ಬೆಂಗಳೂರು ಗ್ರಾಮಾಂತರ

ಹಣ ನೀಡದ ಮುಖಂಡನಿಗೆ ಥಳಿತ

Published On :

ದೊಡ್ಡಬಳ್ಳಾಪುರ: ಪಕ್ಷವೊಂದರ ವತಿಯಿಂದ ಮತದಾರರಿಗೆ ಹಂಚಲು ನೀಡದ ಹಣವನ್ನು ಹಂಚಿಲ್ಲ ಎಂಬ ಕಾರಣಕ್ಕೆ ಮುಖಂಡನೊಬ್ಬನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ತಾಲೂಕಿನ ಗೊಲ್ಲಹಳ್ಳಿಯಲ್ಲಿ ನಡೆದಿದೆ. ಕಾಂಗ್ರೆಸ್ ಪಕ್ಷದ ಮುಖಂಡ 1 ದಿನ ಮುಂಚಿತವಾಗಿಯೇ ಹಣ ಹಂಚಲು ತಂದಿದ್ದರೂ ಅದನ್ನು ಸೂಕ್ತ ಸಮಯಕ್ಕೆ ಮತದಾರರಿಗೆ ತಲುಪಿಸಿಲ್ಲ. ಥಳಿತಕ್ಕೊಳಗಾದ ನಂತರ ಹಣ ಹಂಚಿಕೆ ನಡೆದಿದೆ ಎಂದು ತಿಳಿದುಬಂದಿದೆ.

ಗ್ರಾ.ಪಂ ಸದಸ್ಯನ ಆಟಾಟೋಪ
ದೊಡ್ಡಬಳ್ಳಾಪುರ: ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ನೇತೃತ್ವದಲ್ಲಿ ಮನೆಮನೆಗೆ ತೆರಳಿ ಹಣ ಹಂಚುತ್ತಿದ್ದ ವೇಳೆ ಈ ದೃಶ್ಯಗಳನ್ನು ಚಿತ್ರೀಕರಿಸಲು ಮುಂದಾದ ಮಾಧ್ಯಮ ಪ್ರತಿನಿಧಿ ವಿರುದ್ಧ ರೋಷಾವೇಷ ತೋರಿರುವ ಘಟನೆ ನಡೆದಿದೆ. ಬಹಿರಂಗವಾಗಿಯೇ ಮನೆಮನೆಗಳಿಗೆ ತೆರಳಿ ಹಣ ಹಂಚುತ್ತಿದ್ದ ಸುದ್ದಿ ತಿಳಿದು ಪತ್ರಕರ್ತರೊಬ್ಬರು ಫೋಟೋ ಕ್ಲಿಕ್ಕಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಮಾಧ್ಯಮ ಪ್ರತಿನಿಧಿಗಳು ಅಲ್ಲಿಗೆ ಬರುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

ಬೆಳ್ಳಿ ನಾಣ್ಯ ಹಂಚಿಕೆ: ವಾಗ್ವಾದ
ದೊಡ್ಡಬಳ್ಳಾಪುರ: ರಾಜಕೀಯ ಪಕ್ಷವೊಂದರ ಮುಖಂಡರು ಮತದಾರರಿಗೆ ಬೆಳ್ಳಿನಾಣ್ಯಗಳನ್ನು ವಿತರಿಸುತ್ತಿದ್ದಾರೆ ಎಂಬ ಮಾಹಿತಿ ಇತರ ಪಕ್ಷದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದ ಘಟನೆ ತಾಲೂಕಿನ ಮಧುರೆ ಹೋಬಳಿಯಲ್ಲಿ ನಡೆದಿದೆ. ಹೋಬಳಿಯ ಮತಗಟ್ಟೆಯೊಂದರ ಬಳಿ 2 ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ನಂತರ ಸ್ಥಳೀಯ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಮುಖಂಡರ ಮಧ್ಯ ಪ್ರವೇಶದೊಂದಿಗೆ ಪರಿಸ್ಥಿತಿ ತಿಳಿಯಾಗಿದೆ.

ಮತದಾನದಿಂದ ದೂರ
ದೊಡ್ಡಬಳ್ಳಾಪುರ: ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತರು ಚುನಾವಣಾ ಪ್ರಕ್ರಿಯೆಯಲ್ಲಿ ಪಕ್ಷ ತಮ್ಮನ್ನು ಕಡೆಗಣಿಸಿದೆ ಎಂದು ಆರೋಪಿಸಿ ಮತದಾನದಿಂದ ದೂರ ಉಳಿದಿರುವ ಘಟನೆ ತಾಲೂಕಿನ ಮಾಚಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪಕ್ಷವೊಂದರ ನಿಷ್ಠ ಕಾರ್ಯಕರ್ತರಾಗಿರುವ ಗ್ರಾಮದ ಹಲವು ಮಂದಿ ಆ ಪಕ್ಷದ ಧುರೀಣರಿಂದ ಯಾವುದೇ ಪ್ರಾತಿನಿಧ್ಯ ಸಿಗದಿರುವುದರಿಂದ ಬೇಸತ್ತಿದ್ದಾರೆ. ಅಲ್ಲದೆ,ಚುನಾವಣಾ ವಿಚಾರದಲ್ಲಿ ವಿಶ್ವಾಸಕ್ಕೂ ತೆಗೆದುಕೊಳ್ಳದೆ ಕಡೆಗಣಿಸಿದ್ದಾರೆ. ಪಕ್ಷದ ನಿಷ್ಠೆ ಬದಲಿಸಿ ಮತ್ತೊಂದು ಪಕ್ಷದ ಅಭ್ಯರ್ಥಿಗೆ ಮತ ನೀಡಲು ನಾವು ತಯಾರಿಲ್ಲ. ಮತದಾನದಿಂದ ದೂರ ಉಳಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಮತ ಚಲಾಯಿಸಿದ ಅಭ್ಯರ್ಥಿಗಳು
ಆನೇಕಲ್ಲು: ಗುರುವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿ ಸಿ. ತೋಪಯ್ಯರವರು ಗಡಿ ಸೋಲೂರಿನಲ್ಲಿ ಮತ ಚಲಾಯಿಸಿದರು. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ ಪತ್ನಿ ಸುಪ್ರಿಯಾ ಜೊತೆ ಬೊಮ್ಮಸಂದ್ರದಲ್ಲಿ ಮತ ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ಪ್ರಭಾಕರರೆಡ್ಡಿ  ತಮ್ಮ ಪತ್ನಿ ಜೊತೆ ಬೆಂಗಳೂರು ದಕ್ಷಿಣ ಮೈಲಸಂದ್ರದಲ್ಲಿ ಮತ ಚಲಾಯಿಸಿದರು. ಶಾಸಕ ಬಿ. ಶಿವಣ್ಣ ತಮ್ಮ ಪತ್ನಿಯೊಂದಿಗೆ ಸೂರ್ಯನಗರ ಬಳಿಯ ಇಗ್ಗಲೂರಿನಲ್ಲಿ, ವಿಧಾನ ಪರಿಷತ್ ಸದಸ್ಯ ಬಿ.ಟಿ. ದಯಾನಂದ ಕುಟುಂಬ ಸದಸ್ಯರ ಜೊತೆ ಬೊಮ್ಮಸಂದ್ರದಲ್ಲಿ ಮತ ಚಲಾಯಿಸಿದರು. ಮಾಜಿ ಸಚಿವ ಎ. ನಾರಾಯಣಸ್ವಾಮಿ ತಮ್ಮ ಪತ್ನಿ ವಿಜಯ ಸ್ವಾಮಿಯವರೊಂದಿಗೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಚಲಾಯಿಸಿದರು. ಪುರಸಭಾ ಅಧ್ಯಕ್ಷ ಭದ್ರರೆಡ್ಡಿ ಹಾಗೂ ಉಪಾಧ್ಯಕ್ಷ ಮೋಹನ್ ಅವರು ಆನೇಕಲ್ ಪಟ್ಟಣದಲ್ಲಿ ಮತ ಚಲಾಯಿಸಿದರು.

ಕೋದಂಡರಾಮಬ್ರಹ್ಮರಥೋತ್ಸವ
ಬೆಂಗಳೂರು: ನೂರಾರು ವರ್ಷ ಇತಿಹಾಸ ಹೊಂದಿರುವ ಹುಳಿಮಾವಿನ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ಏ.20ಕ್ಕೆ ನಡೆಯಲಿದೆ. ರಥೋತ್ಸವದ ಮೇಲೆ ದೇವಾಲಯದ ಸಮಿತಿ ಸದಸ್ಯ ಹಾಗೂ ನಗರಸಭೆ ಮಾಜಿ ಸದಸ್ಯ ಲಕ್ಷ್ಮೀನಾರಾಯಣ್ ಪುಷ್ಪವೃಷ್ಟಿ ಮಾಡುತ್ತಿದ್ದಂತೆ ಚಾಲನೆ ದೊರೆಯಲಿದೆ. ಲಕ್ಷಾಂತರ ಭಕ್ತಾದಿಗಳ ಜಯಘೋಷದೊಂದಿಗೆ ರಥೋತ್ಸವ ಸಾಗಲಿದ್ದು, ಜಾನಪದ ಕಲೆಗಳು ಮೇಳೈಸಲಿವೆ. ಇದೇ ವೇಳೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರೆಗೆ ಮೆರಗು ನೀಡಲಿವೆ. ಅಂದು ರಾತ್ರಿ 48 ಮುತ್ತಿನ ಪಲ್ಲಕ್ಕಿ ಉತ್ಸವ, ಸಿಡಿ ಉತ್ಸವ, ಪೌರಾಣಿಕ ನಾಟಕ, ಯಕ್ಷಗಾನ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. 1800 ವರ್ಷಗಳ ಇತಿಹಾಸವಿರುವ ಮುತ್ತಿನ ಪಲ್ಲಕ್ಕಿ ಹಾಗೂ ರಥೋತ್ಸವ ನೋಡಲು ತಮಿಳುನಾಡು, ಕೇರಳ, ಆಂಧ್ರಪ್ರದೇಶದಿಂದಲೂ ಭಕ್ತಾದಿಗಳು ಆಗಮಿಸಲಿದ್ದಾರೆ. ಸಾರಕ್ಕಿ ಪ್ರಾಂತ್ಯದ ಮಹಾರಾಜ ಆಮ್ರ ಸೀಮೆ ಆಳುತ್ತಿದ್ದ. ಹುಳಿಮಾವಿಗೆ ಮೊದಲಿದ್ದ ಹೆಸರು ಆಮ್ರ. ಆಗ ಜನತೆಯ ಕ್ಷೇಮಕ್ಕಾಗಿ ಕೋದಂಡರಾಮಸ್ವಾಮಿ ದೇವಾಲಯ ನಿರ್ಮಿಸಿ ಪೂಜೆ ಸಲ್ಲಿಸಿದ. ಅಂದಿನಿಂದ ರಥೋತ್ಸವ ನಡೆದುಕೊಂಡು ಬರುತ್ತಿದೆ ಎಂಬ ಪ್ರತೀತಿ ಇದೆ.  

ಬಚ್ಚೇಗೌಡ ಭೇಟಿ
ದೇವನಹಳ್ಳಿ: ಚಿಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮತಗಟ್ಟೆ ಬಳಿ ಆಗಮಿಸಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.  ಈ ಸಂದರ್ಭದಲ್ಲಿ ಬಚ್ಚೇಗೌಡ ಪತ್ರಕರ್ತರೊಂದಿಗೆ ಮಾತನಾಡಿ ಹೊಸಕೋಟೆಯ ತಮ್ಮೇಗೌಡ ಬಡಾವಣೆಯ ಮತಗಟ್ಟೆಯಲ್ಲಿ  ಮತ ಚಲಾಯಿಸಿದೆವು, ಯಲಹಂಕ, ದೊಡ್ಡಬಳ್ಳಾಪುರ ತಾಲೂಕುಗಳಿಗೆ ಭೇಟಿ ನೀಡಿದ್ದು ಇನ್ನು ಮುಂದೆ ವಿಜಯಪುರ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಗೌರಿಬಿದನೂರಿಗೆ ಭೇಟಿ ನೀಡುವುದಾಗಿ ತಿಳಿಸಿದರಲ್ಲದೆ ಎಲ್ಲ ತಾಲೂಕುಗಳಲ್ಲೂ ಬಿಜೆಪಿ ಪರವಾಗಿ ಮತದಾರರು ಒಲವು ತೋರಿಸಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.