ಬೆಂಗಳೂರು ಗ್ರಾಮಾಂತರ

ಗಗನದಲ್ಲಿ ಮೂಡಿತು ಗಾಳಿಪಟದ ಚಿತ್ತಾರ

Published On :

ದೊಡ್ಡಬಳ್ಳಾಪುರ: ಬಾನಂಗಳದಲ್ಲಿ ತರಾವರಿ ಗಾಳಿಪಟಗಳ ಸಾಲು ಸಾಲು ಮೆರವಣಿಗೆ. ಗಗನದಲ್ಲಿ ಚಿತ್ತಾರ ಬಿಡಿಸಿದ್ದ ಬಣ್ಣಬಣ್ಣದ ಗಾಳಿಪಟಗಳು ನೆರೆದಿದ್ದ ಎಲ್ಲರನ್ನೂ ಮೋಡಿ ಮಾಡಿದ್ದವು. ಜನಪದ ಮೂಲ ಸಂವೇದನೆಗೆ ಅಲ್ಲಿ ಆಧುನಿಕ ಸ್ಪರ್ಶವೂ ಬೆರೆತು ಸಂತಸದ ಸಂಭ್ರಮದ ನೋಟಕ್ಕೆ ಇಡೀ ಮೈದಾನ ಸಾಕ್ಷಿಯಾಗಿತ್ತು.
ಇಲ್ಲಿನ ಮೇಘಾಂಜಲಿ ಕಲ್ಯಾಣ ಮಂದಿರದ ಸಮೀಪ ಇರುವ ಗುಂಡಪ್ಪನವರ ಮೈದಾನದಲ್ಲಿ ಸೋಮವಾರ ಡಿವೈಎಫ್‌ಐ ನೇತೃತ್ವದಲ್ಲಿ 21ನೇ ವರ್ಷದ ಗಾಳಿಪಟ ಹಾರಿಸುವ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ಕಣ್ಮನ ಸೆಳೆಯುವ ಗಾಳಿಪಟಗಳೊಂದಿಗೆ ಭಾಗವಹಿಸಿದ್ದರು. ಮಳೆಯ ಬರ, ಜೀವಜಲ, ತ್ರಿಶೂಲ, ಎಲೆ, ಮಹಾರಾಜ, ಮಿಕ್ಕಿಮೌಸ್, ರಣಹದ್ದು, ಕಾಳಿಂಗ ಸರ್ಪ, ಕಾಡು ದೇವತೆ, ವೀರಹನುಮಾನ್, ಹೂವು, ಗುಂಡುಪಟ ಸೇರಿದಂತೆ ಅನೇಕ ಗಾಳಿಪಟಗಳು ಗಮನ ಸೆಳೆದವು.
12 ಅಡಿ ಗಾಳಿಪಟ: ಈ ಬಾರಿಯ ವಿಶೇಷ ಎನ್ನುವಂತೆ ಇಲ್ಲಿನ ವಿದ್ಯಾನಗರದ ಯುವಕರು ಶ್ರೀಗಾಳಿ ಆಂಜನೇಯಸ್ವಾಮಿ ಹೆಸರಿನಲ್ಲಿ ಬೃಹತ್ 12 ಅಡಿ ಎತ್ತರದ ಗಾಳಿಪಟ ತಯಾರಿಸಿದ್ದರು. ಇಲ್ಲಿನ ಸಾಂಪ್ರದಾಯಿಕ ಗಾಳಿಪಟ ಸಂಸ್ಕೃತಿಯ ಕಳಶಪ್ರಾಯದಂತಿದ್ದ ಈ ಪಟ ಎಲ್ಲರ ನಿರೀಕ್ಷೆ ಮೀರಿ ಗಗನಕ್ಕೇರಿ ವಿಜೃಂಭಿಸಿತು. ವಿಶೇಷ ಬಹುಮಾನವನ್ನು ಕೂಡ ತನ್ನದಾಗಿಸಿಕೊಂಡಿತು.
ಕಾರ್ಯಕ್ರಮದ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಡಿವೈಎಫ್‌ಐ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಾಳ್ಯ, ಗಾಳಿಪಟ ಕ್ರೀಡೆಯನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಬೇಕಿದೆ.
ಇಂದು ಕೋಟ್ಯಂತರ ರು.ಗಳನ್ನು ಖರ್ಚು ಮಾಡಿ ಫುಟ್‌ಬಾಲ್ ಮತ್ತು ಕ್ರಿಕೆಟ್ ಆಯೋಜಿಸುವ ಸರ್ಕಾರಗಳು ಗಾಳಿಪಟದಂತಹ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಕನಿಷ್ಠ ಕೆಲಸವನ್ನೂ ಮಾಡದಿರುವುದು ಶೋಚನೀಯ.
ಕರ್ನಾಟಕದಲ್ಲಿ ಗಾಳಿಪಟ ಕ್ರೀಡೆಯನ್ನು ಜನಪ್ರಿಯಗೊಳಿಸುವಲ್ಲಿ ದೊಡ್ಡಬಳ್ಳಾಪುರದ ಪಾತ್ರ ಹಿರಿದು ಎಂದರು.  ನಗರಠಾಣೆ ಎಸೈ ಎಸ್.ಜಗದೀಶ್, ಡಿವೈಎಫ್‌ಐ ರಾಜ್ಯ ಮುಖಂಡ ಲಿಂಗರಾಜು, ಮಜರಾಹೊಸಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಲೋಕೇಶ್, ಡಿವೈಎಫ್‌ಐ ಮಾಜಿ ಅಧ್ಯಕ್ಷ ಪಿ.ಎ.ವೆಂಕಟೇಶ್, ಉಪಾಧ್ಯಕ್ಷ ಚೌಡಯ್ಯ, ಕಾರ್ಯದರ್ಶಿ ರಘುಕುಮಾರ್, ಖಜಾಂಚಿ ಹೇಮರಾಜು, ಸಂಚಾಲಕ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.
ಡಿವೈಎಫ್‌ಐ ತಾಲೂಕು ಅಧ್ಯಕ್ಷ ಸಿ.ಅಶ್ವತ್ಥ್ ಅಧ್ಯಕ್ಷತೆ ವಹಿಸಿದ್ದರು. 15 ವರ್ಷದೊಳಗಿನ ಮತ್ತು ಮೇಲ್ಪಟ್ಟ 2 ವಿಭಾಗಗಳಲ್ಲಿ ಸ್ಪರ್ಧೆ ನಡೆದು, ವಿಜೇತರ ಸ್ಪರ್ಧಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.