ಆರೋಪ ಸಾಬೀತಾದರೆ ಕನಕೋತ್ಸವದಲ್ಲಿ ಸನ್ಮಾನ!
ಕ.ಪ್ರ.ವಾರ್ತೆ ರಾಮನಗರ ನ. 19
ಅಧಿಕಾರಿಗಳನ್ನು ಹೆದರಿಸಿ ವಸೂಲು ಮಾಡಿದ ಹಣದಿಂದ ಕನಕೋತ್ಸವ ನಡೆಸಲಾಗಿದೆ ಎನ್ನುವ ಆರೋಪವನ್ನು ಸಾಬೀತುಪಡಿಸಿದರೆ ಮುಂದಿನ ವರ್ಷದ ಕನಕೋತ್ಸವದಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರನ್ನು ಸನ್ಮಾನಿಸಲಾಗುವುದು ಎಂದು ಕೆಪಿಸಿಸಿ ಸದಸ್ಯ ಎ. ಮಂಜುನಾಥ್ ಸವಾಲು ಹಾಕಿದ್ದಾರೆ.
ವಸೂಲಿ ಮಾಡುವುದು ಶಾಸಕ ಬಾಲಕೃಷ್ಣ ಅವರ ಚಾಳಿ. ಎಲ್ಲರೂ ತನ್ನಂತೆಯೇ ಎಂದು ತಿಳಿದು ಬಾಲಕೃಷ್ಣ ಬೇರೆಯವರನ್ನು ಜರಿಯುತ್ತಿದ್ದಾರೆ. ಅವರ ಪಟಾಲಂ ಎಲ್ಲೆಲ್ಲಿ ಎಷ್ಟೆಷ್ಟು ಹಣ ವಸೂಲು ಮಾಡಿದೆ ಎನ್ನುವುದರ ಜಾತಕ ನನ್ನಲ್ಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು. ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅಧಿಕಾರಿಗಳನ್ನು ಹೆದರಿಸಿ ವಸೂಲು ಮಾಡಿದ ಹಣದಲ್ಲಿ ಕನಕೋತ್ಸವ ಮತ್ತು ಕೃಷಿ ಮೇಳದ ಹೆಸರಿನಲ್ಲಿ ಕಾಂಗ್ರೆಸ್ ಉತ್ಸವ ನಡೆಸಿದ್ದಾರೆಂದು ಬಾಲಕೃಷ್ಣ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಜುನಾಥ್ ಅವರು ಬಾಲಕೃಷ್ಣ ವಿರುದ್ಧ ಟೀಕಾಸ್ತ್ರ ಹೂಡಿದ್ದಾರೆ.
ಕೃಷಿ ಉತ್ಸವ ಮತ್ತು ಕನಕೋತ್ಸವವನ್ನು ಡಿಕೆಶಿ ಸಹೋದರರು ರಾಜಕೀಯ ಉದ್ದೇಶದಿಂದ ಮಾಡಿಲ್ಲ. ಸನ್ಮಾನಿತರನ್ನು ಅಧಿಕಾರಿಗಳೇ ಆಯ್ಕೆ ಮಾಡಿದ್ದಾರೆ. ಈ ವಿಷಯದಲ್ಲಿ ಪಕ್ಷಪಾತ ನಡೆದಿಲ್ಲ. ಬಾಲಕೃಷ್ಣ ಅವರು ಕಾಮಾಲೆ ಕಣ್ಣಿನಿಂದ ನೋಡುವ ಜಾಯಮಾನವನ್ನು ಬಿಡಬೇಕು ಎಂದು ಅವರು ಸಲಹೆ ನೀಡಿದರು.
ಕಳೆದ ವರ್ಷ ಮಾಗಡಿಯ ಕೋಟೆ ಮೈದಾನದಲ್ಲಿ ಬಾಲಕೃಷ್ಣ ನೇತೃತ್ವದಲ್ಲಿ ಮಾಗಡಿ ಹಬ್ಬ ನಡೆದಿತ್ತು. ಅದನ್ನು ಮಾಡಿದ್ದ ಉದ್ದೇಶವಾದರೂ ಏನು? ಅದಕ್ಕೆ ಬಳಕೆಯಾದ ಹಣ ಎಲ್ಲಿಂದ ವಸೂಲಾಗಿತ್ತು ಈ ವರ್ಷ ಅದನ್ನೇಕೆ ಮುಂದುವರೆಸಿಲ್ಲ ಮಂಜುನಾಥ್ ಪ್ರಶ್ನಿಸಿದರು. ಮಾಗಡಿ ಹಬ್ಬಕ್ಕೆ ಲೋಕೋಪಯೋಗಿ ಹಗರಣದ ಹಣ ಬಳಕೆಯಾಗಿತ್ತು. ಆ ಹಬ್ಬ ಒಂದೇ ವರ್ಷಕ್ಕೆ ಸೀಮಿತವಾಗಿದೆ. ಆದರೆ, ಕನಕಪುರದಲ್ಲಿ ಕನಕೋತ್ಸವ ಪ್ರತಿ ವರ್ಷ ನಡೆಯುತ್ತಿದೆ. ಇಂಥದರಲ್ಲಿ ಲೋಪ ಹುಡುಕುವ ಪ್ರಯತ್ನ ಸಲ್ಲದು ಎಂದು ಅವರು ಅಭಿಪ್ರಾಯಪಟ್ಟರು. ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜ್ ಪಟೇಲ್, ಎಲ್. ಚಂದ್ರಶೇಖರ್, ಗೋಪಾಲ್ ಹಾಜರಿದ್ದರು.
ಕನಕಪುರದಲ್ಲೇ ಸ್ಥಾಪನೆಯಾಗಲಿ
ರಾಮನಗರಕ್ಕೆ ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬರುತ್ತಿದೆ. ಬಿಡದಿ ಭಾಗಕ್ಕೆ ಬೆಂಗಳೂರು ಸನಿಹವಾಗಿದೆ. ಹೀಗಾಗಿ ಜಿಲ್ಲೆಗೆ ಮಂಜೂರಾಗುವ ಸರ್ಕಾರಿ ಮೆಡಿಕಲ್ ಕಾಲೇಜನ್ನು ಕನಕಪುರದಲ್ಲೇ ಸ್ಥಾಪಿಸುವುದು ಸೂಕ್ತವೆಂದು ಕೆಪಿಸಿಸಿ ಸದಸ್ಯ ಎ. ಮಂಜುನಾಥ್ ಸಲಹೆ ನೀಡಿದ್ದಾರೆ. ಕನಕೋತ್ಸವದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ರಾಮನಗರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡುವುದಾಗಿ ಘೋಷಿಸಿದ್ದಾರೆ. ಈ ಕಾಲೇಜನ್ನು ಕನಕಪುರದಲ್ಲೇ ಸ್ಥಾಪಿಸಬೇಕೆನ್ನುವ ಶಿವಕುಮಾರ್ ಬೇಡಿಕೆ ಕುರಿತು ಮಂಜುನಾಥ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಹೊಣೆ ಮರೆತ ಎಚ್ಡಿಕೆ
ರೈತರು ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಕಾರಣ ರಾಜೀವ್ಗಾಂಧಿ ಆರೋಗ್ಯ ವಿವಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸ್ಥಳೀಯ ರೈತರನ್ನು ಮನವೊಲಿಸುವಲ್ಲಿ ರಾಮನಗರ ಕ್ಷೇತ್ರದ ಶಾಸಕ ಎಚ್.ಡಿ. ಕುಮಾರಸ್ವಾಮಿ ವಿಫಲರಾಗಿದ್ದಾರೆ ಎಂದು ಮಂಜುನಾಥ್ ಆರೋಪಿಸಿದರು. ಯೋಜನೆ ಮಂಜೂರಾದಾಗಲೇ ರೈತರನ್ನು ಮನವೊಲಿಸಿದ್ದರೆ ಇಷ್ಟರಲ್ಲಾಗಲೇ ಕಾಲೇಜು ಪ್ರಾರಂಭವಾಗುತ್ತಿತ್ತು. ಈಗಲೂ ರೈತರನ್ನು ಮನವೊಲಿಸುವುದು ತಮ್ಮಿಂದಾಗದು ಎಂದು ಕುಮಾರಸ್ವಾಮಿ ಹೇಳಿದರೆ ಆ ಜವಾಬ್ದಾರಿಯನ್ನು ನಾವೇ ನಿಭಾಯಿಸುತ್ತೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

