ನಿತ್ಯ ಪೂಜೆ ಪ್ರತಿಯೊಬ್ಬರ ಕರ್ತವ್ಯ: ಶಿವಾಚಾರ್ಯ ಶ್ರೀ
ನೆಲಮಂಗಲ: ಭಗವಂತನಿಗಾಗಿ ದೇವ ಮಂದಿರ ನಿರ್ಮಿಸಿ ಪ್ರತಿನಿತ್ಯ ಪೂಜೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮೇಲಣಗವಿ ಮಠದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಭಾರತೀಪುರದಲ್ಲಿ ಬಲಮುರಿ ಗಣೇಶ, ನಂದೀಶ್ವರ ವಿಗ್ರಹ ಪ್ರತಿಷ್ಠಾಪನೆ ಹಾಗೂ ಆಂಜನೇಯ ಸ್ವಾಮಿಯ 6ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ದೇವಾಲಯಗಳು ನಿರ್ಮಾಣ ಮಾಡಿದರೆ ಸಾಲದು, ಪ್ರತಿ ನಿತ್ಯ ದೇವ ಮಂದಿರಕ್ಕೆ ತೆರಳಿ ಪ್ರಾರ್ಥನೆ ಮಾಡುವುದರಿಂದ ನಮ್ಮಲ್ಲಿರುವ ಅಹಂ ದೂರವಾಗಿ ಗ್ರಾಮಗಳಲ್ಲಿ ಸಾಮರಸ್ಯ, ಸಹೋದರತ್ವ ಮೂಡಿ ಉತ್ತಮ ಸಮಾಜ ನಿರ್ಮಾಣವಾಗಲು ಕಾರಣವಾಗುತ್ತದೆ. ಮನುಷ್ಯ ಜೀವನವನ್ನು ಸಾರ್ಥಕ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರಾನಾಥ ಸ್ವಾಮೀಜಿ ಮಾತನಾಡಿ, ದೇವರ ಸ್ಮರಣೆಯಿಂದ ನೆಮ್ಮದಿ ಸಿಗುತ್ತದೆ. ಅಹಂ ತೊಡೆದು ದೇವರ ದರ್ಶನ, ಧ್ಯಾನ, ಸೇವೆ ಮಾಡುವುದರ ಮೂಲಕ ನೆಮ್ಮದಿಯ ಜೀವನ ನಡೆಸಿ ಎಂದರು. ವನಕಲ್ಲು ಮಲ್ಲೇಶ್ವರ ಕ್ಷೇತ್ರದ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಕಾಯಾ ವಾಚ, ಮನಸಾ ದೇವರಲ್ಲಿ ನಂಬಿಕೆ ಇಡಬೇಕು. ನನ್ನನ್ನು ನಾನು ತಿಳಿಯಲು ದೇವರ ಮೊರೆ ಹೋದರೆ ನನ್ನಲ್ಲಿರುವ ಅನೇಕ ಕೆಟ್ಟ ಗುಣಗಳು ನಾಶವಾಗಿ ಉತ್ತಮ ಮನುಷ್ಯನಾಗಲು ಕಾರಣವಾಗುತ್ತದೆ. ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ ಬೆಳೆಯಬೇಕು. ನಮ್ಮಲ್ಲಿ ಋಷಿ ಮುನಿಗಳು ತಪಸ್ಸು ಮಾಡಿ ಪ್ರಪಂಚದಲ್ಲೇ ಎಲ್ಲೂ ಇಲ್ಲದಂತಹ ಆಧ್ಯಾತ್ಮಿಕ ಶಕ್ತಿಯನ್ನು ನಮಗೆ ಉಳಿಸಿದ್ದಾರೆ. ಅವರ ಆ ತಪಸ್ಸಿನ ಫಲವಾಗಿ ಇಂದು ನಾವೆಲ್ಲರೂ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದರು. ದೇವಸ್ಥಾನದ ದಾನಿಗಳಾದ ಬೈರಮ್ಮ, ಸಿದ್ದಪ್ಪ, ತಿಮ್ಮರಾಯಪ್ಪ, ಗೋವಿಂದಪ್ಪರವರನ್ನು ಸನ್ಮಾನಿಸಲಾಯಿತು. ಸಂದರ್ಭದಲ್ಲಿ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ, ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ, ಜಿಪಂ ಸದಸ್ಯರಾದ ಸುನಂದಶಿವಕುಮಾರ್, ಬಿಎಂಎಲ್ ಕಾಂತರಾಜು, ಸೋಂಪುರ ಗ್ರಾಪಂ ಅಧ್ಯಕ್ಷ ತೀರ್ಥಪ್ರಸಾದ್ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

