ಆರೋಗ್ಯ ವಿವಿ ಕೆಂಗೇರಿಗೆ ಸ್ಥಳಾಂತರ ಹುನ್ನಾರ
ಕ.ಪ್ರ.ವಾರ್ತೆ ರಾಮನಗರ ನ. 20
ರಾಮನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜೀವ್ಗಾಂಧಿ ಆರೋಗ್ಯ ವಿವಿಯನ್ನು ಕೆಂಗೇರಿಗೆ ಸ್ಥಳಾಂತರಿಸುವ ಹುನ್ನಾರ ನಡೆದಿದೆ. ಈ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ರಾಜೀವ್ಗಾಂಧಿ ಆರೋಗ್ಯ ವಿವಿಯನ್ನು ರಾಮನಗರದಲ್ಲೇ ಸ್ಥಾಪಿಸುವ ಸಂಬಂಧ ಸಮ್ಮಿಶ್ರ ಸರ್ಕಾರದ ಅವಧಿಯ ವಿಧಾನಸಭೆಯಲ್ಲೇ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಗಿದೆ. ಇಷ್ಟಾಗಿಯೂ ಸ್ಥಳಾಂತರ ಹುನ್ನಾರ ಹಕ್ಕುಚ್ಯುತಿ ಆಗಲಿದೆ ಎಂದು ಅವರು ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ದ್ವೇಷದ ರಾಜಕಾರಣ ಅಡ್ಡಿ: ರಾಜೀವ್ಗಾಂಧಿ ಆರೋಗ್ಯ ವಿವಿಯಿಂದ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜುಗಳು, ಹೈಟೆಕ್ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೂ ಒಪ್ಪಿಗೆ ದೊರೆತಿದ್ದು, 250 ಕೋಟಿ ಅನುದಾನವನ್ನೂ ಮೀಸಲಿಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ದ್ವೇಷದ ರಾಜಕಾರಣದ ಪರಿಣಾಮ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಅಡ್ಡಿಯಾಯಿತು ಎಂದು ಆರೋಪಿಸಿದರು.
ಯಾವ ಅಡಚಣೆಯೂ ಇಲ್ಲದಿದ್ದರೆ ಇಷ್ಟರಲ್ಲಾಗಲೇ ಯೋಜನೆ ಪೂರ್ಣಗೊಂಡು, ಈ ಭಾಗದ ಜನತೆಗೆ ಉತ್ತಮ ಆರೋಗ್ಯ ಸೌಲಭ್ಯ ದೊರೆಯುತ್ತಿತ್ತು. ಅಡಚಣೆ ಉಂಟು ಮಾಡಿದವರು ಯಾರು ಎನ್ನುವುದು ಜಗಜ್ಜಾಹೀರ ಸಂಗತಿಯಾಗಿದೆ. ವ್ಯಕ್ತಿಗತವಾಗಿ ಯಾರ ಹೆಸರನ್ನೂ ಹೇಳಲು ಸಿದ್ಧನಿಲ್ಲ ಎಂದು ಅವರು ಟೀಕಿಸಿದರು.
ರೈತರನ್ನು ಮನವೊಲಿಸುವಲ್ಲಿ ಕುಮಾರಸ್ವಾಮಿ ವಿಫಲರಾಗಿದ್ದಾರೆ. ಆ ಕೆಲಸ ಅವರಿಂದ ಸಾಧ್ಯವಿಲ್ಲ ಎಂದಾದರೆ ತಾವೇ ರೈತರನ್ನು ಮನವೊಲಿಸುವುದಾಗಿ ಕೆಪಿಸಿಸಿ ಸದಸ್ಯ ಎ. ಮಂಜುನಾಥ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜವಾಬ್ದಾರಿಯನ್ನು ಯಾರೇ ತೆಗೆದುಕೊಂಡು ಕಿರೀಟ ಹಾಕಿಸಿಕೊಂಡರೂ ನನಗೆ ಚಿಂತೆಯಿಲ್ಲ. ಜನತೆಗೆ ಒಳಿತಾದರೆ ಸಾಕು ಎಂದರು.
ಸದನದಲ್ಲಿ ಗಂಭೀರ ಚರ್ಚೆ: ಉತ್ತರ ಕರ್ನಾಟಕದ ಆರೇಳು ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದೇನೆ. ತೆಂಗು, ಅಡಿಕೆ, ಕಬ್ಬು, ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ ಘೋಷಿಸದ ಪರಿಣಾಮ ಆ ರೈತರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಸದನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಕುಮಾರಸ್ವಾಮಿ ಹೇಳಿದರು.
ಕಬ್ಬು ಬೆಲೆ ನಿಗದಿ ವಿಷಯದಲ್ಲಿ ಸರ್ಕಾರವು ಖಾಸಗಿ ಕಾರ್ಖಾನೆಗಳ ಮಾಲೀಕರ ಕಪಿಮುಷ್ಠಿಗೆ ಸಿಲುಕಿದೆ. ರೈತರು ಬೆಳೆದ ಬೆಳೆಗೆ ಬೇಡುತ್ತಿರುವುದು ವೈಜ್ಞಾನಿಕ ಬೆಲೆಯನ್ನೇ ಹೊರತು ಭಿಕ್ಷೆಯನ್ನಲ್ಲ ಎನ್ನುವ ಕನಿಷ್ಠ ಜ್ಞಾನ ಆಳುವ ವರ್ಗಕ್ಕೆ ಇಲ್ಲ. ಇದೂ ಸಹಿತ ಹಲವಾರು ವಿಷಯಗಳ ಮೇಲೆ ಗಂಭೀರ ಚರ್ಚೆ ನಡೆಸುವುದಾಗಿ ತಿಳಿಸಿದರು.
ಭೂ ಕಬಳಿಕೆ ಹಗರಣ: ರಾಮನಗರ ಜಿಲ್ಲೆಯಲ್ಲಿ ಹಲವಾರು ಸರ್ಕಾರಿ ಗೋಮಾಳಗಳು, ಕೆರೆ-ಕಟ್ಟೆಗಳನ್ನೇ ನುಂಗಿ ನೀರು ಕುಡಿಯುವ ಕೆಲಸ ನಿರಂತರವಾಗಿ ನಡೆದುಕೊಂಡು ಬಂದಿದೆ. ಇದೀಗ ಅಕ್ರಮಗಳನ್ನೆಲ್ಲ ಸಕ್ರಮ ಮಾಡಿಕೊಳ್ಳುವ ಷಡ್ಯಂತ್ರ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಇದೆಲ್ಲದರ ಸಮಗ್ರ ಮಾಹಿತಿಯನ್ನೂ ಕಲೆ ಹಾಕಿದ್ದು, ಈ ಬಗ್ಗೆಯೂ ಸದನದಲ್ಲಿ ವಾಗ್ದಾಳಿ ನಡೆಸುವೆ ಎಂದರು.
ಮಕ್ಮಲ್ ಟೋಪಿ ಯೋಜನೆ: ರಾಜ್ಯದಲ್ಲಿ 6 ಕೋಟಿ ಜನಸಂಖ್ಯೆಯಿದೆ. ವರ್ಷದಲ್ಲಿ 1 ಸಾವಿರ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ಕಲ್ಪಿಸುವ ಶಾದಿಭಾಗ್ಯವು ಮಕ್ಮಲ್ ಟೋಪಿ ಯೋಜನೆಯಷ್ಟೇ. ಫಲಾನುಭವಿಗಳನ್ನು ಯಾವ ಮಾನದಂಡದಲ್ಲಿ ಗುರ್ತಿಸಬೇಕೆನ್ನುವ ಮಾರ್ಗಸೂಚಿಯನ್ನೂ ಸರ್ಕಾರ ನಿರ್ಧರಿಸಿಲ್ಲ ಎಂದು ಅವರು ಟೀಕಿಸಿದರು.
ಈ ಯೋಜನೆಯಡಿ ವರ್ಷದಲ್ಲಿ ಪ್ರತಿ ಜಿಲ್ಲೆಯಿಂದ 13 ಮಂದಿ ಫಲಾನುಭವಿಗಳನ್ನು ಮಾತ್ರವೇ ಆಯ್ಕೆ ಮಾಡಬೇಕಿದೆ. ಹೀಗಾಗಿ ಶಾದಿಭಾಗ್ಯದ ಬಗ್ಗೆ ಮಹತ್ವ ನೀಡಬೇಕಿಲ್ಲ. ಇಂತಹ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಯಾವುದೇ ಯೋಜನೆಯು ಮತ ಬ್ಯಾಂಕ್ ಮುಷ್ಟಿಗೆ ಸೀಮಿತವಾಗಬಾರದು. ಒಂದು ಯೋಜನೆಯಿಂದ ಇಡೀ ಕುಟುಂಬ ಆರ್ಥಿಕ ಸದೃಢತೆ ಹೊಂದಬೇಕು. 67 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಜನತೆಗೆ ಟೋಪಿ ಹಾಕುತ್ತಲೇ ಬಂದಿದೆ. ಇನ್ನು ಮುಂದೆ ಆ ಪಕ್ಷದ ಆಟ ನಡೆಯುವುದಿಲ್ಲ. ಎಲ್ಲಕ್ಕೂ ಅಂತ್ಯ ಎನ್ನುವುದು ಇದ್ದೇ ಇದೆ ಎಂದು ತಿಳಿಸಿದರು.
ಘೋಷಣೆಗಳ ಸರ್ಕಾರ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಣೆಗಳಲ್ಲೇ ಕಾಲ ದೂಡುತ್ತಿದೆ. ಘೋಷಣೆಯಾದ ಬಹುತೇಕ ಕಾರ್ಯಕ್ರಮಗಳಿನ್ನೂ ಜಾರಿಗೆ ಬಂದಿಲ್ಲ. ಈ ಪೈಕಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ವಿಷಯವೂ ಒಂದಾಗಿದೆ ಎಂದು ಕುಮಾರಸ್ವಾಮಿ ಛೇಡಿಸಿದರು. 'ಕೂಸು ಹುಟ್ಟುವ ಮುನ್ನವೇ ಗುಲಾವಿ ಹೊಲಿಸಿದಂತೆ' ಮೆಡಿಕಲ್ ಕಾಲೇಜಿಗೆ ಮಂಜೂರಾತಿ ದೊರಕುವ ಮುನ್ನವೇ ಅದನ್ನು ಕನಕಪುರದಲ್ಲೇ ಸ್ಥಾಪಿಸಬೇಕು ಎನ್ನುವ ಕಾಂಗ್ರೆಸಿಗರ ಕೂಗು ಹಾಸ್ಯಾಸ್ಪದ ಎಂದು ಅವರು ಲೇವಡಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

