ಬೆಂಗಳೂರು ಗ್ರಾಮಾಂತರ

ಕಸ ವಿಲೇವಾರಿ: ಸ್ಫೋಟಿಸಿದ ಆಕ್ರೋಶ

Published On :

ದೊಡ್ಡಬಳ್ಳಾಪುರ: ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕಸವನ್ನು ದೊಡ್ಡಬಳ್ಳಾಪುರ ತಾಲೂಕಿನ ಗುಂಡ್ಲಹಳ್ಳಿ ಬಳಿಯ ಟೆರ್ರಾಫಾರ್ಮ ಘಟಕದಲ್ಲಿ ವಿಲೇವಾರಿ ಮಾಡುತ್ತಿರುವುದು ಅವೈಜ್ಞಾನಿಕ ಹಾಗೂ ದೊಡ್ಡಬೆಳವಂಗಲ ಬಳಿ ನೂತನ ಕಸ ವಿಲೇವಾರಿ ಘಟಕ ಸ್ಥಾಪಿಸುವ ಪ್ರಸ್ತಾವನೆ ಇಟ್ಟಿರುವ ಸರ್ಕಾರದ ಧೋರಣೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇಲ್ಲಿನ ಕರ್ನಾಟಕ ರಾಜ್ಯ ರೈತ ಶಕ್ತಿ ನೇತೃತ್ವದಲ್ಲಿ ಬುಧವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 207ರ ಡಿಕ್ರಾಸ್ ವೃತ್ತದಲ್ಲಿ ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಹೊನ್ನಾಘಟ್ಟ ಮಹೇಶ್, ಸರ್ಕಾರದ ಧೋರಣೆಗಳು ಎಡಬಿಡಂಗಿತನದ ಪರಮಾವಧಿಯಂತೆ ಗೋಚರವಾಗುತ್ತಿವೆ. ಆಯಾ ಪ್ರದೇಶದಲ್ಲಿ ಉತ್ಪತ್ತಿಯಾಗುವ ಕಸವನ್ನು ಅಲ್ಲೇ ವಿಲೇವಾರಿ ಮಾಡಬೇಕು ಎಂಬ ನಿಯಮವಿದ್ದರೂ ಅದನ್ನು ಅವ್ಯಾಹತವಾಗಿ ಉಲ್ಲಂಘಿಸುತ್ತಿರುವುದೂ ಅಲ್ಲದೆ ಅವೈಜ್ಞಾನಿಕ ಪ್ರಸ್ತಾವನೆಗಳ ಮೂಲಕ ಜನರನ್ನು ಕೆಣಕುವ ಕೆಲಸ ಮಾಡಲಾಗುತ್ತಿದೆ.
 ದೊಡ್ಡಬಳ್ಳಾಪುರ ಬೆಂಗಳೂರಿನ ಕಸದ ತೊಟ್ಟಿಯಲ್ಲ. ಈಗಾಗಲೇ ಟೆರ್ರಾಫಾರ್ಮದಲ್ಲಿ ಕಸ ವಿಲೇವಾರಿಗೆ ಅವಕಾಶ ಕೊಡಲಾಗಿದೆ. ನಿಯಮಾವಳಿಯ ಮಿತಿ ಮೀರಿ ಇಲ್ಲಿಗೆ ಕಸ ತಂದು ಸುರಿಯಲಾಗುತ್ತಿದೆ. ಅದೂ ಸಾಲದು ಎಂಬಂತೆ ಅತ್ತ ಮಂಡೂರಿನಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯ ದೊಡ್ಡಬೆಳವಂಗಲ ಹೋಬಳಿಯಲ್ಲಿ ಬಿಬಿಎಂಪಿ ಕಸ ವಿಲೇವಾರಿಗೆ ನೂತನ ಘಟಕ ಸ್ಥಾಪಿಸುವ ಪ್ರಸ್ತಾವನೆಯನ್ನು ಸಚಿವ ರಾಮಲಿಂಗಾರೆಡ್ಡಿ ಪ್ರಕಟಿಸಿದ್ದಾರೆ. ಇದು ತೀವ್ರ ಖಂಡನೀಯ. ಬೆಂಗಳೂರಿನ ಕಸ ತುಂಬಲು ದೊಡ್ಡಬಳ್ಳಾಪುರದ ಬದುಕನ್ನು ಬಲಿಯಾಗಿಸಲು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಘಟಕ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ. ಇದಕ್ಕಾಗಿ ಯಾವುದೇ ರೀತಿಯ ಹೋರಾಟಕ್ಕಾದರೂ ಸಿದ್ಧ ಎಂದರು.
ರೈತ ಶಕ್ತಿ ಸಂಘಟನೆ ಮತ್ತು ಇತರ ಸಂಘಟನೆಗಳ ಹತ್ತಾರು ಕಾರ್ಯಕರ್ತರು ಹಾಜರಿದ್ದರು.

 ಕಸದಿಂದ ಪರಿಸರಕ್ಕೆ ಗಂಡಾಂತರ
-ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ಇಂದು ಪರಿಸರ ದಿನಾಚರಣೆ. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶುದ್ಧ ನೀರು-ಶುದ್ಧಗಾಳಿ ಮತ್ತು ಶುದ್ಧ ಪರಿಸರ ನಮ್ಮ ಆದ್ಯತೆಯಾಗಬೇಕು ಎಂಬ ಆಲೋಚನೆ ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ದೊಡ್ಡಬಳ್ಳಾಪುರದ ಜನ ಮಾತ್ರ ಮಿತಿಮೀರಿದ ಪರಿಸರ ಮಾಲಿನ್ಯದ ನಡುವೆ ಆತಂಕದ ಬದುಕು ಸಾಗಿಸುವಂತಾಗಿದೆ. ಇದಕ್ಕೆ ಕಾರಣವಾಗಿರುವುದು ಬಿಬಿಎಂಪಿ ವ್ಯಾಪ್ತಿಯ ಕಸ. ಅವೈಜ್ಞಾನಿಕವಾಗಿ ವಿಲೇವಾರಿಯಾಗುತ್ತಿರುವ ಕಸ, ತಾಲೂಕಿನ ದೊಡ್ಡಬೆಳವಂಗಲ, ಸಾಸಲು ಹೋಬಳಿಗಳ ಹತ್ತಾರು ಗ್ರಾಮಗಳ ಜನರ ಬದುಕನ್ನು ಬರಡಾಗಿಸಿದೆ. ರಾಶಿಗಟ್ಟಲೆ ಬಂದು ಬೀಳುತ್ತಿರುವ ಕಸದಿಂದಾಗಿ ಅನೇಕ ರೋಗಗಳು ಹರಡುತ್ತಿವೆ. ನೀರು ಮಲಿನವಾಗಿದೆ. ಗಬ್ಬುನಾರುತ್ತಿರುವ ಗಾಳಿಯಿಂದಾಗಿ ಜನ ಮೂಗು ಮುಚ್ಚಿಕೊಂಡು ಬದುಕುವ ದುಸ್ಥಿತಿ ನಿರ್ಮಾಣವಾಗಿದೆ. ನೊಣಗಳ ಕಾಟ ಮಿತಿ ಮೀರಿದೆ. ಬೀದಿ ನಾಯಿಗಳು, ಕಾಗೆ-ಹದ್ದುಗಳ ಹಾವಳಿ ಹೆಚ್ಚಿದೆ. ಅಂತರ್ಜಲ ಸಂಪೂರ್ಣ ಬರಿದಾಗಿದೆ. ಪರಿಸ್ಥಿತಿ ಹೀಗಿರುವಾಗಲೇ ಸರ್ಕಾರ ದೊಡ್‌ಡಬೆಳವಂಗಲ ಹೋಬಳಿಯಲ್ಲಿ ಮತ್ತೊಂದು ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಕಸಮಯವಾದ ಬದುಕು: ತಾಲೂಕಿನ ಗುಂಡ್ಲಹಳ್ಳಿ ಗ್ರಾಮದ ಸಮೀಪ ಸುಮಾರು 200 ಎಕರೆ ಪ್ರದೇಶದಲ್ಲಿ ಈಗಾಗಲೇ ಟೆರ್ರಾಫಾರ್ಮ ಕಂಪನಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸವನ್ನು ವಿಲೇವಾರಿ ಮಾಡುತ್ತಿದೆ. 60 ಟನ್‌ಗಳಷ್ಟು ಕಸವನ್ನು ಪ್ರತಿನಿತ್ಯ ವಿಲೇವಾರಿ ಮಾಡುವ ಸಾಮರ್ಥ್ಯ ಈ ಘಟಕಕ್ಕಿದೆ ಎಂದು ಹೇಳಲಾಗುತ್ತಿದೆ. ಆದರೆ ಸಾವಿರಾರು ಟನ್ ಕಸ ಈಗಾಗಲೇ ಘಟಕದಲ್ಲಿ ವಿಲೇವಾರಿಯಾಗದೆ ಬಿದ್ದಿದೆ. ಕಸದಿಂದ ಪರಿಸರಸ್ನೇಹಿ ಗೊಬ್ಬರ ಹಾಗೂ ಅನಿಲ ತಯಾರಿಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಅದರ ಪರಿಣಾಮ ಮತ್ತು ವಾಸ್ತವ ಪ್ರಶ್ನಾರ್ಹ. ಈ ಘಟಕ ಸ್ಥಾಪನೆಗೆ ರೈತರ ಅಪ್ಪಟ ಕೃಷಿ ಭೂಮಿ ಬಲಿಯಾಗಿದೆ. ಜೊತೆಗೆ ಸುತ್ತಮುತ್ತಲ ಕೃಷಿ ಭೂಮಿಯ ನೈಸರ್ಗಿಕ ಕೃಷಿ ಚಟುವಟಿಕೆಗಳೂ ದಾರಿತಪ್ಪಿವೆ. ಹೀಗಾಗಿ ಜನಜೀವನ ದುಸ್ತರವಾಗಿದೆ. ರೋಗಭೀತಿ ಹಾಗೂ ನರಕಸದೃಶ ಪರಿಸರದಲ್ಲಿ ದಿನದೂಡುವ ಅನಿವಾರ್ಯತೆ ಬಂದೊದಗಿದೆ.
ಹಾದಿ ಬೀದಿಯಲ್ಲೂ ಕಸ: ಮಂಡೂರಿನ ಬಿಬಿಎಂಪಿ ಕಸ ವಿಲೇವಾರಿ ಘಟಕದ ವಿರುದ್ಧ ಪ್ರತಿಭಟನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಳೆದ 5 ದಿನಗಳಿಂದ ಟೆರ್ರಾಫಾರ್ಮ ಘಟಕಕ್ಕೆ ಹೆಚ್ಚಿನ ಕಸ ಬರುತ್ತಿದೆ. ಇದಕ್ಕೆ ಸ್ಥಳೀಯ ಗ್ರಾಮಸ್ಥರ ತೀವ್ರ ವಿರೋಧ ಕೂಡ ಎದುರಾಗಿದೆ. ಈ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಸ ತುಂಬಿಕೊಂಡು ಬರುತ್ತಿರುವ ಲಾರಿಗಳು, ಭಕ್ತರಹಳ್ಳಿ, ಮಾಡೇಶ್ವರ, ಗುಂಡ್ಲಹಳ್ಳಿ ಸುತ್ತಮುತ್ತಲ ಗ್ರಾಮಗಳ ರಸ್ತೆ ಬದಿಗಳಲ್ಲೇ ರಾಶಿಗಟ್ಟಲೆ ಕಸ ಸುರಿದು ಹೋಗುತ್ತಿರುವುದು ಸ್ಥಳೀಯರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಬಿಬಿಎಂಪಿ ದೊಡ್ಡಬಳ್ಳಾಪುರ ತಾಲೂಕನ್ನು ಕಸದ ತೊಟ್ಟಿಯಾಗಿ ಪರಿಗಣಿಸಿದ್ದರೆ ಅದಕ್ಕೆ ನಮ್ಮ ವ್ಯಾಪಕ ವಿರೋಧವಿದೆ. ಒಂದೇ ಒಂದು ಲಾರಿ ಕಸವನ್ನು ತಾಲೂಕು ವ್ಯಾಪ್ತಿಗೆ ಬರದಂತೆ ತಡೆಯುವ ಶಕ್ತಿ ನಮಗಿದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂಬ ಎಚ್ಚರಿಕೆ ಕೂಡ ರೈತರಿಂದ ರವಾನೆಯಾಗಿದೆ.
ಕಸ ತಡೆದು ಪರಿಸರ ದಿನ ಆಚರಿಸಿಣ ಈ ಮಧ್ಯೆ ಜೂನ್ 5 ವಿಶ್ವ ಪರಿಸರ ದಿನಾಚರಣೆ ನಡೆಯುತ್ತಿದೆ. ತಾಲೂಕಿನ ರೈತರು ಈ ಬಾರಿ ಬಿಬಿಎಂಪಿ ಕಸ ತಾಲೂಕಿಗೆ ಬರುವುದನ್ನು ತಡೆದು ಪರಿಸರ ದಿನ ಆಚರಿಸಿ ಎಂಬ ಕರೆ ನೀಡಿದ್ದಾರೆ. ರಾಜಕಾರಣಿಗಳು, ಸ್ಥಳೀಯ ಅಧಿಕಾರಸ್ಥ ಜನ ಪ್ರತಿನಿಧಿಗಳು, ಕೇವಲ ಭಾಷಣಗಳಲ್ಲಿ ಪರಿಸರದ ಕಾಳಜಿ ತೋರದೆ ವಾಸ್ತವದಲ್ಲಿ ಪರಿಸರ ಪ್ರಜ್‌ಞೆಯನ್ನು ಪ್ರದರ್ಶಿಸಬೇಕು. ದೊಡ್ಡಬಳ್ಳಾಪುರ ತಾಲೂಕಿನ ಪರಿಸರ ಉಳಿದರೆ ಜನ ಮತ್ತು ಜನಜೀವನ ಉಳಿಯುತ್ತದೆ. ತಪ್ಪಿದಲ್ಲಿ ಬದುಕು ಬರ್ಬರವಾಗುತ್ತದೆ ಎಂಬ ಎಚ್ಚರಿಕೆಯಲ್ಲಿ ಪರಿಸರ ದಿನಾಚರಣೆ ಆಚರಿಸಬೇಕಿದೆ.

ಟೆರ್ರಾಫಾರ್ಮ ಪ್ರವೇಶಿಸದಂತೆ ಕಸದ ಲಾರಿಗಳಿಗೆ ತಡೆ
ದೊಡ್ಡಬಳ್ಳಾಪುರ: ಮಂಡೂರು ಕಸ ವಿಲೇವಾರಿ ಕೇಂದ್ರದಲ್ಲಿ ಕಸ ವಿಲೇವಾರಿಗೆ ಸ್ಥಳೀಯರ ವ್ಯಾಪಕ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ದೊಡ್ಡಬಳ್ಳಾಪುರದ ಗುಂಡ್ಲಹಳ್ಳಿ ಸಮೀಪ ಇರುವ ಟೆರ್ರಾಫಾರ್ಮ ಘಟಕಕ್ಕೆ ಹೆಚ್ಚುವರಿ ಕಸ ಸಾಗಾಣಿಕೆ ನಡೆಯುತ್ತಿರುವುದರ ವಿರುದ್ಧ ಸ್ಥಳೀಯ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ.
ಘಟಕಕ್ಕೆ ಬುಧವಾರ ಬೆಳಗ್ಗೆ ಕಸ ತುಂಬಿಕೊಂಡು ಬಂದ 50ಕ್ಕೂ ಹೆಚ್ಚು ಲಾರಿಗಳನ್ನು ಸಾರ್ವಜನಿಕರು ಮಾರ್ಗ ಮಧ್ಯೆಯೇ ಚಿಕ್ಕಮಂಕಲಾಳ ಗ್ರಾಮದ ಬಳಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕಳೆದ 2 ದಿನಗಳಿಂದ ಕಸ ತುಂಬಿಕೊಂಡು ಬರುತ್ತಿದ್ದ ಬಿಬಿಎಂಪಿ ಲಾರಿಗಳು, ಟೆರ್ರಾಫಾರ್ಮ ಘಟಕ ಮಾತ್ರವಲ್ಲದೆ, ಘಟಕದ ಸುತ್ತಮುತ್ತ ಇರುವ ಹಳ್ಳಿಗಳ ರಸ್ತೆಗಳ ಪಕ್ಕದಲ್ಲೇ ಸುರಿದು ಹೋಗುತ್ತಿದ್ದವು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಯಾವುದೇ ಕಾರಣಕ್ಕೂ ನಮ್ಮ ಗ್ರಾಮಗಳ ಪರಿಸರ ಹಾಳಾಗುವುದನ್ನು ಸಹಿಸಲ್ಲ. ಬಿಬಿಎಂಪಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಧೋರಣೆಗೆ ನಮ್ಮ ವ್ಯಾಪಕ ಧಿಕ್ಕಾರವಿದೆ. ಪ್ರತಿಭಟನೆ ಉಗ್ರಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಗಂಟೆಗಟ್ಟಲೆ ಕಾದರೂ ಲಾರಿಗಳನ್ನು ಟೆರ್ರಾಫಾರ್ಮ ಘಟಕದತ್ತ ರೈತರು ಬಿಟ್ಟಿಲ್ಲ. ಸ್ಥಳದಲ್ಲಿ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಜೆಯಾದರೂ ಜಟಾಪಟಿ ಮುಂದುವರೆದಿತ್ತು. ಯಾವುದೇ ಕಾರಣಕ್ಕೂ ಲಾರಿಗಳನ್ನು ಘಟಕ ಪ್ರವೇಶಿಸಲು ಬಿಡೋದಿಲ್ಲ. ಹಳ್ಳಿಗಳ ರಸ್ತೆಗಳಲ್ಲಿ ಕಸ ಸುರಿದ್ರೆ ಬಿಬಿಎಂಪಿ ಕಚೇರಿ ಮುಂದೆ ಕಸ ಸುರಿದು ಪ್ರತಿಭಟಿಸಲೂ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

ಇಂದು ಸರ್ವಪಕ್ಷ ಸಭೆ
ಬಿಬಿಎಂಪಿ ಕಸದ ಸಮಸ್ಯೆ ಮತ್ತು ಬಿಬಿಎಂಪಿ ದೊಡ್ಡಬೆಳವಂಗಲ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಕಸವಿಲೇವಾರಿ ಘಟಕ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಶಾಸಕ ಟಿ.ವೆಂಕಟರಮಣಯ್ಯ, ಸರ್ವ ಪಕ್ಷಗಳ ಮುಖಂಡರು, ಅಧಿಕಾರಿಗಳು, ಸಂಘ-ಸಂಸ್ಥೆಗಳು ಹಾಗೂ ಗಣ್ಯರ ಸಭೆಯನ್ನು ಕರೆದಿದ್ದಾರೆ. ಜೂ.5ರ ಗುರುವಾರ ಮಧ್ಯಾಹ್ನ 3 ಗಂಟೆಗೆ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಕಸ ವಿಲೇವಾರಿ ಸಮಸ್ಯೆ ಸಾಧಕ-ಬಾಧಕಗಳ ಕುರಿತು ಚರ್ಚಿಸಲಾಗುವುದು. ಈ ಸಭೆ ಅತ್ಯಂತ ಮಹತ್ವದ್ದಾಗಿದ್ದು, ಸಭೆ ತೀರ್ಮಾನದಂತೆ ಮುಂದಿನ ನಡೆ ನಿರ್ಧರಿಸಲಾಗುವುದು ಎಂದು ಶಾಸಕರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.