ಬೆಂಗಳೂರು ಗ್ರಾಮಾಂತರ

ಮುಳ್ಳಿನ ಹಾಸಿಗೆ ಈ ಸರ್ಕಾರಿ ಆಸ್ಪತ್ರೆ

Published On :

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ರೋಗಿಗಳ ಪಾಲಿಗೆ ಮುಳ್ಳಿನ ಹಾಸಿಗೆಯಾಗಿದೆ. ನಿರಂತರ ಸಮಸ್ಯೆಗಳಿಂದ ನರಳುತ್ತಿರುವ ಆಸ್ಪತ್ರೆಯೇ ರೋಗಗ್ರಸ್ತವಾಗಿದ್ದು, ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸದೆ ಮೂಕಪ್ರೇಕ್ಷಕರಂತೆ ವರ್ತಿಸುತ್ತಿರುವ ಸ್ಥಳೀಯ ಜನಪ್ರತಿನಿಧಿಗಳು ಜನಪರ ಕಾಳಜಿಯನ್ನು ಗಾಳಿಗೆ ತೂರಿದ್ದಾರೆ ಎಂದು ಕನ್ನಡ ಜಾಗೃತಿ ವೇದಿಕೆ ಆರೋಪಿಸಿದೆ.
ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ಕನ್ನಡ ಜಾಗೃತಿ ವೇದಿಕೆ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ಆಸ್ಪತ್ರೆಯ ಆವರಣದಲ್ಲಿ ಮುಳ್ಳಿನ ಹಾಸಿಗೆ ಮೇಲೆ ಮಲಗುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.
ಮೂರು ವೈದ್ಯರು: ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಮುಖಂಡರು, ತಾಲೂಕಿನ ಜನಸಂಖ್ಯೆ ಮೂರುವರೆ ಲಕ್ಷ ದಾಟಿದ್ದರೂ ಆಸ್ಪತ್ರೆಯಲ್ಲಿ 3 ಜನ ವೈದ್ಯರಿದ್ದಾರೆ. ಕಳೆದ 7 ವರ್ಷಗಳ ಹಿಂದೆಯೇ ಈ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯಾಗಿ ನಿರ್ಮಿಸಲು ಸರ್ಕಾರದ
ಅನುಮೋದನೆ ಸಿಕ್ಕಿದ್ದರೂ ರಾಜಕಾರಣಿಗಳ ಬೇಜವಾಬ್ದಾರಿತನ, ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಅನುದಾನವೂ ವಾಪಸಾಗುವ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆ ನಿರ್ಮಾಣಕ್ಕೆ ಕನಿಷ್ಠ ಜಾಗ ಗುರುತಿಸುವ ಪ್ರಾಮಾಣಿಕತೆ ಕೂಡ ಪ್ರದರ್ಶಿತವಾಗಿಲ್ಲ ಎಂದು ಆರೋಪಿಸಿದರು.
ಈಗಿರುವ ಆಸ್ಪತ್ರೆಯೂ ನರಕ ಸದೃಶವಾಗಿದೆ. ಶುಚಿತ್ವ ಮರೀಚಿಕೆಯಾಗಿ ಇಡೀ ಆವರಣ ಕೊಳೆತು ನಾರುತ್ತಿದೆ. ಶೌಚಾಲಯಗಳು ಬಳಸುವ ಸ್ಥಿತಿಯಲ್ಲಿ ಇಲ್ಲ. ಸಿಬ್ಬಂದಿ ಕೊರತೆ ಮಿತಿ ಮೀರಿದೆ. ತಜ್ಞ ವೈದ್ಯರಂತೂ ಇಲ್ಲವೇ ಇಲ್ಲ. 11 ವೈದ್ಯರ ನೇಮಕಾತಿಗೆ ಅನುಮೋದನೆ ಸಿಕ್ಕಿದ್ದರೂ 5 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಶುಶ್ರೂಕರು ಎಲ್ಲಿದ್ದಾರೋ ಹುಡುಕಬೇಕು. ಇನ್ನು ಔಷಧೋಪಚಾರ, ಚಿಕಿತ್ಸೆ ಸಕಾಲಕ್ಕಂತೂ ಸಿಗದು. ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳು ಪಡುವ ಪರಿತಾಪ ಅಷ್ಟಿಷ್ಟಲ್ಲ.
 ಆದರೆ ಆಗೊಮ್ಮೆ ಈಗೊಮ್ಮೆ ಆಸ್ಪತ್ರೆಗೆ ಭೇಟಿ ನೀಡುವ ಜನಪ್ರತಿನಿಧಿಗಳು ಕೇವಲ ಹೇಳಿಕೆಗಳ ಮೂಲಕ ಪ್ರಚಾರ ಪಡೆಯುತ್ತಿದ್ದಾರೆಯೇ ಹೊರತು ನೈಜ ಕಾಳಜಿ ತೋರಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
   ಕೂಡಲೇ ಈ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಲು ಸ್ಥಳೀಯ ಶಾಸಕರು, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಸ್ಥಾಯಿಸಮಿತಿ, ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟ ವ್ಯಾಪಕ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ಅಗ್ನಿ ವೆಂಕಟೇಶ್, ಜಿಲ್ಲಾಧ್ಯಕ್ಷ ಸೋಮು, ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ನಾರಾಯಣಸ್ವಾಮಿ, ತಾ.ಗೌ.ಅಧ್ಯಕ್ಷ ಕೃಷ್ಣಪ್ಪ, ಮಹಿಳಾ ಅಧ್ಯಕ್ಷೆ ವಿಮಲಮ್ಮ, ಕನ್ನಡಪಕ್ಷದ ಅಧ್ಯಕ್ಷ ಸಂಜೀವನಾಯಕ್, ಕಾರ್ಯದರ್ಶಿ ಡಿ.ಪಿ.ಆಂಜನೇಯ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹ.ರಾಮಕೃಷ್ಣ, ಸ್ಥಾಯಿಸಮಿತಿ ಅಧ್ಯಕ್ಷ ತ.ನ.ಪ್ರಭುದೇವ್, ತಾ.ಕಸಾಪ ಗೌ.ಅಧ್ಯಕ್ಷ ಕೆ.ಆರ್.ರವಿಕಿರಣ್, ಕಜಾಪ ಮಾಜಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಪತ್ರಕರ್ತರ ಟ್ರಸ್ಟ್ ಅಧ್ಯಕ್ಷ ಗಂಗರಾಜ್ ಶಿರವಾರ, ಕನ್ನಡಕ್ರಾಂತಿ ದೀಪ ಜಿಲ್ಲಾಧ್ಯಕ್ಷ ರಮೇಶ್, ಮಹಿಳಾಧ್ಯಕ್ಷೆ ಗಂಗಮ್ಮ, ಮುಖಂಡರಾದ ಸು.ನರಸಿಂಹಮೂರ್ತಿ, ಜನಪರ ಮಂಜು, ಪರಮೇಶ್, ವೆಂಕಟೇಶ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.