ಕ್ಷೇತ್ರದ ಮತದಾರರಲ್ಲದವರು ಜಾಗ ಬಿಡಿ
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. ಪ್ರಜಾಪ್ರಭುತ್ವಕ್ಕೆ ಬದ್ಧವಾಗಿ ಮತದಾರರು ಸಹಜ ವಾತಾವರಣದಲ್ಲಿ ಮತದಾನ ಮಾಡುವುದಕ್ಕೆ ಅನುವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಹೇಳಿದರು.
ಏ.15ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ನಂತರ ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದು. ರಾಜಕೀಯ ಪಕ್ಷಗಳ ಪರವಾಗಿ ಕ್ಷೇತ್ರಕ್ಕೆ ಪ್ರಚಾರ ಮಾಡಲು ಬಂದಿರುವ ಹೊರಗಿನ ಕಾರ್ಯಕರ್ತರು, ರಾಜಕೀಯ ಪಕ್ಷಗಳ ಪರವಾಗಿ ಚಟುವಟಿಕೆಯಲ್ಲಿರುವ ಕ್ಷೇತ್ರದ ಮತದಾರರಲ್ಲದವರು ತಕ್ಷಣ ಕ್ಷೇತ್ರ ಬಿಟ್ಟು ಹೋಗಬೇಕೆಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2 ವಾಹನಕ್ಕೆ ಅವಕಾಶ: ಬಹಿರಂಗ ಪ್ರಚಾರ ಮುಕ್ತಾಯದ ತರುವಾಯ ಅಭ್ಯರ್ಥಿ ಹಾಗೂ ಅನುಮತಿ ಪಡೆದ ಏಜೆಂಟರ ತಲಾ 1 ವಾಹನಗಳಿಗೆ ಮಾತ್ರವೇ ಅವಕಾಶವಿದೆ. ಪ್ರಚಾರಕ್ಕೆ ಬಳಸಲ್ಪಡುತ್ತಿರುವ ಇತರೆ ವಾಹನಗಳನ್ನು ವಾಪಸ್ ಕಳುಹಿಸುವುದು ಕಡ್ಡಾಯ. ಒಂದೊಮ್ಮೆ ಅಂತಹವು ಸಿಕ್ಕಿಬಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಮತದಾನ ಕೇಂದ್ರದ 200 ಮೀ. ಒಳಗೆ ಪ್ರಚಾರ ಮಾಡುವಂತಿಲ್ಲ. 200 ಮೀ. ನಂತರ ಪಕ್ಷದ ಒಂದು 12 ಚದರ ಅಡಿಯ ಬ್ಯಾನರ್ ಹಾಕಿಕೊಳ್ಳಲು ಅವಕಾಶವಿದೆ. ಮತದಾನ ಏ.17 ರಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ನಡೆಯಲಿದೆ. ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು ಸಹಿತ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಮತದಾನ ಹೆಚ್ಚಳಕ್ಕೆ ಕ್ರಮ: 2009 ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇಕಡ 69.8 ರಷ್ಟು ಮತದಾನವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಅದನ್ನು ಕನಿಷ್ಟ ಶೇಕಡ 80 ರಷ್ಟಕ್ಕೆ ಏರಿಸಲು ಜಿಲ್ಲೆಯಾದ್ಯಂತ ಸ್ವೀಪ್ ಕಾರ್ಯಕ್ರಮಗಳನ್ನು ಜಿ.ಪಂ. ಸಿಇಒ ನೇತೃತ್ವದಲ್ಲಿ ಅತ್ಯುತ್ತಮವಾಗಿ ಆಯೋಜಿಸಲಾಗಿದ್ದು, ಅದು ಫಲಪ್ರದವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು.
ವೆಬ್ಕ್ಯಾಸ್ಟಿಂಗ್ ಹೆಗ್ಗಳಿಕೆ: ಮಾದರಿ ಮತದಾನ ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮತದಾರನಿಗೆ ಮಾಹಿತಿ ನೀಡಲು ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಮತದಾನ ಕೇಂದ್ರಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ ನಡೆಯುವ ಚುನಾವಣೆ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ದೇಶದ ಯಾವುದೇ ಭಾಗದಲ್ಲಿ ಕುಳಿತು ವೀಕ್ಷಣೆ ಮಾಡಬಹುದು. ಮತದಾರರು ತಮ್ಮ ಇಮೇಲ್ ಐಡಿ ಒದಗಿಸಿದ್ದಲ್ಲಿ, ಛಾಯಾಚಿತ್ರ ತೆಗೆದು ಅವರಿಗೆ ಕಳುಹಿಸಿಕೊಡಲಾಗುವುದು ಎಂದರು.
ಇಡೀ ರಾಜ್ಯದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆಯನ್ನು ಹೊಂದಿರುವ ಕ್ಷೇತ್ರವೆನ್ನುವ ಹಿರಿಮೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಪಾತ್ರವಾಗಿದೆ. ರಾಮನಗರ ಜಿಲ್ಲೆಯ 1111 ಮತಗಟ್ಟೆಗಳಲ್ಲಿ ಆಯ್ದ 227 ಮತಗಟ್ಟೆಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.
ರು.1.5 ಕೋಟಿ ವಶ
ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಕ್ಷೇತ್ರಾದ್ಯಂತ ಇದುವರೆಗೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರು.1.5 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ರು.16 ಲಕ್ಷ ಮೌಲ್ಯದ ಸೀರೆ, 968 ಲೀ. ಮದ್ಯ ಜಪ್ತಿಮಾಡಲಾಗಿದೆ. 35 ವಾಹನಗಳನ್ನು ವಶಪಡಿಸಿಕೊಂಡಿದ್ದು, 137 ಪ್ರಕರಣಗಳನ್ನು ದಾಖಲಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 9 ಪ್ರಕರಣ ದಾಖಲಾಗಿವೆ ಎಂದು ವಿಶ್ವನಾಥಥ್ವಿವರಿಸಿದರು.
399 ಅತಿಸೂಕ್ಷ್ಮ
ಕ್ಷೇತ್ರದಲ್ಲಿರುವ 2497 ಮತಗಟ್ಟೆಗಳ ಪೈಕಿ 399 ಮತಗಟ್ಟೆಗಳನ್ನು ಅತ್ಯಂತ ಸೂಕ್ಷ್ಮ ಎಂದು ಗುರ್ತಿಸಲಾಗಿದೆ. 656 ಸೂಕ್ಷ್ಮ ಮತ್ತು 1405 ಸಾಮಾನ್ಯ ಮತಗಟ್ಟೆಗಳಾಗಿವೆ. 1135666 ಪುರುಷರು, 1054232ಮಹಿಳೆಯರು ಹಾಗೂ 261 ಇತರರು ಸೇರಿದಂತೆ ಒಟ್ಟಾರೆ 21,90,159 ಮತದಾರರಿದ್ದಾರೆ.
11 ಸಾವಿರ ಸಿಬ್ಬಂದಿ
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಿಗೆ ಅಧಿಕಾರಿಗಳು ಸಹಿತ 11 ಸಾವಿರ ಸಿಬ್ಬಂದಿ ನೇಮಿಸಲಾಗಿದೆ. ರಾಮನಗರ ಜಿಲ್ಲೆಯ ವ್ಯಾಪ್ತಿ 5500 ಸಿಬ್ಬಂದಿ ಇರುತ್ತಾರೆ. ಇದಲ್ಲದೆ ಅಗತ್ಯ ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ವಿಶ್ವನಾಥ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

