ಬೆಂಗಳೂರು ಗ್ರಾಮಾಂತರ

ಮಾಗಡಿ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ'

Published On :

ಮಾಗಡಿ: ಮಾಗಡಿ ವಿಧಾನ ಸಭಾ ವ್ಯಾಪ್ತಿಯಲ್ಲಿ ನಡೆದ ಲೋಕಸಭಾ ಚುನಾವಣೆ ಮತದಾನ  ಶಾಂತಿಯುತವಾಗಿ ನಡೆದಿದೆ ಎಂದು ಚುನಾವಣಾಧಿಕಾರಿ ಶೈಲಜಾ ತಿಳಿಸಿದರು.
ಕ್ಷೇತ್ರದಲ್ಲಿ ಒಟ್ಟು 294 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಕೆಲ ಮತಗಟ್ಟೆಗಳಲ್ಲಿ ಸಣ್ಣಪುಟ್ಟ ಲೋಪ ದೋಷಗಳು ಬಿಟ್ಟರೆ ಯಾವುದೇ ಮತಯಂತ್ರ ಕೈಕೊಟ್ಟ ವರದಿಯಾಗಿಲ್ಲ. ತಾಲೂಕಿನ ಹುಲೀಕಟ್ಟೆ ಮತಗಟ್ಟೆ ಕೇಂದ್ರದಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ಪತ್ನಿ ರಾಧ ಬಾಲಕೃಷ್ಣ ಹಾಗೂ ಬಾಲಕೃಷ್ಣ ತಾಯಿ ಶಾರದಮ್ಮ ಬೆಳಿಗ್ಗೆಯೇ ಮತದಾನ ಮಾಡಿದರು. ಬಿಡದಿಯಲ್ಲಿ ಕೆಪಿಸಿಸಿ ಸದಸ್ಯ ಎ.ಮಂಜು, ಹುಚ್ಚಹನುಮೇಗೌಡನಪಾಳ್ಯದಲ್ಲಿ ಕಾಂಗ್ರೆಸ್ ಮುಖಂಡ ಎಚ್.ಎಂ. ಕೃಷ್ಣಮೂರ್ತಿ, ಪುರಸಭೆಯ 16ನೇ ವಾರ್ಡ್ ನಲ್ಲಿ ಪುರಸಭಾಧ್ಯಕ್ಷೆ ಫಹೀಂ ಉನ್ನಿಸಾ, ಕಲ್ಕೆರೆ ಮತಗಟ್ಟೆಯಲ್ಲಿ ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಧನಂಜಯ, ಬಾಚೇನಹಟ್ಟಿ ಮತಗಟ್ಟೆಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಮುದ್ದುರಾಜ ಯಾದವ್ ಮತದಾನ ಮಾಡಿದರು.
ಬಿರುಸಿನ ಮತದಾನ: ಬೆಳಿಗ್ಗೆ ಮೋಡಕವಿದ ವಾತಾವರಣವಿದ್ದು,ಮತದಾರರ ಸಂಖ್ಯೆ ವಿರಳವಾಗಿರುತ್ತದೆ ಎಂಬ ಕಾರಣಕ್ಕೆ ಬೆಳಿಗ್ಗೆಯಿಂದಲೇ ಮತದಾರರು ಬಹಳ ಬಿರುಸಿನಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಮಧ್ಯಾಹ್ನದ ವೇಳೆಗೆ ಶೇ.50 ರಷ್ಟು ಮತದಾನ ನಡೆದಿತ್ತು. ಮಧ್ಯಾಹ್ನ ಸ್ವಲ್ಪಮಟ್ಟಿಗೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ ಮತದಾರರು ಮತಗಟ್ಟೆಗೆ ಬರುವ ಸಂಖ್ಯೆ ಕಡಿಮೆಯಾಗಿತ್ತು. ಸಂಜೆ 4 ಗಂಟೆ ನಂತರ ಮತದಾರರು ಮತಗಟ್ಟೆ ಕೇಂದ್ರಗಳಿಗೆ ಜಮಾಯಿಸಿದ್ದರು. ಹೀಗಾಗಿ ಬಹುತೇಕ ಮತಗಟ್ಟೆ ಕೇಂದ್ರದ ಮುಂದೆ  ತಮ್ಮ  ಸರದಿಗಾಗಿ ಮತದಾರರು ಸಾಲು ಗಟ್ಟಿ ನಿಂತು ಮತಚಲಾಯಿಸಿದರು. ಉತ್ಸಾಹದಿಂದಲೇ ಮತಚಲಾಯಿಸಿದರೂ ತಮ್ಮ ಮತದಾನದ ಗುಟ್ಟನ್ನು ಯಾರಲ್ಲೂ ಬಿಡುತ್ತಿರಲಿಲ್ಲ. ಕೆಲವೆಡೆ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕುದೂರು, ತಿಪ್ಪಸಂದ್ರ, ಕಸಬಾ,
ಮಾಡಬಾಳ್ ಹೋಬಳಿಗಳಲ್ಲಿ ವ್ಯಾಪ್ತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆದಿದೆ. ಪಟ್ಟಣದ ವ್ಯಾಪ್ತಿಯಲ್ಲಿಯೂ ಸಹ ನಿರೀಕ್ಷಿತ ಮತದಾನ ನಡೆದಿದೆ ಎಂದು ಚುನಾವಣಾಧಿಕಾರಿ ಶೈಲಜಾ ವಿವರಿಸಿದರು.   ---
ಮತಗಟ್ಟೆ ಪ್ರದೇಶಕ್ಕೆ ವಾಹನಗಳಲ್ಲಿ ಪ್ರವೇಶ ಆಕ್ಷೇಪ
ಸೂಲಿಬೆಲೆ: ಮತಗಟ್ಟೆ ಪ್ರದೇಶಕ್ಕೆ ವಾಹನಗಳಲ್ಲಿ ಮತದಾರರನ್ನು ಕರೆದುಕೊಂಡು ಬರುವ ವಿಚಾರದಲ್ಲಿ ಎರಡು ಗುಂಪುಗಳ ಮದ್ಯ ಮಾತಿನ ಚಕಮುಕಿ ನಡೆದು ನಂತರ ಘರ್ಷಣೆಗೆ ತಿರುಗಿ  ಮತಗಟ್ಟೆ ಬಳಿಯೇ ಹೊಡೆದಾಟಕ್ಕಿಳಿದ ಘಟನೆ ಸೂಲಿಬೆಲೆಯಲ್ಲಿ ನಡೆಯಿತು.
ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದರು.
 ಸೂಲಿಬೆಲೆಯಲ್ಲಿ 8 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿತ್ತು. ಸರ್ಕಾರಿ ಕನ್ನಡ ಶಾಲೆ ಆವರಣದಲ್ಲಿ ನಾಲ್ಕು ಹಾಗೂ ವಿವೇಕಾನಂದ ಪ್ರೌಢಶಾಲೆಯಲ್ಲಿ ನಾಲ್ಕು ಮತಗಳಿದ್ದವು. ಮತದಾನ ಪ್ರಾರಂಭವಾದ ಕ್ಷಣದಿಂದಲೂ ಮತದಾರರು ತಮ್ಮ ಕುಟುಂಬಸ್ಥರನ್ನು ವಾಹನಗಳಲ್ಲಿ ಮತಗಟ್ಟೆಯ ಪ್ರದೇಶದೊಳೆಗೆ ನೇರವಾಗಿ ಕರೆದುಕೊಂಡು ಬರುತ್ತಿದ್ದರು. ಮಧ್ಯಾಹ್ನ ಮತಗಟ್ಟೆ ಸಂಖ್ಯೆ 54ರಲ್ಲಿ ಮತದಾನ ಮಾಡಲು ಕೆಲವರು ವಾಹನದಲ್ಲಿ ಬಂದಿದ್ದಕ್ಕೆ ಚುನಾವಣಾಧಿಕಾರಿಗಳ ಬಳಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮುಕಿ ವಾಗ್ವಾದಕ್ಕೆ ತಿರುಗಿ ನೋಡು ನೋಡುತ್ತಿದಂತೆ ಹೊಡೆದಾಟಕ್ಕೆ ಇಳಿದರು. ಮತದಾನ ನಡೆಯವ ತುಸು ದೂರದಲ್ಲಿಯೇ ಹೊಡೆದಾಟ ನಡೆಯುತ್ತಿದ್ದುದನ್ನು ಅರಿತ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಕೈ ಕೈ ಮಿಲಾಯಿಸಿದ್ದ ಗುಂಪಿನವರಿಗೆ ಲಾಠಿ ರುಚಿ ತೋರಿಸಿದರು.
ಎದ್ದು ಬಿದ್ದು ಓಡಿ ಮತಗಟ್ಟೆಯ ಹೊರ ಭಾಗದಲ್ಲಿ ಮತ್ತೆ ಮಾತಿಗೆ ಮಾತು ಬೆಳೆಸಿಕೊಂಡು ಕೈ ಕೈ ಮಿಲಾಯಿಸಲು ಶುರುಮಾಡಿದರು. ಇದರಿಂದ ಮತ್ತಷ್ಟು ಕೆರಳಿದ ಪೊಲೀಸರು ಲಘ ಲಾಠಿ  ಪ್ರಹಾರ ನಡೆಸಿ ಗುಂಪು ಗೂಡಿದ ಜನರನ್ನು ಚದುರಿಸಿದರು.
ಇದಕ್ಕೂ ಮೊದಲು ಮತಗಟ್ಟೆಯ ಮುಂಭಾಗದ ಗೇಟ್ ಬಳಿ ಎರಡು ಪಕ್ಷದ ಕಾರ್ಯಕರ್ತರು ಜಮಾಯಿಸಿ ಮತದಾನಕ್ಕೆ ಹೋಗುವ ಮತದಾರರನ್ನು ತಮ್ಮ ಪಕ್ಷದ ಪರವಾಗಿ ಮತ ಚಲಾಯಿಸಿ ಎಂದು ಕೇಳುತ್ತಿದ್ದು, ಹಾಗೂ ವಾಹನಗಳು ಪದೇ ಪದೇ ಮತದಾರರನ್ನು ಒಳಗೆ ಕರೆದುಕೊಂಡು ಹೋಗುತ್ತಿದ್ದು ಮತ್ತೊಂದು ಗುಂಪಿಗೆ ಸಹಿಸಲಾಗದೇ ಇದಿದ್ದು ಘಟನೆಗೆ ಮೂಲವಾಯಿತು. ಎರಡು ಗುಂಪಿನ  ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ರಮೇಶ್ ಬಾನೋತ್ ಭೇಟಿ ನೀಡಿದ್ದರು.ಇದಾದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.