ಬಿಜ್ಜವಾರ ಗ್ರಾಮದಲ್ಲಿ ಅಕ್ರಮ ಮದ್ಯ ವಶ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಬಿಜ್ಜವಾರ ಗ್ರಾಮದ ಕೃಷ್ಣಮೂರ್ತಿ ಎಂಬುವರ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ವಿವಿಧ ಬ್ರಾಂಡಿನ ಮದ್ಯದ ಬಾಟಲ್ಗಳನ್ನು ತಹಸೀಲ್ದಾರ್ ಕೇಶವಮೂರ್ತಿ ವಶಪಡಿಸಿಕೊಂಡಿದ್ದಾರೆ. ಯಾರೂ ವಾಸವಿಲ್ಲದ ತೋಟದ ಮನೆಯ ಬಾತ್ ರೂಮಿನಲ್ಲಿ ಮದ್ಯದ ಬಾಟಲ್ಗಳನ್ನು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಉಪ ತಹಸೀಲ್ದಾರ್ ಅಜಿತ್ ರೈ, ಅಬಕಾರಿ ಇಲಾಖೆ ಅಧಿಕಾರಿಗಳಾದ ತ್ರಿನೇತ್ರ ದಾಳಿ ಸಂದರ್ಭದಲ್ಲಿ ಭಾಗವಹಿಸಿದ್ದರು. ಮುಂದಿನ ತನಿಖೆಗಾಗಿ ವಿಜಯಪುರ ಪೊಲೀಸ್ ಠಾಣೆಗೆ ತಹಸೀಲ್ದಾರ್ ಒಪ್ಪಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಗೆ ಛಲವಾದಿ ಬೆಂಬಲ
ಮಾಗಡಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಜೆಡಿಎಸ್ ಅಭ್ಯರ್ಥಿ ಆರ್. ಪ್ರಭಾಕರ್ ರೆಡ್ಡಿ ಅವರಿಗೆ ಛಲವಾದಿ ಮಹಾಸಭಾ ಬೆಂಬಲಿಸಿದೆ ಎಂದು ಜೆಡಿಎಸ್ ಮುಖಂಡ ಬೆಳ್ಳಿಯಪ್ಪ ತಿಳಿಸಿದ್ದಾರೆ. ಛಲವಾದಿ ಮಹಾಸಭಾದ ಸಂಸ್ಥಾಪಕ, ರಾಜ್ಯಾಧ್ಯಕ್ಷ ಐಎಎಸ್ ನಿವೃತ್ತ ಅಧಿಕಾರಿ ಕೆ. ಶಿವರಾಮು ರಾಜ್ಯದ ಛಲವಾದಿಗಳಿಗೆ ಕರೆ ನೀಡಿದ್ದಾರೆ ಎಂದು ತಿಳಿಸಿದರು. ಭೈರನಹಳ್ಳಿ ಗಂಗರಾಜು, ವಾಜರಹಳ್ಳಿ ಶ್ರೀನಿವಾಸ್, ಹನುಮಾಪುರ ಮರಿಸ್ವಾಮಿ, ಕೆಂಪಯ್ಯ, ಬ್ಯಾಲಕೆರೆ ವೆಂಕಟಗಿರಿಯಣ್ಣ, ಹೊಸಹಳ್ಳಿ ಸಿದ್ದರಾಜು ಇತರರು ಇದ್ದರು.
ಎಸ್.ಕರಿಯಪ್ಪ ಜೀವನ ಸಾಧನೆ ಕುರಿತು ವಿಚಾರಗೋಷ್ಠಿ
ಕನಕಪುರ: ಕನಕಪುರದ ರೂರಲ್ ಕಾಲೇಜು ಸ್ನಾತಕೋತ್ತರ ಕೇಂದ್ರದ ವತಿಯಿಂದ ದೇಶಭಕ್ತರ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಸೇನಾನಿ ಎಸ್.ಕರಿಯಪ್ಪ ಜೀವನ ಸಾಧನೆ ಕುರಿತು ವಿಚಾರಗೋಷ್ಠಿ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮವಿದ್ಯಾ ಪ್ರಚಾರಕ ಸಂಘದ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ ವಹಿಸಿದ್ದರು. ಉದ್ಘಾಟನೆಯನ್ನು ನೆರವೇರಿಸಿದ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಭವಾನಿಟ್ರಸ್ಟ್ ಧರ್ಮದರ್ಶಿಗಳಾದ ಲಕ್ಷ್ಮಣ್ ಮಾತನಾಡಿ, ಗಾಂಧೀಮಾರ್ಗದಲ್ಲಿ ಮುನ್ನಡೆದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು, ಆಜನ್ಮ ಬ್ರಹ್ಮಚಾರಿಗಳಾಗಿ ವಿದ್ಯಾದಾನಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟು ಗ್ರಾಮೀಣ ಪ್ರದೇಶದ ಲಕ್ಷಾಂತರ ಮಕ್ಕಳು ವಿದ್ಯಾವಂತರಾಗಲು ಕಾರಣರಾದ ದಿ.ಕರಿಯಪ್ಪನವರು ನಮ್ಮ ನಡುವೆ ಬಾಳಿ ಬದುಕಿದ ಸಂತ ಎಂದು ಹೇಳಿದರು. ವಿಚಾರ ಸಂಕಿರಣದ ಅಂಗವಾಗಿ ಕರಿಯಪ್ಪನವರೊಂದಿಗೆ ತಮ್ಮ ನೆನಪುಗಳನ್ನು ಕುರಿತು ಅರ್ಜುನಪ್ಪ, ಕರಿಯಪ್ಪ ಮತ್ತು ಚುನಾವಣೆಗಳು ಬಗ್ಗೆ ಡಾ. ಚಿಕ್ಕಚೆನ್ನಯ್ಯ, ಕರಿಯಪ್ಪನವರ ರಾಜಕೀಯ ಮೌಲ್ಯಗಳು ಹಾಗೂ ಶಿಸ್ತು ವಿಚಾರವಾಗಿ ಡಾ.ಹೆಚ್.ಜಿ. ಪಾರ್ಥಸಾರಥಿ ವಿಚಾರಗಳನ್ನು ಮಂಡಿಸಿದರು. ಮುಖ್ಯಅತಿಥಿಗಳಾಗಿ ಆರ್ಇಎಸ್ ಕಾರ್ಯದರ್ಶಿ ಸಿ.ರಮೇಶ್, ಪ್ರಾಂಶುಪಾಲ ಡಾ.ಶಿವಬಸವೇಗೌಡ, ಉಪಪ್ರಾಂಶುಪಾಲ ಮೇಜರ್ ಡಾ.ಮುನಿರಾಜಪ್ಪ,ಡಾ.ಎಸ್.ಹೆಚ್.ಭುವನೇಶ್ವರ್, ಡಾ.ಟಿ.ಎಸ್.ವೆಂಕಟೇಶ್, ಡಾ.ಗೋವಿಂದಪ್ಪ ಪಾಲ್ಗೊಂಡಿದ್ದರು. ಕು.ರೇಣುಕಾ ಟಿ.ವಿ. ಸ್ವಾಗತಿಸಿದರು. ಸಂತೋಷ್ಕುಮಾರ್ ನಿರೂಪಿಸಿದರು. ಗೀತಾಂಜಲಿ ವಂದಿಸಿದರು.
ಅಂಬೇಡ್ಕರ್ ಚಿಂತನೆ ಪ್ರಚಾರಕ್ಕೆ ನಾಳೆ ಬೈಕ್ ರ್ಯಾಲಿ
ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯಲ್ಲಿ ಏ.14 ರಂದು ಅಂಬೇಡ್ಕರ್ ಜಯಂತಿ ಅಂಗವಾಗಿ ನಾನಾ ಗ್ರಾಮಗಳ ಮೂಲಕ ಅಂಬೇಡ್ಕರ್ ವಿಚಾರ ಧಾರೆಗಳನ್ನು ಪ್ರಚಾರ ಪಡಿಸಲು ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಐ.ಆರ್. ನಾರಾಯಣಸ್ವಾಮಿ ತಿಳಿಸಿದ್ದಾರೆ. ದಲಿತ ಸಂಘಟನೆಯ ಮುಖಂಡರು ನಂದಗುಡಿಯಿಂದ ಬೈಕ್ ರ್ಯಾಲಿಯನ್ನು ಪ್ರಾರಂಭಿಸಿ ಸುತ್ತಮುತ್ತಲ್ಲಿನ ಗ್ರಾಮಗಳಲ್ಲಿರು ಶಾಖೆಗಳ ಪದಾಧಿಕಾರಿಗಳ ಜೋತೆ ಗೂಡಿ ಅಂಬೇಡ್ಕರ್ ಅವರ ಚಿಂತನೆ, ವಿಚಾರಧಾರೆಗಳನ್ನು ಜನ ಸಾಮಾನ್ಯರಲ್ಲಿ ಹಾಗೂ ದಲಿತರಲ್ಲಿ ಮೂಡಿಸಲು ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಹೆಚ್ಚಿನ ಜನರು ಭಾಗವಹಿಸಿ ರ್ಯಾಲಿಯನ್ನು ಯಶಸ್ವಿ ಗೊಳಿಸಿ ಎಂದು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

