ಬೆಂಗಳೂರು ಗ್ರಾಮಾಂತರ

ಹಾಲಿನ ಪ್ರೋತ್ಸಾಹ ಧನ ಎಲ್ಲರಿಗೂ ವಿಸ್ತರಿಸಿ

Published On :

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಲು ಉತ್ಪಾದಕ ರೈತರಿಗೆ 2 ರು.ಗಳ ಹೆಚ್ಚುವರಿ
ಪ್ರೋತ್ಸಾಹಧನ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಈ ಯೋಜನೆಯನ್ನು ಇತರ ವರ್ಗಗಳಿಗೂ ವಿಸ್ತರಿಸುವಂತೆ ಈಗಾಗಲೇ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಈ ಬಗ್ಗೆ ಸದನದಲ್ಲಿ ಚರ್ಚಿಸಲಾಗುವುದು ಎಂದು ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.
ಬೆಂಗಳೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ದೊಡ್ಡಬಳ್ಳಾಪುರ ಶಿಬಿರ ಮತ್ತು ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಒಕ್ಕೂಟದ ಆಶ್ರಯದಲ್ಲಿ ಭಾನುವಾರ ಬೆಳಗ್ಗೆ ದೊಡ್ಡಬಳ್ಳಾಪುರ ಶೀಥಲ ಕೇಂದ್ರದ ಆವರಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಒಕ್ಕೂಟದ ಮಾಜಿ ನಿರ್ದೇಶಕರು ಮತ್ತು
ನಿವೃತ್ತ ಕಾರ್ಯದರ್ಶಿಗಳಿಗೆ ಸನ್ಮಾನ ಹಾಗೂ ಶುದ್ಧ ನೀರಿನ ಘಟಕದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೇ ಮುಂಗಾರು ಆರಂಭವಾಗಿದ್ದರೂ ಆಶಾದಾಯಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ರಾಗಿ ಮತ್ತು ಜೋಳಕ್ಕೆ 2 ಸಾವಿರ ರು.ಗಳ ಬೆಂಬಲ ಬೆಲೆಯನ್ನು ಘೋಷಿಸಿ ರೈತರನ್ನು ಉತ್ತೇಜಿಸಿದೆ ಎಂದ ಅವರು ರಾಜ್ಯದಲ್ಲಿ ಈಗ ಕೃಷಿಯಿಂದ ವಿಮುಖವಾಗುತ್ತಿರುವ ರೈತರು ಹೈನುಗಾರಿಕೆಯನ್ನು ಅವಲಂಭಿಸುತ್ತಿದ್ದಾರೆ. ಕೃಷಿಯೊಂದಿಗೆ ಹೈನುಗಾರಿಕೆ ಮಾಡುವುದು ಉತ್ತಮ. ಇದು ಆರ್ಥಿಕವಾಗಿಯೂ ಲಾಭದಾಯಕ. ಈ ನಿಟ್ಟಿನಲ್ಲಿ ಚಿಂತನೆ ನಡೆಯಬೇಕು ಎಂದರು.
ಮಹತ್ವದ ಸ್ಥಾನ: ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕರಾದ ಆರ್.ಜಿ. ವೆಂಕಟಾಚಲಯ್ಯ, ವಿ. ಕೃಷ್ಣಪ್ಪ ಮತ್ತು ಜೆ.ನರಸಿಂಹಸ್ವಾಮಿ ಮಾತನಾಡಿ, ದೊಡ್ಡಬಳ್ಳಾಪುರ ತಾಲೂಕು ಹಿಂದಿನಿಂದಲೂ ಹೈನೋದ್ಯಮ ಮತ್ತು ಹಾಲು ಉತ್ಪಾದನೆಯಲ್ಲಿ ತನ್ನದೇ ಆದ ಮಹತ್ವದ ಸ್ಥಾನವನ್ನು ಉಳಿಸಿಕೊಂಡು ಬಂದಿದೆ.
ಹಾಲು ಉತ್ಪಾದಕರ ಸಂಘಗಳಿಗೆ ಪ್ರೋತ್ಸಾಹ ಮತ್ತು ರೈತರಿಗೆ ಅನುಕೂಲವಾಗುವಂತಹ ಯೋಜನೆಗಳ ಜಾರಿಗೆ ಬಮೂಲ್ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಬಮೂಲ್ ನಿರ್ದೇಶಕ ಎಚ್.ಅಪ್ಪಯ್ಯಣ್ಣ, ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 222 ಎಪಿಸಿಎಸ್‌ಗಳಿದ್ದು, 17 ಮಹಿಳಾ ಸಂಘಗಳಿವೆ. 42 ಸಾವಿರಕ್ಕೂ ಅಧಿಕ ಸದಸ್ಯ ಬಲ ಹೊಂದಿದ್ದು, ಇದರಲ್ಲಿ ಸಣ್ಣ, ಅತಿಸಣ್ಣ ರೈತರು, ಕೃಷಿ ಕಾರ್ಮಿಕರು, ಎಸ್ಸಿ-ಎಸ್ಟಿ, ಮಹಿಳಾ ಸದಸ್ಯರು ಸೇರಿದ್ದಾರೆ. ತಾಲೂಕಿನಲ್ಲಿ ಪ್ರತಿ ತಿಂಗಳು ಹಾಲಿನ ವಹಿವಾಟು 8.19 ಕೋಟಿ ದಾಟಿದೆ. ಅದೇ ರೀತಿ ಸಂಘಗಳ ನಿವ್ವಳ ಲಾಭ 46.35 ಲಕ್ಷ ಇದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರತಿದಿನ ಸರಾಸರಿ 1.18 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 175 ವಿದ್ಯಾರ್ಥಿಗಳಿಗೆ ಒಟ್ಟು 6.19 ಲಕ್ಷ ಮೊತ್ತದ ಪ್ರತಿಭಾ ಪುರಸ್ಕಾರ ನಗದು ಬಹುಮಾನ ನೀಡಲಾಗುತ್ತಿದೆ. ಅಲ್ಲದೆ ಆಮ್ ಆದ್ಮಿ ಬಿಮಾ ಯೋಜನೆ ಅಡಿಯಲ್ಲಿ ಸಂದಾಯವಾಗುತ್ತಿರುವ ವಿಮಾ ಹಣ, ವಿವಿಧ ಹಂತಗಳಲ್ಲಿ ರೈತರಿಗೆ ಸಲ್ಲಬೇಕಾದ ವಿಮಾ ಹಣ, ವೈದ್ಯಕೀಯ ಮರುಪಾವತಿ ಅನುದಾನ ಅಲ್ಲದೆ ವಿವಿಧ ಬಗೆಯ ಪರಿಹಾರ ಚೆಕ್‌ಗಳನ್ನೂ ವಿತರಿಸಲಾಗುತ್ತಿದೆ ಎಂದು ವಿವರಿಸಿದರು. ಬಮೂಲ್ ಅಧ್ಯಕ್ಷ ಆರ್.ಕೆ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪಿಳ್ಳಮುನಿಶಾಮಪ್ಪ, ನಿರ್ದೇಶಕ ಎಚ್.ಅಪ್ಪಯ್ಯಣ್ಣ, ಮಾಜಿ ನಿರ್ದೇಶಕ ಎನ್.ಹನುಮಂತೇಗೌಡ, ಎಂ.ಎಚ್.ಮುನಿಶಾಮಪ್ಪ, ಸಿ.ಚನ್ನೇಗೌಡ, ಕೆ.ಎಂ.ಮುನಿರಾಮೇಗೌಡ, ಜಿ.ಎಂ. ಚನ್ನಪ್ಪ, ಪುಷ್ಪಾಶಿವಶಂಕರ್, ವಿ.ಕೃಷ್ಣಪ್ಪ, ಜಯಣ್ಣ ಅವರನ್ನು ಸನ್ಮಾನಿಸಲಾಯಿತು. ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಮುನೇಗೌಡ, ಬಮೂಲ್ ನಿವೃತ್ತ ಅಧಿಕಾರಿ ಸುಬ್ಬರಾಯಪ್ಪ, ಅಧಿಕಾರಿಗಳಾದ ಡಾ.ಕೃಷ್ಣಾರೆಡ್ಡಿ, ಡಾ.ರಮೇಶ್, ಡಾ.ಜಗದೀಶ್, ಎಸ್. ನರಸಿಂಹನ್, ಡಾ.ರುದ್ರೇಶ್, ಡಾ.ಎಂ.ಶ್ರೀನಿವಾಸ್, ಡಾ.ಎಲ್.ಬಿ.ನಾಗರಾಜ್, ನೌಕರರ ಒಕ್ಕೂಟದ ಅಧ್ಯಕ್ಷ ಟಿ.ಎಸ್.ರುದ್ರಪ್ಪ, ಕಾರ್ಯದರ್ಶಿ ಎಚ್. ನಾರಾಯಣಪ್ಪ, ಖಜಾಂಚಿ ರವೀಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳ ಪ್ರತಿಭಾವಂತ 175 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪುರಸ್ಕಾರ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.