ಬೆಂಗಳೂರು ಗ್ರಾಮಾಂತರ

ಗಂಭೀರ ಸ್ವರೂಪಕ್ಕೆ ಜಿಲ್ಲಾ ಕೇಂದ್ರ ಹೋರಾಟ

Published On :

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದು ನಡೆಯುತ್ತಿರುವ ಬಹುವರ್ಷದ ಹೋರಾಟ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗಿದೆ.
ಇಲ್ಲಿನ ಸಿದ್ಧಲಿಂಗಯ್ಯ ವೃತ್ತದಿಂದ ಆರಂಭವಾದ ಮೆರವಣಿಗೆ ತಾಲೂಕು ಕಚೇರಿವರೆಗೆ ನಡೆಯಿತು. ನಂತರ ತಾಲೂಕು ಕಚೇರಿ ಮುಂದೆ ಧರಣಿ ನಡೆಸಿ ಮಾತನಾಡಿದ ಮುಖಂಡರು, ಜಿಲ್ಲಾ ಹಂತದಲ್ಲಿ ಕೆಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಾಸ್ತವದ ಅಂಕಿ-ಅಂಶಗಳನ್ನು ಸರ್ಕಾರಕ್ಕೆ ವಿವರಿಸುವಲ್ಲಿ ಉದಾಸೀನ ನೀತಿ ಅನುಸರಿಸುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ ರಚನೆಯಾಗಿರುವ ಹೊಸ ಜಿಲ್ಲೆಗಳೆಲ್ಲವೂ ಉಪವಿಭಾಗ ಕೇಂದ್ರಗಳಲ್ಲೇ ರಚನೆಯಾಗಿವೆ. ಇದು ನ್ಯಾಯಸಮ್ಮತ ಕೂಡ ಆಗಿದೆ. ವಾಸ್ತವವಾಗಿ ದೊಡ್ಡಬಳ್ಳಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳಿವೆ. ಹೀಗಿರುವಾಗ ಉಪವಿಭಾಗವನ್ನು ಬಿಟ್ಟು ಬೇರೆಡೆ ಜಿಲ್ಲಾ ಕೇಂದ್ರ ಸ್ಥಾಪನೆ ಮಾಡಲು ಸಾಧ್ಯವೇ ಇಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ಜಿಲ್ಲಾ ಕೇಂದ್ರಕ್ಕೆ ಸ್ಥಳ ಗುರುತಿಸುವಾಗ ಕೇವಲ ಒಂದು ತಾಲೂಕನ್ನು ಮಾತ್ರ ಗಣನೆಗೆ ತೆಗೆದುಕೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿಯಲ್ಲೇ 300 ಎಕರೆಗೂ ಅಧಿಕ ಸರ್ಕಾರಿ ಭೂಮಿ ಇದ್ದರೂ ಇದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಅಧಿಕಾರಿಗಳು ಈ ಬಗೆಯ ವರದಿ ತಯಾರಿಸುವ ಮುನ್ನ ಸಂಬಂಧಪಟ್ಟ ತಾಲೂಕುಗಳ ಒಟ್ಟಾರೆ ಅಂಕಿ-ಅಂಶಗಳನ್ನು ಪರಿಗಣಿಸಬೇಕು. ದೇವನಹಳ್ಳಿ ತಾಲೂಕು ವ್ಯಾಪ್ತಿಯ 2 ಸ್ಥಳಗಳನ್ನು ಗುರ್ತಿಸಿರುವ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ರಚನೆಯ ಮೂಲಾಧಾರಗಳ ಪರಿಕಲ್ಪನೆ ಇಲ್ಲವೇ ಎಂಬ ಪ್ರಶ್ನೆ ಉಂಟಾಗುತ್ತಿದೆ. ಈ ಕೂಡಲೇ ದೊಡ್ಡಬಳ್ಳಾಪುರದ ನ್ಯಾಯಯುತ ಬೇಡಿಕೆಗೆ ಬೆಲೆ ಕೊಡಬೇಕು. ದೊಡ್ಡಬಳ್ಳಾಪುರ ನಗರದಲ್ಲೇ ಜಿಲ್ಲಾ ಕೇಂದ್ರ ಸ್ಥಾಪನೆಯಾಗಬೇಕು ಎಂದರು.
ಹಾಲಿ ಇರುವ ನಗರ ವ್ಯಾಪ್ತಿಯ ಸುತ್ತಮುತ್ತ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಹಲವು ಕಚೇರಿಗಳನ್ನು ಸ್ಥಾಪಿಸುವುದು ವೈಜ್ಞಾನಿಕ. ಅದನ್ನು ಬಿಟ್ಟು ಎಡಬಿಡಂಗಿಯಾಗಿ ನಗರ ಪ್ರದೇಶದ 10-15 ಕಿ.ಮೀ ದೂರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸ್ಥಾಪಿಸಲು ಪ್ರಸ್ತಾವನೆ ಕೊಡುವುದು ಅವೈಜ್ಞಾನಿಕ. ಇಂತಹ ಅವೈಜ್ಞಾನಿಕ ಪ್ರಸ್ತಾವನೆಯನ್ನು ಈ ಕೂಡಲೇ ವಾಪಸ್ ಪಡೆಯಬೇಕು. ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಗೊಂಡಿರುವ ಉಪವಿಭಾಗಾಧಿಕಾರಿ ಕಚೇರಿಯನ್ನು ಕೂಡಲೇ ಕಾರ್ಯಾರಂಭ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಧರಣಿಯಲ್ಲಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಮುಖಂಡರಾದ ಎಂ.ಕೃಷ್ಣಮೂರ್ತಿ, ಕೆ.ಎಂ.ಹನುಮಂತರಾಯಪ್ಪ, ಹ.ರಾಮಕೃಷ್ಣ, ಟಿ.ಜಿ. ಮಂಜುನಾಥ್, ತೂಬಗೆರೆ ಷರೀಫ್, ಕೆ.ಆರ್.ರವಿಕಿರಣ್, ಮಾ.ಮುನಿರಾಜು, ಸಿದ್ಧರಾಜು, ಡಿ.ವಿ.ಅಶ್ವತ್ಥಪ್ಪ, ಪ್ರಮೀಳಾ ಮಹದೇವ್, ಎಚ್.ಎಸ್.ವೆಂಕಟೇಶ್, ಹೊನ್ನಾಘಟ್ಟ ಮಹೇಶ್, ರಾಜಣ್ಣ, ಜನಪರ ಮಂಜು, ಮಹದೇವ್, ಬಸವರಾಜು, ರಂಗಸ್ವಾಮಿ, ಟಿ.ಡಿ.ಮುನಿಯಪ್ಪ, ವಿಮಲಮ್ಮ, ಗುರುರಾಜಪ್ಪ, ಡಿ.ಸಿ.ಚೌಡರಾಜು, ಆರ್.ಕೆಂಪರಾಜು, ಶಿವಕುಮಾರ್, ಜೆ.ಆರ್.ರಮೇಶ್, ಕೆ.ಕೆ.ವೆಂಕಟೇಶ್, ಗಂಗರಾಜು ಶಿರವಾರ, ಅಲ್ತಾಫ್, ರಾಮಕೃಷ್ಣ, ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ಜಿಲ್ಲಾ ಕೇಂದ್ರ: ಇಂದು ರಾಷ್ಟ್ರೀಯ ಹೆದ್ದಾರಿ ತಡೆ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿ ದೊಡ್ಡಬಳ್ಳಾಪುರವನ್ನು ಘೋಷಿಸಬೇಕು ಎಂದು ಆಗ್ರಹಿಸಿ ಫೆ.11ರ ಮಂಗಳವಾರ ಬೆಳಗ್ಗೆ 10.30ಕ್ಕೆ ರಾಷ್ಟ್ರೀಯ ಹೆದ್ದಾರಿ 207 ಮತ್ತು ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ತಾಲೂಕು ಕನ್ನಡ ಪಕ್ಷ ಹೆದ್ದಾರಿ ತಡೆ ಮುಂದಾಳತ್ವ ವಹಿಸಲಿದೆ. ಎಲ್ಲ ಕನ್ನಡಪರ, ಪ್ರಗತಿಪರ, ವಿದ್ಯಾರ್ಥಿ ಸಂಘಟನೆಗಳು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು ಭಾಗವಹಿಸುವಂತೆ ಹೋರಾಟ ಸಮಿತಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.