ದೊಡ್ಡಬಳ್ಳಾಪುರಕ್ಕೆ ಎಸಿ ಕಚೇರಿ ಬೇಕು
ದೊಡ್ಡಬಳ್ಳಾಪುರ: ಬೆಂಗಳೂರಲ್ಲಿ ಕಾರ್ಯನಿರ್ವಹಿಸುತ್ತಿರುವ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿಯನ್ನು ದೊಡ್ಡಬಳ್ಳಾಪುರ ನಗರಕ್ಕೆ ವರ್ಗಾಯಿಸಬೇಕು. ಈ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಗಂಭೀರ ಹೋರಾಟಗಳು ನಡೆದರೂ ಸರ್ಕಾರ ಗಾಢನಿದ್ರೆಯಲ್ಲಿದ್ದು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ವ್ಯಾಪಕ ಚಳವಳಿ ರೂಪಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೇಳಿದೆ.
ಉಪವಿಭಾಗಾಧಿಕಾರಿ ಕಚೇರಿ ವರ್ಗಾವಣೆಗೆ ಒತ್ತಾಯಿಸಿ ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕಂದಾಯ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಪೋಸ್ಟ್ ಕಾರ್ಡಿನಲ್ಲಿ ಪತ್ರ ಬರೆದು ಆಗ್ರಹಿಸುವ ವಿನೂತನ ಚಳವಳಿಗೆ ಶುಕ್ರವಾರ ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಉಪವಿಭಾಗ ಒಳಗೊಳ್ಳುವ ಪ್ರದೇಶದ ಹೊರಗೆ ಅದರ ಕೇಂದ್ರ ಕಚೇರಿ ಕಾರ್ಯನಿರ್ವಹಿಸುವುದು ಸರ್ವತಾ ಸಲ್ಲದು. ಇಡೀ ರಾಜ್ಯದಲ್ಲಿರುವ 80ಕ್ಕೂ ಹೆಚ್ಚು ಉಪವಿಭಾಗಗಳ ಕೇಂದ್ರ ಆಯಾ ಉಪವಿಭಾಗಗಳಲ್ಲೇ ಇದೆ. ಆದರೆ ದೊಡ್ಡಬಳ್ಳಾಪುರ 50 ವರ್ಷಗಳ ಹಿಂದೆಯೇ ಉಪವಿಭಾಗವಾಗಿದ್ದರೂ ಇದರ ಕಚೇರಿ ಮಾತ್ರ ಬೆಂಗಳೂರಿನಲ್ಲಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಮತ್ತು ಹೊಸಕೋಟೆಗಳನ್ನು ಒಳಗೊಳ್ಳುವ ಉಪವಿಭಾಗದ ಕೇಂದ್ರ ಒಟ್ಟಾರೆ ಜಿಲ್ಲೆಯ ಹೊರಗೆ ಕಾರ್ಯ ನಿರ್ವಹಿಸುತ್ತಿದೆ. ಕಳೆದ 20 ವರ್ಷಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಕೆಲ ದಿನಗಳ ಕಾಲ ಕಾರ್ಯನಿರ್ವಹಿಸಿದ್ದ ಕಚೇರಿ ಮತ್ತೆ ರಾಜಕೀಯ ಕುತಂತ್ರಗಳಿಂದಾಗಿ ಬೆಂಗಳೂರಿಗೇ ಹೋಯಿತು. ಈ ನ್ಯಾಯಯುತ ಬೇಡಿಕೆ ಈಡೇರಿಸುವುದು ಸರ್ಕಾರದ ಹೊಣೆ ಎಂದರು.
ಪತ್ರ ಚಳವಳಿ: ಇದೀಗ ಕರವೇ ಪತ್ರ ಚಳವಳಿ ಆರಂಭಿಸಿದೆ. ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶದ ಸಾವಿರಾರು ನಾಗರೀಕರಿಂದ, ಕಾರ್ಮಿಕರು, ನೇಕಾರರು,ರೈತರು, ವಿದ್ಯಾರ್ಥಿಗಳಿಂದ ಪತ್ರಗಳನ್ನು ಬರೆಸಿ ಸರ್ಕಾರಕ್ಕೆ ಕಳುಹಿಸಲಿದೆ. 10 ಸಾವಿರ ಪತ್ರಗಳು ಕೆಲವೇ ದಿನಗಳಲ್ಲಿ ಸರ್ಕಾರಕ್ಕೆ ತಲುಪಲಿವೆ. ಇದು ಜನರ ಹಕ್ಕೊತ್ತಾಯ. ಇದಕ್ಕೆ ಸ್ಪಂದಿಸಬೇಕಾದ ಹೊಣೆಗಾರಿಕೆ ತೋರಬೇಕಾದ್ದು ಸರ್ಕಾರದ ಕರ್ತವ್ಯ ಎಂದರು.
ಪ್ರತಿಭಟನೆಯಲ್ಲಿ ಕರವೇ ರಾಜ್ಯ ಉಪಾಧ್ಯಕ್ಷ ಬಿ.ಎಸ್. ಚಂದ್ರಶೇಖರ್, ತಾಲೂಕು ಕಾರ್ಯದರ್ಶಿ ರಾಜಘಟ್ಟ ರವಿ, ಉಪಾಧ್ಯಕ್ಷ ರವಿ ಮಾವಿನಕುಂಟೆ, ಮುಖಂಡರಾದ ಬಷೀರ್, ರಮೇಶ್, ಮನು, ಅಮ್ಮು, ಕೇಶವ, ಸೋಮಶೇಖರ್, ಜಿ.ಸಿ. ಶಿವಕುಮಾರ್, ತಾ.ಕಸಾಪ ಅಧ್ಯಕ್ಷ ಕೆ.ಆರ್. ರವಿಕಿರಣ್, ಗೌ.ಅಧ್ಯಕ್ಷ ಡಿ.ಶ್ರೀಕಾಂತ ಸೇರಿದಂತೆ ಕರವೇ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

