ಬೆಂಗಳೂರು ಗ್ರಾಮಾಂತರ

'ಹೊಣೆಗಾರಿಕೆ; ಸಂಘಟನೆ ಪಾತ್ರ ಹಿರಿದು'

Published On :

ದೊಡ್ಡಬಳ್ಳಾಪುರ: ಇಲ್ಲಿನ ದೇವರಾಜನಗರದಲ್ಲಿರುವ ಭಗವಾನ್ ಶ್ರೀ ಸತ್ಯಸಾಯಿ ಸೇವಾ ಸಮಿತಿ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಪ್ರತಿವರ್ಷದಂತೆ ಈ ಬಾರಿಯೂ ಉಚಿತ ಪುಸ್ತಕ ಮತ್ತು ಕಲಿಕೋಪಕರಣಗಳ ವಿತರಣೆ ಕಾರ್ಯಕ್ರಮ ನಡೆಯಿತು.   ಕಾರ್ಯಕ್ರವನ್ನು ಶ್ರೀ ಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಆರ್. ನಾಗರಾಜನ್ ಉದ್ಘಾಟಿಸಿದರು. ಅವರು ಮಾತನಾಡಿ, ಸಾಮಾಜಿಕ ಹೊಣೆಗಾರಿಕೆ ಬೆಳೆಸುವಲ್ಲಿ ಧಾರ್ಮಿಕ ಸಂಘಟನೆಗಳ ಪಾತ್ರ ಹಿರಿದು. ಧರ್ಮ, ಭಕ್ತಿ, ಶ್ರದ್ಧೆ ಮತ್ತು ಮೌಲಿಕ ಆಚಾರ-ವಿಚಾರಗಳನ್ನು ಇಂದಿನ ಪೀಳಿಗೆಗೆ ಅಗತ್ಯವಾಗಿ ಪರಿಚಯ ಮಾಡಿಸಬೇಕಾದ ಅನಿವಾರ್ಯತೆ ಇದೆ. ಸವಲತ್ತನ್ನು ಬಳಸಿಕೊಂಡು ಸಾರ್ಥಕವಾಗುವ ರೀತಿಯ ಪ್ರತಿಫಲ ಪಡೆದರೆ ದಾನದ ಉದ್ದೇಶ ಫಲಿಸುತ್ತದೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ಎಂ.ಎಸ್.ದೇವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಭ್ಯಾಸ ಸವಾಲಿನ ವಿಚಾರವಾಗಿದೆ.
 ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡುವುದು ಕ್ಲಿಷ್ಟಕರವಾಗುತ್ತಿದೆ. ಬದಲಾದ ಕಾಲಘಟ್ಟಕ್ಕೆ ಪೂರಕವಾಗಿ ಆರ್ಥಿಕ ಸ್ಥಿತಿಗತಿಗಳು ಸುಧಾರಿಸದೇ ಇರುವುದು ಅನೇಕ ಬಾರಿ ವಿದ್ಯಾಭ್ಯಾಸಕ್ಕೆ ತೊಡಕಾಗಿ ಕಾಡುವುದುಂಟು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸ್ಥೈರ್ಯ ತುಂಬಲು ಸಂಘ-ಸಂಸ್ಥೆಗಳು ಮುಂದಾಗುವ ಅನಿವಾರ್ಯತೆ ಇರುತ್ತದೆ. ಹೀಗಾಗಿ ಸತ್ಯಸಾಯಿ ಸೇವಾ ಸಂಸ್ಥೆಗಳು ಈ ಬಗೆಯ ಕಾರ್ಯಕ್ರಮಗಳನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಗಣನೀಯ ಎಂದರು.
 ಸಮಿತಿ ಸಂಚಾಲಕರಾದ ಜಿ.ಬಾಲದಂಡಪಾಣಿ, ಟ್ರಸ್ಟಿ ಡಾ.ಕೆ.ಎಸ್.ಸುರೇಂದ್ರ, ಬಿ.ಎನ್.ತಿಮ್ಮಣ್ಣ ಮತ್ತಿತರರು ಪುಸ್ತಕಗಳನ್ನು ವಿತರಿಸಿದರು. ಒಟ್ಟು 251 ಫಲಾನುಭವಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಹಿರಿಯ ಸದಸ್ಯರಾದ ವಿ.ಕೃಷ್ಣಮೂರ್ತಿ, ಬಿ.ಎನ್.ನಾಗೇಂದ್ರಪ್ಪ, ಎಸ್.ಎಲ್.ರಾಮಚಂದ್ರ ಸೇರಿದಂತೆ ಮಹಿಳಾ ಮಂಡಲಿ, ಬಾಲವಿಕಾಸ ವಿದ್ಯಾರ್ಥಿಗಳು, ಸೇವಾದಳ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಸಾಮೂಹಿಕ ಭಜನಾ ಕಾರ್ಯಕ್ರಮ ಏರ್ಪಾಟಾಗಿತ್ತು.

ನೀಲಯ್ಯ ಪರ ಸಿ.ಟಿ. ರವಿ ಮತ ಪ್ರಚಾರ
ಕನಕಪುರ: ರಾಮನಗರ ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹೆಚ್ಚಿನ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಗಳಿಸಿ ಉತ್ತಮ ಮುನ್ನಡೆಯನ್ನು ಪಡೆಯುವುದು ನಿಶ್ಚಿತ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಅವರು ಕನಕಪುರದಲ್ಲಿ ಪದವೀಧರ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿ ನೀಲಯ್ಯ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡುತ್ತಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ. ನಾಗರಾಜು, ತಾಲೂಕು ಅಧ್ಯಕ್ಷ ಜಗನ್ನಾಥ್, ಜಿಲ್ಲಾ ಕಾರ್ಯದರ್ಶಿ ನಾಗಾನಂದ, ಶಿಕ್ಷಕ ಮುಖಂಡರಾದ ರಂಗನಾಥ್, ವರದರಾಜು ಮೊದಲಾದವರು ಪಾಲ್ಗೊಂಡಿದ್ದರು. ಕಳೆದ ಚುನಾವಣೆಯಲ್ಲಿ ಮತಪಟ್ಟಿಯಲ್ಲಿನ ನಕಲಿ ಶಿಕ್ಷಕರ ಸೇರಿಕೆ ಹಾಗೂ ಮತದಾನಗಳಿಂದ ಬಿಜೆಪಿ ಅಭ್ಯರ್ಥಿ ಸೋಲಬೇಕಾಯಿತು. ಈ ಬಾರಿ ಪಟ್ಟಿಯಲ್ಲಿನ ನಕಲಿ ಮತದಾರರನ್ನು ಗುರುತಿಸಿ ಚುನಾವಣಾ ಆಯುಕ್ತರಿಗೆ ನೀಡಿದ್ದೇವೆ. ನಕಲಿ ಮತದಾನಕ್ಕೆ ನಿರ್ಬಂಧ ಹೇರಲು ಕ್ರಮ ಕೈಗೊಂಡಿದ್ದೇವೆ. ಪಾರದರ್ಶಕ ಮತದಾನಕ್ಕೆ ಅಗತ್ಯವಾದ ಸಿಸಿ ಟಿವಿ ಅಳವಡಿಕೆ ಹಾಗೂ ಸೂಕ್ತ ಗುರುತಿನ ಚೀಟಿಗಳನ್ನು ಪರಿಶೀಲಿಸಲು ಆಯುಕ್ತರಲ್ಲಿ ವಿನಂತಿಸಿದ್ದೇವೆ ಎಂದು ನುಡಿದ ವಅವರು ರಾಮನಗರ ಜಿಲ್ಲೆಯ ಪ್ರಜ್ಞಾವಂತ ಮತದಾರರು ಈ ಬಾರಿ ನೀಲಯ್ಯನವರನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  ಸಿ.ಟಿ.ರವಿಯವರು ಶಿಕ್ಷಕ ಸಂಘದ ಪದಾಧಿಕಾರಿಗಳೊಂದಿಗೆ ಕನಕಪುರ ತಾಲೂಕಿನ ಹತ್ತಾರು ಪ್ರೌಢಶಾಲೆಗಳು ಹಾಗೂ ಕಾಲೇಜುಗಳನ್ನು ಭೇಟಿ ಮಾಡಿ ಶಿಕ್ಷಕರುಗಳೊಂದಿಗೆ ಸಮಾಲೋಚನೆ ನಡೆಸಿ ಬೆಂಬಲ ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.