ಸುದ್ದಿ ಸಂಕ್ಷೇಪ
ಶಾಂತಕುಮಾರ್ ನಿಧನಕ್ಕೆ ಸಂತಾಪ
ಕನಕಪುರ: ನಿಧನರಾದ ಚನ್ನಪಟ್ಟಣದ ಪತ್ರಕರ್ತ ಸಿ.ಎ. ಶಾಂತಕುಮಾರ್ ಅವರಿಗೆ ಕನಕಪುರದ ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಯುತರ ಪತ್ನಿ, ಕುಟುಂಬವರ್ಗ ಹಾಗೂ ಗೆಳೆಯರಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಪ್ರಾರ್ಥಿಸಿದ್ದಾರೆ. ದಿ.ಸಿ.ಎ.ಶಾಂತಕುಮಾರ್ ಸರಳ ಸಜ್ಜನಿಕೆಯ, ಸ್ನೇಹಪರ ವ್ಯಕ್ತಿತ್ವದ ವ್ಯಕ್ತಿಯಾಗಿದ್ದು ಎಲ್ಲರೊಂದಿಗೆ ಬೆರೆಯುವ ಮನೋಭಾವ ಹೊಂದಿದ್ದರು. ಸಾಹಿತ್ಯ ಕಲೆಗಳಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದು ಸ್ವತಃ ಗಾಯಕರಾದ ಅವರು ರಾಮನಗರ ಜಿಲ್ಲೆಯ ಹಳ್ಳಿಹಳ್ಳಿಗಳಲ್ಲಿಯೂ ಗಾಯನದ ಮೂಲಕ ಜಾನಪದ ಕಲೆಯನ್ನು ಪ್ರಸಾರ ಮಾಡುತ್ತಿದ್ದರು. ಕಸಾಪ ಸಾಂಸ್ಕೃತಿಕ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಶಿವಲಿಂಗಯ್ಯ ಸ್ಮರಿಸಿದ್ದಾರೆ. ಶಾಂತಕುಮಾರ್ ನಿಧನಕ್ಕೆ ವಚನಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಎಲ್ಲೇಗೌಡ, ಜಯಕರ್ನಾಟಕ ಮಾಜಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಕರ್ನಾಟಕ ಸಂಘದ ಅಧ್ಯಕ್ಷ ಮರಳವಾಡಿ ಉಮಾಶಂಕರ್, ಗಮಕ ಕಲಾಪರಿಷತ್ ಅಧ್ಯಕ್ಷ ಕೂ.ಗಿ. ಗಿರಿಯಪ್ಪ, ಕರವೇ ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ, ಪತ್ರಕರ್ತರಾದ ಎಲ್. ಶಿವಲಿಂಗಯ್ಯ, ಸುರೇಶ್, ಸತೀಶ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಚಿರತೆಗೆ ಕರು ಬಲಿ, ಸಾರ್ವಜನಿಕರಿಗೆ ಆತಂಕ
ಮಾಗಡಿ: ತಾಲೂಕಿನ ಬಿಸ್ಕೂರು ಗ್ರಾಮದಲ್ಲಿ ಕರುವೊಂದನ್ನು ಚಿರತೆ ಬಲಿ ತೆಗೆದಕೊಂಡಿದ್ದು, ನಾಗರಿಕರು ಭಯಭೀತರಾಗಿದ್ದಾರೆ ಎಂದು ಬಿಸ್ಕೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ಸುಹೇಲ್ ತಿಳಿಸಿದ್ದಾರೆ. ಬಿಸ್ಕೂರು ಗ್ರಾಮದ ನಾಗರಾಜು ಎಂಬವರಿಗೆ ಸೇರಿದ ಸುಮಾರು 25 ಸಾವಿರ ರು. ಬೆಲೆ ಬಾಳುವ ಕರು ಚಿರತೆ ಪಾಲಾಗಿದೆ. ಬಿಸ್ಕೂರು ಗ್ರಾಮದ ಸುತ್ತಮತ್ತು ಚಿರತೆ ಹಾವಳಿ ಹೆಚ್ಚಿದೆ. ಈ ಸಂಬಂಧ ಹಲವಾರು ಬಾರಿ ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕರು ಬಲಿಯಾದ ಮೇಲೆ ಚಿರತೆ ಹಿಡಿಯಲು ಬೋನು ಇಟ್ಟಿದ್ದಾರೆ ಎಂದು ಆರೋಪಿಸಿದರು. ಈ ಸಂಬಂಭ ಸಂಸದ ಡಿ.ಕೆ.ಸುರೇಶ್, ಅರಣ್ಯ ಇಲಾಖೆ ಡಿ.ಎಫ್.ಓ. ಮತ್ತು ಆರ್.ಎಫ್.ಓಗಳಿಗೂ ವಿಷಯ ಮುಟ್ಟಿಸಿರುವುದಾಗಿ ಸುಹೇಲ್ ವಿವರಿಸಿದರು. ಈ ಸಂಬಂಧ ಅರಣ್ಯ ಇಲಾಖೆ ಕೂಡಲೆ ಚಿರತೆ ಹಿಡಿದು ದೂರದ ಕಾಡಿಗೆ ಬಿಡುವಂತೆ ಮನವಿ ಮಾಡಿದರಲ್ಲದೆ ಕರು ಕಳೆದುಕೊಂಡ ಬಡ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಒಕ್ಕಲಿಗರ ಸಂಘದ ಚುನಾವಣೆ ಅಂತ್ಯ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜ.5
ಒಂದು ಜನಾಂಗದ ಸಂಘಟನೆಯ ಚುನಾವಣೆ ಈ ಮಟ್ಟಕ್ಕೆ ಅಬ್ಬರ ಆರ್ಭಟ ಹೊಂದಿರುತ್ತದೆ ಎಂಬುದು ಒಕ್ಕಲಿಗರ ಚುನಾವಣೆ ನೋಡಿದ ಜನಕ್ಕೆ ಇನ್ನೂ ನಂಬಲಾಗುತ್ತಿಲ್ಲ. ರಸ್ತೆಯ ತುಂಬಾ ಫ್ಲೆಕ್ಸ್ ಮತ್ತು ಬ್ಯಾನರ್ಗಳ ಭರಾಟೆ, ಗೋಡೆಗಳ ಮೇಲೆ ಬಣ್ಣವೇ ಕಾಣದಷ್ಟರ ಮಟ್ಟಿಗೆ ಅಂಟಿಸಿರುವ ಪ್ರಚಾರ ಪತ್ರಗಳು, ಕಾರ್ಯಕರ್ತರ ಗುಂಪು-ಸಭೆಗಳಿಗೆ ಭಾನುವಾರ ಕೊನೆಗೂ ತೆರೆಬಿದ್ದಿದೆ. ರಾಜ್ಯ ಒಕ್ಕಲಿಗರ ಸಂಘದ 15 ಸ್ಥಾನಗಳಿಗೆ ನಡೆದ ಚುನಾವಣೆ ಅಬ್ಬರಗಳೊಂದಿಗೆ ಭಾನುವಾರ ಸಂಜೆ ಮುಕ್ತಾಯಗೊಂಡಿದೆ. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 4 ಮತಗಟ್ಟೆಗಳನ್ನು ಸ್ಥಾಪಿಸಿ ಚುನಾವಣೆ ನಡೆಸಲಾಯಿತು. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸುಮಾರು 5400ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮತದಾರರಿದ್ದು ಅದರಲ್ಲು 4500ಕ್ಕೂ ಹೆಚ್ಚು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಎನ್ನಲಾಗಿದೆ.
ಬೆಳಗ್ಗೆಯಿಂದಲೇ ಬಿರುಸಿನಿಂದ ಮತದಾನ ಆರಂಭವಾಯಿತು. ಒಟ್ಟಾರೆಯಾಗಿ ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳನ್ನು ಒಳಗೊಳ್ಳುವ 15 ಸ್ಥಾನಗಳಿಗೆ 140 ಮಂದಿ ಕಣದಲ್ಲಿದ್ದರು. ಈಗ ಅಭ್ಯರ್ಥಿಗಳ ಚಿತ್ತ ಮತಎಣಿಕೆಯತ್ತ ನೆಟ್ಟಿದೆ.
ಚನ್ನಪಟ್ಟಣ ತಾ. ಶೇ.92.64 ಮತ
ಚನ್ನಪಟ್ಟಣ: ಒಕ್ಕಲಿಗರ ಸಂಘದ ಚುನಾವಣೆಗೆ ಸಂಘದ ಸದಸ್ಯರು ಉತ್ಸಾಹ ತೋರಿದ್ದು ತಾಲೂಕಿನಲ್ಲಿ ಶೇ.92.64 ರಷ್ಟು ಮತದಾನ ನಡೆದಿದೆ. ತಾಲೂಕಿನ 9158 ಮತದಾರರ ಪೈಕಿ 8484 ಮಂದಿ ಮತದಾರರು ಮತ ಚಲಾಯಿಸುವ ಮೂಲಕ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಉತ್ಸುಕತೆಯಿಂದ ಪಾಲ್ಗೊಂಡಿದ್ದು, ಭಾನುವಾರ ಮುಂಜಾನೆಯಿಂದಲೇ ತಾಲೂಕಿನ ಬಾಲಕರ ಕಾಲೇಜು ಮೈದಾನದಲ್ಲಿ ಕಿಕ್ಕಿರಿದ ಮತದಾರರು ಸರತಿ ಸಾಲಿನಲ್ಲಿ ಮತಚಲಾಯಿಸಿದರು. ಒಕ್ಕಲಿಗರ ಸಂಘದ ವತಿಯಿಂದ ಮತ ಚಲಾವಣೆಗೆ 24 ಮತಗಟ್ಟೆಗಳನ್ನು ಸ್ಥಾಪಿಸಿ 144 ಮಂದಿ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಮತದಾನದ ಹಿನ್ನೆಲೆಯಲ್ಲಿ ಬಾಲಕರ ಕಾಲೇಜು ಮೈದಾನದಲ್ಲಿ ಸೂಕ್ತ ಭದ್ರತೆ ಕಲ್ಪಿಸಲಾಗಿತ್ತು. ಬೆಳಗಿನ ಜಾವ ಮತಗಟ್ಟೆ ಮುಂಭಾಗದ ಸರತಿಯ ಸಾಲಿನಲ್ಲಿ ನಿಂತು ಸದಸ್ಯರು ಮತಚಲಾಯಿಸುತ್ತಿದ್ದರೆ ಮತದಾನ ಮುಕ್ತಾಯಗೊಳ್ಳುವ ಕೊನೆಯ ಕ್ಷಣದಲ್ಲಿ ದಾವಂತದಲ್ಲಿ ಮತ ಚಲಾವಣೆಗೆ ಮುಗಿ ಬಿದ್ದಿದ್ದು ಕಂಡು ಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

