ಬೆಂಗಳೂರು ಗ್ರಾಮಾಂತರ

ಬಸವಣ್ಣನ ವಚನಗಳು ಸಾರ್ವಕಾಲಿಕ: ಪ್ರಸನ್ನ

Published On :

ಆನೇಕಲ್ಲು: ವಚನ ಸಾಹಿತ್ಯದ ಹರಿಕಾರ ಕ್ರಾಂತಿಕಾರಿ ಬಸವಣ್ಣನವರ ಅನುಭವ ಮಂಟಪದ ನುಡಿ ಮುತ್ತುಗಳು ಇಂದಿಗೂ ಎಂದಿಗೂ ಪ್ರಸ್ತುತವಾಗಿದೆ ಎಂದು ಸಾಹಿತಿ ಪ್ರಸನ್ನ ಹಳೇಬೀಡು ಹೇಳಿದರು.
ಅವರು ಇಲ್ಲಿನ ಜಯಶ್ರೀ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಕಸಾಪ ನಡೆಸಿದ ಶಾಲೆಗೊಂದು ಕನ್ನಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, 12ನೇ ಶತಮಾನದಲ್ಲಿ ರಾಜಾ ಬಿಜ್ಜಳರಾಯನ ಆಸ್ಥಾನದಲ್ಲಿ ಮಹಿಳೆಯರಿಗೆ ಶಿಕ್ಷಣ, ಸಮಾನತೆಯ ಕಹಳೆಯನ್ನು ಮೊಳಗಿಸಿ ವಚನ ಸಾಹಿತ್ಯದ ಹೊಸ ಪರ್ವಕ್ಕೆ ನಾಂದಿ ಹಾಡಿದ ಹರಿಕಾರ ಬಸವಣ್ಣ ಎಂದರು. ಪಂಪ ರನ್ನರ ಕಾಲದ ಹಳೆಗನ್ನಡ ನಂತರ ವಚನ ಸಾಹಿತ್ಯ ಕೆಲವೇ ಜನರ ಸ್ವತ್ತಾಗಿದ್ದ ಕಾಲಘಟ್ಟದಲ್ಲಿ ವಡ್ಡಾರಾಧನೆ, ನಯಸೇನಾ, ಅಕ್ಕಮಹದೇವಿಯವರ ಚನ್ನಮಲ್ಲಿಕಾರ್ಜುನ ವಚನಗಳು ಕನ್ನಡ ಭಾಷೆಗೆ ಸ್ಥಾವರದಂತೆ ಶಾಶ್ವತ ಸ್ಥಾನಮಾನ ಕಲ್ಪಿಸಿಕೊಟ್ಟ ಮೇರು ಸಂಗತಿಗಳು. ಹಲ್ಮಿಡಿ ಶಾಸನ, ಕಿಟ್ಟಲ್ ಅವರ ಕನ್ನಡ ನಿಘಂಟು ಭಾಷಾ ಶಾಸ್ತ್ರದ ಬೆಳವಣಿಗೆ ಮತ್ತು ಅಧ್ಯಯನಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟ ಪ್ರಸಂಗಗಳು ಎಂದರು.
ಬೊಮ್ಮನಹಳ್ಳಿ ಕಸಾಪ ಅಧ್ಯಕ್ಷ ಸದಾಶಿವಯ್ಯ ಮಾತನಾಡಿ, ಮ್ಲೇಚರು ಹಾಗೂ ಆಂಗ್ಲರ ಆಡಳಿತಾವಧಿಯಲ್ಲಿ ಕನ್ನಡ ಗೌಣವಾಗಿದ್ದು ನಂತರದ ದಿನಗಳಲ್ಲಿ ಪ್ರಾಂತೀಯ ಭಾಷೆಗಳಿಗೆ ಮಾನ್ಯತೆ ದೊರೆತಿದೆ. ಶಾಸ್ತ್ರೀಯ ಸ್ಥಾನ ಮಾನ ಪಡೆದ ಕನ್ನಡದ ಬೆಳವಣಿಗೆಗೆ ಹೊಸ ಪೀಳಿಗೆಯ ಯುವ ಪಡೆ ಕಾರ್ಯಸನ್ನಧ್ಧರಾಗಿ ಪ್ರಚಾರ ಪಡಿಸಬೇಕು ಎಂದರು. ತಾಲೂಕು ಕಸಾಪ ಅಧ್ಯಕ್ಷ ವಿ. ಹನುಮದಾಸ್ ಮಾತನಾಡಿ, ಕನ್ನಡಿಗರು ತಮ್ಮ ಉಸಿರನ್ನು ಕನ್ನಡವಾಗಿಸಿಕೊಳ್ಳುವ ಮೂಲಕ ತಾಯಿ ಭುವನೇಶ್ವರಿ ಸೇವೆ ಮಾಡಬೇಕೆಂದು ಕರೆ ನೀಡಿದರು.  ವಿದ್ಯಾಸಂಸ್ಥೆಯ ಜಯಶ್ರೀ ಜಿ. ನಂಜುಂಡಪ್ಪ ಪ್ರಾಸ್ತಾವಿಕ, ವಸಂತರಾಜು, ಚುಟುಕು ಶಂಕರ್ ಇತರರು ಮಾತನಾಡಿದರು.

ಸಂಕುಚಿತ ಮನೋಸ್ಥಿತಿ ಅತಿರೇಕಕ್ಕೆ ದಾರಿ
ದೊಡ್ಡಬಳ್ಳಾಪುರ: ತೀರಾ ಸಂಕುಚಿತಗೊಳ್ಳುತ್ತಿರುವ ಮನುಷ್ಯ ಸಂಬಂಧಗಳು ಸಮಾಜದಲ್ಲಿ ಅತಿರೇಕದ ಸಂದರ್ಭಗಳು ಸೃಷ್ಠಿಯಾಗಲು ಕಾರಣವಾಗಿವೆ ಎಂದು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕಿ ಸುಲೋಚನಾ ಡಾ.ವೆಂಕಟರೆಡ್ಡಿ ಹೇಳಿದರು.
ಇಲ್ಲಿನ ಸಂವಾದ, ಸಿಜ್ಞಾ, ಅರಿವು ಮತ್ತು ಸಖಿ ಯುವ ಸಂವಾದ ಕೇಂದ್ರಗಳ ಒಡನಾಡಿ ಯುವಜನರ ವೇದಿಕೆಯ ಯುವಮುನ್ನಡೆ- ಸ್ನೇಹ ಶಿಕ್ಷಣ ಅಭಿಯಾನದ ಅಂಗವಾಗಿ ಶನಿವಾರ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾಜಿಕವಾಗಿ ನಡೆಯುತ್ತಿರುವ ಎಲ್ಲ ಬಗೆಯ ದೌರ್ಜನ್ಯ ಮತ್ತು ತಾರತಮ್ಯಗಳ ಮೂಲ ನಮ್ಮಲ್ಲೇ ಇದೆ. ಮೂಲಭೂತವಾಗಿ ಮನಸ್ಸುಗಳು ಬದಲಾಗಬೇಕು. ಆ ಬದಲಾವಣೆಗೆ ಪೂರಕವಾಗಿ ಶಿಕ್ಷಣ ದೊರೆಯಬೇಕು. ಹೆಣ್ಣು-ಗಂಡು ಎಂಬುದರ ಭೇದಭಾವ ಹೆಚ್ಚಾದಂತೆ ದೌರ್ಜನ್ಯ ಪ್ರಕರಣಗಳೂ ಹೆಚ್ಚುತ್ತಿವೆ. ನಿರ್ಮಲವಾದ ಪ್ರೀತಿ ಮತ್ತು ಭಾವಶುದ್ಧವಾದ ಆಲೋಚನೆಗಳು ಇಂದಿನ ಅಗತ್ಯ. ಹಿಂಸೆಯನ್ನು ನಿಗ್ರಹಿಸಿ ಪರಿಪೂರ್ಣ ಸ್ನೇಹಪರ ಚಿಂತನೆಗಳನ್ನು ಬೆಳೆಸಬೇಕಾದರೆ ಎಂದರು.
ಆಂಗ್ಲ ವಿಭಾಗದ ಕೆ.ಆರ್.ರವಿಕಿರಣ್ ಮಾತನಾಡಿ, ಕಾಲೇಜುಗಳು ಕಲಿತವರನ್ನು ತಯಾರು ಮಾಡಿ ಮನುಷ್ಯತ್ವವನ್ನು ಕೊಡದಿದ್ದರೆ ಶಿಕ್ಷಣವೇ ವ್ಯರ್ಥ. ಈ ದೇಶದಲ್ಲಿ ಜನಾಂಗ, ಲಿಂಗ, ಭಾಷೆ, ಅಂತಸ್ತುಗಳ ಆಧಾರದಲ್ಲಿ ನಡೆಯುತ್ತಿರುವ ಶೋಷಣೆ ಅಸಮಾನತೆಗೆ ಮೂಲ. ಭಾವನಾತ್ಮಕವಾಗಿ ಮತ್ತು ವಾಸ್ತವದಲ್ಲಿ ಈ ವ್ಯವಸ್ಥೆಯನ್ನು ಬದಲಿಸದಿದ್ದರೆ ಮನುಷ್ಯ ಸಂಬಂಧಗಳ ನಡುವೆ ದೊಡ್ಡ ಕಂದರ ನಿರ್ಮಾಣವಾಗಿಬಿಡುವ ಅಪಾಯವಿದೆ ಎಂದರು.
ಯುವ ಸಂವಾದ ತಂಡದಿಂದ ವಿದ್ಯಾರ್ಥಿ ಸ್ನೇಹಿ ಮತ್ತು ಹಿಂಸೆ ಮುಕ್ತ ಕ್ಯಾಂಪಸ್ ಪರಿಕಲ್ಪನೆಯಲ್ಲಿ ಹಾಡು, ಸ್ತಬ್ದಚಿತ್ರ ರೂಪಕ, ಮನವಿ, ಬದಲಾವಣೆಯ ಪ್ರತಿಜ್ಞೆ, ಮಾತುಕತೆ- ಸಂವಾದ ನಡೆಯಿತು. ಮನ್ಸೂರ್ ಪಾಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿದಾನಂದಮೂರ್ತಿ, ಮಲ್ಲಿಕಾ ತಾಜ್ ಗಾಯನ ನೇತೃತ್ವ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಜೆ.ವಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.  ಕನ್ನಡ ವಿಭಾಗದ ಎಂ.ಚಿಕ್ಕಣ್ಣ, ಸಂವಾದ ಯುವ ಸಂಪನ್ಮೂಲ ಕೇಂದ್ರದ ರಮೇಶ್ ಚೀಮಾಚನಹಳ್ಳಿ, ಅರ್ಕಾವತಿ ಪುನಶ್ಚೇತನ ಅಭಿಯಾನದ ಮಂಜುನಾಥ್, ಯುವ ಸಂವಾದದ ಆಶಾ, ಚಂದ್ರು, ಅಜಯ್, ರಾಧಾ, ಕವಿತಾ, ಆದರ್ಶ, ಮಂಜುನಾಥ್, ಹರೀಶ್, ಕಾಲೇಜಿನ ಲೈಂಗಿಕ ಕಿರುಕುಳ ನಿಗ್ರಹ ಕೋಶ, ಸಮಾನ ಅವಕಾಶ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಕೋಶದ ಪದಾಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.