ತಂಬಾಕು ಸೇವನೆ ದುಷ್ಪರಿಣಾಮ ಅರಿವು ಅಗತ್ಯ
ರಾಮನಗರ: ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಶಾಲೆ ಮತ್ತು ಕಾಲೇಜು ಹಂತದಲ್ಲಿ ಅರಿವು ಕಾರ್ಯಕ್ರಮ ಆಯೋಜನೆ ಹೆಚ್ಚು ಉಪಯುಕ್ತ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಂಬಾಕು ನಿಯಂತ್ರಣ ಕೋಶ, ಜಿಲ್ಲಾಡಳಿತದಿಂದ ಆಯೋಜಿಸಿದ್ದ ತಂಬಾಕು ನಿಯಂತ್ರಣ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ, ಸಾಮಾರ್ಥ್ಯಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಕಷ್ಟು ಪೋಷಕರು ತಂಬಾಕು ಸೇವನೆ ಮಾಡುತ್ತಿದ್ದಾರೆ. ಅವರಿಂದ ಮಕ್ಕಳಿಗೆ ಪ್ರೇರಣೆಯಾಗಿ ಅವರೂ ಚಟಕ್ಕೆ ದಾಸರಾಗುವ ಸಾಧ್ಯತೆ ಇದೆ. ಹೀಗಾಗಿ ಶಾಲೆ ಮತ್ತು ಕಾಲೇಜುಗಳಲ್ಲೇ ತಂಬಾಕು ಸೇವನೆ ದುಷ್ಪರಿಣಾಮದ ಬಗ್ಗೆ ಅರಿವಿನ ಕಾರ್ಯಕ್ರಮ ಆಯೋಜನೆ ಅರ್ಥಪೂರ್ಣ ಎಂದು ಹೇಳಿದರು.
ಹದಿ ಹರೆಯದಲ್ಲೇ ದುಶ್ಚಟ: ಭಾರತದಲ್ಲಿ ಸರಾಸರಿ 17-18ನೇ ವಯಸ್ಸಿನಲ್ಲೇ ತಂಬಾಕು ಸೇವನೆ ದುಶ್ಚಟಕ್ಕೆ ಇಳಿಯುತ್ತಿದ್ದಾರೆ. ಕುತೂಹಲಕ್ಕೆ ತಂಬಾಕು ಸೇವಿಸಿದವರು ಮುಂದೆ ಅದರ ದಾಸರಾಗಿ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಅನ್ಯರಿಗಿಂತ ಭಿನ್ನರು ಎಂದು ತೋರಿಸಿಕೊಳ್ಳಲು ಮತ್ತು ಪೋಷಕರಿಂದ ಪ್ರೇರಣೆಗೆ ಒಳಗಾಗಿ ತಂಬಾಕು ಸೇವನೆಗೆ ಇಳಿಯುತ್ತಿದ್ದಾರೆ ಎಂದು ವಿಷಾದಿಸಿದರು.
ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ತಂಬಾಕು ವಸ್ತುಗಳ ಮಾರಾಟ ಮತ್ತು ಸೇವನೆ ನಿಷಿದ್ಧವಾಗಿದೆ. ಇಷ್ಟಾಗಿಯೂ ತಂಬಾಕು ಸೇವನೆಗೆ ಕಡಿವಾಣ ಬಿದ್ದಿಲ್ಲ. ದುಷ್ಪರಿಣಾಮದ ಬಗ್ಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸುವುದರಿಂದಷ್ಟೇ ಯುವಕರನ್ನು ತಂಬಾಕು ಸೇವನೆಯ ದುಶ್ಚಟಗಳಿಂದ ಹೊರ ತರಲು ಸಾಧ್ಯ ಎಂದು ಅವರು ತಿಳಿಸಿದರು.
ತಂಬಾಕು ಸೇವನೆ ಪಿಡುಗು: ಹತ್ತಾರು ಕಾಯ್ದೆಗಳ ಜಾರಿಯಾದರೂ ಸಾಮಾಜಿಕ ಪಿಡುಗಾಗಿರುವ ತಂಬಾಕು ಸೇವನೆಯನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗಿಲ್ಲ. ಸಾರ್ವಜನಿಕರ ಸಹಭಾಗಿತ್ವದ ಜತೆಗೆ ಸರ್ಕಾರಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವ ಮೂಲಕ ತಂಬಾಕು ನಿಯಂತ್ರಣಕ್ಕೆ ಪಣತೊಡಗಬೇಕು ಎಂದು ಅವರು ಕರೆ ನೀಡಿದರು.
ತಂಬಾಕಿನ ಪೈಕಿ ಸಿಗರೇಟಿನಲ್ಲಿ 4 ಸಾವಿರ ರಾಸಾಯನಿಕ ವಸ್ತುಗಳಿದ್ದು, ಈ ಪೈಕಿ 200ಕ್ಕೂ ಹೆಚ್ಚು ವಿಷಕಾರಿ ವಸ್ತುಗಳಾಗಿವೆ. ಅವುಗಳಲ್ಲಿ 60 ವಸ್ತುಗಳು ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತವೆ. ಇದೆಲ್ಲವನ್ನೂ ಧೂಮಪಾನಿಗಳು ಅರಿತು, ಅದರಿಂದ ಹೊರ ಬರಬೇಕು. ತಂಬಾಕು ನಿಯಂತ್ರಣ ಸಾಧ್ಯವಾದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ತನ್ನಿಂತಾನೇ ಆಗುತ್ತದೆ ಎಂದರು.
ಕಡೆಗೆ ನಮ್ಮನ್ನೇ ಸುಡುತ್ತದೆ: ಸಿಗರೇಟ್ ಮೂಲತಃ ನಮ್ಮ ದೇಶದ್ದಲ್ಲ. ಅದನ್ನು 16ನೇ ಶತಮಾನದಲ್ಲಿ ಪೋರ್ಚುಗೀಸರು ಇಲ್ಲಿ ತಂದು ಪರಿಚಯಿಸಿದರು. ನಮ್ಮವರು ಹಂತ ಹಂತವಾಗಿ ಸಿಗರೇಟಿನ ದಾಸರಾಗಿದ್ದು, ಅದು ಈಗ ಇಡೀ ದೇಶವನ್ನೇ ಸುಡಲು ನಿಂತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ತಂಬಾಕು ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿಸುತ್ತದೆ. ತಂಬಾಕಿನಲ್ಲಿರುವ ನಿಕೋಟಿನ್ ಆರೋಗ್ಯದ ಮೇಲೆ ಆಘಾತಕಾರಿ ಪರಿಣಾಮ ಉಂಟು ಮಾಡುತ್ತದೆ. ಸೇದುವವರಿಗೆ ಮಾತ್ರವಲ್ಲದೆ ಕುಟುಂಬ, ಅಕ್ಕಪಕ್ಕದವರಿಗೂ ಅದರ ದುಷ್ಪರಿಣಾಮವಿದೆ. ಒಬ್ಬ ವ್ಯಕ್ತಿ ವ್ಯಸನಿಯಾಗಿದ್ದರೆ ಅದರಿಂದ ಇಡೀ ಕುಟುಂಬ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಪಘಾತಕ್ಕಿಂತ ಹೆಚ್ಚು ಸಾವು: ದೇಶದಲ್ಲಿ ರಸ್ತೆ ಅಪಘಾತ ಮತ್ತಿತರೆ ಅವಘಡಗಳಿಂದ ಸಾವನ್ನಪ್ಪುವವರಿಗಿಂತ ತಂಬಾಕು ಸೇವನೆಯಿಂದ ಬರುವ ಕ್ಯಾನ್ಸರ ಸಹಿತ ಇತರೆ ಕಾಯಿಲೆಗಳಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ತಂಬಾಕು ನಿಯಂತ್ರಣ ಕಾಯ್ದೆಯನ್ನು ಸಾಮಾಜಿಕ ಬದ್ಧತೆಯಿಂದ ಜಾರಿಗೆ ತಂದಿದ್ದು, ಅದರ ಅನುಷ್ಠಾನಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಎಸ್ಪಿ ಅನುಪಮ್ ಅಗ್ರವಾಲ್ ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್. ರಘುನಾಥ್ ಮಾತನಾಡಿದರು. ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ವೆಂಕಟಚಾಲ ಮೂರ್ತಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಮೀದ್ ಖಾನ್ , ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗುತ್ತಲಯ್ಯ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

