ಅನಿರ್ದಿಷ್ಟಾವಧಿ ನಿರಶನ ನಾಲ್ಕನೇ ದಿನಕ್ಕೆ
ರಾಮನಗರ/ಚನ್ನಪಟ್ಟಣ: ಶಿಂಷಾ ನದಿ ಪಾತ್ರದಲ್ಲಿ ಮರಳುಗಾರಿಕೆ ನಿಷೇಧಕ್ಕೆ ಆಗ್ರಹಿಸಿ ಚನ್ನಪಟ್ಟಣದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಸಿದ್ದರಾಮ ಹೆಗ್ಗಡೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ನಿರಶನ ನಾಲ್ಕನೇ ದಿನವಾದ ಗುರುವಾರವೂ ಮುಂದುವರೆದಿದ್ದು, ರೈತ ಮುಖಂಡ ಸಿ.ಪುಟ್ಟಸ್ವಾಮಿ ಸಹಿತ ವಿವಿಧ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿವೆ.
ತಾಲೂಕಿನಲ್ಲಿ ಕಳೆದ 14 ವರ್ಷದಿಂದ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ, ಲೋಕಾಯುಕ್ತ ಇಲ್ಲವೇ ಉನ್ನತ ಸಂಸ್ಥೆಯಿಂದ ತನಿಖೆ ನಡೆಸುವವರೆಗೆ ಹೋರಾಟ ಅಂತ್ಯಗೊಳಿಸುವುದಿಲ್ಲ ಎಂದು ಮುಷ್ಕರನಿರತ ಪುಟ್ಟಸ್ವಾಮಿ ಪಟ್ಟು ಹಿಡಿದಿದ್ದಾರೆ.
ಪುಟ್ಟಸ್ವಾಮಿ ಆಗ್ರಹ: ಅಕ್ರಮ ಮರಳುಗಾರಿಕೆಯಿಂದ ಈ ಭಾಗದ ಜನ ಜೀವನ ಬಲಿಯಾಗಿದೆ. ಬೆರಳೆಣಿಕೆ ಮಂದಿಯನ್ನು ಶ್ರೀಮಂತರನ್ನಾಗಿಸಲು ಲಕ್ಷಾಂತರ ಜನರ ಹಿತವನ್ನು ಬಲಿ ತೆಗೆದುಕೊಳ್ಳುವುದು ನಿಲ್ಲಬೇಕು. ಮರಳು ಮಾಫಿಯಾವನ್ನು ಮಟ್ಟ ಹಾಕಲು ಜಿಲ್ಲಾಡಳಿತ ಸ್ಪಷ್ಟ ನೀತಿ ರೂಪಿಸಬೇಕು ರಾಜ್ಯ ರೈತ ಸಂಘದ ಮುಖಂಡ ಸಿ.ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ. ಈ ತಾಲೂಕಿನ ಪರಿಸರದ ಬಗ್ಗೆ ಪ್ರತಿಯೊಬ್ಬರು ಆಲೋಚಿಸಬೇಕಿದೆ. ಮರಳು ಗಣಿಗಾರಿಕೆಯಿಂದ ತಾಲೂಕಿಗೆ ಈಗಾಗಲೇ ಗಂಡಾಂತರ ಎದುರಾಗಿದೆ. ಮತ್ತಷ್ಟು ಅನಾಹುತ ಸಂಭವಿಸದಿರಲು ಸಿದ್ದರಾಮ ಹೆಗ್ಗಡೆ ನಡೆಸುತ್ತಿರುವ ಹೋರಾಟಕ್ಕೆ ವಿಷಾಯಾಧರಿತ ಬೆಂಬಲ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಆರೋಗ್ಯದತ್ತ ಅಲಕ್ಷ್ಯ
ಕಳೆದ ನಾಲ್ಕು ದಿನಗಳಿಂದ ಸಿದ್ದರಾಮ ಹೆಗ್ಗಡೆ ಮರಳು ಗಣಿಗಾರಿಕೆಗೆ ನಿಷೇಧಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಅವರ ಆರೋಗ್ಯದ ಬಗ್ಗೆ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ. ಧರಣಿ ನಿರತರ ಹೆಗ್ಗಡೆ ಆರೋಗ್ಯ ತಪಾಸಣೆಯನ್ನು ಸರ್ಕಾರಿ ವೈದ್ಯರಿಂದ ನಡೆಸುವ ಕನಿಷ್ಠ ಕಾಳಜಿಯನ್ನೂ ಅಧಿಕಾರಿಗಳು ತೋರಿಲ್ಲ. ಅವರ ಸಮಸ್ಯೆ, ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿಯೂ ಇಲ್ಲ.
ರಕ್ಷಣೆಯೂ ಇಲ್ಲ
ಮರಳು ಮಾಫಿಯಾದಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎನ್ನುವ ಮಾಹಿತಿಯನ್ನು ಸಿದ್ದರಾಮ ಹೆಗ್ಗಡೆ ಹೊರಗೆಡವಿದ ನಂತರವೂ ಅವರಿಗೆ ಸೂಕ್ತ ರಕ್ಷಣೆಯನ್ನೂ ಒದಗಿಸಿಲ್ಲ. ಅವರ ಪ್ರಾಣ ಹಾನಿಯಾದರೆ ಹೊಣೆ ಯಾರೆನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ಹೆಗ್ಗಡೆ ಬೇಡಿಕೆಗಳು
ಟಿ ಚನ್ನಪಟ್ಟಣ ತಾಲೂಕಿನ ಶಿಂಷಾ, ಕಣ್ವ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಬೇಕು.
ಟಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸುವಲ್ಲಿ ವಿಫಲಗೊಂಡಿರುವ ಅಧಿಕಾರಿಗಳನ್ನು ತಕ್ಷಣ ಅಮಾನತುಪಡಿಸಬೇಕು.
ಟಿ ಮರಳು ಲೂಟಿಯ ಪ್ರಮಾಣವನ್ನು ಅಂದಾಜಿಸಿ, ಲೂಟಿಕೋರರಿಂದ ಸೂಕ್ತ ಮೊತ್ತ ವಸೂಲು ಮಾಡಬೇಕು.
ಟಿ ಸ್ಥಳೀಯ ಅಗತ್ಯತೆಗಳಿಗೆ ಪರಿಸರಕ್ಕೆ ಹಾನಿ ಆಗದಂತೆ, ಕಡಿಮೆ ದರದಲ್ಲಿ ಮರಳು ಒದಗಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

