ಬೆಂಗಳೂರು ಗ್ರಾಮಾಂತರ

ಹಾಸ್ಟೆಲ್ ದುಸ್ಥಿತಿಗೆ ವಾರ್ಡನ್‌ಗಳ ನಿರ್ಲಕ್ಷ್ಯ

Published On :

ಕ.ಪ್ರ.ವಾರ್ತೆ ಮಾಗಡಿ ನ. 21
ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ತಿಂಡಿ, ಊಟ ನೀಡುವಲ್ಲಿ, ಶುಚಿತ್ವ ಕಾಪಾಡುವಲ್ಲಿ ವಾರ್ಡನ್‌ಗಳು ಸಂಪೂರ್ಣ ವಿಫಲರಾಗಿದ್ದಾರೆ. ತಾಲೂಕಿನ ಬಹುತೇಕ ಹಾಸ್ಟೆಲ್‌ಗಳು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿವೆ ಎಂದು ತಾಪಂ ಅಧ್ಯಕ್ಷ ಜಿ. ಕೃಷ್ಣ ಕಿಡಿ ಕಾರಿದರು.
ಅವರು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ತಾಲೂಕಿನ ವಾರ್ಡನ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾಸ್ಟೆಲ್ ವಾರ್ಡನ್‌ಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು ತಾಕೀತು ಮಾಡಿದರು.
ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ಅಡುಗೆ ಸಿಬ್ಬಂದಿ ಹಾಸ್ಟೆಲ್‌ನಲ್ಲಿ ಅಡುಗೆಯನ್ನು ಸರಿಯಾಗಿ ತಯಾರಿಸುತ್ತಿಲ್ಲ, ಗುಣಮಟ್ಟದ ತರಕಾರಿ ಬಳಸುತ್ತಿಲ್ಲ, ಅಡುಗೆ ಮನೆ ಸ್ವಚ್ಛತೆಯಿಲ್ಲದೆ ವಾಸನೆಯಿಂದ ಗಬ್ಬುನಾರುತ್ತಿದೆ. ಸಂಬಂಧಪಟ್ಟ ವಾರ್ಡ್‌ನ್‌ಗಳು ಅಡುಗೆ ಮಾಡುವ ವೇಳೆ ಹಾಜರಿದ್ದು, ಗುಣಮಟ್ಟದ ಅಡುಗೆ ತಯಾರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಬಡಮಕ್ಕಳಿಗೆ ಗುಣಮಟ್ಟದ ಆಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಜಿ. ಕೃಷ್ಣ ಸೂಚಿಸಿದರು.
ತಿಂಗಳಿಗೊಮ್ಮೆ ಪರೀಕ್ಷೆ ನಡೆಸಿ ಅಂಕಪಟ್ಟಿ ತಯಾರಿಸಬೇಕು. ಪ್ರತಿ ತಿಂಗಳು ಪೋಷಕರ ಸಭೆ ಕರೆದು ಮಕ್ಕಳ ಕುಂದುಕೊರತೆ ಬಗ್ಗೆ ಚರ್ಚಿಸಬೇಕು. ಶಾಲಾ- ಕಾಲೇಜುಗಳಲ್ಲಿ ಮಕ್ಕಳ ಹಾಜರಾತಿಯನ್ನು ವಾರ್ಡನ್‌ಗಳು ಪಟ್ಟಿ ಮಾಡಬೇಕು. ಡಿ.6ರೊಳಗೆ ಒಂದು ಪೋಷಕರ ಸಭೆ ಕರೆದು ಚರ್ಚಿಸುವಂತೆ ವಾರ್ಡನ್‌ಗಳಿಗೆ ಕೃಷ್ಣ ತಾಕೀತು ಮಾಡಿದರು.
ಹೊರಗುತ್ತಿಗೆ ಆಧಾರ ಮೇಲೆ ಬಂದಿರುವ ಅಡುಗೆ ಸಿಬ್ಬಂದಿಗೆ ವಾರ್ಡನ್‌ಗಳು ತರಬೇತಿ ಕೊಡಿಸಬೇಕು. ಗುಣಮಟ್ಟದ ಅಡುಗೆ ತಯಾರಿಸದ ಸಿಬ್ಬಂದಿಗೆ ಕೂಡಲೇ ನೋಟಿಸ್ ಜಾರಿ ಮಾಡುವ ಮೂಲಕ ಶಿಸ್ತಿನ ಕ್ರಮ ಜರುಗಿಸಬೇಕು. ಹಾಸ್ಟೆಲ್‌ಗಳಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳನ್ನು ಪರಿಶೀಲಿಸಬೇಕು. ಹಾಸ್ಟೆಲ್ ಸ್ವತ್ತನ್ನು ರಕ್ಷಣೆ ಮಾಡಬೇಕು. ಹಾಸ್ಟೆಲ್ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಲ್ಲದಿದ್ದರೆ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗೆ ಆದೇಶಿಸಿದರು.
ಹಾಸ್ಟೆಲ್‌ಗಳಲ್ಲಿ ನೀರು, ವಿದ್ಯುತ್ ಸಮಸ್ಯೆ, ಕಾಂಪೌಂಡ್ ಕೊರತೆ, ಕೊಳವೆ ಬಾವಿ ದುರಸ್ತಿ, ಶೌಚಾಲಯ ದುರಸ್ತಿ, ಸಂಪ್ ನಿರ್ಮಿಸಿ, ಅಡುಗೆ ಸಿಬ್ಬಂದಿಗೆ 7 ತಿಂಗಳಿನಿಂದ ವೇತನವಿಲ್ಲ ಹೀಗೆ ಹಾಸ್ಟೆಲ್‌ನಲ್ಲಿ ಹತ್ತಾರು ಸಮಸ್ಯೆಗಳನ್ನು ವಾರ್ಡನ್‌ಗಳು ತಾ.ಪಂ. ಅಧ್ಯಕ್ಷ ಜಿ. ಕೃಷ್ಣ ಹಾಗೂ ಸಮಾಜ ಕಲ್ಯಾಣ ಅಧಿಕಾರಿ ನರಸಿಂಹಮೂರ್ತಿ ಅವರ ಗಮನಕ್ಕೆ ತಂದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿ. ಕೃಷ್ಣ ತಿಳಿಸಿದರು. ಗ್ರಾ.ಪಂ. ಸದಸ್ಯ ಚಕ್ರಬಾವಿ ಭೈರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.