ಬೆಂಗಳೂರು ಗ್ರಾಮಾಂತರ

ಎಸಿ ಕಚೇರಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ

Published On :

ಕೆ.ಆರ್. ರವಿಕಿರಣ್
ದೊಡ್ಡಬಳ್ಳಾಪುರ: ಅಂತೂ ದೊಡ್ಡಬಳ್ಳಾಪುರ ಜನರ ದಶಕಗಳ ಹೋರಾಟಕ್ಕೆ ಜಯ ಸಂದಿದೆ. ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿ ಕೊನೆಗೂ ನಗರಕ್ಕೆ ಸ್ಥಳಾಂತರಗೊಂಡಿದೆ. ಈ ಕುರಿತು ಶುಕ್ರವಾರ ರಾಜ್ಯ ಸರ್ಕಾರದ ಅಧಿಕೃತ ಆದೇಶ ಹೊರಬಿದ್ದಿದೆ. ನಿರಂತರವಾಗಿ ನಡೆಯುತ್ತಿದ್ದ ಹೋರಾಟಗಳಿಗೆ ಯಶಸ್ಸಿನ ಉಡುಗೊರೆ ದೊರೆತಿರುವುದು ತಾಲೂಕಿನ ಜನತೆಯಲ್ಲಿ ಹರ್ಷ ಮೂಡಿಸಿದೆ.
ಅಧಿಕೃತ ಆದೇಶ: ಸರ್ಕಾರದ ಆದೇಶ ಸಂಖ್ಯೆ ಕಂಇ 28 ಡಬ್ಲೂಬಿಆರ್ 2013, ಬೆಂಗಳೂರು ದಿನಾಂಕ 24-01-2014ರಂತೆ ಬೆಂಗಳೂರಿನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿಯನ್ನು ಬೆಂಗಳೂರಿನಿಂದ ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಲ್ಲಿನ ಎಪಿಎಂಸಿ ಕಚೇರಿಯ ಆವರಣದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಲು ಸರ್ಕಾರದ ಅನುಮೋದನೆ ನೀಡಲಾಗಿದೆ. ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ ಎಫ್ಡಿ 1 ಟಿಎಫ್ಪಿ 1996 ದಿನಾಂಕ 10-07-1996ರ ಐಟಂ ನಂ.53ರನ್ವಯ ಸರ್ಕಾರದ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಿರುವ ಅಧಿಕಾರಾನ್ವಯ ಹೊರಡಿಸಲಾಗಿದೆ. ಈ ಆದೇಶವನ್ನು ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ ಇವರು ಹೊರಡಿಸಿದ್ದಾರೆ.
ಆದೇಶದ ಹೂರಣ: ಉಪವಿಭಾಗಾಧಿಕಾರಿ ಕಚೇರಿಯನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸಿ ಆದೇಶಿಸಿರುವ ಸರ್ಕಾರದ ಆದೇಶದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ವತಿಯಿಂದ 2013ರ ಅ.1ರಂದು ಸಲ್ಲಿಸಲಾಗಿದ್ದ ಮನವಿಯಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯನ್ನು ಬೆಂಗಳೂರಿನಿಂದ ದೊಡ್ಡಬಳ್ಳಾಪುರ ತಾಲೂಕು ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಮತ್ತು ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಕೋರಿರುತ್ತಾರೆಂದು, ತತ್ಸಂಬಂಧದಲ್ಲಿ ತಹಶೀಲ್ದಾರ್ರ ಪತ್ರ(ಅ.5, 2013) ಉಲ್ಲೇಖಿಸಿ ತಾಲೂಕಿನ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಪತ್ರಿಕಾ ಸಂಪಾದಕರು ಮತ್ತಿತರ ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪವಿಭಾಗಾಧಿಕಾರಿ ಕಚೇರಿಯನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸಲು ಮತ್ತು ಜಿಲ್ಲಾ ಕೇಂದ್ರ ಸ್ಥಾನವನ್ನಾಗಿ ಮಾಡಲು ಕ್ರಮ ಕೈಗೊಳ್ಳದಿದ್ದಲ್ಲಿ ಧ್ವಜಾರೋಹಣಕ್ಕೆ ಅಡ್ಡಿಯುಂಟು ಮಾಡುತ್ತೇವೆಂದು ತಿಳಿಸಿರುವುದಾಗಿ ತಹಶೀಲ್ದಾರ್ ವರದಿ ಮಾಡಿದ್ದು, ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ.     ದೊಡ್ಡಬಳ್ಳಾಪುರವು ಬೆಂಗಳೂರಿನಿಂದ 39.5 ಕಿ.ಮೀ ದೂರವಿದ್ದು, ಉಪವಿಭಾಗ ಕೇಂದ್ರವನ್ನು ಸ್ಥಳಾಂತರಿಸಿದಲ್ಲಿ ಇದರಿಂದ ತಾಲೂಕು ಕೇಂದ್ರವನ್ನು ತಲುಪಲು ದೇವನಹಳ್ಳಿಯಿಂದ 20, ಹೊಸಕೋಟೆಯಿಂದ 50 ಮತ್ತು ನೆಲಮಂಗಲದಿಂದ 30 ಕಿ.ಮೀ ಅಂತರವಿರುವುದಾಗಿ ವರದಿ ಮಾಡಿರುತ್ತಾರೆ.
ತತ್ಸಂಬಂಧದಲ್ಲಿ ಪರಿಸೀಲಿಸಿ ಸರ್ಕಾರದ ಪತ್ರದಲ್ಲಿನ ಕೋರಿಕೆಯಂತೆ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಯವರ ಕಚೇರಿಯನ್ನು ಬೆಂಗಳೂರಿನಿಂದ ದೊಡ್ಡಬಳ್ಳಾಪುರ ತಾಲೂಕು ಕೇಂದ್ರಕ್ಕೆ ಸ್ಥಳಾಂತರಿವುದಾದಲ್ಲಿ ಇದಕ್ಕೆ ಸ್ಥಳಾವಕಾಶದ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳನ್ನು ಕೋರಲಾಗಿತ್ತು.
   ಬೆಂ.ಗ್ರಾ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿರಿಂದ ಸಲ್ಲಿಸಲಾಗಿರುವ ವರದಿಯೊಂದಿಗೆ ಕಚೇರಿಗೆ ಮಂಜೂರಾಗಿರುವ ಜಮೀನು ಆರ್ಟಿಸಿಯೊಂದಿಗೆ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಗೆ ಸೇರಿದ ರೋಜಿಪುರ ಸರ್ವೇನಂ.3 - 20 ಎಕರೆ ಜಮೀನನ್ನು ಉಪವಿಭಾಗಾಧಿಕಾರಿಗಳ ಕಚೇರಿ ಮತ್ತು ವಸತಿ ಗೃಹಗಳಿಗೆ ಈಗಾಗಲೇ ಮಂಜೂರಾಗಿದ್ದು ಭೂಮಂಜೂರಾತಿ ಮಾಡಿ ಜಮೀನು ಕಾಯ್ದಿರಿಸಿರುವುದರಿಂದ ಸದರಿ ಕಚೇರಿಯನ್ನು ದೊಡ್ಡಬಳ್ಳಾಪುರ ಕೇಂದ್ರ ಸ್ಥಾನಕ್ಕೆ ಸ್ಥಳಾಂತರಿಸಬಹುದಾಗಿದೆ ಎಂದು ಅಭಿಪ್ರಾಯ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಸರ್ಕಾರದ ಮಹತ್ವದ ಆದೇಶ ಶುಕ್ರವಾರ ಹೊರಬಿದ್ದಿದೆ.
ಪ್ರಗತಿಯ ಧ್ಯೋತಕ: ಉಪವಿಭಾಗಾಧಿಕಾರಿ ಕಚೇರಿ ಸ್ಥಳಾಂತರ ಆದೇಶ ಮಹತ್ವದ ಬೆಳವಣಿಗೆ ಎಂದು ವಿಶ್ಲೇಷಿಸಿರುವ ಇಲ್ಲಿನ ಸಂಘಟನೆಗಳು ನಗರದ ಪ್ರಗತಿಯ ಹಿತದೃಷ್ಟಿಯಲ್ಲಿ ಮತ್ತು ಗ್ರಾಮಾಂತರ ಪ್ರದೇಶದ ಜನರ ಕೆಲಸ ಕಾರ್ಯಗಳು ಸುಗಮವಾಗಿ ನಡೆಸಲು ರಹದಾರಿ ಸಿಕ್ಕಂತಾಗಿದೆ. ಅತಿ ಶೀಘ್ರವಾಗಿ ಉಪವಿಭಾಗಾಧಿಕಾರಿ ಕಚೇರಿ ನಿರ್ಮಾಣಕ್ಕೆ ಸರ್ಕಾರ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು. 1 ವರ್ಷದೊಳಗೆ ಕಚೇರಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.


ಜನಪ್ರತಿನಿಧಿಗಳು ಏನಂತಾರೆ?



ಜನತೆ ಹೋರಾಟಕ್ಕೆ ಸಂದ ಜಯ
ಇದು ದೊಡ್ಡಬಳ್ಳಾಪುರದ ಸಮಗ್ರ ಜನತೆಯ ಜಯ. ಕಳೆದ 5 ದಶಕಗಳಿಂದ ಆಗಿದ್ದ ಅನ್ಯಾಯಕ್ಕೆ ಈಗ ನ್ಯಾಯ ಸಿಕ್ಕಿದೆ. ಈ ಹಂತದಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿಯನ್ನು ದೊಡ್ಡಬಳ್ಳಾಪುರ ನಗರಕ್ಕೆ ಸ್ಥಳಾಂತರಿಸಿ ಆದೇಶ ಮಾಡಿರುವ ಸಿಎಂ ಸಿದ್ಧರಾಮಯ್ಯ ಅವರಿಗೆ ಚಿರಋಣಿ. ಜಿಲ್ಲಾ ಕೇಂದ್ರ ಹೋರಾಟ ಸಮಿತಿ, ಮಾಧ್ಯಮಗಳು, ವಿವಿಧ ಸಂಘ-ಸಂಸ್ಥೆಗಳ ಅಖಂಡ ಹೋರಾಟದ ಪ್ರತಿಫಲ ಈ ಜಯ. ಎಲ್ಲ ಅಡೆತಡೆಗಳನ್ನು ಮೀರಿ ಹೋರಾಟ ಫಲಕೊಟ್ಟಿದೆ. ಸ್ಥಳಾಂತರ ಪ್ರಕ್ರಿಯೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರ ಕಚೇರಿ ಸ್ಥಳಾಂತರ ಮಾಡಲಾಗುವುದು.
ಟಿ ಟಿ. ವೆಂಕಟರಮಣಯ್ಯ, ಶಾಸಕರು, ದೊಡ್ಡಬಳ್ಳಾಪುರ.
ಮುಂದಿನ ಗುರಿ ಜಿಲ್ಲಾ ಕೇಂದ್ರ ಸ್ಥಾಪನೆ
ದೊಡ್ಡಬಳ್ಳಾಪುರಕ್ಕೆ ಯಾವತ್ತೋ ಬರಬೇಕಿದ್ದ ಉಪವಿಭಾಗಾಧಿಕಾರಿ ಕಚೇರಿ ಈಗಲಾದರೂ ಬಂತಲ್ಲ ಎಂಬ   ತೃಪ್ತಿ ಇದೆ. ಇದಕ್ಕೆ ಶ್ರಮಿಸಿದ ಎಲ್ಲ ಹೋರಾಟಗಾರರು, ಜನಪ್ರತಿನಿಧಿಗಳು, ಸಂಘಟನೆಗಳಿಗೆ ಅಭಿನಂದನೆ. ನಮ್ಮ ಮುಂದಿನ ಗುರಿ ಜಿಲ್ಲಾ ಕೇಂದ್ರದ ಸ್ಥಾಪನೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವದಂದು ಭಗತ್ಸಿಂಗ್ ಕ್ರೀಡಾಂಗಣದಲ್ಲಿ ದೊಡ್ಡಬಳ್ಳಾಪುರ ವಿಜಯದಿನ ಆಚರಣೆ ಮಾಡಿ ಸಂಭ್ರಮಿಸಲಾಗುವುದು. ಸಿಎಂ ಸಹಿತ ಎಲ್ಲರಿಗೂ ಅಭಿನಂದನೆ.
ಟಿ ರಾಜೇಂದ್ರಕುಮಾರ್, ಪ್ರಧಾನ ಸಂಚಾಲಕರು, ಜಿಲ್ಲಾ ಕೇಂದ್ರ ಹೋರಾಟ ಸಮಿತಿ.
ಸ್ವಾಭಿಮಾನಿ ವಿಜಯ
ಉಪವಿಭಾಗ ಕೇಂದ್ರ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಗೊಳ್ಳುವ ಅಧಿಕೃತ ಆದೇಶ ಸರ್ಕಾರದಿಂದ ಹೊರಬಿದ್ದಿದೆ. ಇದು ದಶಕಗಳ ನಿರ್ಲಕ್ಷ್ಯಕ್ಕೆ ಕೊನೆಗೂ ಸಿಕ್ಕ ಸ್ವಾಭಿಮಾನಿ ವಿಜಯ. ಈ ಹಂತದಲ್ಲಿ ಸಿಎಂ ಸಿದ್ಧರಾಮಯ್ಯ, ಕಂದಾಯ ಮಂತ್ರಿ ಶ್ರೀನಿವಾಸಪ್ರಸಾದ್, ಮುಖ್ಯ ಕಾರ್ಯದರ್ಶಿಗಳು, ಅಧೀನ ಕಾರ್ಯದರ್ಶಿಗಳು, ಸಂಸದ ವೀರಪ್ಪ ಮೊಯ್ಲಿ, ಶಾಸಕ ಟಿ. ವೆಂಕಟರಮಣಯ್ಯ, ಜಿಲ್ಲಾಧಿಕಾರಿಗಳು, ಎಲ್ಲ ಸಂಘಟನೆಗಳ ಮುಖಂಡರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ವಿಜಯದ ಅಭಿನಂದನೆ.
ಟಿ ತೂಬಗೆರೆ ಷರೀಫ್ ಮತ್ತು ರವಿಕಿರಣ್,
ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಸಂಚಾಲಕರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.