ಬೆಂಗಳೂರು ಗ್ರಾಮಾಂತರ

ತಾಪಂ ಅಧ್ಯಕ್ಷೆ ಭೇಟಿ: ಬಿಸಿಯೂಟದಲ್ಲಿ ಹಾಜರಾತಿ ಗೊಂದಲ

Published On :

ರಾಮನಗರ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಶುಕ್ರವಾರ ದಿಢೀರ್ ಭೇಟಿ ನೀಡಿದ್ದ ತಾ.ಪಂ. ಅಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಮತ್ತು ಉಪಾಧ್ಯಕ್ಷ ಶಂಕರಯ್ಯ ಅವರಿಗೆ ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಲ್ಲಿನ ಹಾಜರಾತಿ ಗೊಂದಲ ಎದುರಾಯಿತು. ಸದರಿ ಪ್ರೌಢಶಾಲೆಯಲ್ಲಿ ಮುನ್ನೂರಕ್ಕೂ ಹೆಚ್ಚು ಮಕ್ಕಳಿದ್ದು, ಶುಕ್ರವಾರ ಊಟ ಸೇವಿಸಿದವರು 125 ಮಾತ್ರವೇ. ಆದರೆ, ಬಿಸಿಯೂಟ ಹಾಜರಾತಿ ಪುಸ್ತಕದಲ್ಲಿ ಕಳೆದೊಂದು ವಾರದಿಂದ ವಿವರವನ್ನೇ ನಮೂದಿಸಿರಲಿಲ್ಲ. ಈ ಕುರಿತು ಪ್ರಶ್ನಿಸಿದಾಗ ಶಿಕ್ಷಕರು ಮತ್ತು ಸಿಬ್ಬಂದಿಯಿಂದ ಸ್ಪಷ್ಟ ಉತ್ತರ ಸಿಗದಾಯಿತು.
ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು ಮಕ್ಕಳ ಪೈಕಿ ಭೇಟಿ ವೇಳೆ ಸುಮಾರು 40 ವಿದ್ಯಾರ್ಥಿಗಳ ಗೈರು ಹಾಜರಿ ಕಂಡು ಬಂದಿತು. ಉಳಿದ 130ರಷ್ಟು ಮಕ್ಕಳು ಬಿಸಿಯೂಟಕ್ಕೆ ಬರುವುದೇ ಇಲ್ಲ. ಹೀಗಿದ್ದರೂ ಹಾಜರಿ ಪುಸ್ತಕದಲ್ಲಿ ಗೈರು, ಊಟ ಸೇವನೆ ಮಾಡದವರ ವಿವರವನ್ನೇ ನಮೂದಿಸಿಕೊಂಡು ಬಂದಿಲ್ಲದಿರುವುದು ಬಹಿರಂಗವಾಯಿತು.
ಗೈರಾದ ಮತ್ತು ಊಟ ಸೇವನೆ ಮಾಡದೇ ಇರುವವರ ಲೆಕ್ಕವನ್ನೂ ತೋರಿಸಿ, ಆ ಪಾಲಿನ ಆಹಾರ ಪದಾರ್ಥ ಮತ್ತು ವೆಚ್ಚವನ್ನೆಲ್ಲಾ ತಿಂದು ಹಾಕುತ್ತಿದ್ದೀರಾ ಎಂದು ತಾ.ಪಂ. ಅಧ್ಯಕ್ಷೆ ಮತ್ತು ಉಪಾಧ್ಯಕ್ಷರು ತರಾಟೆಗೆ ತೆಗೆದುಕೊಂಡರು. ತಮ್ಮ ಬಣ್ಣ ಬಯಲಾಗುತ್ತಿದ್ದಂತೆಯೇ ಸಿಬ್ಬಂದಿ ನಿರುತ್ತರರಾದರು. ಹಾಜರಾತಿಯನ್ನೇ ಹಾಕದ ಶಿಕ್ಷಕರೂ ಪೇಚಿಗೆ ಸಿಲುಕಿದರು. ಸಾಯಂಕಾಲ ನಡೆಸುವ ವಿಶೇಷ ತರಗತಿ ನಂತರ ಹಾಜರಾತಿ ಹಾಕುತ್ತೇವೆಂದು ಶಿಕ್ಷಕರು ಹೇಳಿದ ಸಬೂಬು ಕೇಳಲು ಲಕ್ಷ್ಮಿ ಮಂಜುನಾಥ್ ಮತ್ತು ಶಂಕರಯ್ಯ ಸಿದ್ಧರಿರಲಿಲ್ಲ. ಸಂಜೆಯ ಸ್ಪೇಷಲ್ ಕ್ಲಾಸಿನಲ್ಲಿ ಸ್ಪೆಷಲ್ ಆಗಿ ಅಟೆಂಡೆನ್ಸ್ ಹಾಕಿಕೊಳ್ಳಿ. ಇನ್ನು ಮುಂದೆ ಬೆಳಗಿನ ಮೊದಲ ತರಗತಿಯಲ್ಲೇ ಹಾಜರಾತಿಯನ್ನು ಕಡ್ಡಾಯವಾಗಿ ಹಾಕಬೇಕು ಎಂದು ತಾಕೀತು ಮಾಡಿದರು.
ಅಧಿಕಾರಿಗಳಿಗೆ ಶಿಫಾರಸು: ಇನ್ನು ಮುಂದೆ ಇಂತಹ ಲೋಪಗಳು ಮರುಕಳಿಸಕೂಡದು ಎಂದು ಶಿಕ್ಷಕರು, ಬಿಸಿಯೂಟ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಈ ಭೇಟಿ ವೇಳೆ ಕಂಡು ಬಂದಿರುವ ಲೋಪ ಮತ್ತು ವೈಫಲ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಕಳುಹಿಸಿ, ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ತಾ.ಪಂ. ಅಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಮತ್ತು ಉಪಾಧ್ಯಕ್ಷ ಶಂಕರಯ್ಯ ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.