ಶ್ರೀ ಚಾಮುಂಡಿ ಕರಗ ಮಹೋತ್ಸವ ಇಂದು
ರಾಮನಗರ: ನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಜು.15ರಂದು ನಡೆಯಲಿದೆ. ಇದೇ ದಿನ ಇನ್ನುಳಿದ 6 ಶಕ್ತಿ ದೇವತೆಗಳ ಕರಗ ಮಹೋತ್ಸವ ಸಹ ಜರುಗಲಿದ್ದು, ಇಡೀ ನಗರ ನವ ವಧುವಿನಂತೆ ಸಿಂಗಾರ ಗೊಳ್ಳುತ್ತಿದೆ.
ಹಿನ್ನೆಲೆ: ನಗರದಲ್ಲಿರುವ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಮೇಲುಕೋಟೆಯ ಪ್ರತಾಪ್ಸಿಂಗ್ ಎಂಬುವರು ಸ್ಥಾಪಿಸಿದರು ಎನ್ನುವ ಇತಿಹಾಸವಿದೆ. ಪ್ರತಾಪ್ಸಿಂಗ್ ಮೈಸೂರು ಮಹಾರಾಜರ ಕಾಲದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಇವರಿಗೆ ಮಕ್ಕಳಿರಲ್ಲಿಲ. ಮಹಾರಾಜರ ಅಪ್ಪಣೆಯ ಮೇರೆಗೆ ಕಾರ್ಯನಿಮಿತ್ತ ಈ ಸ್ಥಳಕ್ಕೆ ಒಮ್ಮೆ ಅವರು ಬಂದು ಇಲ್ಲಿ ತಂಗಿದ್ದಾಗ, ಅವರ ಕನಸಿನಲ್ಲಿ ಬಂದ ಚಾಮುಂಡೇಶ್ವರಿಯು ನಗರದ ಸಮೀಪದಲ್ಲಿರುವ ಗುಹೆಯೊಂದರಲ್ಲಿ ನನ್ನನ್ನು ಪೂಜಿಸುತ್ತಿದ್ದಾರೆ. ಅದನ್ನು ತಂದು ಗುಡಿ ಕಟ್ಟಿಸಿ ಪ್ರತಿಷ್ಠಾಪಿಸಿದರೆ ನಿನಗೆ ಮಕ್ಕಳ ಭಾಗ್ಯ ಕರುಣಿಸುವುದಾಗಿ ಹಾಗೂ ಭಕ್ತರ ಇಷ್ಟಾರ್ಥ ಪೂರೈಸಲು ಇಲ್ಲೇ ನೆಲೆಸುತ್ತೇನೆ ಎಂದು ಆಜ್ಞಾಯಾಗಿತ್ತು ಎಂಬುದು ಪ್ರತೀತಿ.
ಅದರಂತೆ ಪ್ರತಾಪ್ಸಿಂಗ್ ಬುಡಬುಡುಕೆ ದಾಸಯ್ಯನ ವೇಷದಲ್ಲಿ ತೆರಳಿ ದೇವಿಯ ವಿಗ್ರಹ ತಂದು ನಗರದಲ್ಲಿ ಗುಡಿ ಕಟ್ಟಿಸಿ ಪ್ರತಿಷ್ಠಾಪಿಸಿದರು. ನಂತರ ಇವರಿಗೆ ಮಗು ಜನಿಸಿತು. ಅಂದಿನಿಂದ ಇವರ ಕುಟುಂಬದ ಅಧಿದೇವತೆಯಾಗಿ ಚಾಮುಂಡೇಶ್ವರಿ ಅಮ್ಮನವರನ್ನು ಪೂಜೆ ಮಾಡುತ್ತಿದ್ದಾರೆ.
ಪ್ರತಾಪ್ಸಿಂಗ್ ಅವರ ನಂತರ ಅವರ ಮಗ ಗಿರಿದರಸಿಂಗ್ ದೇವಿಯನ್ನು ಪೂಜಿಸಿಕೊಂಡು ಬರುತ್ತಿದ್ದರು. ಈದೀಗ ಕಳೆದ ಹದಿನೈದು ವರ್ಷಗಳಿಂದ ಗಿರಿದರ್ಸಿಂಗ್ ಅವರ ಮಗ ಪದ್ಮನಾಭಸಿಂಗ್ ಬಾಬು ದೇವಿಯನ್ನು ಪೂಜಿಸಿ ಕರಗಧಾರಣೆ ಮಾಡುತ್ತಿದ್ದಾರೆ.
ಮಂಗಳವಾರ ಸಂಜೆ ನಗರದ ಸಿಂಗ್ರಾಬೋವಿ ದೊಡ್ಡಿಯಿಂದ ಹೊರಡುವ ಕರಗ ಇಡೀ ರಾತ್ರಿ ನಗರದ ಹಲವು ಬಡಾವಣೆಗಳಲ್ಲಿ ಸಂಚರಿಸಿ ಭಕ್ತರಿಂದ ಪೂಜೆ ಸ್ವೀಕರಿಸಿ ಬುಧವಾರ ಬೆಳಿಗ್ಗೆ ಚಾಮುಂಡೇಶ್ವರಿ ಅಮ್ಮನವರ ದೇವಾಲಯದ ಮುಂಭಾಗ ನಿರ್ಮಿಸಿರುವ ಅಗ್ನಿಕೊಂಡವನ್ನು ಹಾಯ್ದು ದೇವಾಲಯ ಪ್ರವೇಶಿಸಲಿದೆ. ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವಕ್ಕೆ ನಗರ ಸಜ್ಜಾಗಿದೆ. ಇಡೀ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳ ತೋರಣಗಳು ಗಮನ ಸೆಳೆಯುತ್ತಿವೆ. ಮಂಗಳವಾರ ಸಂಜೆ ಜಿಲ್ಲಾ ಕ್ರೀಡಾಂಗಣ ಮತ್ತು ಶ್ರೀ ರಾಮ ಚಿತ್ರ ಮಂದಿರದ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದ್ಕಕಾಗಿ ಬೃಹತ್ ವೇದಿಕೆಗಳು ಸಿದ್ಧವಾಗುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

