ಕಾಂಗ್ರೆಸ್ ಬೆಂಬಲಿಸಲು ಡಿ.ಕೆ.ಸುರೇಶ್ ಮನವಿ
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಮಗ್ರ ನೀರಾವರಿ ಯೋಜನೆಗಳ ಜಾರಿ, ಸರ್ವಾಂಗೀಣ ಅಭಿವೃದ್ಧಿ ಮತ್ತು ದೇಶದ ಹಿತಕ್ಕಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಅಭ್ಯರ್ಥಿ ಡಿ.ಕೆ.ಸುರೇಶ್ ಮನವಿ ಮಾಡಿದ್ದಾರೆ.
ಮಾಗಡಿ ವಿಧಾನಸಭಾ ಸೇರಿದ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ವಿವಿಧೆಡೆ ಮತಯಾಚನೆ ನಡೆಸಿದ ಅವರು, ಸಿಕ್ಕ ಅಲ್ಪಾವಧಿ ಅಧಿಕಾರದಲ್ಲಿ ತಾವು ನೀಡಿರುವ ಕೊಡುಗೆ ಮತ್ತು ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಗಮನಿಸಿ ಮತ ನೀಡಬೇಕೆಂದರು. ಹಿಂದಿನ ಬಹುತೇಕ ಸಂಸದರು ಹುದ್ದೆಗಾಗಿ ಸೀಮಿತರಾಗಿದ್ದರೆ ಹೊರತು, ಜನಪರವಾಗಿ ಹೇಳಿಕೊಳ್ಳುವ ಕೆಲಸ ಮಾಡಿಲ್ಲ. ನನಗೆ ಈ ಬಾರಿ ಮತ್ತೆ ಅವಕಾಶ ಕೊಟ್ಟರೆ, ಆಡಳಿತವನ್ನು ಮನೆ ಬಾಗಿಲಿಗೆ ತರುವೆ ಎಂದು ಭರವಸೆ ನೀಡಿದರು.
ಬವಣೆ ನೀಗಿಸುವೆ: ರಾಮನಗರ ಜಿಲ್ಲಾದ್ಯಂತ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ. ನೆರೆಯಲ್ಲಿ ಹರಿಯುವ ಕಾವೇರಿ ಮತ್ತು ಹೇಮಾವತಿ ನದಿ ನೀರನ್ನು ಬಳಸಿಕೊಂಡು ಜಿಲ್ಲೆಯ ಎಲ್ಲ ಕೆರೆ, ಕಟ್ಟೆಗಳನ್ನು ತುಂಬಿಸಿ ಅಂತರ್ಜಲ ವೃದ್ಧಿಸುವ ಮೂಲಕ ಬವಣೆ ನೀಗಿಸಲಾಗುವುದು ಎಂದು ಸುರೇಶ್ ತಿಳಿಸಿದರು.
ರಾಜಕಾರಣ ಬೇಡ: ಕುಮಾರಸ್ವಾಮಿ ಅವರೇ ಅಲ್ಲಿಗೆ ಹೋಗಿದ್ದಾರೆ. ಅವರಿಲ್ಲದ ಮೇಲೆ ನಾವಿಲ್ಲಿ ಗುದ್ದಾಡುವುದಾದರೂ ಏನಿದೆ. ಪಕ್ಷಬೇಧ ಮರೆತು ತಮ್ಮನ್ನು ಬೆಂಬಲಿಸುವ ಮೂಲಕ ಜಿಲ್ಲೆಯ ಹಿತಕ್ಕಾಗಿ ಸಹಕರಿಸಿ ಎಂದು ಸುರೇಶ್ ಮನವಿ ಮಾಡಿದರು.
ಕೆಪಿಸಿಸಿ ಸದಸ್ಯ ಎ.ಮಂಜುನಾಥ್, ತಾ.ಪಂ. ಅಧ್ಯಕ್ಷೆ ಲಕ್ಷ್ಮಿ, ಜಿ.ಪಂ. ಸದಸ್ಯೆ ಶಾಂತಮ್ಮ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

