ಬೆಂಗಳೂರು ಗ್ರಾಮಾಂತರ

ಯೋಧ ಸೋಮೇಗೌಡ ಅಂತ್ಯಕ್ರಿಯೆ

Published On :

ಚನ್ನಪಟ್ಟಣ: ಬಿಹಾರದ ನಕ್ಸಲ್ ಬಾಂಬ್ ಸ್ಫೋಟದಲ್ಲಿ ಸಾವಿಗೀಡಾದ ಸಿಆರ್‌ಪಿಎಫ್ ಯೋಧ ಸೋಮೇಗೌಡರ ಅಂತ್ಯ ಕ್ರಿಯೆ ಸ್ವಗ್ರಾಮ ಹನಿಯೂರಲ್ಲಿ ಸಕಲ ಸರ್ಕಾರಿ ಗೌರವ ಗಳೊಂದಿಗೆ ನೆರವೇರಿತು.
ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ಪಟ್ಟಣಕ್ಕೆ ಆಗಮಿಸಿದ ಯೋಧನ ಪಾರ್ಥಿವ ಶರೀರರವನ್ನು ಗಾಂಧಿಸ್ಮಾರಕ ಭವನ ಬಳಿ ಸಾರ್ವಜನಿಕ ದರ್ಶನಕ್ಕೆ ಕೆಲಕಾಲ ಇಡಲಾಗಿತ್ತು.
ಗಾಂಧಿಸ್ಮಾರಕ ಭವನದ ಬಳಿ ಮೃತ ಯೋಧನಿಗೆ ಅಶ್ರುತರ್ಪಣ ಗೈದ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಜಿಲ್ಲಾ ಎಸ್‌ಪಿ ಅನುಪಮ್ ಅಗ್ರವಾಲ್, ಜಿಪಂ ಸಿಇಒ ಡಾ. ವೆಂಕಟೇಶ್, ಎಎಸ್ಪಿ ಕುದೀಪ್ ಕುಮಾರ್ ಆರ್.ಜೈನ್, ತಹಸೀಲ್ದಾರ್ ಅರುಣಪ್ರಭ ಸರ್ಕಾರದ ಪರವಾಗಿ ಅಂತಿಮ ನಮನ ಸಲ್ಲಿಸಿದರು.
ಶೋಕಸಾಗರದಲ್ಲಿ ಹನಿಯೂರು: ದೇಶ ಸೇವೆಗಾಗಿ ಪ್ರಾಣ ತೆತ್ತ ಯೋಧ ಸೋಮೇಗೌಡರ ಶವವನ್ನು ಪಟ್ಟಣದ ಗಾಂಧಿಸ್ಮಾರಕ ಭವನದ ಮುಂಭಾಗದಿಂದ ಸ್ವಗ್ರಾಮ ಹನಿಯೂರಿನ ವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಗ್ರಾಮದ ನೂರಾರು ಯುವಕರು ರಾಷ್ಟ್ರಧ್ವಜ ಕಟ್ಟಿಕೊಂಡಿದ್ದ ದ್ವಿಚಕ್ರ ವಾಹನದಲ್ಲಿ ಮೆರವಣಿಗೆ ನಡೆಸುವ ಮೂಲಕ ಗೌರವ ಸಲ್ಲಿಸಿದರು.
ಯೋಧನ ಪಾರ್ಥಿವ ಶರೀರರವಿದ್ದ ವಾಹನದ ಜತೆಯಲ್ಲಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳ ವಾಹನಗಳು, ಗಣ್ಯರ ವಾಹನಗಳು ಮೆರವಣಿಗೆ ಮೂಲಕ ಸಾಗಿದವು.
ಸೋಮೇಗೌಡರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಿದಾಗ ಗ್ರಾಮದಲ್ಲಿ ಶೋಕ ಮಡುಗಟ್ಟಿತ್ತು, ಹಬ್ಬದಂದು ಮನೆಯಿಂದ ಹೋದ ಮಗ ಮತ್ತೆ ಶವವಾಗಿ ಮರಳಿದ್ದನ್ನು ಕಂಡು ತಂದೆ- ತಾಯಿ, ಮೃತರ ಪತ್ನಿ ಮತ್ತು ಇಬ್ಬರು ಮಕ್ಕಳು ಶೋಕ ಸಾಗರದಲ್ಲಿ ಮುಳುಗಿದ್ದರು.
ಬಂಧುಗಳು ಮತ್ತು ಸ್ನೇಹಿತರು ಕಂಬನಿ ಮಿಡಿದರು. ಸ್ವಗ್ರಾಮದಲ್ಲಿ ಯೋಧನ ಗೌರವಾರ್ಥ ಕುಶಾಲ ತೋಪುಗಳನ್ನಾರಿಸಿ ಜಿಲ್ಲಾಡಳಿತದ ಪರವಾಗಿ ಗೌರವ ನಮನ ಸಲ್ಲಿಸಲಾಯಿತು. ಪಾರ್ಥಿವ ಶರೀರಕ್ಕೆ ಪುತ್ರ ಅಗ್ನಿ ಸ್ಪರ್ಶ ಮಾಡಿದ.
ಗಣ್ಯರಿಂದ ಗೌರವಾರ್ಪಣೆ: ಹುತಾತ್ಮ ಯೋಧ ಸೋಮೇಗೌಡರಿಗೆ ತಾಲೂಕಿನ ವಿವಿಧ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಬೆಂಗಳೂರು ಗ್ರಾಮಾಂತರ  ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ, ಮಾಜಿ ಶಾಸಕ ಎಂ.ಸಿ. ಅಶ್ವತ್ಥ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಲಿಂಗೇಶ್‌ಕುಮಾರ್, ಕನ್ನಡ ಪರ ಹೋರಾಟಗಾರ ಸಿಂ.ಲಿಂ.ನಾಗರಾಜು, ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಎಸ್.ಗೌಡ, ಜನಪರ ವೇದಿಕೆ ರಮೇಶ್‌ಗೌಡ, ಕರವೇ ತಾಲೂಕು ಅಧ್ಯಕ್ಷ ಸಾಗರ್, ಕಸಾಪ ತಾಲೂಕು ಅಧ್ಯಕ್ಷ ಎಂ.ಶಿವಮಾದು, ಮುಖಂಡರಾದ ಹನಿಯೂರು ಕಾಂತರಾಜು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಡಿ.ಕೆ.ಕಾಂತರಾಜು, ಬಿಜೆಪಿ ಮುಖಂಡ ಪದ್ಮನಾಭ ಇನ್ನೂ ಮುಂತಾದ ಗಣ್ಯರು ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.