ರಾಜ್ಯದಲ್ಲಿ ಬಲಿಷ್ಠ ತೃತೀಯ ರಂಗ ರಚನೆ: ಯೋಗೇಶ್ವರ್
ಚನ್ನಪಟ್ಟಣ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಹೊರತಾಗಿ ರಾಜ್ಯದಲ್ಲಿ ತೃತೀಯ ಶಕ್ತಿಯನ್ನು ರಚಿಸಲು ಸಮಾಜವಾದಿ ಪಕ್ಷ ಮುಂದಾಗಿದೆ. ಮೊದಲ ಹಂತವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಮಾತುಕತೆ ನಡೆಸಿದ್ದು, ಬಿಎಸ್ಆರ್ ಕಾಂಗ್ರೆಸ್ನೊಂದಿಗೆ ಕೂಡ ಮಾತುಕತೆಗೆ ಮುಂದಾಗಿರುವುದಾಗಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಪಿ. ಯೋಗೇಶ್ವರ್ ತಿಳಿಸಿದರು.
ತಾಲೂಕಿನ ಕಣ್ವ ಏತ ನೀರಾವರಿ ಯೋಜನೆ ಪೈಪ್ಲೈನ್ ಕಾಮಗಾರಿಯ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪರಂತಹ ಹಿರಿಯ ನಾಯಕರು ನಮ್ಮೊಂದಿಗೆ ಕೈಜೋಡಿಸಿದಲ್ಲಿ ರಾಜ್ಯದಲ್ಲಿ ಬಲಿಷ್ಠವಾದ ತೃತೀಯ ಶಕ್ತಿಯ ಉದಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪರೊಂದಿಗೆ ನಾನು ಮತ್ತು ನಮ್ಮ ಪಕ್ಷದ ರಾಷ್ಟ್ರೀಯ ಮುಖಂಡರು ಈ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಬಿಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಶ್ರೀರಾಮುಲು ಸಂಗಡ ಸಹ ಚರ್ಚೆ ನಡೆದಿದ್ದು ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ತಿಳಿಸಿದರು. ಆಂಧ್ರ ಪ್ರದೇಶದಲ್ಲಿ ಸಹ ಸಮಾಜವಾದಿ ಪಕ್ಷದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಗೊಂಡಿದ್ದು, ಕಾಂಗ್ರೆಸ್ನ ಭ್ರಷ್ಟಾಚಾರ, ಬಿಜೆಪಿಯ ಅವಕಾಶವಾದಿ ತನವನ್ನು ಕಂಡು ಬೇಸತ್ತಿರುವ ಜನತೆ ತಣತೀಯ ಶಕ್ತಿಯತ್ತ ಹೆಚ್ಚಿನ ಒಲವು ತೋರಿದ್ದು ರಾಷ್ಟ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಮುಂದಿನ ಮಳೆಗಾಲಕ್ಕೆ ಸಮಗ್ರ ನೀರಾವರಿ: ಕಣ್ವ ಏತ ನೀರಾವರಿ ಯೋಜನೆಗೆ ತಾಲೂಕಿನ ರೈತರಿಂದ ನಿರೀಕ್ಷೆಗೆ ಮೀರಿದ ಸಹಕಾರ ದೊರಕಿದೆ. ರೈತರು ಪೈಪ್ಲೈನ್ ಕಾಮಗಾರಿಗೆ ಸ್ವಪ್ರೇರಣೆಯಿಂದ ಭೂಮಿಯನ್ನು ಬಿಟ್ಟುಕೊಡುತ್ತಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ಮಳೆಗಾಲದ ಒಳಗೆ ತಾಲೂಕಿನ ಎಲ್ಲಾ ಗ್ರಾಮಗಳಿಗೂ ನೀರು ಪೂರೈಕೆ ಮಾಡಲಾಗುವುದೆಂದು ಯೋಗೇಶ್ವರ್ ಪ್ರಕಟಿಸಿದರು. ರೈತರಿಗೆ ತ್ವರಿತವಾಗಿ ಭೂಪರಿಹಾರ ನೀಡಲಾಗುತ್ತಿದ್ದು ಒಂದುವೇಳೆ ಪೈಪ್ಲೈನ್ ಹಾದು ಹೋಗುವ ಜಮೀನಿನಲ್ಲಿ ರೈತರ ಬೆಳೆಗಳಿದ್ದರೆ ಅದಕ್ಕೂ ಪರಿಹಾರ ನೀಡಲಾಗುತ್ತಿದೆ. ರಾಗಿ ಸೇರಿದಂತೆ ಯಾವುದೇ ಬೆಳೆ ಇದ್ದರೂ ಸೂಕ್ತಪರಿಹಾರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ರೈತರು ಯಾವುದೇ ಕಾರಣಕ್ಕೂ ಅಂಜಬೇಕಿಲ್ಲ ಎಂದ ಅವರು, ರೈತರು ಸಹಕಾರ ನೀಡಿದರೆ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು.
ಯೋಜನೆಗೆ ಯಾವುದೇ ತೊಂದರೆಯಾಗದಂತೆ ನಿರಂತರ ವಿದ್ಯುತ್ ಪೂರೈಕೆಯ ಅಗತ್ಯತೆ ಇದ್ದು ಇದಕ್ಕಾಗಿ ತೊರೆಕಾಡನಹಳ್ಳಿಯಿಂದ ವಿದ್ಯುತ್ ಸಂಪರ್ಕ ತರಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ವಿದ್ಯುತ್ ಸಂಪರ್ಕ ದೊರೆತಲ್ಲಿ ಭಾಗಶಃ ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಗುತ್ತದೆ ಎಂದರು. ಮುದುಗೆರೆ ಸಮೀಪ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಶಾಸಕ ಯೋಗೇಶ್ವರ್, ಸ್ಥಳೀಯ ಗ್ರಾಮಸ್ಥರು ಮತ್ತು ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ನೀರಾವರಿ ನಿಗಮದ ಎಂಜಿನಿಯರ್ ವೆಂಕಟೆಗೌಡ ಹಾಗೂ ಸಿಬ್ಬಂದಿ, ಗುತ್ತಿಗೆದಾರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

