ಬೆಂಗಳೂರು ಗ್ರಾಮಾಂತರ

ಬಾಲಕಿ ಮೇಲೆ ಅತ್ಯಾಚಾರ: ಶಾಲೆ ಎದುರು ಪ್ರತಿಭಟನೆ

Published On :

ಕೃಷ್ಣರಾಜಪುರ: ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಶಾಲಾ ಸಿಬ್ಬಂದಿಯಿಂದಲೇ ಲೈಂಗಿಕ ದೌರ್ಜನ್ಯ ನಡೆದಿದೆ  ಎಂದು ಆರೋಪಿಸಿದ ಪೋಷಕರು ಬುಧವಾರ ತೂಬರಹಳ್ಳಿ ಶಾಲೆಯ ಆವರಣದಲ್ಲಿ ಜಮಾಯಿಸಿ ಆಡಳಿತ ವರ್ಗದ ವಿರುದ್ಧ ಪ್ರತಿಭಟನೆ ನಡೆಸಿದರು. ತಮ್ಮ ಮಕ್ಕಳಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದರು.    ತೂಬರಹಳ್ಳಿಯ ವಿಬ್‌ಗಯಾರ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿದ್ದ ಬಾಲಕಿಯ ಮೇಲೆ ನಡೆದ ಅತ್ಯಾಚಾರದಿಂದ ರೊಚ್ಚಿಗೆದ್ದ ಪೋಷಕರು ಆಡಳಿತ ವರ್ಗದ ವಿರುದ್ಧ  ಕಿಡಿಕಾರಿದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕೂಡಲೇ ಪತ್ತೆಹಚ್ಚಿ ಶಿಕ್ಷೆಗೊಳಪಡಿಸುವಂತೆ ಒತ್ತಾಯಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಬುಧವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಮುಗ್ಧ ಬಾಲಕಿ ತೋರಿಸಿರುವ ಕೊಠಡಿಯಲ್ಲಿ ಸಿಸಿಟಿವಿ ಇಲ್ಲದಿರುವುದು ಕೆಲ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು ಸಿಸಿಟಿವಿ ಇಲ್ಲದ ಕೋಣೆ ಅಲ್ಲಿನ ಸಿಬ್ಬಂದಿಗೆ ಮಾತ್ರ ತಿಳಿದಿರುತ್ತದೆ ಎಂಬುದು ಪೋಷಕರ ಆರೋಪ. ಸಿಸಿಟಿವಿ ಇಲ್ಲದ ಕಾರಣ ತನಿಖೆಗೆ ಹಿನ್ನಡೆಯಾಗಿದೆ ಎನ್ನಲಾಗಿದೆ. ಬೇರೆಡೆಯಲ್ಲಿರುವ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಕೂಡಲೆ ತಪ್ಪಿತಸ್ಥರನ್ನು  ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೂರ್ವ ವಿಭಾಗದ ಡಿಸಿಪಿ ಟಿ.ಡಿ.ಪವಾರ್ ತಿಳಿಸಿದ್ದಾರೆ.   ಶಾಲೆಯ ಸಿಬ್ಬಂದಿಯೇ ಲೈಂಗಿಕ ಕಿರುಕುಳ ನೀಡುತ್ತಿರುವುದು ಖಂಡನೀಯ. ಶಾಲೆಯ ಪ್ರತಿ ಕೊಠಡಿಯಲ್ಲೂ ಸಿಸಿಟಿವಿಯನ್ನು ಅಳವಡಿಸಿ ಮಕ್ಕಳ ರಕ್ಷಣೆ ಮಾಡುವಂತೆ ಪೋಷಕರಾದ ಜೂಲಿ ಒತ್ತಾಯಿಸಿದ್ದಾರೆ.    ಕಾಮುಕರನ್ನು ಶೀಘ್ರ ಬಂಧಿಸುವಂತೆ ಮತ್ತೊಬ್ಬ ಪೋಷಕರಾದ ಗಾಯತ್ರಿ ಆಗ್ರಹಿಸಿದ್ದಾರೆ.  ಹಿರಿಯ ಪೊಲೀಸ್ ಅಧಿಕಾರಿ ಪ್ರಣಬ್ ಮೊಹಂತಿ, ಅಭಿಷೇಕ್ ಗೋಯಲ್, ಮಾಜಿ ಶಾಸಕ ನಂದೀಶ್ ರೆಡ್ಡಿ ಮುಂತಾದವರು ಸ್ಥಳಕ್ಕಾಗಮಿಸಿ ಪೋಷಕರಲ್ಲಿ ಧೈರ್ಯ ತುಂಬಿ,ಆರೋಪಿಗಳನ್ನು ಶಿಕ್ಷಿಸುವ ಭರವಸೆ ನೀಡಿದರು.
ಕಾನೂನು ತರಬೇತಿ ಶಿಬಿರ
ರಾಮನಗರ: ಜಿಲ್ಲೆಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾನೂನು ಪದವಿ ಪಡೆದಿರುವ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ಅಭ್ಯರ್ಥಿಗಳಿಂದ ಕಾನೂನು ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, 2ನೇ ಮಹಡಿ, ಜಿಲ್ಲಾ ಪಂಚಾಯತ್ ಭವನ, ರಾಮನಗರ ಇಲ್ಲಿಂದ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜು.30 ರೊಳಗೆ ಸಲ್ಲಿಸಬಹುದು.
ಕಾಲೇಜು ಉದ್ಘಾಟನೆ ನಾಳೆ
ರಾಮನಗರ: ಕಾಲೇಜು ಶಿಕ್ಷಣ ಇಲಾಖೆಯಿಂದ ಜು.18ರ ಸಂಜೆ 5ಕ್ಕೆ ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟಿಸುವರು. ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಉಪ ಸಭಾಪತಿ ಪುಟ್ಟಣ್ಣ, ಸದಸ್ಯರಾದ ರಾಮಚಂದ್ರೇಗೌಡ, ಇ.ಕಣಷ್ಣಪ್ಪ ಭಾಗವಹಿಸುವರು. ಕನ್ನಡ ಗ್ರಂಥಗಳಿಗೆ ಸಹಾಯ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2013ನೇ ಸಾಲಿನಲ್ಲಿ ಪ್ರಕಟವಾದ ಸೃಜನೇತರ ಕನ್ನಡ ಗ್ರಂಥಗಳಿಗೆ ಧನಸಹಾಯ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು  ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಜು.31 ರೊಳಗೆ ಸಲ್ಲಿಸಬಹುದು.
ವಿಜೃಂಭಣೆಯ ಕರಗೋತ್ಸವ
ರಾಮನಗರ: ನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮತ್ತು ಅಗ್ನಿ ಕೊಂಡ ಮಹೋತ್ಸವವು ಬುಧವಾರ ಬೆಳಗ್ಗೆ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನೆರವೇರಿತು.
ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ಚಾಮುಂಡೇಶ್ವರಿ ದೇವಿಗೆ ಮಂಗಳವಾರ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಪೂಜಾ ವಿಧಿವಿಧಾನಗಳು ನಡೆದವು. ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ ಸಾವಿರಾರು ಮಹಿಳೆಯರು ತಂಬಿಟ್ಟಿನ ಆರತಿ ತಂದು ಪೂಜೆ ಸಲ್ಲಿಸಿದರು. ಕೆಲವು ಭಕ್ತರು ಮಡಿಲು ತುಂಬುವ ಮೂಲಕ ಹರಕೆ ಸಮರ್ಪಿಸಿ, ಪುನೀತರಾದರು.
ಮಂಗಳವಾರ ರಾತ್ರಿ ಶ್ರೀ ಚಾಮುಂಡೇಶ್ವರಿ ದೇವಾಲಯದಿಂದ ಹೊರಟ ಕರಗವು ರಾತ್ರಿಯಿಡೀ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿತು. ಹಳದಿ ಉಡುಗೆಗಳನ್ನು ತೊಟ್ಟು, ಕೈಗಳಲ್ಲಿ ಖಡ್ಗಗಳನ್ನು ಹಿಡಿದ ವೀರ ಕುಮಾರರು ಹಾಗೂ ನೂರಾರು ಮಂದಿ ಭಕ್ತರು ಸಹ ಕರಗದ ಜತೆಯಲ್ಲಿ ಭಕ್ತಿ ಪೂರ್ವಕವಾಗಿ ಹೆಜ್ಜೆ ಹಾಕಿದರು. ಕರಗಧಾರಿ ತಮಟೆ ವಾದ್ಯಕ್ಕೆ ತಕ್ಕಂತೆ ನೃತ್ಯ ಮಾಡುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. ನಗರದ ಎಲ್ಲ ಬಡಾವಣೆಗಳಲ್ಲೂ ಮಹಿಳೆಯರು ಹಾಗೂ ಭಕ್ತರು ಕರಗಕ್ಕೆ ಭಕ್ತಿ ಪೂರ್ವಕವಾಗಿ ಆರತಿ ಎತ್ತಿ ಪೂಜೆ ಸಲ್ಲಿಸಿದರು. ಕರಗ ಸಂಚರಿಸುವ ಹಾದಿಯಲ್ಲಿ ವಿವಿಧ ಬಗೆಯ ಪುಷ್ಪಗಳನ್ನು ಹಾಸಿ ವಿಶೇಷವಾಗಿ ಅಲಂಕರಿಸಲಾಗಿತ್ತು.
ಬುಧವಾರ ಬೆಳಗ್ಗೆ ಸುಮಾರು 6.30ರ ಸಮಯದಲ್ಲಿ ದೇವಾಲಯದ ಮುಂದೆ ನಿರ್ಮಿಸಿದ್ದ ಅಗ್ನಿ ಕುಂಡವನ್ನು ಹಾಯ್ದು ದೇವಾಲಯ ಪ್ರವೇಶಿಸುವ ಮೂಲಕ ಈ ವರ್ಷದ ಕರಗ ಮಹೋತ್ಸವಕ್ಕೆ ತೆರೆ ಬಿದ್ದಿತು. ಕರಗ ಮಹೋತ್ಸವದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸ್ವಚ್ಛತೆಯಿಂದ ಸಾಂಕ್ರಾಮಿಕ ರೋಗ ತಡೆ ಸಾಧ್ಯ: ಖಲೀಲ್
ದೊಡ್ಡಬಳ್ಳಾಪುರ: ಆರೋಗ್ಯವಂತ ಪ್ರಜೆಗಳು ಒಂದು ದೇಶದ ಸಂಪತ್ತು. ಜನರು ಮೊದಲು ಆರೋಗ್ಯದ ಕುರಿತ ಕಾಳಜಿ ಹೊಂದಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಖಲೀಲ್ ಅಹ್ಮದ್ ಹೇಳಿದರು.
ಇಲ್ಲಿನ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ರೋಗವಿರಲಿ, ಅದರ ಬಗ್ಗೆ ತಜ್ಞ ವೈದ್ಯರಿಂದ ಸಲಹೆ ಮತ್ತು ಚಿಕಿತ್ಸೆ ಪಡೆಯುವುದು ಸೂಕ್ತ.
ರೋಗವನ್ನು ನಿರ್ಲಕ್ಷ್ಯ ಮಾಡಿದರೆ ಅದರಿಂದ ಹೆಚ್ಚಿನ ಅನಾಹುತ ಸಂಭವಿಸುವ ಅವಕಾಶ ಇರುತ್ತದೆ. ಸಾಂಕ್ರಾಮಿಕ ರೋಗಗಳ ಕುರಿತು ಎಚ್ಚರ ಪ್ರತಿ ಸಂದರ್ಭದಲ್ಲೂ ಮನುಷ್ಯನಿಗೆ ಅತಿ ಮುಖ್ಯ ಎಂದು ಸಲಹೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಮಟ್ಟದ ಮಾಸಾಚರಣೆಗೆ ಚಾಲನೆ ನೀಡಲಾಗುತ್ತಿದೆ. ತಿಂಗಳಿಡೀ ಈ ರೋಗದ ಕುರಿತು ಅರಿವು ಮೂಡಿಸುವ ಮತ್ತು ಈ ಬಗ್ಗೆ ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ. ವಿವಿಧ ಹಂತಗಳಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಸಾಮಾನ್ಯ ಜನರಿಗೂ ರೋಗದ ಕುರಿತು ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಕೀಟಶಾಸ್ತ್ರಜ್ಞರಾದ ಡಾ.ಲತಾ ಮಾತನಾಡಿ, ಮನೆಯ ಸುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಅವು ರೋಗ ಬರಲು ಕಾರಣವಾಗುತ್ತದೆ. ಮಲೇರಿಯಾ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡಲು ಸೊಳ್ಳೆಗಳೇ ಪ್ರಮುಖ ವಾಹಿನಿಗಳು. ಯಾವುದೇ ಜ್ವರವಿರಲಿ, ರೋಗಿಯ ರಕ್ತ ಪರೀಕ್ಷೆ ನಂತರವೇ ರೋಗ ದೃಢಪಡಿಸಿಕೊಳ್ಳಬೇಕು ಎಂದರು.
ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮೇ.ಮಹಾಬಲೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಎಸ್.ರಾಜಲಕ್ಷ್ಮಿ, ವೈದ್ಯಾಧಿಕಾರಿ ಡಾ.ಅಶೋಕ್, ಡಾ.ಸಿರಾಜುದ್ದೀನ್ ಮದನಿ, ಡಾ.ವಸಂತನಾಗ್, ತಾಲೂಕು ಆರೋಗ್ಯ ಇಲಾಖೆಯ ನರಸಿಂಹಮೂರ್ತಿ, ಜಿ.ಕೆ.ಕರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.