ಪರಿಶಿಷ್ಟ ಜಾತಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ
ರಾಮನಗರ: ಪರಿಶಿಷ್ಟ ಜಾತಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಮುದಾಯದ ಏಳ್ಗೆಗೆ ಶ್ರಮವಹಿಸಿ, ಹಿತರಕ್ಷಣೆಗೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಆಗ್ರಹಿಸಿ ದಲಿತ ಮುಖಂಡರ ನಿಯೋಗವು ಅನುಸೂಚಿತ ಜಾತಿ ಮತ್ತು ಬುಡಕಟ್ಟು ಜನಾಂಗಗಳ ಆಯೋಗದ ಅಧ್ಯಕ್ಷ ಅಶ್ವತ್ಥ ನಾರಾಯಣ್ ಅವರಿಗೆ ಮನವಿ ಸಲ್ಲಿಸಿದೆ.
ಕಂದಾಯ ಭವನದಲ್ಲಿ ಸೋಮವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಶ್ವತ್ಥ ನಾರಾಯಣ್ ಅವರನ್ನು ಭೇಟಿಯಾದ ನಿಯೋಗವು, ಇಂತಹ ಸಭೆಗಳ ಮೂಲಕ ದಲಿತ ವರ್ಗದವರ ಕಲ್ಯಾಣ ಮತ್ತು ಸಂರಕ್ಷಣೆಗಾಗಿ ಕೈಗೊಂಡಿರುವ ಕಾರ್ಯಕ್ರಮಗಳ ಸಮಗ್ರ ಪರಿಶೀಲನೆ ಆಗಬೇಕು ಎಂದು ಒತ್ತಾಯಪಡಿಸಿದರು.
ದಲಿತರು ಹೆಚ್ಚಾಗಿ ವಾಸಿಸುವ ಪ್ರತಿಯೊಂದು ಗ್ರಾಮದಲ್ಲೂ ಅವರಿಗಾಗಿ ಪ್ರತ್ಯೇಕ ಸ್ಮಶಾನಕ್ಕೆ ಜಮೀನು
ಒದಗಿಸಬೇಕು. ದಲಿತ ಸಮುದಾಯಕ್ಕೆ ಹೊಸದಾಗಿ ಜಾತಿಗಳ ಸೇರ್ಪಡೆಗೆ ಅವಕಾಶ ಕೂಡದು. ಮೀಸಲು ಪ್ರಮಾಣ ಹೆಚ್ಚಳಕ್ಕಾಗಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸುವುದೂ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ರಾಮನಗರ ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಸಂಬಂಧ 600ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಬಹುತೇಕ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಹಾಕಿ ಅನ್ಯಾಯವೆಸಗಲಾಗಿದೆ.
ಅವೆಲ್ಲವುಗಳ ಬಗ್ಗೆ ಮರು ತನಿಖೆ ಆಗಬೇಕಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ನಿಗದಿತ ಕಾಲಕ್ಕೆ ತಪ್ಪದ ಸಭೆ ನಡೆಸಬೇಕು ಎಂದು ನಿಯೋಗ ಮನವಿ ಮಾಡಿತು.
ಗುತ್ತಿಗೆ ಕಾಮಗಾರಿಗಳಲ್ಲಿ ದಲಿತರಿಗೆ ಶೇಕಡ 22.75 ಮೀಸಲಾತಿ ನಿಯಮ ಪಾಲನೆ ಆಗದ ಬಗ್ಗೆ ಗಂಭೀರ ಕ್ರಮ ಅಗತ್ಯವಾಗಿದೆ. ಹಂದಿಜೋಗಿ, ದೊಂಬರು, ಬುಡ್ಗ ಜಂಗಮ, ಹಕ್ಕಿಪಿಕ್ಕಿ, ಇರುಳಿಗರು ಮುಂತಾದ ಸಣ್ಣಪುಟ್ಟ ಪರಿಶಿಷ್ಟ ಜಾತಿ-ಪಂಗಡಕ್ಕೆ ಸೇರಿದವರ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಯಾವುದೇ ಮಾಹಿತಿ ಇಲ್ಲವಾಗಿರುವ ಕುರಿತು ಕ್ರಮ ಕೈಗೊಳ್ಳಬೇಕು ಎಂದರು.
ಅರಣ್ಯ ಭೂಮಿಯಲ್ಲಿ ಸುದೀರ್ಘ ಅವಧಿಯಿಂದ ಸಾಗುವಳಿ ಮಾಡುತ್ತಿರುವ ದಲಿತರನ್ನು ಒಕ್ಕಲೆಬ್ಬಿಸುವುದು ಸಲ್ಲದು. ಇಂತಹ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವು ದಲಿತರಿಗೆ ರಕ್ಷಣೆ ಒದಗಿಸುತ್ತಿಲ್ಲ. ಎಲ್ಲ ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು. ಮನವಿಗೆ
ಸಕಾರಾತ್ಮಕವಾಗಿ ಸ್ಪಂದಿಸಿದ ಅಶ್ವತ್ಥ ನಾರಾಯಣ್ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸುವ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

