ಪರಭಾಷೆ ನಾಮಫಲಕಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ನ.25
ಕನ್ನಡ ಭಾಷೆಯಲ್ಲಿ ಕಡ್ಡಾಯವಾಗಿ ವಾಣಿಜ್ಯ ವ್ಯವಹಾರದ ನಾಮಫಲಕಗಳನ್ನು ಪ್ರದರ್ಶಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ, ಭುವನೇಶ್ವರಿ ಕನ್ನಡ ಸಂಘ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪರಭಾಷಾ ನಾಮಫಲಕಗಳನ್ನು ಕಿತ್ತು, ಮಸಿ ಬಳಿದು, ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ನೆಲದಾಂಜನೇಯಸ್ವಾಮಿ ದೇವಾಲಯ ಮುಂಭಾಗದ ಜಯಚಾಮರಾಜೇಂದ್ರ ವೃತ್ತದಲ್ಲಿರುವ ಡಾ.ರಾಜ್ಕುಮಾರ್ ಪುತ್ಥಳಿ ಮುಂಭಾಗದಿಂದ ಹೊರಟ ಕನ್ನಡ ನಾಮಫಲಕ ಜಾಗೃತಿ ಜಾಥಾ ವಿವಿಧ ಬೀದಿಗಳಲ್ಲಿ ಸಂಚರಿಸಿ ಅಂಗಡಿ-ಮುಂಗಟ್ಟುಗಳ ಮೇಲೆ ಪ್ರದರ್ಶಿಸಿದ್ದ ಪರಭಾಷಾ ನಾಮಫಲಕಗಳಿಗೆ ಮಸಿ ಬಳಿಯಲಾಯಿತು. ನಂತರ ಕೆಲ ನಾಮಫಲಕಗಳನ್ನು ಕಿತ್ತು ತಂದು ಡಿಕ್ರಾಸ್ ವೃತ್ತದಲ್ಲಿ ಸುರಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕು. ಕನ್ನಡಕ್ಕೆ ಎಲ್ಲ ಹಂತಗಳಲ್ಲೂ ಅಗ್ರ ಪ್ರಾಶಸ್ತ್ಯ ದೊರೆಯಬೇಕು. ಈ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರೂ ಭಾಷೆ-ಸಂಸ್ಕೃತಿ ಮತ್ತು ಭಾವನೆಗಳಿಗೆ ಬೆಲೆ ಕೊಡುವುದು ಕಡ್ಡಾಯ. ತಪ್ಪಿದಲ್ಲಿ ಕನ್ನಡಿಗದ ಸ್ವಾಭಿಮಾನಿ ದನಿ ಕಿಚ್ಚಾಗಿ ಪರಿಣಮಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಚ್ಚರಿಕೆ: ಇದೇ ವೇಳೆ ಜಾಗೃತಿ ಅಭಿಯಾನ ನಡೆದು ಬಂದ ಹಾದಿಯಲ್ಲಿ ಬರುವ ಎಲ್ಲ ವಾಣಿಜ್ಯ ಮಳಿಗೆಗಳ ಮಾಲೀಕರುಗಳಿಗೆ ಕನ್ನಡ ಭಾಷೆ ನಾಮಫಲಕಗಳನ್ನು ಹಾಕುವಂತೆ ಮನವರಿಕೆ ಮಾಡಲಾಯಿತು. ಕನ್ನಡವನ್ನು ನಿರ್ಲಕ್ಷಿಸಿ ಅನ್ಯಭಾಷೆಗಳನ್ನು ಮೆರೆಸಲು ಪ್ರಯತ್ನಿಸಿದರೆ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು. ಈ ನೆಲದ ಸ್ವಾಭಿಮಾನಿ ಕನ್ನಡತನವನ್ನು ಉಳಿಸಿ-ಬೆಳೆಸುವಂತೆ ಕೋರಲಾಯಿತು. ತಪ್ಪಿದಲ್ಲಿ ಗಂಭೀರ ಸ್ವರೂಪದ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರದ ಆದೇಶದಂತೆ ಕನ್ನಡ ನಾಮಫಲಕಗಳನ್ನು ಪ್ರದರ್ಶಿಸುವುದು ಕಡ್ಡಾಯ. ಆದರೆ ನಿಯಮ ಮೀರಿ ಹಲವೆಡೆ ಇತರ ಭಾಷೆಗಳ ನಾಮಫಲಕಗಳು ರಾರಾಜಿಸುತ್ತಿದ್ದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಸಂಘಟನೆಗಳು ಇಂದು ಬೀದಿಗಿಳಿದು ಜಾಗೃತಿ ಮೂಡಿಸಿವೆ. ಸರ್ಕಾರದ ಆದೇಶಾನ್ವಯ ಎಲ್ಲ ವಾಣಿಜ್ಯ ಮಳಿಗೆ-ಸಂಕೀರ್ಣಗಳು ಸೇರಿದಂತೆ ಸಾರ್ವಜನಿಕವಾಗಿ ಪ್ರದರ್ಶಿಸುವ ನಾಮಫಲಕಗಳಲ್ಲಿ ಪ್ರಾದೇಶಿಕ ಭಾಷೆಗೇ ಆಗ್ರಸ್ಥಾನ ಇರಬೇಕು. ಇದನ್ನು ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿ ಕನ್ನಡ ಬಳಸದಿರುವವರಿಗೆ ನೊಟೀಸ್ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹ.ರಾಮಕೃಷ್ಣ, ಸು.ನರಸಿಂಹಮೂರ್ತಿ, ಭುವನೇಶ್ವರಿ ಕನ್ನಡ ಸಂಘದ ತ.ನ.ಪ್ರಭುದೇವ್, ಶಿವರಾಜ್ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಮುಖಂಡ ಡಿ.ಸಿ.ಚೌಡರಾಜು, ನಗರಸಭಾ ಸದಸ್ಯ ಆರ್.ಕೆಂಪರಾಜು, ಗ್ರಾ.ಪಂ ಉಪಾಧ್ಯಕ್ಷ ಡಿ.ಎನ್.ತಿಮ್ಮರಾಜು, ಕೆ.ಕೆ.ವೆಂಕಟೇಶ್, ಪು.ಮಹೇಶ್, ಮಹದೇವ್, ಸುರೇಶ್, ನಟರಾಜ್ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

