ಬೆಂಗಳೂರು ಗ್ರಾಮಾಂತರ

ಕಂಬಕ್ಕೆ ಹಬ್ಬಿರುವ ಬಳ್ಳಿ ತೆರವುಗೊಳಿಸಿ

Published On :

ಚನ್ನಪಟ್ಟದ ಹೌಸಿಂಗ್‌ಬೋರ್ಡ್‌ನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಅಸಮರ್ಪಕ ನಿರ್ವಹಣೆಗೆ ಸಾಕ್ಷಿ ಎಂಬತೆ ವಿದ್ಯುತ್ ಕಂಬಗಳಿಗೆ ಬಳ್ಳಿಗಳು ಹಬ್ಬಿದ್ದು ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ಮಂದಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ.
ಕೇವಲ ವಿದ್ಯುತ್ ಕಂಬಕ್ಕೆ ಮಾತ್ರವಲ್ಲದೆ ಟ್ರಾನ್ಸ್‌ಫಾರ್ಮರ್‌ಗಳಿಗೂ ಬಳ್ಳಿಗಳು ಸುತ್ತುವರಿದಿದ್ದು, ಈಭಾಗದಲ್ಲಿ ಶಾಲಾಮಕ್ಕಳು, ವಯೋವೃದ್ಧರು ಸೇರಿದಂತೆ ಸಾಕಷ್ಟು ಮಂದಿ ತಿರುಗಾಡುತ್ತಿದ್ದು ಇದರಿಂದಾಗಿ ಅಪಾಯ ಎದುರಾಗುವ ಸಾಧ್ಯತೆ ಇದೆ. ಬೆಸ್ಕಾಂ ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡದರೂ ಇತ್ತ ಗಮನ ಹರಿಸುತ್ತಿಲ್ಲ.  ವಿದ್ಯುತ್ ಅವಘಡದಿಂದ ಸಾವು ಸಂಭವಿಸಿದಾಗ ಸ್ಥಳಕ್ಕೆ ಭೇಟಿ ಕೊಟ್ಟು ಪರಿಹಾರದ ಮಾತುಗಳನ್ನಾಡುವ  ಬೆಸ್ಕಾಂ ಅಧಿಕಾರಿಗಳು, ನಿರ್ಲಕ್ಷ್ಯ ವಹಿಸದೆ ಕೂಡಲೇ ಈ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಸರಿಪಡಿಸಬೇಕಿದೆ. ಇಲ್ಲದಿದ್ದರೆ ಆಗುವ ಅನಾಹುತಗಳಿಗೆ ಇಲಾಖೆಯೇ ಜವಾಬ್ದಾರಿಯಾಗಲಿದೆ. ಮನಬಂದಂತೆ ವಿದ್ಯುತ್ ಸರಬರಾಜು ಮಾಡುತ್ತಿರುವ ಬೆಸ್ಕಾಂ ತನ್ನಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದೆ ಅನಗತ್ಯವಾಗಿ ತಾನೇ ವಿದ್ಯುತ್ ಪೋಲು ಮಾಡುತ್ತಿದೆ. ಬೇಜವಾಬ್ದಾರಿಯಿಂದ ವರ್ತಿಸುವುದು ಬಿಟ್ಟು ಅನಾಹುತಸಂಭವಿಸುವ ಮೊದಲೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳ ಬಳಿ ಬಳ್ಳಿಗಳನ್ನು ತೆರವುಗೊಳಿಸಬೇಕು.
ಟಿ ಡಿ.ಪುನೀತ್, ಚನ್ನಪಟ್ಟಣ
ವಾಮಾಚಾರಕ್ಕೆ ಬ್ರೇಕ್ ಹಾಕಿ
ರಾಮನಗರದ ವಿಜಯನಗರ ಬಡಾವಣೆಯಲ್ಲಿ ಮೂರು ರಸ್ತೆಗಳು ಕೂಡುವ ಸ್ಥಳಗಳಲ್ಲಿ ವಾಮಾಚಾರ ನಡೆಸುತ್ತಿದ್ದಾರೆ. ಇದರಿಂದ ಈ ಭಾಗದ ಜನರು ಭಯ ಭೀತಿಯಿಂದ ರಸ್ತೆಯಲ್ಲಿ ಓಡಾಡುವುದೇ ದುಸ್ಥರವಾಗಿದೆ.  ಹೊತ್ತು ಮುಳುಗುತ್ತಿದ್ದಂತೆಯೇ ರಸ್ತೆಯಲ್ಲಿ ನಿಂಬೆಹಣ್ಣು, ಸೌತೇಕಾಯಿ, ಅರಿಶಿನ ಕುಂಕುಮ ಜತೆಗೆ ಮೊಟ್ಟೆಗಳನ್ನು ಒಡೆದು ವಾಮಾಚಾರ ನಡೆಸಲಾಗುತ್ತಿದೆ. ಕೆಲವು ವೇಳೆ ಪ್ರಾಣಿಗಳ ರಕ್ತದ ಜತೆಗೆ ಕೋಳಿ ತಲೆಯನ್ನೂ ತಂದು ಹಾಕಲಾಗುತ್ತಿದೆ.  ವಾಮಾಚಾರದಿಂದ ಏನಾದರೂ ತೊಂದರೆಯಾಗಬಹುದೇನೋ ಎಂಬ ಭೀತಿ ಒಂದೆಡೆಯಾದರೆ, ವಾಮಾಚಾರಕ್ಕೆ ತಂದು ಹಾಕಲಾದ ಆಹಾರ ಪದಾರ್ಥಗಳನ್ನು ಬೀದಿ ನಾಯಿಗಳು ಎಳೆದು ತಿನ್ನುತ್ತಿರುತ್ತವೆ.  ಇದರಿಂದ ಈ ದಾರಿಯಲ್ಲಿ ಸಾಗುವ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರನ್ನು ನಾಯಿಗಳು ಕಚ್ಚುವ ಭಯ ಮತ್ತೊಂದೆಡೆಯಾಗಿದೆ. ಮೂಢನಂಬಿಕೆ ನಿಷೇಧ ಕಾಯ್ದೆ ತರುವ ಮೂಲಕ ವಾಮಾಚಾರಕ್ಕೆ ಬ್ರೇಕ್ ಹಾಕಲು ಹೊರಟಿದ್ದ ಸರ್ಕಾರ ಕಾಯ್ದೆ ಬಗ್ಗೆ ಕೆಲವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಯ್ದೆ ಜಾರಿಯನ್ನು ಕೈಬಿಟ್ಟಿದೆ. ಆದರೆ, ಇಂತಹ ವಾಮಾಚಾರಗಳನ್ನು ನಿಯಂತ್ರಿಸುವವರು ಯಾರು ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.  ವಾಮಾಚಾರ ನಡೆಸಿದ ಪದಾರ್ಥಗಳನ್ನು ತೆರವುಗೊಳಿಸಲು ಯಾರೂ ಮುಂದಾಗುತ್ತಿಲ್ಲ. ನಗರಸಭೆ ಅಧಿಕಾರಿಗಳು ಸೇರಿದಂತೆ ಪೌರಕಾರ್ಮಿಕರು ಕೂಡ ಇದನ್ನು ಸ್ವಚ್ಛಗೊಳಿಸಲು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ನೈರ್ಮಲ್ಯವೂ ಉಂಟಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಂಡು ವಾಮಾಚಾರಕ್ಕೆ  ಬ್ರೇಕ್ ಹಾಕಬೇಕೆಂಬುದು ಈ ಭಾಗದ ಸಾರ್ವಜನಿಕರ ಆಗ್ರಹವಾಗಿದೆ.
ಟಿ ಶಶಿಕುಮಾರ್, ರಾಮನಗರ.
ವಾಹನ ಸವಾರರಿಗೆ ಅಪಾಯದ ಗಂಟೆ
ಮಾಗಡಿ ಪಟ್ಟಣದ ಸರ್ಕಾರಿ ಪರಿವೀಕ್ಷಣ ಮಂದಿರದ ಎದುರಿಗೆ ಇರುವ ಅತಂತ್ರ ಸೇತುವೆ ವಾಹನ ಸವಾರರಿಗೆ ಅಪಾಯದ ಗಂಟೆ ಬಾರಿಸುತ್ತಿದೆ. ರಸ್ತೆ ಅಗಲೀಕರಣದ ವೇಳೆ ಸೇತುವೆ ಬಳಿ ಇದ್ದ ಕಲ್ಲು ಬಂಡೆಯನ್ನು ಜೆಸಿಬಿ ಯಂತ್ರಗಳ ಮೂಲಕ ತೆಗೆಯಲಾಗಿತ್ತು. ಅಲ್ಲಿ ತಡೆಗೋಡೆ ನಿರ್ಮಿಸಿಲ್ಲದ ಕಾರಣ ರಾತ್ರಿ ವೇಳೆ ಅನೇಕ ವಾಹನ ಚಾಲಕರು ಸೇತುವೆಯಿಂದ ಹಳ್ಳಕ್ಕೆ ಬಿದ್ದು, ಗಾಯಗೊಂಡಿದ್ದಾರೆ. ಇದರ ಪಕ್ಕದಲ್ಲೇ ಶಾಲೆಯಿದ್ದು, ಮಕ್ಕಳು ಸಹ ಸೇತುವೆಯಿಂದ ಬಿದ್ದು ಗಾಯಗೊಂಡ ಅನೇಕ ಉದಾಹರಣೆಗಳಿವೆ. ಈ ಪ್ರವಾಸಿ ಮಂದಿರಕ್ಕೆ ಸಚಿವರು ಸೇರಿದಂತೆ ಅನೇಕ ರಾಜಕೀಯ ಗಣ್ಯರು, ಅಧಿಕಾರಿಗಳು ಬಂದು ಹೋಗುತ್ತಾರೆ. ಆದರೂ ತಡೆಗೋಡೆ ಇಲ್ಲದೆ ಈ ಸೇತುವೆ ಕಣ್ಣಿಗೆ ಕಾಣುವುದಿಲ್ಲವೇ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.  ಗುತ್ತಿಗೆದಾರರು ಅರೆಬರೆ ಕಾಮಗಾರಿ ಪೂರ್ಣಗೊಳಿಸಿ ತಡೆಗೋಡೆ ನಿರ್ಮಿಸದಿದ್ದರೂ ಅಧಿಕಾರಿಗಳು ಪೂರ್ಣ ಹಣ  ಬಿಡುಗಡೆಗೊಳಿಸಿ, ತಮ್ಮ ಜೇಬು ತುಂಬಿಸಿಕೊಂಡು ಸುಮ್ಮನಾಗುತ್ತಾರೆ. ಇದರಿಂದಾಗಿ ವಾಹನ ಚಾಲಕರು, ಶಾಲಾ ಮಕ್ಕಳು, ಪಾದಚಾರಿಗಳು ಸೇತುವೆ ಹಳ್ಳಕ್ಕೆ ಬಿದ್ದು, ಕೈ ಕಾಲು ಊನ ಮಾಡಿಕೊಳ್ಳುವ ಮುನ್ನಾ  ಸಂಬಂಧಪಟ್ಟ ಅಧಿಕಾರಿಗಳಾಲಿ, ಶಾಸಕರಾಗಲಿ ಕೂಡಲೆ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ನಾಗರಿಕರ ಆಶಯವಾಗಿದೆ.           
ಟಿ ಜಯಕುಮಾರ್, ಮಾಗಡಿ.
ಅಸಮರ್ಪಕ ಲೋಡ್‌ಶೆಡ್ಡಿಂಗ್ ನಿಲ್ಲಿಸಿ
ಬೇಸಿಗೆಗೆ ಮುನ್ನವೇ ಜಿಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಪ್ರಾರಂಭಗೊಂಡಿದೆ. ಬೆಸ್ಕಾಂ ಅಧಿಕಾರಿಗಳು ಸಮಯ ನಿಗದಿಪಡಿಸದೆ ತಮ್ಮ ಇಚ್ಛಾನುಸಾರ ಲೋಡ್‌ಶೆಡ್ಡಿಂಗ್ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಹತ್ತಿರವಾಗುತ್ತಿದ್ದು, ಬೆಳಿಗ್ಗೆ ಮತ್ತು ರಾತ್ರಿ ಎನ್ನದೆ ವಿದ್ಯುತ್ ನಿಲುಗಡೆಗೊಳಿಸಲಾಗುತ್ತಿದೆ. ಕೆಲವು ವೇಳೆ 2ಕ್ಕೂ ಹೆಚ್ಚು ತಾಸು ಕರೆಂಟ್  ಕೈಕೊಡುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳ ಓದಿಗೆ  ತೊಂದರೆಯಾಗುತ್ತಿದೆ.  ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ರೈತಾಪಿ ವರ್ಗಕ್ಕೂ ಸಮಸ್ಯೆ  ಎದುರಾಗಿದೆ. ಕೃಷಿಗೆ ಕೇವಲ 6 ತಾಸು ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು, ಅದನ್ನೂ ಕೂಡ ಸಮರ್ಪಕವಾಗಿ ನೀಡುತ್ತಿಲ್ಲ. ರಾತ್ರಿ ವೇಳೆ ವಿದ್ಯುತ್ ನೀಡುವುದರಿಂದ ನೀರು ಹಾಯಿಸಲು ಹೋದ ಎಷ್ಟೋ ಮಂದಿ ರೈತರು ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗಿದ್ದಾರೆ. ಬೆಳೆದ ಬೆಳೆಯೂ ಕೂಡ ಒಣಗುತ್ತಿದೆ.  ವಿದ್ಯುತ್ ನಿಲುಗಡೆಯಿಂದ ಕುಡಿಯುವ ನೀರಿನ ಪೂರೈಕೆಯಲ್ಲೂ ಸಾಕಷ್ಟು ವ್ಯತ್ಯಯ ಉಂಟಾಗಿದ್ದು, ವಾರಕ್ಕೊಮ್ಮೆಯೂ ಕೂಡ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಬೆಳಗ್ಗಿನ ವೇಳೆಯೇ  ವಿದ್ಯುತ್ ನಿಲುಗಡೆಗೊಳಿಸುವುದರಿಂದ ಅಡುಗೆ ತಯಾರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಎಲ್ಲಾ ಕೆಲಸಕ್ಕೂ ತಡವಾಗಿ ತೆರಳಬೇಕಾಗಿದೆ. ಬೆಸ್ಕಾಂ ಅಧಿಕಾರಿಗಳು ಕೂಡಲೇ ಈ ಸಮಸ್ಯೆಗೆ ಮುಕ್ತಿ ದೊರಿಕಿಸಿಕೊಡಬೇಕು.
ಟಿ ಕೆ.ಎನ್.ಜಯಲಕ್ಷ್ಮಿ, ರಾಮನಗರ.
ರೋಗಗಳ ಉಗಮಸ್ಥಾನ ಈ ಪ್ರದೇಶ...
ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದ ಸಮೀಪವೇ ಇರುವ ಸೌಂದರ್ಯ ಮಹಲ್ ಚಿತ್ರಮಂದಿರದ ಹಿಂಭಾಗದ ನಗರಸಭೆಗೆ ಸೇರಿದ ಜಾಗ ಅಕ್ಷರಶಃ ಹಲವು ರೋಗಗಳ ಉಗಮಸ್ಥಾನವಾಗಿದೆ.  ಸುತ್ತಮುತ್ತಲ ಆಸ್ಪತ್ರೆಗಳ ರಾಸಾಯನಿಕ ತ್ಯಾಜ್ಯ, ಔಷಧ, ಬಳಸಿದ ಸಿರಿಂಜ್‌ಗಳು, ಹಣ್ಣು ವ್ಯಾಪಾರಿಗಳು ಬಿಸಾಡುವ ತ್ಯಾಜ್ಯ, ಹೊಟೇಲ್‌ಗಳಿಂದ ಬಂದು ಬೀಳುವ ತ್ಯಾಜ್ಯ ಎಲ್ಲವೂ ಸೇರಿ ಈ ಜಾಗದಲ್ಲಿ ಮೂಗಿಡಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಲದ್ದಕ್ಕೆ ಪಕ್ಕದಲ್ಲೇ ಇರುವ 2 ಬಾರ್‌ಗಳು, ಕುಡುಕರ ಹಾವಳಿ ಒಟ್ಟಾರೆ ಪ್ರದೇಶವನ್ನು ನರಕಸದೃಶವಾಗಿಸಿದೆ. ವಿಷಕಾರಿ ತ್ಯಾಜ್ಯಗಳೂ ಕೊಳೆತು ಕೆಟ್ಟವಾಸನೆ ಬರುತ್ತಿದೆ. ಇನ್ನು ಬಸ್ ನಿಲ್ದಾಣ ಪ್ರದೇಶವಾದ್ದರಿಂದ ಜೊತೆಗೆ ಕಸವೂ ಸೇರಿ ಹದಗೆಟ್ಟಿರುವುದರಿಂದ ಹಲವರು ಇದನ್ನು ಮೂತ್ರ ವಿಸರ್ಜನೆಯ ಸ್ಥಳವಾಗಿಯೂ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಅವರು ಜಾಣಕುರುಡು  ಪ್ರದರ್ಶಿಸುತ್ತಿದ್ದಾರೆ. ಯಾರೋ ಕೆಲವರ ಹಿತಾಸಕ್ತಿಗೆ ನಗರದ ಹೃದಯಭಾಗದ ಉತ್ತಮ ಪ್ರದೇಶವನ್ನು ಕಸದ ತಿಪ್ಪೆಯಾಗಿಸಿದ್ದಾರೆ. ಈ ಪ್ರದೇಶದಲ್ಲಿ ದ್ವಿಚಕ್ರವಾಹನ ಪಾರ್ಕಿಂಗ್ ಅಥವಾ ಆಟೋರಿಕ್ಷಾ ಪಾರ್ಕಿಂಗ್ ವ್ಯವಸ್ಥೆ ಮಾಡಿ ಎಂಬುದು ಜನರ ಬಹುದಿನದ ಬೇಡಿಕೆ. ಆದರೆ ಜಾಣಮರೆವಿನ ಗಾಢ ನಿದ್ರೆಯಲ್ಲಿರುವ ನಗರಸಭೆ ಆಡಳಿತ, ಚುನಾಯಿತ ಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ. ಇದಕ್ಕೆ ಹೊಂದಿಕೊಂಡಂತೇ ಖಾಸಗಿ ನರ್ಸಿಂಗ್ ಹೋಂ ಕೂಡ ಇದೆ. ರೋಗಮುಕ್ತವಾಗಬೇಕಿದ್ದ ಪ್ರದೇಶವೇ ರೋಗಗ್ರಸ್ತವಾಗಿರುವುದು ದುರಂತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.