ ಕಾನೂನು ಕ್ರಮ ಜಾರಿ ಸಂಬಂಧ ತಾಲೂಕು ಆಡಳಿತ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ವಿವಾದದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್, ತಹಸೀಲ್ದಾರ್ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದು, ಗರ್ಭ ಗುಡಿ ಪೂಜೆಗಾಗಿ ಕಚ್ಚಾಡಿದ ಅರ್ಚಕರು ಪೇಚಿಗೆ ಸಿಲುಕಿದ್ದಾರೆ.
ಇತಿಹಾಸ ಮತ್ತು ಪುರಾಣ ಪ್ರಸಿದ್ಧ ರಂಗನಾಥಸ್ವಾಮಿ ದೇವಾಲಯದಲ್ಲಿ ನ.15ರಂದು ಅರ್ಚಕರು ಪರಸ್ಪರ ಕಚ್ಚಾಡಿಕೊಂಡಿದ್ದರು. ಈ ಪರಿಣಾಮ ದೇವರಿಗೆ 1 ತಾಸು ಪೂಜೆ ಪುನಸ್ಕಾರವಿಲ್ಲದಾಗಿತ್ತು. ದೇವರ ದರ್ಶನಕ್ಕೆ ಸರದಿಯಲ್ಲಿ ನಿಂತಿದ್ದ ಭಕ್ತರು ಅರ್ಚಕರ ಕಿತ್ತಾಟಕ್ಕೆ ಪ್ರೇಕ್ಷಕರಗಾಬೇಕಾಗಿತ್ತು.
ವಿವಾದದ ಕೇಂದ್ರಬಿಂದು ಅರ್ಚಕ ಕೃಷ್ಣ ಅಯ್ಯಂಗಾರ್, ಅನಧಿಕೃತವಾಗಿ ಪೂಜೆ ನೆರವೇರಿಸುತ್ತಿರುವ ಗೋವಿಂದರಾಜು, ಅರ್ಚಕ ಹಾಗೂ ಪರಿಚಾರಕ ವೆಂಕಟೇಶ ಅಯ್ಯಂಗಾರ್ ಅವರಿಗೆ 24 ತಾಸಿನೊಳಗೆ ಲಿಖಿತ ಸಮಜಾಯಿಷಿ ನೀಡುವಂತೆ ತಹಸೀಲ್ದಾರ್ ಶಿವಕುಮಾರ್ ಅವರು ನೋಟಿಸ್ ನೀಡಿದ್ದಾರೆ.
ನೋಟಿಸ್ನಲ್ಲಿ ಏನಿದೆ?: ದೇಗುಲ ಸನ್ನಿಧಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ, ಅನುಚಿತ ವರ್ತನೆ, ಅರ್ಚನೆ, ಅಭಿಷೇಕ, ಉತ್ಸವಗಳ ಹೆಸರಿನಲ್ಲಿ ಭಕ್ತರಿಂದ ಅನಧಿಕೃತವಾಗಿ ಹಣ ವಸೂಲಿ ಹಾಗೂ ಅರ್ಚಕರಲ್ಲದ ನಿಮ್ಮ ತಂದೆ ಗೋವಿಂದರಾಜು ವಶಕ್ಕೆ ದೇಗುಲದ ಕೀಲಿ ನೀಡಿರುವ ಕಾರಣಕ್ಕೆ ನಿಮ್ಮನ್ನು ಸೇವೆಯಿಂದ ಅಮಾನತುಪಡಿಸಬಾರದೇಕೆ ಎಂದು ಕೃಷ್ಣ ಅಯ್ಯಂಗಾರ್ ಅವರಿಗೆ ನೀಡಿರುವ ನೋಟಿಸ್ನಲ್ಲಿ ತಿಳಿಸಲಾಗಿದೆ.
ಸರ್ಕಾರದಿಂದ ನೇಮಕಗೊಂಡ ಅರ್ಚಕ ಕೃಷ್ಣ ಅಯ್ಯಂಗಾರ್ ಅವರ ತಂದೆ ಎನ್ನುವ ಕಾರಣಕ್ಕೆ ನೀವು ಗರ್ಭಗುಡಿಯಲ್ಲಿ ಅನಧಿಕೃತವಾಗಿ ಪೂಜೆ ನೆರವೇರಿಸುತ್ತಿದ್ದೀರಿ. ಇದು ಕಾನೂನು ಬಾಹಿರ. ಇಷ್ಟಲ್ಲದೆ ಕಿತ್ತಾಡಿ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದೀರಿ. ಈ ವಿರುದ್ಧ ನಿಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬಾರದೇಕೆ ಎಂದು ಗೋವಿಂದರಾಜು ಅವರನ್ನು ನೋಟಿಸ್ನಲ್ಲಿ ಪ್ರಶ್ನಿಸಲಾಗಿದೆ.
ಸರ್ಕಾರದಿಂದ ನೇಮಕಗೊಂಡಿರುವ ಮತ್ತೊಬ್ಬ ಅರ್ಚಕ ವೆಂಕಟೇಶ್ ಅಯ್ಯಂಗಾರ್ ಅವರಿಗೂ ನೋಟಿಸ್ ನೀಡಲಾಗಿದೆ. ಅದರಲ್ಲಿ ಕಿತ್ತಾಟವನ್ನೇ ಪ್ರಮುಖವಾಗಿ ಪರಿಗಣಿಸಲಾಗಿದೆ. ನಿಮ್ಮ ವರ್ತನೆಯಿಂದ ದೇವಾಲಯದ ಘನತೆಗೆ ಕುಂದುಂಟಾಗಿದೆ. ಪಾವಿತ್ರ್ಯತೆ ಹಾಳಾಗಿದೆ. ನಿಮ್ಮನ್ನೂ ಏಕೆ ಅಮಾನತುಪಡಿಸಬಾರದು ಎಂದು ತಹಸೀಲ್ದಾರ್ ಪ್ರಶ್ನಿಸಿದ್ದಾರೆ.
ದೂರುಗಳ ಸುರಿಮಳೆ: ಅರ್ಚಕರ ಕಚ್ಚಾಟದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ಅವರೆದುರು ಭಕ್ತರು ಮತ್ತು ಸಾರ್ವಜನಿಕರು ದೂರುಗಳ ಸುರಿಮಳೆಗರೆದರು. ಸ್ವಹಿತಕ್ಕಾಗಿ ಕಚ್ಚಾಡಿರುವ ಅರ್ಚಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ದೇಗುಲಕ್ಕೆ ಜಿಲ್ಲಾಧಿಕಾರಿ ಭೇಟಿ ಕುರಿತು ಮಾಹಿತಿ ಸಿಗುತ್ತಿದ್ದಂತೆಯೇ ತಾವೆಲ್ಲ ಒಗ್ಗಟ್ಟಿನಿಂದ ಇದ್ದೇವೆ ಎನ್ನುವಂತೆ ತೋರಿಸಿಕೊಳ್ಳಲು ಅರ್ಚಕರು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.
ಅವಾಚ್ಯ ಶಬ್ದಗಳಿಂದ ನಿಂದನೆಯೊಂದಿಗೆ ಕಚ್ಚಾಟ, ಪೂಜಾ ಕೈಂಕರ್ಯಗಳಿಗೆ ಅನಧಿಕೃತವಾಗಿ ಹಣ ವಸೂಲಿ, ನಿಯಮ ಬಾಹಿರ ಕ್ರಮಗಳ ಸಂಬಂಧ ಭಕ್ತರ ದೂರಿನ ಮೇರೆಗೆ ಅರ್ಚಕರಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.
-ಶಿವಕುಮಾರ್, ತಹಸೀಲ್ದಾರ್, ಮಾಗಡಿ
ಅರ್ಚಕರ ಕಿತ್ತಾಟ, ಅಕ್ರಮವಾಗಿ ಹಣ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು.
-ಡಾ. ಡಿ.ಎಸ್. ವಿಶ್ವನಾಥ್, ಜಿಲ್ಲಾಧಿಕಾರಿ, ರಾಮನಗರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

