ಶ್ರೀರಂಗನಾಥಸ್ವಾಮಿಗೆ ವಿಶೇಷ ಮುತ್ತಂಗಿ ಅಲಂಕಾರ
ಮಾಗಡಿ: ಮೊದಲ ಶ್ರಾವಣ ಶನಿವಾರ ಪ್ರಯುಕ್ತ ಐತಿಹಾಸಿಕ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ವಿಶೇಷವಾಗಿ ಮುತ್ತಂಗಿ ಅಲಂಕಾರ ಭಕ್ತರ ಮನಸೂರೆಗೊಂಡಿತ್ತು.
ಶನಿವಾರ ಮುಂಜಾನೆ 6 ಗಂಟೆಗೆ ಗೋಪೂಜೆಯಿಂದ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ಆರಂಭಗೊಳ್ಳುವುದು. ಮೊದಲು ದೇವರಿಗೆ ಪಂಚಾಮೃತ ಅಭಿಷೇಕ,ಅರ್ಚನೆ, ಅಷ್ಟೋತ್ತರ ನೆರವೇರಿಸಿದರು. ವಿಶೇಷವಾಗಿ ದೇವರಿಗೆ ಮುತ್ತಂಗಿ ಅಲಂಕಾರ ಏರ್ಪಡಿಸಲಾಗಿತ್ತು. ನಂತರ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಅರ್ಚಕ ವೃಂದ ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಸಹಸ್ರಾರು ಭಕ್ತರು ಬೆಳಿಗ್ಗೆಯಿಂದ ದೇವರ ದರ್ಶನಕ್ಕಾಗಿ ತಮ್ಮ ಸರದಿಗಾಗಿ ಸಾಲುಗಟ್ಟಿ ಕಾದು ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶಾಂತಚಿತ್ತದಿಂದಲೇ ಸರದಿ ಸಾಲಿನಲ್ಲಿ ಬಂದ ಭಕ್ತರು ದೇವರ ದರ್ಶನ ಪಡೆದು ಪ್ರಾರ್ಥಿಸಿದರು.
ಶ್ರಾವಣ ಶನಿವಾರದ ಅಂಗವಾಗಿ ದಾಸಪರಂಪರೆಯ ಪ್ರತಿಪಾದಕರಾಗಿರುವ ಮೈಸೂರಿನ ರಾಮಚಂದ್ರಾಚಾರ್ ತಂಡದವರು ದಾಸರ ಪದಗಳ ಗಾಯನ ನಡೆಸಿಕೊಟ್ಟರು. ಮಾಗಡಿ ಮಹಿಳಾ ತಂಡದವರು ವಿಷ್ಣು ಸಹಸ್ರ ನಾಮ ಪಠನ ನಡೆಸಿಕೊಟ್ಟರು. ಉಭಯಮ್ಮನವರ ಸಮೇತ ಶ್ರೀಸ್ವಾಮಿಯ ಉತ್ಸವ ಮೂರ್ತಿಯ ದೊಡ್ಡ ಗರುಡೋತ್ಸವ ಬಹಳ ವಿಜೃಂಭಣೆಯಿಂದ ಭಕ್ತರು ನೆರವೇರಿಸಿದರು. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಶ್ರೀರಂಗನಾಥಸ್ವಾಮಿ ಅನ್ನಸಂತರ್ಪಣೆ ಸಮಿತಿ ಮತ್ತು ಶ್ರೀರಂಗ ಸೇವಾ ಟ್ರಸ್ಟ್ ವತಿಯಿಂದ ಉಚಿತ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯದಲ್ಲಿ ಲಡ್ಡು ಪ್ರಸಾದ ವಿತರಣೆ ನಡೆಯಿತು.
ಇಲ್ಲಿರುವ ತಿರುಮಲೆ ರಂಗನಾಥಸ್ವಾಮಿ ಎಲ್ಲರಂತಲ್ಲ.ಇಲ್ಲಿರುವ ಎಲ್ಲಾ ದೇವರ ಪ್ರತಿಮೆಗಳೆಲ್ಲವೂ ಪೂರ್ವಾಭಿಮುಖವಾಗಿದ್ದರೆ, ಶ್ರೀರಂಗನಾಥಸ್ವಾಮಿ ಮಾತ್ರ ಪಶ್ಚಿಮಾಭಿಮುಖವಾಗಿ ದರ್ಶನ ನೀಡುತ್ತಾ, ರಂಗ ಎಂದು ಬರುವ ಸಕಲ ಭಕ್ತರ ಸಂಕಷ್ಟವನ್ನು ಅನಾದಿಕಾಲದಿಂದಲೂ ನಿವಾರಿಸಿಕೊಂಡು ಬರುತ್ತಿದ್ದಾನೆ. ದೇವರ ಮುಂದಿರುವ ಮಾಂಡ್ಯವರು ದರ್ಶನ ಪಡೆದ ಉದ್ಭವ ಸಾಲಿಗ್ರಾಮದ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

