ಬೆಂಗಳೂರು ಗ್ರಾಮಾಂತರ

'ಮನೋಜ್ಞಅಭಿನಯದ ನಟ ಉದಯಕುಮಾರ್'

Published On :

ಕನಕಪುರ: ದಕ್ಷಿಣ ಭಾರತದಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಅಭಿನಯದ ವಿಶಿಷ್ಟ ಪರಂಪರೆ ರೂಪಿಸಿದ ಕೀರ್ತಿ ಕಲಾಕೇಸರಿ ಅಭಿಜಾತ ಕಲಾವಿದ ದಿ.ಉದಯಕುಮಾರ್ ಅವರದ್ದು. ತಮ್ಮ ಮನೋಜ್ಞ ಅಭಿನಯದ ಮೂಲಕ ಚಿತ್ರಪ್ರೇಮಿಗಳು ಹಾಗೂ ಕನ್ನಡಿಗರ ಮನಸ್ಸಿನಲ್ಲಿ ನೆಲೆ ನಿಂತವರು ಎಂದು ಮಾಜಿ ವಿಪ ಸದಸ್ಯ ಎಸ್.ರವಿ ಹೇಳಿದರು.
ಅವರು ಕನಕಪುರದ ಡಾ.ರಾಜ್ ಬಯಲು ರಂಗಮಂದಿರದಲ್ಲಿ ಬೆಂಗಳೂರಿನ ಉದಯ ಕಲಾನಿಕೇತನ ಸಂಸ್ಥೆ ಆಯೋಜಿಸಿದ್ದ ದಿ.ಉದಯಕುಮಾರ್ ಸ್ಮರಣೆಯ ಎರಡು ದಿನಗಳ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಸಂಜೆಯ ಸಮಾರೋಪ ನೆರವೇರಿಸಿ ಮಾತನಾಡುತ್ತಿದ್ದರು. ಶ್ರೀಮತಿ ಸುಶೀಲಾದೇವಿ ಉದಯಕುಮಾರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದ ಸಂಚಾಲಕಿ, ನಟಿ ರೇಣುಕಾ ಬಾಲಿ ಉದಯಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಕಳೆದ ಮೂರು ದಶಕಗಳಿಂದ ಬೆಂಗಳೂರಿನಲ್ಲಿ ಪ್ರತಿ ವರ್ಷವೂ ದಿ.ಉದಯಕುಮಾರ್ ಸ್ಮರಣೆ ಕಾರ್ಯಕ್ರಮ ನಡೆಯುತ್ತಿದೆ. ಮೂರು ವರ್ಷಗಳಿಂದ ಕನಕಪುರದಲ್ಲಿ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಲಾಕೇಸರಿಯ ನೆನಪನ್ನು ಚಿರಂತನವಾಗಿರಿಸಲು ಶ್ರಮಿಸುತ್ತಿದ್ದೇವೆ. ಅಲ್ಲದೆ ಗ್ರಾಮೀಣ ಮಕ್ಕಳಿಗೆ ಭರತನಾಟ್ಯ, ಕಥಕ್, ಗಾಯನ, ಅಭಿನಯ ಮೊದಲಾದವುಗಳನ್ನು ನಡೆಸಲು ಪ್ರತಿ ವರ್ಷ ಶಿಬಿರಗಳನ್ನು ಸಂಸ್ಥೆ ವತಿಯಿಂದ ನಡೆಸಲಾಗುವುದು ಎಂದರು.
ಬೆಂಗಳೂರಿನ ಶೃತಿ ತಂಡದವರಿಂದ ಗುಜರಾತಿ ಜಾನಪದ ನೃತ್ಯ, ನಾಟ್ಯಸರಸ್ವತಿ ಶಾಂತಲಾ ಕಲಾಸಂಘದ ಪಳಂಕರು ನಾಟಕ ಪ್ರದರ್ಶನ, ರಂಗ ನಿರ್ದೇಶಕಿ ದಾಕ್ಷಾಯಣಿ ಭಟ್ರ ಜಪಾನಿ ನಾಟಕದ ರೂಪಾಂತರ ಬಸ್ತಿ ಹಾಗೂ ಉದಯ ಕಲಾನಿಕೇತನ ಕಲಾವಿದರ ಸಿದ್ದ ಕುಡಿದು ಬಿದ್ದ ನಾಟಕ ಪ್ರದರ್ಶನಗಳು ನೆರೆದ ಪ್ರೇಕ್ಷಕರ ಮನ ಸೆಳೆದವು.  ಮುಖ್ಯ ಅತಿಥಿಗಳಾಗಿ ಪುರಸಭಾ ಮುಖ್ಯಾಧಿಕಾರಿ ಮಾಯಣ್ಣಗೌಡ, ಸಮಾಜ ಸೇವಕಿ ಕಲ್ಪನಾ ಸುಂದರೇಶ್ ಇದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಮರಳವಾಡಿ ಉಮಾಶಂಕರ್ ಸ್ವಾಗತಿಸಿದರು. ಜೆಪಿನ್ ಭಾನುಪ್ರಕಾಶ್ ನಿರೂಪಿಸಿದರು. ಡಿ.ಎಸ್.ಸತೀಶ್ ವಂದಿಸಿದರು.
ರಾಷ್ಟ್ರ ಮಟ್ಟಕ್ಕೆ ರಘುಪತಿ ಆಯ್ಕೆ
ಮಾಗಡಿ: ತಾಲೂಕಿನ ಕುದೂರು ಹೋಬಳಿ ಬೆಟ್ಟಹಳ್ಳಿ ಕಾಲೋನಿಯ ಶಾಲಾ ಶಿಕ್ಷಕ ರಘುಪತಿ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಸತತ ಮೂರು ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 400 ಮೀ. ಹರ್ಡಲ್ಸ್ ಹಾಗೂ 400 ಮೀ. ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸುವುದರ ಮೂಲಕ ರಾಷ್ಟ್ರ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಪ್ರತಿನಿಧಿಸಲಿದ್ದಾರೆ.
ಸೇವೆಗೆ ಸೇರಿದ್ದಾಗಿನಿಂದಲೂ ಮೂರು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಗೆದ್ದಿರುವ ಇವರು 2009ನೇ ಇಸವಿಯಲ್ಲಿ ಮೈಸೂರು, 2011ನೇ ಇಸವಿಯಲ್ಲಿ ಚಿತ್ರದುರ್ಗ,ಇತ್ತೀಚೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಇವರ ಕ್ರೀಡಾಸಕ್ತ ಸಾಧನೆಯನ್ನು ಬಿಂಬಿಸುತ್ತದೆ.
ಸತತ ಪರಿಶ್ರಮದಿಂದ ವಿಶೇಷ ಸಾಧನೆಗಳ ಮೂಲಕ ತಾಲೂಕಿನ ಗಮನ ಸೆಳೆಯುತ್ತಿರುವ ಶಿಕ್ಷಕ ರಘುಪತಿ ಭವಿಷ್ಯ ಉಜ್ವಲವಾಗಲೆಂದು ಬೆಟ್ಟಹಳ್ಳಿ ಕಾಲೋನಿಯ ಶಾಲಾ ಶಿಕ್ಷಕರು ಹಾಗು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕಾಂತರಾಜು, ತಾಲೂಕು ಪ್ರಾಶಾಶಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ರಮೇಶ್, ಜಯರಾಮು, ಮಲ್ಲೂರು ಲೋಕೇಶ್ ಇತರರು ಅಭಿನಂದಿಸಿದ್ದಾರೆ.
ಸಂಘಕ್ಕೆ ಆಯ್ಕೆ
ನೆಲಮಂಗಲ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಶಾಖೆಗೆ ನೂತನ ಸದಸ್ಯರಾಗಿ ವನಕಲ್ಲು ಶಾಲೆಯ ಎಚ್.ಯೋಗಾನಂದ, ಹೊನ್ನಸಂದ್ರ ಶಾಲೆಯ ಪ್ರಕಾಶ್ರನ್ನು ಸಂಘದ ಖಾಲಿ ಹುದ್ದೆಗಳಿಗೆ ಸಂಘದ ನಿಯಮಾನುಸಾರ ಆಯ್ಕೆಗೊಳಿಸಲಾಗಿದೆ ಎಂದು ಶಿಕ್ಷಕರ ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.