ಕೃಷ್ಣ... ಕೃಷ್ಣ... ಬೈರೇಗೌಡರೆಲ್ಲಿದ್ದಾರೆ?
-ಕೆ.ಆರ್. ರವಿಕಿರಣ್
ದೊಡ್ಡಬಳ್ಳಾಪುರ: ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಎಲ್ಲಿದ್ದೀರಿ...? ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರವಾಗಿರುವ ದೊಡ್ಡಬಳ್ಳಾಪುರದತ್ತ ನಿಮ್ಮ ಪಯಣ ಯಾವಾಗ...? ನಿಮ್ಮ ಬಳಿ ಹಂಚಿಕೊಳ್ಳಲು ಹಲವು ವಿಚಾರಗಳಿವೆ. ಸಮಸ್ಯೆಗಳ ಮೇಲೆ ಸಮಸ್ಯೆಗಳು ಕಾಡುತ್ತಿವೆ. ಒಮ್ಮೆಯಾದರೂ ನಿಮ್ಮ ದರ್ಶನ ಭಾಗ್ಯವನ್ನು ಈ ತಾಲೂಕಿನ ಜನಕ್ಕೆ ನೀಡಿ ಸ್ವಾಮೀ... ಇದು ದೊಡ್ಡಬಳ್ಳಾಪುರ ತಾಲೂಕಿನ ಜನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ, ರಾಜ್ಯ ಕೃಷಿ ಮಂತ್ರಿ ಕೃಷ್ಣ ಬೈರೇಗೌಡರಿಗೆ ಮಾಡುತ್ತಿರುವ ಮನವಿ.
ಇದಕ್ಕೆ ಕಾರಣ ಇಷ್ಟೆ. ಕಳೆದ 6 ತಿಂಗಳ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಕೃಷ್ಣಬೈರೇಗೌಡರು, ಅಂದಿನಿಂದ ಇಂದಿನವರೆಗೆ ಅಧಿಕೃತವಾಗಿ ದೊಡ್ಡಬಳ್ಳಾಪುರಕ್ಕೆ ಭೇಟಿ ಕೊಟ್ಟಿಲ್ಲ. ಕಳೆದ 3 ವಾರದ ಹಿಂದೆ ದೊಡ್ಡಬಳ್ಳಾಪುರ ಹೊರವಲಯದ ಜವಳಿ ಪಾರ್ಕಿಗೆ ಅನೇಕ ಸಚಿವ-ಸಂಸದರು ಆಗಮಿಸಿದ್ದ ಸಂದರ್ಭದಲ್ಲಿ ಬಂದು ಹೋದ ಅವರು ಅಂದೇ ನಗರದಲ್ಲಿ ನಡೆದ ಕಾರ್ಯಕ್ರಮಕ್ಕೂ ಗೈರು ಹಾಜರಾಗುವ ಮೂಲಕ ಚರ್ಚೆಗೆ ಗ್ರಾಸವಾದರು. ಅದನ್ನು ಹೊರತುಪಡಿಸಿದರೆ ಮತ್ತೆಲ್ಲೂ ಉಸ್ತುವಾರಿ ಸಚಿವರ ಸುಳಿವೇ ಇಲ್ಲ.
ಸಮಸ್ಯೆ ಹಲವು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಸಮಸ್ಯೆಗಳ ಆಗರವಾಗಿದೆ. ಕಾರಣ, ಈ ಜಿಲ್ಲೆಗೆ ಜಿಲ್ಲಾ ಕೇಂದ್ರವೇ ಜಿಲ್ಲೆ ವ್ಯಾಪ್ತಿಯ ಹೊರಗಡೆ ಇದೆ. ಜಿಲ್ಲಾ ಕೇಂದ್ರವಂತೂ ಜಿಲ್ಲೆಯ ಒಳಗೆ ಇಲ್ಲ ಎಂದರೆ ಜಿಲ್ಲಾ ಮಂತ್ರಿಗಳೂ ಜಿಲ್ಲೆಯ ಒಳಗೆ ಇಲ್ಲದೇ ಹೋಗಿರುವುದು ದುರಂತ. ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯಲ್ಲಿ ಜಿಲ್ಲಾ ಕೇಂದ್ರ ಹೋರಾಟ ನಡೆಯುತ್ತಿದೆ. ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಕಚೇರಿ ವರ್ಗಾವಣೆಗೆ ನಿರಂತರ ಚಳವಳಿ ನಡೆದಿದೆ. ಶಾಶ್ವತ ನೀರಾವರಿಯ ಹೋರಾಟ, ರಾಷ್ಟ್ರೀಯ ಹೆದ್ದಾರಿಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ಭೂಮಿಯ ರೈತರ ಹೋರಾಟ, ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ, ಪಿಂಚಣಿ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಇವುಗಳಿಗೆ ಉಸ್ತುವಾರಿ ಸಚಿವರ ಸ್ಪಂದನೆ ಬೇಕಾಗಿದೆ.
ಜನಸ್ಪಂದನ ಸಭೆ ನಡೆಸಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು, ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಸಿಎಂ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಸಚಿವರು ಜನರ ಬಳಿಗೆ ಬಂದು ಸಂಕಷ್ಟ ಆಲಿಸುವ ದೊಡ್ಡ ಮನಸ್ಸು ಮಾಡಬೇಕು. ಕನಿಷ್ಠ ತಿಂಗಳಿಗೊಮ್ಮೆಯಾದರೂ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪ್ರದೇಶಾವಾರು ಹೆಚ್ಚಿರುವ ಸಮಸ್ಯೆಗಳ ನಿವಾರಣೆಗೆ ಸ್ಥಳೀಯ ಶಾಸಕರ ಸಹಕಾರದಲ್ಲಿ ಪರಿಹಾರಗಳನ್ನು ಚಿಂತಿಸಬೇಕು. ಗ್ರಾಮಾಂತರ ಪ್ರದೇಶದ ಜನರನ್ನು ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಮುಟ್ಟಿವೆ ಎಂಬುದರ ಕುರಿತಾದರೂ ಕಣ್ಣಾರೆ ಕಾಣುವ ಪ್ರಯತ್ನ ಮಾಡಬೇಕು ಎಂಬುದು ಜನರ ಆಗ್ರಹವಾಗಿದೆ.
ಪ್ರೋಟೋಕಾಲ್ ಸಚಿವರು
ದೊಡ್ಡಬಳ್ಳಾಪುರದಲ್ಲಿ ನಡೆಯುವ ಸರ್ಕಾರಿ ಪ್ರಾಯೋಜಿತ, ವಿವಿಧ ಇಲಾಖೆಗಳ ಕಾರ್ಯಕ್ರಮಗಳಲ್ಲಿ ಸರ್ಕಾರದ ಶಿಷ್ಟಾಚಾರ(ಪ್ರೋಟೋಕಾಲ್)ದಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಲ್ಲೆಡೆ ಪ್ರಮುಖ ಸ್ಥಾನ ಲಭ್ಯವಾಗಿರುತ್ತದೆ. ಆಹ್ವಾನ ಪತ್ರಿಕೆಗಳಲ್ಲಿ ತಪ್ಪದೇ ಹೆಸರು ಮುದ್ರಿತವಾದರೂ ಸಚಿವರು ಮಾತ್ರ ಯಾವ ಕಾರ್ಯಕ್ರಮಕ್ಕೂ ಆಗಮಿಸಿಲ್ಲ. ರಾಜ್ಯ ಮಟ್ಟದ 2 ಕಾರ್ಯಕ್ರಮಗಳು ದೊಡ್ಡಬಳ್ಳಾಪುರದಲ್ಲಿ ನಡೆದಿವೆಯಾದರೂ ಕೃಷ್ಣ ಬೈರೇಗೌಡರು ಅಲ್ಲಿಗೂ ಬಂದಿಲ್ಲ. ಕೆಲಸದ ಒತ್ತಡ ಎಷ್ಟೇ ಇದ್ದರೂ 4 ತಾಲೂಕುಗಳನ್ನೊಳಗೊಂಡ ಸಣ್ಣ ಜಿಲ್ಲೆಗಳಲ್ಲಿ ಒಂದಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಕನಿಷ್ಠ 1 ತಾಲೂಕಿಗೆ 1 ದಿನ ಅಂತಾದರೂ ಅಧಿಕೃತ ಭೇಟಿ-ಜನಸ್ಪಂದನೆ ಮಾಡಿಲ್ಲ ಎಂಬುದು ಜನರ ಆರೋಪ.
ದೊಡ್ಡಬಳ್ಳಾಪುರ ನಗರ ಮತ್ತು ತಾಲೂಕಿನ ವ್ಯಾಪ್ತಿಯಲ್ಲಿ ಅನೇಕ ಕಾರ್ಯಕ್ರಮಗಳು ಈವರೆಗೆ ನಡೆದಿವೆ. ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ 16 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆದಿದೆ. ರಾಜ್ಯ ಮಟ್ಟದ ನರೇಗಾ ವಿಶೇಷ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ತಾಲೂಕಿನ ಕಸುವನಹಳ್ಳಿಯಲ್ಲಿ ನಡೆದಿತ್ತು. ಅದೇ ರೀತಿ ಜಿಲ್ಲಾ ಮಟ್ಟದ ಕೆಲ ಕಾರ್ಯಕ್ರಮಗಳು ನಡೆದಾಗಲೂ ಸಚಿವರು ಬಂದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

