ಬೆಂಗಳೂರು ಗ್ರಾಮಾಂತರ

ನಾಳೆ ಜೀತದಾಳು ಸಮೀಕ್ಷೆ ಕಾರ್ಯಾಗಾರ

Published On :

ಮಾಗಡಿ: ತಾಲೂಕು ಮಟ್ಟದ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಕ್ರಿಯಾ ಯೋಜನೆಯ ಜೀತದಾಳು ಸಮೀಕ್ಷೆ ಕಾರ್ಯಾಗಾರ ತರಬೇತಿಯನ್ನು ನ.22ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ತಹಸೀಲ್ದಾರ್ ಶಿವಕುಮಾರ್ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಅಕ್ಕೋಜಿ ಅಧ್ಯಕ್ಷತೆ ವಹಿಸಲಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರ ನಡೆಯಲಿದೆ.

ರಸ್ತೆ ವಿಭಜಕಕ್ಕೆ ಡಿಕ್ಕಿ; ವ್ಯಕ್ತಿಗೆ ಗಾಯ
ಚನ್ನಪಟ್ಟಣ: ರಸ್ತೆ ವಿಭಜಕಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ತೀವ್ರ ಗಾಯ ಗೊಂಡಿರುವ ಘಟನೆ ಇಲ್ಲಿನ ಜನತಾ ಸಾಮಿಲ್ ಮುಂಭಾಗ ಬುಧವಾರ ಬೆಳಗ್ಗೆ ಸಂಭವಿಸಿದೆ. ತಾಲೂಕಿನ ಕೆಂಗಲ್ ಗ್ರಾಮದ ದಾಸ(18) ಗಾಯಗೊಂಡಿರುವ ವ್ಯಕ್ತಿ. ಆತ ಕೆಲಸ ಮುಗಿಸಿಕೊಂಡು ತನ್ನೂರಿಗೆ ಹಿಂತಿರುಗುತ್ತಿರುವಾಗ ಆಯತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಈತನ ಕೈ ಮತ್ತು ಕಾಲು ಮುರಿದಿದ್ದು ಘಟನೆಗೆ ಸಂಬಂಧಿಸಿದಂತೆ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಕ್ಕಿ; ಮುಗುಚಿದ ವಾಹನಗಳು
ಚನ್ನಪಟ್ಟಣ: ಟ್ರ್ಯಾಕ್ಟರ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಮಗುಚಿ ಬಿದ್ದಿರುವ ಘಟನೆ ತಾಲೂಕಿನ ಕೆಂಗಲ್ ಸಮೀಪ ಮಂಗಳವಾರ ರಾತ್ರಿ ಸಂಭವಿಸಿದೆ. ರಾಮನಗರ ಕಡೆಯಿಂದ ಬಂದ ಟ್ರ್ಯಾಕ್ಟರ್ ಕೆಂಗಲ್ ಸಮೀಪ ತಿರುವು ಪಡೆಯುತ್ತಿರುವಾಗ ಹಿಂದಿನಿಂದ ವೇಗವಾಗಿ ಬಂದ ಸರಕು ಸಾಗಣೆ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಎರಡೂ ವಾಹನಗಳು ಮಗುಚಿ ಬಿದ್ದು ಜಖಂಗೊಂಡಿದ್ದು ವಾಹನದಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಅಪಘಾತದಿಂದಾಗಿ ಕೆಲಕಾಲ ಬೆಂ-ಮೈ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು ಸ್ಥಳಕ್ಕಾಗಮಿಸಿದ ಗ್ರಾಮಾಂತರ ಪೊಲೀಸರು ವಾಹನ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

ಟೈರ್ ಪಂಚರ್; ಲಾರಿ ಪಲ್ಟಿ
ಚನ್ನಪಟ್ಟಣ: ಖಾಲಿ ಬಾಟಲಿಗಳನ್ನು ಸಾಗಿಸುತ್ತಿದ್ದ ಲಾರಿಯ ಎರಡೂ ಚಕ್ರಗಳು ಪಂಚರ್ ಆದ ಪರಿಣಾಮ ಲಾರಿ ಪಲ್ಟಿ ಹೊಡೆದ ಘಟನೆ ಬುಧವಾರ ಮಾಧ್ಯಾಹ್ನ ತಾಲೂಕಿನ ಬೈರಾಪಟ್ಟಣ ಗ್ರಾಮದ ಬಳಿ ಸಂಭವಿಸಿದೆ.
ಮೈಸೂರು ಕಡೆಯಿಂದ ಬರುತ್ತಿದ್ದ ಲಾರಿಯ ಎರಡೂ ಚಕ್ರಗಳು ಪಂಚರ್ ಆದ ಹಿನ್ನೆಲೆಯಲ್ಲಿ ಲಾರಿ ಆಯತಪ್ಪಿ ಮಗುಚಿ ಬಿದ್ದಿತ್ತು. ಘಟನೆಯಲ್ಲಿ ಚಾಲಕನಿಗೆ ಸಣ್ಣ ಪುಟ್ಟಗಾಯಗಳಾಗಿದ್ದನ್ನು ಹೊರತುಪಡಿಸಿದರೆ ಇನ್ಯಾವುದೇ ಅಪಾಯ ಸಂಭವಿಸಿಲ್ಲ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

24ರಂದು ಕಾರ್ತಿಕ ದೀಪೋತ್ಸವ
ಚನ್ನಪಟ್ಟಣ: ಪಟ್ಟಣದ ಕುಡಿವ ನೀರು ಕಟ್ಟೆಯ ಬಳಿ ಇರುವ ವಿರಕ್ತಮಠದಲ್ಲಿ ಶಿವೈಕ್ಯರಾದ ಶಾಂತಮಲ್ಲಿಕಾರ್ಜುನ ಶ್ರೀಗಳ 17ನೇ ವರ್ಷದ ಪುಣ್ಯಾರಾಧನೆ ಹಾಗೂ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ನ.24ರಂದು ಹಮ್ಮಿಕೊಂಡಿರುವುದಾಗಿ ಮಠದ ಪ್ರಕಟಣೆ ತಿಳಿಸಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಕನಕಪುರ ದೇಗುಲ ಮಠದ ಚರಮೂರ್ತಿ ನಿರ್ವಾಣ ಸ್ವಾಮಿಜಿ ವಹಿಸಲಿದ್ದು, ಮರಳೇ ಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ವಿರಕ್ತ ಮಠದ ಶಿವರುದ್ರ ಸ್ವಾಮೀಜಿ, ಬೇವೂರಿನ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ.ಪಿ. ಯೋಗೇಶ್ವರ್ ವಹಿಸಲಿದ್ದು, ಸಂಸದ ಡಿ.ಕೆ. ಸುರೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಮಾ.ಗು. ಸದಾನಂದಯ್ಯ ಉಪನ್ಯಾಸ ನೀಡಲಿದ್ದು, ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಶಂಕರ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಸಮಾವೇಶ
ಚನ್ನಪಟ್ಟಣ: ತಾಲೂಕಿನ ಸಿದ್ದನಹಳ್ಳಿ ಗ್ರಾಮದ ಬುದ್ದಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನ.24ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ 4ನೇ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಾವೇಶ ಹಮ್ಮಿಕೊಂಡಿರುವುದಾಗಿ ಟ್ರಸ್ಟ್ನ ಅಧ್ಯಕ್ಷ ಸಿಸಿರಾ ತಿಳಿಸಿದ್ದಾರೆ. ಸಮಾವೇಶವನ್ನು ನಾಡೋಜ ಡಾ. ಹಂಪ ನಾಗರಾಜಯ್ಯ ಉದ್ಘಾಟಿಸಲಿದ್ದು, ಶಾಸಕ ಸಿ.ಪಿ. ಯೋಗೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಮರಣ ಸಂಚಿಕೆ ಸೇರದಂತೆ ವಿವಿಧ ಪುಸ್ತಕಗಳನ್ನು ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್ ಲೋಕಾರ್ಪಣೆ ಮಾಡಲಿದ್ದು, ಹಿಂದಿನ ಸಮಾವೇಶದ ಅಧ್ಯಕ್ಷ ಪ್ರೊ. ಅಪ್ಪಗೆರೆ ತಿಮ್ಮರಾಜು ಆಶಯ ನುಡಿಗಳನ್ನಾಡಲಿದ್ದು ಸಮಾವೇಶದ ಸರ್ವಾಧ್ಯಕ್ಷತೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಆರ್.ಎನ್. ನಾಗರಾಜು(ನಾಗಪ್ರಿಯ) ವಹಿಸಲಿದ್ದಾರೆ.

ನಾಳೆ ಜಾಗೃತ ಸಮಿತಿ ಸಭೆ
ಚನ್ನಪಟ್ಟಣ: ಬಸವ ವಸತಿ ಯೋಜನೆಯಡಿ ತಾಲೂಕಿಗೆ ಮಂಜೂರಾಗಿರುವ 640 ಮನೆಗಳ ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ ನ.22ರಂದು ತಾ.ಪಂ ಸಭಾಂಗಣದಲ್ಲಿ ಶಾಸಕ ಸಿ.ಪಿ. ಯೋಗೇಶ್ವರ್ ಅಧ್ಯಕ್ಷತೆಯನ್ನು ಜಾಗೃತ ಸಮಿತಿ ಸಭೆ ಕರೆದಿರುವುದಾಗಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ಪ್ರಕಟಣೆ ನೀಡಿರುವ ಅವರು ಪ್ರತಿ ಪಂಚಾಯಿತಿಗೆ 20ರಂತೆ ತಾಲೂಕಿನ 32 ಪಂಚಾಯಿತಿ ವ್ಯಾಪ್ತಿಯಿಂದ 640 ಮನೆಗಳ ಫಲಾನುಭವಿಗಳ ಹೆಸರನ್ನು ತರಿಸಲಾಗಿದ್ದು ಫಲಾನುಭವಿಗಳ ಅಂತಿಮ ಪಟ್ಟಿಗೆ ಜಾಗೃತ ಸಮಿತಿ ಅನುಮೋದನೆ ನೀಡಬೇಕಿರುವ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದ್ದು ಸಭೆಗೆ ವಿಧಾನ ಪರಿಷತ್, ತಾ.ಪಂ, ಜಿ.ಪಂ ಸದಸ್ಯರು ಪಾಲ್ಗೊಳ್ಳಲಿದ್ಧಾರೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.