ಬೆಂಗಳೂರು ಗ್ರಾಮಾಂತರ

ಮಾ. 3, 4ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

Published On :

ದೊಡ್ಡಬಳ್ಳಾಪುರ: ಬೆಂ.ಗ್ರಾ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ದೊಡ್ಡಬಳ್ಳಾಪುರದಲ್ಲಿ ಬರುವ ಮಾರ್ಚ್ 3 ಮತ್ತು  4ರಂದು ನಡೆಯಲಿದೆ. ಈ ಕುರಿತು ತಾಲೂಕು ಕಚೇರಿಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಮ್ಮೇಳನವನ್ನು ಆದಷ್ಟೂ ತುರ್ತಾಗಿ ಆಯೋಜಿಸಬೇಕಿದ್ದು, ಜಿಲ್ಲಾ ಕಸಾಪಗೆ ಸರ್ಕಾರದಿಂದ 4.5 ಲಕ್ಷ ರು.ಗಳ ಅನುದಾನ ಸಮ್ಮೇಳನ ನಡೆಸಲು ಬಿಡುಗಡೆಯಾಗಲಿದೆ. ಸರ್ಕಾರದ ಅನುದಾನದಲ್ಲಿ ಸಮ್ಮೇಳನ ನಡೆಯುವುದರಿಂದ ಶಿಷ್ಟಾಚಾರ ಪರಿಪಾಲನೆ ಮುಖ್ಯವಾಗಿದ್ದು, ಸ್ವಾಗತ ಸಮಿತಿಗೆ ಗೌ.ಅಧ್ಯಕ್ಷರಾಗಿ ಸಂಸದ ವೀರಪ್ಪ ಮೊಯ್ಲಿ, ಅಧ್ಯಕ್ಷರಾಗಿ ಶಾಸಕ ಟಿ. ವೆಂಕಟರಮಣಯ್ಯ, ಸಂಚಾಲಕರಾಗಿ ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ, ಕಾರ್ಯಾಧ್ಯಕ್ಷರಾಗಿ ಜಿಲ್ಲಾಧಿಕಾರಿ ಶಂಕರ್, ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್, ಕಾರ್ಯದರ್ಶಿಯಾಗಿ ತಾ.ಕಸಾಪ ಅಧ್ಯಕ್ಷ ಡಿ.ಶ್ರೀಕಾಂತ, ಕೋಶಾಧ್ಯಕ್ಷರಾಗಿ ಜಿಲ್ಲಾ ಕಸಾಪ ಕೋಶಾಧ್ಯಕ್ಷ ನ.ಮಹದೇವ್ ಸೇರಿದಂತೆ ವಿವಿಧ ಸಮಿತಿಗಳು ಮತ್ತು ಸ್ವಾಗತ ಸಮಿತಿಯ ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಲಾಯಿತು.
ಸಮ್ಮೇಳನ 2 ದಿನಗಳು ನಡೆಯಲಿದ್ದು, ಸ್ಮರಣ ಸಂಚಿಕೆ ಹೊರತರಲಾಗುವುದು. ವಿವಿಧ ಗೋಷ್ಠಿಗಳು, ಕವಿಗೋಷ್ಠಿ, ಸನ್ಮಾನ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉದ್ಘಾಟನೆ, ಸಮಾರೋಪ ಮತ್ತು ಬಹಿರಂಗ ಅಧಿವೇಶನ ಆಯೋಜಿಸಲಾಗುವುದು. 4 ತಾಲೂಕುಗಳಿಗೂ ವಿವಿಧ ಹಂತಗಳಲ್ಲಿ ಅವಕಾಶಗಳನ್ನು ಕೊಡುವುದು, ಉಪಸಮಿತಿಗಳಿಗೆ ಸಂಘಟನೆಗಳ ಮುಖಂಡರನ್ನು ನೇಮಿಸಿ, ಹಲವು ಬಗೆಯ ಜವಾಬ್ದಾರಿಗಳನ್ನು ವಹಿಸುವ ವಿಚಾರ ಕುರಿತಂತೆ ಚರ್ಚಿಸಲಾಯಿತು.
ಸಭೆಯಲ್ಲಿ ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಕಸಾಪ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.