ತಾಪಂ ಅಧ್ಯಕ್ಷರ ಆಯ್ಕೆಗೆ ಬಿರುಸುಗೊಂಡ ಕಸರತ್ತು
-ವಿಶೇಷ ವರದಿ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಪಂ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಗೆ ನ.23ರಂದು ಮುಹೂರ್ತ ನಿಗದಿಯಾಗಿದೆ. ಚುನಾವಣೆ ದಿನಾಂಕ ನಿಗದಿಯಾಗಿರುವ ಹಿನ್ನಲೆಯಲ್ಲಿ ಪಂಚಾಯಿತಿ ಅಧಿಕಾರ ಗದ್ದುಗೆ ಲಾಬಿಗಳು ಹೆಚ್ಚಿದ್ದು, ರಾಜಕೀಯ ಸಂಚಲನ ಉಂಟಾಗಿದೆ.
ಹಿಂದುಳಿದ ವರ್ಗ ಎ ಗೆ ಮೀಸಲಾಗಿರುವ ಅಧ್ಯಕ್ಷ ಹುದ್ದೆ ಮತ್ತು ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಉಪಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳು ತೀವ್ರತರದ ಚಟುವಟಿಕೆಗಳಲ್ಲಿ ತೊಡಗಿವೆ. ಬಲ್ಲ ಮೂಲಗಳ ಪ್ರಕಾರ ಹೊರ ರಾಜ್ಯದ ಪ್ರವಾಸದಲ್ಲಿ ಸುಮಾರು 12 ಮಂದಿ ತಾಪಂ ಸದಸ್ಯರು ವಿಶ್ರಾಂತಿ ಪಡೆಯುತ್ತಿದ್ದು, ಚುನಾವಣೆ ಸಂದರ್ಭಕ್ಕೆ ದೊಡ್ಡಬಳ್ಳಾಪುರಕ್ಕೆ ಬಂದು ಮತ ಚಲಾಯಿಸುತ್ತಾರೆ ಎನ್ನಲಾಗಿದೆ. ಈ ಮಧ್ಯೆ ಕಳೆದ 2 ದಿನಗಳ ಹಿಂದೆ ರಾಜಕೀಯ ಬಿಜೆಪಿ ತನ್ನ ಚಿಹ್ನೆಯಡಿ ಗೆದ್ದು ತಾಪಂ ಸದಸ್ಯರಾಗಿದ್ದವರನ್ನು ಚುನಾವಣೆ ವಿಚಾರವಾಗಿ ಸಭೆ ಕರೆದಿತ್ತು. ಆದರೆ ಆ ಸಭೆಗೆ ಕೆಲವೇ ಸದಸ್ಯರು ಹಾಜರಾಗಿದ್ದು, ಆ ಪಕ್ಷಕ್ಕೆ ರಾಜಕೀಯ ಲಾಭ ಕಡಿಮೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
ಲಾಬಿ ಜೋರು: ಪ್ರಸ್ತುತ ಅಧ್ಯಕ್ಷ ಸ್ಥಾನಕ್ಕೆ ದೊಡ್ಡಬೆಳವಂಗಲ ತಾಪಂ ಸ್ಥಾನದಿಂದ ಆಯ್ಕೆಯಾಗಿರುವ ನರಸಮ್ಮ ಹಾದ್ರಿಪುರ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಅದೇ ರೀತಿ ಬಾಶೆಟ್ಟಿಹಳ್ಳಿ ತಾ.ಪಂ ಕ್ಷೇತ್ರದಿಂದ ಆಯ್ಕೆಯಾಗಿರುವ ಓಬದೇನಹಳ್ಳಿ ಕೆ. ಮುನಿಯಪ್ಪ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಚುನಾಯಿತ ಎಲ್ಲ ಪಕ್ಷಗಳಿಂದಲೂ ಬೆಂಬಲಿಗ ಸದಸ್ಯರೊಡಗೂಡಿ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ.
ಅವಿಶ್ವಾಸ: ಕಳೆದ ತಿಂಗಳು ತಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧ್ಯಕ್ಷರಾಗಿದ್ದ ಡಿ. ನಾಗರಾಜ್ ಅವರನ್ನು ಕೆಳಗಿಳಿಸಲಾಗಿತ್ತು. ನಂತರ ನಡೆದ ರಾಜಕೀಯ ವಿದ್ಯಮಾನದಲ್ಲಿ ಅನೇಕ ಬದಲಾವಣೆಗಳಾಗಿವೆ. ಡಿ. ನಾಗರಾಜ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಹಾಡೋನಹಳ್ಳಿಯ ರಮಾದೇವಿ ನಾರಾಯಣಪ್ಪ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವಿಶ್ವಾಸ ಗೊತ್ತುವಳಿ ಮಂಡಿಸಿದ ನಿಗಧಿತ ದಿನಾಂಕದ ಒಳಗೆ ಅಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಹೀಗಾಗಿ ನ.23ಕ್ಕೆ ಚುನಾವಣೆ ನಡೆಯುತ್ತಿದೆ.
20 ಸದಸ್ಯ ಬಲದ ತಾ.ಪಂ.ಯಲ್ಲಿ ಬಿಜೆಪಿ ಅತಿ ಹೆಚ್ಚು 12 ಸದಸ್ಯ ಬಲ ಹೊಂದಿದೆ. ಅನ್ನು ಅಲ್ಪ ಬಲ ಹೊಂದಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಈ ಬಾರಿ ರಾಜಕೀಯ ತಂತ್ರ ಪ್ರಯೋಗಿಸುವ ಹುಮ್ಮಸ್ಸಿನಲ್ಲಿವೆ. ಬಿಜೆಪಿಯ ಸದಸ್ಯರನ್ನು ಸೆಳೆಯುವ ಪ್ರಯತ್ನಗಳು ನಡೆದಿವೆ ಎನ್ನಲಾಗಿದ್ದು, ಎಲ್ಲ ರಾಜಕೀಯ ಬೆಳವಣಿಗೆಗಳಿಗೆ ಶನಿವಾರ ಉತ್ತರ ಸಿಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

