ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ 209 ಫಿಲ್ಟರ್ ಮರಳು ಲಾರಿಗಳ ವಶ

Published On :

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮಂಗಳವಾರ ಬೆಳಗಿನ ಜಾವ ಅಕ್ರಮವಾಗಿ ಫಿಲ್ಟರ್ ಮರಳು ಸಾಗಣೆ ಮಾಡುತ್ತಿದ್ದ 209 ಲಾರಿಗಳನ್ನು ವಶಪಡಿಸಿಕೊಂಡು ಮುಂದಿನ ಕಾನೂನಿನ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ವಿ. ಶಂಕರ್ ತಿಳಿಸಿದರು.
ನೆಲಮಂಗಲ ತಾಲೂಕಿನಲ್ಲಿ 98, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 20, ದೇವನಹಳ್ಳಿ ತಾಲೂಕಿನಲ್ಲಿ 11 ಹಾಗೂ ಹೊಸಕೋಟೆ ತಾಲೂಕಿನಲ್ಲಿ 80 ಲೋಡ್ ಸೇರಿ ಸುಮಾರು 1 ಕೋಟಿ ರು. ಬೆಲೆ ಬಾಳುವ ಒಟ್ಟು 209 ಲೋಡ್ ಫಿಲ್ಟರ್ ಮರಳನ್ನು ಅಕ್ರಮವಾಗಿ ಬೆಂಗಳೂರಿಗೆ ಅಲ್ಲದೆ ಇತರ ಕಡೆ ನಡೆಯುತ್ತಿರುವ ಇತರ ಕಾಮಗಾರಿಗಳಿಗೆ ಬಳಸಲು ಸಾಗಿಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಪ್ರತಿ ವಾರದ ಯಾವುದೇ ದಿನಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ ಎಂದರಲ್ಲದೆ, ಇಂತಹ ಮರಳನ್ನು ಕಟ್ಟಡಗಳಿಗೆ ಬಳಸುವುದರಿಂದ ಕಟ್ಟಡದ ಗುಣಮಟ್ಟ ಕಡಿಮೆಯಾಗುತ್ತದೆ. ಅಲ್ಲದೆ ಯಾವುದೇ ಸಂದರ್ಭದಲ್ಲಿ ಕಟ್ಟಿದ ಗೋಡೆಗಳು ಕುಸಿಯಬಹುದಾಗಿದೆ ಎಂದರು.
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಕ್ರಾಸ್, ನಂದಿಬೆಟ್ಟ ರಸ್ತೆ , ದೇವನಹಳ್ಳಿ ಬೈಪಾಸ್ ರಸ್ತೆ ಅಲ್ಲದೆ ವಿಮಾನ, ಸಾದಹಳ್ಳಿ ಗೇಟ್ ಬಳಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮರಳು ಲಾರಿಗಳನ್ನು ತಹಸೀಲ್ದಾರ್ ಡಾ. ಎನ್.ಸಿ. ವೆಂಕಟರಾಜು, ಉಪ ತಹಸೀಲ್ದಾರ್ ಅಜಿತ್ ರೈ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ದಂಡ ವಿಧಿಸುವುದಲ್ಲದೆ ದೂರು ದಾಖಲಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.

ನೆಲಮಂಗಲದಲ್ಲಿ 84 ಲಾರಿ ವಶಕ್ಕೆ
ನೆಲಮಂಗಲ: ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಅಕ್ರಮ ಹಾಗೂ ಫಿಲ್ಟರ್ ಮರಳು ತುಂಬಿಕೊಂಡು ಸಾಗಿಸುತ್ತಿದ್ದ 84 ಮರಳು ಲಾರಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ವಿ. ಶಂಕರ್ ನೇತೃತ್ವದಲ್ಲಿ ಮಂಗಳವಾರ ನಸುಕಿನಲ್ಲಿ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಜಾಸ್‌ಟೋಲ್ ಗೇಟ್ ಬಳಿ ಹಾಗೂ ಕುಣಿಗಲ್ ವೃತ್ತದಲ್ಲಿ ದಿಢೀರ್ ದಾಳಿ ನಡೆಸಿ ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ. ಫಿಲ್ಟರ್ ಮರಳು ಬೆಂಗಳೂರಿಗೆ ಗ್ರಾಮಾಂತರ ಜಿಲ್ಲೆಯಿಂದ ಸಾಗಿಸುತ್ತಿರುವುದರಿಂದ ಸಾಕಷ್ಟು ದೂರುಗಳು ಹಾಗೂ ಮಾಹಿತಿ ಇದ್ದುದ್ದರಿಂದ ಫಿಲ್ಟರ್ ಮರಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಿ ಲಾರಿ ಮತ್ತು ಮಾಲೀಕರ ಮೇಲೆ ಕ್ರಮ ಜರುಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ. ಶಂಕರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಂದಾಯ ಇಲಾಖೆ ಪೊಲೀಸರೊಂದಿಗೆ ದಿಢೀರ್ ದಾಳಿ ನಡೆಸಿ ಲಾರಿಗಳನ್ನು ವಶಕ್ಕೆ ಪಡೆದು ಇಲ್ಲಸಲ್ಲದ ಕಾರಣಗಳನ್ನು ತೋರಿಸಿ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ ಎಂದು ನೂರಾರು ಜನ ಲಾರಿ ಮಾಲೀಕರು ತಾಲೂಕು ಕಚೇರಿ ಮುಂಭಾಗ ಜಮಾಯಿಸಿ ಆರೋಪಿಸಿದರು. ಲಾರಿ ಮಾಲೀಕರು ಜಮಾಯಿಸಿದ್ದರಿಂದ ಸ್ಥಳಕ್ಕಾಗಮಿಸಿದ ಕ್ಷೇತ್ರದ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಹಾಗೂ ಜಿಪಂ ಸದಸ್ಯ ಕಾಂತರಾಜು ತಹಸೀಲ್ದಾರ್ ಡಾ. ಗೀತಾ ಅವರೊಂದಿಗೆ ಚರ್ಚಿಸಿ ಎಲ್ಲಾ ಲಾರಿಗಳಲ್ಲೂ ಫಿಲ್ಟರ್ ಮರಳು ತುಂಬಿರುವುದಿಲ್ಲ. ತಾವು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ದಾಳಿ ನಡೆಸಿ ಲಾರಿಗಳನ್ನು ದಂಡ ವಿಧಿಸುವುದರಿಂದ ಅದನ್ನೇ ನಂಬಿ ಜೀವನ ಸಾಗಿಸುತ್ತಿರುವವರಿಗೆ ಕಷ್ಟವಾಗುತ್ತದೆ ಎಂದರು. ಜಿಲ್ಲಾಧಿಕಾರಿ ಆದೇಶದಂತೆ ಕಾರ್ಯಾಚರಣೆ ನಡೆಸಿ ಲಾರಿಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗಿದೆ ಎಂದು ತಹಸೀಲ್ದಾರ್ ಡಾ. ಗೀತಾ ತಿಳಿಸಿದ್ದಾರೆ.
ದಾಳಿ ಕಾರ್ಯಾಚರಣೆಯಲ್ಲಿ ಉಪ ವಿಭಾಗಾಧಿಕಾರಿ ಮಂಜುನಾಥ್, ಸರ್ಕಲ್ ಇನ್ಸ್‌ಪೆಕ್ಟರ್ ಪರಮೇಶ್ವರ್, ಸಬ್‌ಇನ್ಸ್‌ಪೆಕ್ಟರ್‌ಗಳಾದ ನವೀನ್‌ಕುಮಾರ್, ಸಂದೀಪ್, ರಾಜಸ್ವ ನಿರೀಕ್ಷಕ ನಂಜಪ್ಪ, ಗ್ರಾಮ ಲೆಕ್ಕಾಧಿಕಾರಿಗಳು, ಪೊಲೀಸ್ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.