ಬೆಂಗಳೂರು ಗ್ರಾಮಾಂತರ

ಕನಕ ಜಯಂತಿ ನನ್ನದೇ ಕಾರ್ಯಕ್ರಮ: ಎಚ್ಡಿಕೆ

Published On :

ಕ.ಪ್ರ.ವಾರ್ತೆ ರಾಮನಗರ ನ. 20
ವರ್ಷಕ್ಕೊಮ್ಮೆ ಕನಕದಾಸರ ಜಯಂತಿ ಆಚರಿಸಿ, ಭಾಷಣ ಬಿಗಿದರೆ ಸಾಲದು. ಅವರ ತತ್ವಾದರ್ಶ ಮತ್ತು ಸಂದೇಶಗಳನ್ನು ಪಾಲಿಸಿದಾಗಷ್ಟೇ ಕನಕದಾಸರಿಗೆ ನಿಜವಾಗಿ ಗೌರವ ಸಲ್ಲಿಸಿದಂತಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿ.ಪಂ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಸಂತಶ್ರೇಷ್ಠ ಕವಿ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ ವಿಷಯದಲ್ಲಿ ವಿಷಾದ: ಜಾತಿ ವ್ಯವಸ್ಥೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಸರಳ ಸಾಹಿತ್ಯ ರಚನೆ ಮೂಲಕ ಸಮ ಸಮಾಜ ನಿರ್ಮಾಣಕ್ಕಾಗಿ ಕನಕದಾಸರು ಪ್ರಯತ್ನಿಸಿದ್ದರು. ಆದರೂ ನಮ್ಮಲ್ಲಿನ್ನೂ ಜಾತಿ ಪ್ರಧಾನ ವ್ಯವಸ್ಥೆ ಕೊನೆಗಾಣಿಸಲು ಸಾಧ್ಯವಾಗದಿರುವುದು ದುರ್ದೈವ ಎಂದು ವಿಷಾದಿಸಿದರು.
ಸಾಮಾಜಿಕ ಅನಿಷ್ಠಗಳನ್ನು ಕನಕದಾಸರು ತಮ್ಮ ಕೃತಿಗಳಲ್ಲಿ ಅನಾವರಣಗೊಳಿಸಿದ್ದಾರೆ. ಅಂತೆಯೇ ಅವುಗಳ ನಿವಾರಣೆಗೂ ಮಾರ್ಗೋಪಾಯಗಳನ್ನು ತಿಳಿಸಿದ್ದಾರೆ. ಅವರ ಸಂದೇಶ, ತತ್ವಗಳು ಸರ್ವಕಾಲಿಕ ಸತ್ಯ ಎಂದು ಕುಮಾರಸ್ವಾಮಿ ಬಣ್ಣಿಸಿದರು.  
ಇದು ನನ್ನದೇ ಕಾರ್ಯಕ್ರಮ: ನನ್ನ ನೇತೃತ್ವದ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕನಕದಾಸರ ಜಯಂತ್ಯುತ್ಸವ ಆಚರಣೆ ಮತ್ತು ಸಾರ್ವತ್ರಿಕ ರಜೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು. ಆ ಮೂಲಕ ಸಂತ ಶ್ರೇಷ್ಠನಿಗೆ ಗೌರವ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಆರ್ಥಿಕವಾಗಿ ಹಿಂದುಳಿದಿರುವ ಕುರುಬ ಸಮುದಾಯದ ಅಭಿವೃದ್ಧಿಗೂ ಸಾಕಷ್ಟು ಒತ್ತು ನೀಡಿ, ಕಾರ್ಯಕ್ರಮ ರೂಪಿಸಲಾಗಿದೆ. ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಜಾರಿಗೊಳಿಸಿರುವ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಮುಂದುವರೆಸುವುದು ಅಗತ್ಯ ಎಂದರು.
ಕಾರ್ಯಭಾರದ ಒತ್ತಡ: ಸ್ವಕ್ಷೇತ್ರ ರಾಮನಗರದಲ್ಲಿ ನಡೆದಿರುವ ವಿವಿಧ ಮಹನೀಯರ ಜಯಂತಿ ಸಹಿತ ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನನಗೆ ಸಾಧ್ಯವಾಗದಿರಲು ಕಾರ್ಯಭಾರದ ಒತ್ತಡ ಕಾರಣವಾಗಿದೆ. ಈ ವಿಷಯದಲ್ಲಿ ಅಪಾರ್ಥ ಕಲ್ಪಿಸುವುದು ಬೇಡ ಎಂದು ಕುಮಾರಸ್ವಾಮಿ ತಿಳಿಸಿದರು.
ಕಾರ್ಯಕ್ರಮಕ್ಕೆ ಗೈರಾದ ಮಾತ್ರಕ್ಕೆ ಸದರಿ ಮಹನೀಯರ ಬಗ್ಗೆ ಅಗೌರವ ತೋರಿದೆ ಎಂದು ಬಿಂಬಿಸುವುದು ಬೇಡ. ನಾನು ರಾಮನಗರಕ್ಕೆ ಸೀಮಿತವಾದ ಶಾಸಕನಲ್ಲ. ಪ್ರತಿಪಕ್ಷ ನಾಯಕನಾಗಿ ಇಡೀ ರಾಜ್ಯದ ಆಗುಹೋಗು, ಸಮಸ್ಯೆಗಳತ್ತ ಗಮನ ಹರಿಸುವುದು ನನ್ನ ಕರ್ತವ್ಯವಾಗಿದೆ ಎಂದರು.
ಕುಯುಕ್ತಿ ರಾಜಕಾರಣ ಬೇಡ: ಹೇಳುವುದು ಒಂದು, ಮಾಡುವುದು ಇನ್ನೊಂದು ಎನ್ನುವ ವ್ಯಕ್ತಿತ್ವ ನನ್ನದಲ್ಲ. ಮಹನೀಯರ ಒಂದಿಷ್ಟು ಆದರ್ಶಗಳನ್ನು ಪಾಲಿಸಿಕೊಂಡು ಬಂದಿರುವೆ. ಯಾವತ್ತೂ ಪೊಲೀಸರ ಮೇಲೆ ಒತ್ತಡ ಹೇರಿ ವಿರೋಧಿಗಳಿಗೆ ತೊಂದರೆ ನೀಡಿಲ್ಲ. ಈ ಕುರಿತು ಅನವಶ್ಯಕ ಟೀಕೆ ಸಲ್ಲದು ಎಂದು ಸ್ಪಷ್ಟಪಡಿಸಿದರು.
ಯಾರಿಗೂ ಅಧಿಕಾರ ಶಾಶ್ವತವಲ್ಲ. ನಾನು ಮತ್ತೆ ಮೇಲೇಳುವುದೇ ಇಲ್ಲ ಎನ್ನುವಂತೆ ನನ್ನ ವಿರೋಧಿಗಳು ಅಪಪ್ರಚಾರ, ಕುಯುಕ್ತಿಯ ರಾಜಕಾರಣ, ಬೆಂಬಲಿಗರಿಗೆ ಕಿರುಕುಳ ನೀಡುವ ಕೆಲಸ ಮಾಡುತ್ತಿದ್ದಾರೆ. ಇದು ಮುಂದುವರೆಯುವುದನ್ನು ನಾನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಮಹತ್ವ ಹೆಚ್ಚಿಸಿದ ಸಂತರು: ದಾಸ ಸಾಹಿತ್ಯದ ಮೂಲಕ ಸಾಹಿತ್ಯವನ್ನು ಇನ್ನಷ್ಟು ಸರಳಗೊಳಿಸಿ ಕನ್ನಡ ಸಾಹಿತ್ಯಕ್ಕೆ ಹೊಸತನ ತುಂಬಿದ ಹೆಗ್ಗಳಿಕೆ ಕನಕದಾಸರಿಗೆ ಸಲ್ಲುತ್ತದೆ. ಕನಕ ಮತ್ತು ಪುರಂದರ ದಾಸರು ಕಾವ್ಯ, ಕೀರ್ತನೆಗಳ ಮೂಲಕ ಜನತೆಯಲ್ಲಿ ಸಾಮಾಜಿಕ ಚಿಂತನೆ ಮೂಡಿಸಿದ್ದಲ್ಲದೆ ಸಾಹಿತ್ಯ ಮತ್ತು ಸಂಗೀತಕ್ಕೂ ಮಹತ್ವದ ಕಾಣಿಕೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್ ಹೇಳಿದರು.
16ನೇ ಶತಮಾನದಲ್ಲಿ ಜೀವಿಸಿದ ಪುರಂದರದಾಸ ಹಾಗೂ ಕನಕದಾಸರ ಕಾಲವನ್ನು ದಾಸ ಸಾಹಿತ್ಯದ ಸುವರ್ಣ ಯುಗವೆಂದೂ, ಅವರಿಬ್ಬರನ್ನು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಪರಿಗಣಿಸಬಹುದು. ವೈಚಾರಿಕ ಮನೋಭಾವದಿಂದಾಗಿ ಕನಕದಾಸರು ತಮ್ಮ ಸಮಕಾಲೀನ ಬದುಕಿನ ನೈಜ ಚಿತ್ರವನ್ನು ಮುಂದಿನ ಜನಾಂಗಕ್ಕೆ ಇತರೆ ದಾಸರಿಗಿಂತಲೂ ಹೆಚ್ಚು ಸಮರ್ಥವಾಗಿ ಕೊಟ್ಟಿದ್ದಾರೆ. ಈ ಕಾರಣಕ್ಕಾಗಿ ಕನಕರು ದಾಸರಲ್ಲೇ ಶ್ರೇಷ್ಠರೆನಿಸಿದ್ದಾರೆ ಎಂದರು.  
ಮನುಜ ಪಥದತ್ತ ಹೆಜ್ಜೆ: ಸ್ವಾರ್ಥ, ಅಹಂ ಬಿಟ್ಟು ಮನುಜ ಪಥದತ್ತ ಹೆಜ್ಜೆ ಇಡಬೇಕು ಎನ್ನುವ ಕನಕ ದಾಸರ ಸಂದೇಶವನ್ನು ನಾವೆಲ್ಲ ಅಳವಡಿಸಿಕೊಂಡಿದ್ದೇ ಆದಲ್ಲಿ ಸಮಾಜದಲ್ಲಿ ಜಾತಿ ವ್ಯವಸ್ಥೆ ಕೊನೆಗೊಂಡು, ಶಾಂತಿ ಮತ್ತು ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ. ರಾಜು ಅಭಿಪ್ರಾಯಪಟ್ಟರು.
ಸಾಹಿತಿ ಡಿ. ದೇವರಾಜು ಪ್ರಧಾನ ಭಾಷಣ ಮಾಡಿದರು. ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಎಂ.ವಿ. ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ಉಪ ವಿಭಾಗಾಧಿಕಾರಿ ಡಾ. ಸ್ನೇಹ, ಮಾಜಿ ಶಾಸಕರಾದ ಕೆ. ರಾಜು, ಸಿ.ಎಂ. ಲಿಂಗಪ್ಪ, ಕುರಬರ ಸಂಘದ ಅಧ್ಯಕ್ಷ ಬೀರಪ್ಪ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕಂದಾಯ ಭವನದಿಂದ ಜಾನಪದ ಕಲಾ ತಂಡಗಳೊಂದಿಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು.  

ಎದ್ದು ಹೋದ ಕೈ ಪಡೆ
ಕನಕದಾಸರ ಜಯಂತ್ಯುತ್ಸವದ ಉದ್ಘಾಟನೆ ನೆರವೇರಿದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರ ದಂಡು ವೇದಿಕೆಯಿಂದ ದಿಢೀರ್ ನಿರ್ಗಮಿಸುವ ಮೂಲಕ ನೆರೆದಿದ್ದವರಲ್ಲಿ ಕುತೂಹಲ ಮತ್ತು ಆಶ್ಚರ್ಯಕ್ಕೆ ಕಾರಣವಾಯಿತು.
ಬೆಳಗ್ಗೆ 11ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಸಂಸದ ಸುರೇಶ್ ಸಹಿತ ಆಹ್ವಾನ ಪತ್ರಿಕೆಯಲ್ಲಿದ್ದ ಶೇ.90ರಷ್ಟು ಗಣ್ಯರು ಗೈರಾದರು. ಅಪರೂಪಕ್ಕೆ ಎನ್ನುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪಾಲ್ಗೊಂಡರು. ಕುಮಾರಸ್ವಾಮಿ ಆಗಮನಕ್ಕಾಗಿ ಅಧಿಕಾರಿಗಳು ಸುಮಾರು 1 ತಾಸು ಕಾರ್ಯಕ್ರಮ ಮುಂದೂಡಿದ್ದರು. ಕಾರ್ಯಕ್ರಮ ಪ್ರಾರಂಭಕ್ಕೆ ಮುನ್ನವೇ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಕಳೆದ ಚುನಾವಣೆ ಪರಾಜಿತ ಅಭ್ಯರ್ಥಿ ಮರಿದೇವರು, ಕೆಪಿಸಿಸಿ ಸದಸ್ಯ ಕೆ. ರಮೇಶ್ ವೇದಿಕೆಯಲ್ಲಿ ವಿರಾಜಮಾನರಾಗಿದ್ದರು.
ಕುಮಾರಸ್ವಾಮಿ ಆಗಮನವಾಗುತ್ತಲೇ ಕಾರ್ಯಕ್ರಮ ಪ್ರಾರಂಭಗೊಂಡಿತು. ಉದ್ಘಾಟನೆ ನೆರವೇರಿಸುವ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಜಿ.ಪಂ. ಅಧ್ಯಕ್ಷ ಎಚ್.ಸಿ. ರಾಜು, ಸ್ವಪಕ್ಷೀಯ ಮಾಜಿ ಶಾಸಕ ಕೆ. ರಾಜು ಸಾಥ್ ನೀಡಿದರು. ದೀಪದ ಬಳಿ ಕಾಂಗ್ರೆಸಿಗರು ಸುಳಿಯಲಿಲ್ಲ. ಜ್ಯೋತಿ ಬೆಳೆಗಿದ ಬಳಿಕ ಕುಮಾರಸ್ವಾಮಿ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುತ್ತಿರುವಾಗಲೇ ವೇದಿಕೆಯಿಂದ ಲಿಂಗಪ್ಪ, ಮರಿದೇವರು, ರಮೇಶ್ ನಿರ್ಗಮಿಸಿದರು. ಈ ವಿಷಯವಾಗಿ ಸಭಿಕರದಲ್ಲಿ ಗುಸು ಗುಸು ಕೇಳಿ ಬರಲಾರಂಭಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.