ಸಿಇಟಿ ಕೇಂದ್ರವಿಲ್ಲದ ಬೆಂ.ಗ್ರಾ.ಜಿಲ್ಲೆ
-ಕೆ.ಆರ್.ರವಿಕಿರಣ್
ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ, ಏ.20
ರಾಜ್ಯದಲ್ಲಿ ಜಿಲ್ಲಾ ಕೇಂದ್ರವನ್ನು ವ್ಯಾಪ್ತಿ ಪ್ರದೇಶದ ಹೊರಗೆ ಹೊಂದಿರುವ ನತದೃಷ್ಟ ಜಿಲ್ಲೆ ಎನಿಸಿರುವ ಬೆಂಗಳೂರು ಗ್ರಾಮಾಂತರ ಸಿಇಟಿ ಪರೀಕ್ಷಾ ಕೇಂದ್ರವೂ ಇಲ್ಲದ ರಾಜ್ಯದ ಏಕೈಕ ಜಿಲ್ಲೆಯಾಗಿರುವುದು ದುರಂತ. 30 ಜಿಲ್ಲೆಗಳಲ್ಲಿ ಒಟ್ಟು 52 ಸಿಇಟಿ ಪರೀಕ್ಷಾ ಕೇಂದ್ರಗಳಿವೆ. ಕೆಲ ಜಿಲ್ಲೆಗಳಲ್ಲಿ 2ಕ್ಕಿಂತ ಹೆಚ್ಚು ಪರೀಕ್ಷಾ ಕೇಂದ್ರಗಳಿವೆ. ಆದರೆ ಬೆಂ.ಗ್ರಾಮಾಂತರದಲ್ಲಿ ಮಾತ್ರ ಕೇಂದ್ರವೇ ಇಲ್ಲ.
ಎಲ್ಲ ಹಂತಗಳಲ್ಲೂ ಜಿಲ್ಲೆಯನ್ನು ನಿರಂತರವಾಗಿ ನಿರ್ಲಕ್ಷಿಸುತ್ತಾ ಬರುತ್ತಿರುವ ಸರ್ಕಾರಗಳು, ಶೈಕ್ಷಣಿಕ ಅವಕಾಶಗಳನ್ನು ವಂಚಿಸಿವೆ. ಪ್ರತಿವರ್ಷ 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಜಿಲ್ಲೆಗೆ ಪದವಿ ಪೂರ್ವ ಇಲಾಖೆ ಉಪನಿರ್ದೇಶಕರೂ ಇದ್ದಾರೆ. ಈ ಬಾರಿ 1103 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಆದಾಗ್ಯೂ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಮತ್ತು ಹೊಸಕೋಟೆಯ ಯಾವುದೇ ಕಾಲೇಜನ್ನು ಸಿಇಟಿ ಪರೀಕ್ಷಾ ಕೇಂದ್ರವಾಗಿ ಮಾಡದಿರುವುದು ವಿಷಾದನೀಯ ಎನ್ನುತ್ತಾರೆ ವಿದ್ಯಾರ್ಥಿಗಳು.
ದೊಡ್ಡಬಳ್ಳಾಪುರದಲ್ಲಿ ಕೇಂದ್ರವಿತ್ತು: ರಾಜ್ಯದಲ್ಲಿ ಸಿಇಟಿ ಪರೀಕ್ಷಾ ಕ್ರಮ ಆರಂಭವಾದ ವರ್ಷಗಳಲ್ಲಿ ದೊಡ್ಡಬಳ್ಳಾಪುರದಲ್ಲಿ ಸಿಇಟಿ ಪರೀಕ್ಷಾ ಕೇಂದ್ರವಿತ್ತು. ತೊಂಬತ್ತರ ದಶಕದಲ್ಲೇ ಇಲ್ಲಿನ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು ಸಿಇಟಿ ಪರೀಕ್ಷಾ ಕೇಂದ್ರವಾಗಿದ್ದ ದಾಖಲೆ ಹೊಂದಿದೆ. ಕಾಲಾಂತರದಲ್ಲಿ ವ್ಯವಸ್ಥಿತವಾಗಿ ಕೇಂದ್ರವನ್ನು ಬೆಂಗಳೂರಿನ ಕಾಲೇಜುಗಳಿಗೆ ವರ್ಗಾಯಿಸಲಾಗಿದೆ. ಮೊದಲ ಸಿಇಟಿ ಪರೀಕ್ಷೆ ಎದುರಿಸಿದ್ದ ಹಲವು ವಿದ್ಯಾರ್ಥಿಗಳು ದೊಡ್ಡಬಳ್ಳಾಪುರದ ಮೂಲಕ ರಾಜ್ಯದ ಅನೇಕ ಕಾಲೇಜುಗಳಲ್ಲಿ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗಿದ್ದರು ಎಂದು ಆಗ ಪರೀಕ್ಷೆ ಬರದಿದ್ದ ಎನ್.ಜಿ.ಪುಟ್ಟರಾಜು ಮತ್ತು ಜಿ.ಎನ್. ಮುನಿಶಾಮಿ ಸ್ಮರಿಸುತ್ತಾರೆ.
ವಿದ್ಯಾರ್ಥಿಗಳ ಸಂಕಟ: ಜಿಲ್ಲೆಯ ವಿದ್ಯಾರ್ಥಿಗಳು ಅನಿವಾರ್ಯವಾಗಿ ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ಸಿಇಟಿ ಪರೀಕ್ಷೆ ಬರೆಯಬೇಕಾಗಿದೆ. ಜೊತೆಗೆ ಪರೀಕ್ಷಾ ಕೇಂದ್ರಗಳನ್ನು ಹುಡುಕಿಕೊಂಡು ಹೋಗಿ ನಿರ್ದಿಷ್ಟ ಸಮಯಕ್ಕೆ ತಲುಪುವುದೂ ದೊಡ್ಡ ಸಾಹಸವೇ ಸರಿ. ಟ್ರಾಫಿಕ್ ಕಿರಿಕಿರಿಯಲ್ಲಿ ಹಲವು ಬಾರಿ ವಿದ್ಯಾರ್ಥಿಗಳ ಭವಿಷ್ಯ
ತೂಗುಯ್ಯಾಲೆಯಾಗಿರುವ ಉದಾಹರಣೆಗಳೂ ಇವೆ. ಮುಖ್ಯವಾಗಿ ದೊಡ್ಡಬಳ್ಳಾಪುರದ ಸಾಸಲು, ಆರೂಡಿ ಗ್ರಾಮಗಳಿಂದ ಬೆಂಗಳೂರು ತಲುಪಲು 80 ಕಿ.ಮೀ ಪ್ರಯಾಣ ಮಾಡಬೇಕು. ಸೂಕ್ತ ಸಾರಿಗೆ ವ್ಯವಸ್ಥೆ ಕೂಡ ಇಲ್ಲ. ಹೀಗಿರುವಾಗ ದೊಡ್ಡಬಳ್ಳಾಪುರಕ್ಕೆ ಬಂದು ನಂತರ ಬೆಂಗಳೂರಿಗೆ ಪ್ರಯಾಣಿಸುವ ಅನಗತ್ಯ ಗೋಜಲು
ವಿದ್ಯಾರ್ಥಿಗಳನ್ನು ಬೆಂಬಿಡದೆ ಕಾಡುತ್ತಿದೆ.
ಬೆಂಗಳೂರಿನ ಕೇಂದ್ರಗಳಿಗೆ ತೆರಳಬೇಕಿರುವುದರಿಂದ ವಿದ್ಯಾರ್ಥಿಗಳೊಂದಿಗೆ ಪೋಷಕರೂ ತೆರಳುವುದು ಅನಿವಾರ್ಯವಾಗಿದೆ.
ದೊಡ್ಡಬಳ್ಳಾಪುರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ಪರೀಕ್ಷಾ ಕೇಂದ್ರವಾಗಿರುವುದಿಲ್ಲ. ಪರೀಕ್ಷಾ ಕೇಂದ್ರಗಳನ್ನು ಹುಡುಕುವುದೇ ಕಷ್ಟದ ಕೆಲಸ. ಹೀಗಾಗಿ ಪೋಷಕರೂ ತಮ್ಮ ಕೆಲಸ ಕಾರ್ಯ ಬಿಟ್ಟು ಹೋಗಲೇ ಬೇಕಾದ ಪರಿಸ್ಥಿತಿ ಇದೆ.
ಪರೀಕ್ಷಾ ಕೇಂದ್ರ ಕೊಡಿ: ಈ ಹಿಂದೆ ಸಿಇಟಿ ಪರೀಕ್ಷಾ ಕೇಂದ್ರವಾಗಿದ್ದ ದೊಡ್ಡಬಳ್ಳಾಪುರದಲ್ಲಿ ಮತ್ತೆ ಪರೀಕ್ಷಾ ಕೇಂದ್ರ ಆರಂಭಿಸಬೇಕು.
ಜಿಲ್ಲೆಗೆ ಈ ಬಾರಿ ಪರೀಕ್ಷಾ ಕೇಂದ್ರವನ್ನು ಕಡ್ಡಾಯವಾಗಿ ಕೊಡಲೇ ಬೇಕು. ಪಕ್ಕದ ಚಿಕ್ಕಬಳ್ಳಾಪುರ ಮತ್ತು ರಾಮನಗರ ಸೇರಿದಂತೆ ಹೊಸ ಜಿಲ್ಲೆಗಳಲ್ಲೂ ಕೂಡ ಪರೀಕ್ಷಾ ಕೇಂದ್ರಗಳಿವೆ.
ಬೆಂ.ಗ್ರಾ.ಜಿಲ್ಲೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಪದವಿ ಪೂರ್ವ ಕಾಲೇಜುಗಳಿವೆ. ಇಲ್ಲಿ ಸಿಇಟಿ ಪರೀಕ್ಷಾ ಕೇಂದ್ರ ಸ್ಥಾಪಿಸಬೇಕಾದ್ದು ಪದವಿ ಪೂರ್ವ ಶಿಕ್ಷಣ ಇಲಾಖೆ ಹೊಣೆಗಾರಿಕೆ ಎಂಬುದು ಪೋಷಕರ ಆಗ್ರಹ.
ಅವೈಜ್ಞಾನಿಕ...
ಬೆಂ.ಗ್ರಾ.ಜಿಲ್ಲೆಯಲ್ಲಿ ಸಿಇಟಿ ಕೇಂದ್ರವಿಲ್ಲದಿರುವುದು ಅವೈಜ್ಞಾನಿಕ. ಅನಿವಾರ್ಯವಾಗಿ ಬೆಂಗಳೂರಿನ ವಿವಿಧ ಕಾಲೇಜುಗಳಿಗೆ ಇಲ್ಲಿನ ವಿದ್ಯಾರ್ಥಿಗಳು ತೆರಳಬೇಕಿರುವುದರಿಂದ ಪರೀಕ್ಷಾ ಒತ್ತಡದ ಜೊತೆಗೆ ವಿದ್ಯಾರ್ಥಿಗಳು ಅನಗತ್ಯ ಮಾನಸಿಕ ಒತ್ತಡಕ್ಕೂ ಸಿಲುಕಿದ್ದಾರೆ. ಉತ್ತಮ ಸಾಧನೆ ಮತ್ತು ಒತ್ತಡರಹಿತ ಪರೀಕ್ಷಾ ಪ್ರಕ್ರಿಯೆಗೆ ಇದು ತೊಡಕಾಗಿದೆ. ಕೂಡಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಈ ವಿಚಾರದಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕು.
-ಡಾ.ಎ.ಓ.ಆವಲಮೂರ್ತಿ, ವಿಜ್ಞಾನ ಲೇಖಕರು, ದೊಡ್ಡಬಳ್ಳಾಪುರ.
ಅವೈಜ್ಞಾನಿಕ...
ಬೆಂ.ಗ್ರಾ.ಜಿಲ್ಲೆಯಲ್ಲಿ ಸಿಇಟಿ ಕೇಂದ್ರವಿಲ್ಲದಿರುವುದು ಅವೈಜ್ಞಾನಿಕ. ಅನಿವಾರ್ಯವಾಗಿ ಬೆಂಗಳೂರಿನ ವಿವಿಧ ಕಾಲೇಜುಗಳಿಗೆ ಇಲ್ಲಿನ ವಿದ್ಯಾರ್ಥಿಗಳು ತೆರಳಬೇಕಿರುವುದರಿಂದ ಪರೀಕ್ಷಾ ಒತ್ತಡದ ಜೊತೆಗೆ ವಿದ್ಯಾರ್ಥಿಗಳು ಅನಗತ್ಯ ಮಾನಸಿಕ ಒತ್ತಡಕ್ಕೂ ಸಿಲುಕಿದ್ದಾರೆ. ಉತ್ತಮ ಸಾಧನೆ ಮತ್ತು ಒತ್ತಡರಹಿತ ಪರೀಕ್ಷಾ ಪ್ರಕ್ರಿಯೆಗೆ ಇದು ತೊಡಕಾಗಿದೆ. ಕೂಡಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಈ ವಿಚಾರದಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕು.
-ಡಾ.ಎ.ಓ.ಆವಲಮೂರ್ತಿ, ವಿಜ್ಞಾನ ಲೇಖಕರು, ದೊಡ್ಡಬಳ್ಳಾಪುರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

