ಶೋಷಿತರ ಪ್ರಗತಿಗೆ ಜೆಡಿಎಸ್ ಗೆಲ್ಲಿಸಿ
ಚನ್ನಪಟ್ಟಣ: ದೇಶದ ಶೋಷಿತ ಸಮುದಾಯದ ಪರವಾಗಿ ಹೋರಾಡುವ ನಮ್ಮ ಪಕ್ಷಕ್ಕೆ ಮತದಾರರು ಬೆಂಬಲಿಸಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಭಾಕರರೆಡ್ಡಿ ಪರ ರೋಡ್‌ಶೋ ನಡೆಸಿ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನ್ಯಾಯ, ನೀತಿ, ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಹೋರಾಟ ನಡೆಸುತ್ತಿದ್ದು, ನ್ಯಾಯ ಯುತವಾದ ನಮ್ಮ ಹೋರಾಟಕ್ಕೆ ಜನತೆ ಮತ ಹಾಕುವ ಮೂಲಕ ಶಕ್ತಿ ತುಂಬ ಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಸದೃಢ: ಕೆಲ ಅನ್ಯ ಪಕ್ಷದ ಮುಖಂಡರು ಜೆಡಿಎಸ್ ಮುಗಿಸುತ್ತೇನೆಂದು ಬಡಬಡಿಸುತ್ತಿದ್ದಾರೆ. ಅದು ದೇವೇಗೌಡ ಬದುಕಿರುವವರೆಗೂ ಸಾಧ್ಯವಿಲ್ಲ. ನಮ್ಮ ಪಕ್ಷ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದಿಂದ ಸಂಘಟಿತವಾಗಿದ್ದು ಅನ್ಯ ಪಕ್ಷದ ಮುಖಂಡರಿಗೆ ಭ್ರಮ ನಿರಸನವಾಗಲಿದೆ ಎಂದರು.
ಇದು ಅಗ್ನಿ ಪರೀಕ್ಷೆ: ಈ ಬಾರಿಯ ಚುನಾವಣೆ ನಮ್ಮ ಪಕ್ಷದ ಪಾಲಿಗೆ ಅಗ್ನಿ ಪರೀಕ್ಷೆ ಇದ್ದಂತೆ ಕಾರ್ಯಕರ್ತರು ಶಿಸ್ತು ಬದ್ಧ ಹೋರಾಟದ ಮೂಲಕ ನಮ್ಮನ್ನು ಗೆಲ್ಲಿಸ ಬೇಕೆಂದು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಭಾಕರರೆಡ್ಡಿ ಮನವಿ ಮಾಡಿದರು.
ಜೆಡಿಎಸ್ ಭದ್ರಕೋಟೆ ಎನಿಸಿದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನಡೆಸಿದ ಹುನ್ನಾರದಿಂದಾಗಿ ಜೆಡಿಎಸ್ ಸೋಲಪ್ಪುವಂತಾಗಿದೆ. ಆದರೆ ಪಕ್ಷದ ಕಾರ್ಯಕರ್ತರು ಎದೆ ಗುಂದದೆ ಹೋರಾಟ ನಡೆಸುವ ಮೂಲಕ ನಮ್ಮ ಭದ್ರ ಕೋಟೆಯನ್ನು ಮತ್ತೆ ವಶ ಪಡಿಸಿಕೊಳ್ಳ ಬೇಕೆಂದು ಕರೆನೀಡಿದರು.
ಪಟ್ಟಣದ ಕೆಎಸ್‌ಐಸಿ ಮೈದಾನದಿಂದ ಶೇರ್ವಾ ಸರ್ಕಲ್ ವರೆಗೆ ದೇವೇಗೌಡರು ರೋಡ್ ಶೋ ನಡೆಸಿ ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ತಾಲೂಕು ಜೆಡಿಎಸ್ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸುವ ಮೂಲಕ ಗೌಡರಿಗೆ ಸಾಥ್ ನೀಡಿದರು.
ಮಳೆಯಿಂದ ಭಾಷಣ ಮೊಟಕು: ರೋಡ್ ಶೋ ಪೂರ್ಣ ಗೊಳಿಸಿದ ಬಳಿಕ ಮಾಜಿ ಪ್ರಧಾನಿ ದೇವೇಗೌಡರು ಕೊಲ್ಲಾಪುರದಮ್ಮನ ದೇವಾಲಯದ ರಸ್ತೆ ಬಳಿ ಸಾರ್ವಜನಿಕರನ್ನುದ್ದೇಶಿ ಮಾತನಾಡ ಬೇಕಿತ್ತಾದರೂ, ಮಳೆಯಿಂದಾಗಿ ದೇವೇಗೌಡರ ಭಾಷಣ ಮೊಟಕುಗೊಳಿಸಲಾಯಿತು.ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ದ್ಯಾನೀಶ್ ಆಲಿ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಲಿಂಗೇಶ್‌ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಜಿಪಂ ಸದಸ್ಯ ರಘುಕುಮಾರ್, ಬೋರ್‌ಲ್ ರಾಮಚಂದ್ರು, ಒಕ್ಕಲಿಗರ ಸಂಘದ ನಿರ್ದೇಶಕ ಜಯಮುತ್ತು ಮತ್ತಿತರರು ಉಪಸ್ಥಿತರಿದ್ದರು.
ಎಸ್‌ಡಿಪಿಐ ಬೆಂಬಲ
ಜೆಡಿಎಸ್‌ಗೆ ಬೆಂಬಲ ಘೋಷಿಸಿರುವ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ದೇವೇಗೌಡರ ರೋಡ್ ಶೋನಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಅಪಾರ ಸಂಖ್ಯೆಯ ಕಾರ್ಯಕರ್ತರು ಜೆಡಿಎಸ್ ರ್ಯಾಲಿಯಲ್ಲಿ ಭಾಗವಹಿಸಿ ಜಾತ್ಯಾತೀತ ಶಕ್ತಿಯನ್ನು ಗಟ್ಟಿ ಗೊಳಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ಜೆಡಿಎಸ್‌ಗೆ ಬೆಂಬಲ ಸೂಚಿಸಿರುವುದಾಗಿ ಎಸ್‌ಡಿಪಿಐ ಮುಖಂಡರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

